ದಿಲೀಪ್ ರಾಜ್ ಹಠಾತ್ ನಿಧನ: ಸುಧಾರಾಣಿ, ಚೈತನ್ಯ, ಅನುಶ್ರೀ, ರಜಿನಿ ಭಾವುಕ ಪೋಸ್ಟ್
ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಹಠಾತ್ ಹೃದಾಯಘಾತದಿಂದ ನಿಧನರಾಗಿದ್ದಾರೆ. ಇವರ ಅಗಲಿಕೆ ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ. ಇಂದು (ಮೇ 13) ಬೆಳಗ್ಗೆ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೂ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.
ದಿಲೀಪ್ ರಾಜ್ ಅಗಲಿಕೆಯಿಂದ ಚಿತ್ರರಂಗದ ಗಣ್ಯರು ಕಂಬಿನಿ ಮಿಡಿದಿದ್ದಾರೆ. ಅವರೊಂದಿಗೆ ನಟಿಸಿದ ಚಿತ್ರರಂಗದ ಗಣ್ಯರು ಕಂಬಿನಿ ಮಿಡಿದಿದ್ದಾರೆ. ಹಿರಿಯ ನಟಿ ಸುಧಾರಾಣಿ, ನಿರ್ದೇಶಕ ಕೆ.ಎಂ ಚೈತನ್ಯ, ನಿರೂಪಕಿ ಅನುಶ್ರೀ, ಕಿರುತೆರೆ ನಟಿ ರಜಿನಿ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ಅದರಲ್ಲೂ ಹಿರಿಯ ನಟಿ ಸುಧಾರಾಣಿ ದಿಲೀಪ್ ರಾಜ್ ಜೊತೆ ನಟಿಸಿದ ಧಾರಾವಾಹಿಯ ತುಣುಕನ್ನು ಹಂಚಿಕೊಂಡಿದ್ದಾರೆ.

ಜೊತೆಯಾಗಿ ಕೆಲಸ ಮಾಡಿದ ನೆನಪು ಮನಸಿನಲ್ಲಿದೆ
"ದಿಲೀಪ್ ರಾಜ್ ಅವರ ನಿಧನದ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಹಲವಾರು ಪ್ರಾಜೆಕ್ಟ್‌ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ ನೆನಪುಗಳು ಮನಸ್ಸಿನಲ್ಲಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಅನ್ನೋದು ತುಂಬಾ ಚಿಕ್ಕ ಮಾತು, ಇದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ" ಎಂದು ಸುಧಾರಾಣಿ ಅವರೊಂದಿಗೆ ಕೆಲಸ ಮಾಡಿದ ವಿಡಿಯೋವನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.
ಅವರ ಪ್ರತಿಭೆ ಇನ್ನೂ ಹೆಚ್ಚು ಅವಕಾಶ ಸಿಗ್ಬೇಕಿತ್ತು
"ಗೆಳೆಯ, ನಟ ದಿಲೀಪ್ ರಾಜ್ ಸುಮಾರು 25 ವರ್ಷಕ್ಕೂ ಹಿಂದಿನ ಪರಿಚಯ. 1997 ರಲ್ಲಿ ನಾನು "ವಾಸಾಂಶಿ ಜೀರ್ಣಾನಿ" ಎಂಬ ನಾಟಕ ನಿರ್ದೇಶಿಸಿದ್ದೆ. ಪ್ರದರ್ಶನದ ಹಿಂದಿನ ದಿನ ಒಂದು ರಸ್ತೆ ಅಪಘಾತದಲ್ಲಿ ಆ ನಾಟಕದ ಮುಖ್ಯ ಪಾತ್ರದಲ್ಲಿದ್ದ ಅರುಣ ಎಂಬ ನಟ ತೀರಿಕೊಂಡ. ಇಡೀ ತಂಡ ಆಘಾತ, ದುಃಖದಲ್ಲಿ ಮುಳುಗಿತ್ತು. ಎರಡು ತಿಂಗಳುಗಳ ನಂತರ ಮತ್ತೆ ಆ ನಾಟಕ ಕೈಗೊಂಡೆವು. ಆಗ ಅರುಣನ ಜಾಗ ತುಂಬಿದ್ದು ದಿಲೀಪ್. ಹವ್ಯಾಸಿ ರಂಗಭೂಮಿಯಲ್ಲಿ ಆ ಪಾತ್ರ ದಿಲೀಪನ ಮೊದಲ ಪ್ರಮುಖ ಪಾತ್ರವಾಗಿತ್ತು. 2005ರಲ್ಲಿ ETV ವಾಹಿನಿಗೆ ನಾನು "ಕಿಚ್ಚು" ಎಂಬ ಧಾರಾವಾಹಿ ನಿರ್ಮಿಸಿ ನಿರ್ದೇಶನ ಮಾಡಿದಾಗ ಆ ಧಾರಾವಾಹಿಯ ಮುಖ್ಯ ಪಾತ್ರ ನಿರ್ವಹಿಸಿದ್ದು ದಿಲೀಪ್. ನನ್ನ "ಆ ದಿನಗಳು" ಸಿನೆಮಾಗೆ ಚೇತನ್ ನಟಿಸಿದ ಪಾತ್ರಕ್ಕೆ ದಿಲೀಪ್ ತನ್ನ ಧ್ವನಿ ನೀಡಿ ಸಹಾಯ ಮಾಡಿದರು. ಮುಂದೆ ನಾನು "ಸೂರ್ಯಕಾಂತಿ" ಸಿನೆಮ ನಿರ್ದೇಶಿಸಿದಾಗ ಅದರಲ್ಲಿ "ಎದೆಯ ಬಾಗಿಲು ತಟ್ಟದೆ" ಹಾಡಿಗೆ ನೃತ್ಯ ಸಂಯೋಜನೆಯಲ್ಲಿ ಸಹಾಯ ಮಾಡಿದರು. ಸ್ಪುರದ್ರೂಪಿ, ಹಸನ್ಮುಖಿ, ಬಹಳ ಪ್ರತಿಭಾವಂತ ಕಲಾವಿದ ದಿಲೀಪ್ ರಾಜ್ ಈಗ ನಮ್ಮನ್ನು ಅಗಲಿದ್ದಾರೆ. ಇನ್ನೂ ಸಣ್ಣ ವಯಸ್ಸು. ಅವರ ಪ್ರತಿಭೆಗೆ ಇನ್ನೂ ಹೆಚ್ಚು ಅವಕಾಶಗಳು ಅವರಿಗೆ ಸಿಗಬೇಕಿತ್ತು. ಓಂ ಶಾಂತಿ." ಎಂದು ನಿರ್ದೇಶಕ ಕೆ.ಎಂ.ಚೈತನ್ಯ ಅವರನ್ನು ನೆನಪಿಸಿಕೊಂಡಿದ್ದಾರೆ.
ನೀನು ಯಾಕೋ ಮೌನವಾದೆ-ಅನುಶ್ರೀ
"ಹಲೋ ಎಂದ ಕರೆಯೇ ನೆನಪಿಲ್ಲ... ಕಾಲ್ ಮಾಡಿದಾಗೆಲ್ಲ ಸಿಗದೇ ಇರೋ ನೆಪ ಎಲ್ಲಾ.. ಫೋನ್ ಮಾಡಿ ಬಾಯಿ ತುಂಬಾ ಬೈತಿದ್ದ ನೀನು ಯಾಕೋ ಮೌನವಾದೆ. ಕ್ಷಮಿಸು ಗೆಳೆಯ ಕಡೆಗೂ ನಾವೆಲ್ಲ ಸೇರಲು ಆಗಲೇ ಇಲ್ಲ... ಈಗ ನಾವೆಲ್ಲ ನಿನ್ನ ಮನೆಯಲ್ಲಿ ಸೇರಿದ್ದೀವಿ... ಆದ್ರೆ... ನೀನೇ ಇಲ್ಲ.. Sorry kano ... we all miss u" ನಿರೂಪಕಿ ಅನುಶ್ರೀ ಭಾವುಕರಾಗಿ ಮಾತಾಡಿದ್ದಾರೆ.
"ಒಂದ್ಸಲ ಇದೆಲ್ಲ ಸುಳ್ಳಾದ್ರೆ ಎಷ್ಟು ಚೆಂದ"
"we miss you sir ಒಂದ್ಸಲ ಇದೆಲ್ಲ ಸುಳ್ಳಾದ್ರೆ ಎಷ್ಟು ಚೆಂದ ಅನ್ಸುತ್ತೆ. ನಿಮ್ಮನ್ನ ಯಾವತ್ತು ಮರಿಯೋಕೆ ಆಗಲ್ಲ sir.. ನಿಮ್ಮ ಜೊತೆ ನಟಿಸಿದ ಆ ದಿನಗಳು ಜೀವನದಲ್ಲಿ ಸವಿನೆನಪುಗಳು " ಎಂದು ಕಿರುತೆರೆ ನಟಿ ರಜನಿ ಹೇಳಿದ್ದಾರೆ.


Click it and Unblock the Notifications