'ಕರಿ ಹೈದ ಕೊರಗಜ್ಜ' ನಿರ್ದೇಶಕರಿಂದ 'ಗುಳಿಗ' ದೈವಕ್ಕೆ ಕ್ಷೇತ್ರ ನಿರ್ಮಾಣ: 'ಕೊರಗಜ್ಜ'ನಿಗೂ ಕೋಲ ಸೇವೆ
'ಕಾಂತಾರ' ಸಿನಿಮಾದ ಬಳಿಕ ಕರಾವಳಿ ಭಾಗದ ಮತ್ತೊಂದು ಧೈವದ ಮೇಲೆ ಸಿನಿಮಾ ನಿರ್ಮಾಣ ಆಗುತ್ತಿದೆ. ಇಲ್ಲಿನ ಜನರು ಆರಾಧಿಸುವ ದೈವ ಕೊರಗಜ್ಜ ಮೇಲೆ ಸಿನಿಮಾ ರೆಡಿಯಾಗಿದ್ದು, ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ಆ ಸಿನಿಮಾದ ಹೆಸರು 'ಕರಿ ಹೈದ ಕೊರಗಜ್ಜ'.
ಕೊರಗಜ್ಜನ ಕುರಿತಾದ 'ಕರಿ ಹೈದ ಕೊರಗಜ್ಜ' ಸಿನಿಮಾ ಮಾಡಲು ಮುಂದಾದಾಗ ಹಲವು ಅನುಭವಗಳು ಆಗಿದ್ದವು. ಶೂಟಿಂಗ್ ವೇಳೆ ಸಿನಿಮಾದ ಕಲಾವಿದರಿಗೆ ಅನೇಕ ಪವಾಡಗಳು ಅನುಭವಕ್ಕೆ ಬಂದಿದ್ದವು. ಕಬೀರ್ ಬೇಡಿ, ಶ್ರುತಿ, ಭವ್ಯಾ ಹಾಗೂ ಚಿತ್ರ ತಂಡದ ಸದಸ್ಯರು ಈಗಾಗಲೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ಸಂಭವಿಸಿದ ಮತ್ತೊಂದು ಘಟನೆ ಇದೂವರೆಗೂ ನಿಗೂಢವಾಗಿತ್ತು.

ಪುತ್ತೂರಿನಲ್ಲಿ 'ಕರಿ ಹೈದ ಕೊರಗಜ್ಜ' ಸಿನಿಮಾದ ಸೆಟ್ ಅನ್ನು ವಿರ್ಮಾಣ ಮಾಡಲಾಗುತ್ತಿತ್ತು. ಸಿನಿಮಾ ಕಾರ್ಮಿಕರು ಸೆಟ್ ನಿರ್ಮಾಣ ಮಾಡುವ ವೇಳೆ ಯಾವುದೋ ಆವೇಶ ಬಂದವರಂತಾಗಿ ಅಲ್ಲಲ್ಲೇ ಮೂರ್ಛೆ ಬೀಳುತ್ತಿದ್ದರು. ಬಳಿಕ ಸ್ಥಳಿಯರು ಕೆಲವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆ ಬಳಿಕ ಅಲ್ಲಿಗೆ ಯಾರೂ ಸೆಟ್ ಕೆಲಸ ಮಾಡಲು ಬರಲಿಲ್ಲವಂತೆ.
ಹೀಗೆಲ್ಲಾ ಯಾಕೆ ಆಗುತ್ತಿದೆ ಎಂದು ಸ್ಥಳೀಯರನ್ನು ವಿಚಾರಿಸಿದಾಗ, ಸೆಟ್ ಹಾಕುತ್ತಿದ್ದ ಸ್ಥಳ ಕರಾವಳಿಯ ಉಗ್ರ ರೂಪದ ದೈವ 'ಗುಳಿಗ'ನದ್ದೆಂದು ತಿಳಿಸಿದ್ದರು. ಹೀಗಾಗಿ ದೈವದ ಮೇಲಿನ ಗೌರವ ಹಾಗೂ ಭಕ್ತಿಯಿಂದ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶದಲ್ಲಿ ಸೆಟ್ ಅನ್ನು ಸ್ಥಳಾಂತರ ಮಾಡಲಾಯಿತು ಎನ್ನುತ್ತಿದೆ ಚಿತ್ರತಂಡ.

ಈ ಸಿನಿಮಾದಲ್ಲಿ ಗುಳಿಗ ದೈವದ ಪಾತ್ರದಲ್ಲಿ ಹಾಲಿವುಡ್, ಫ಼್ರೆಂಚ್ ಹಾಗೂ ಬಾಲಿವುಡ್ ನಟ ಹಾಗೂ ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ಸೋಮೆಶ್ವರ ಸಮುದ್ರ ಕಿನಾರೆಯಲ್ಲಿ ಗುಳಿಗ ದೈವದ ಚಿತ್ರೀಕರಣ ನಡೆಸಲಾಗಿದೆ. ಆಗಲೂ ಚಿತ್ರತಂಡಕ್ಕೆ ಹಲವಾರು ರೀತಿಯ ಅಡೆತಡೆಗಳು ಎದುರಾಯಿತು ಎಂದು ಚಿತ್ರತಂಡ ಹೇಳಿಕೊಂಡಿದೆ.
ಈ ಬಗ್ಗೆ ವಿಚಾರಿಸಿದಾಗ ನಿರ್ದೇಶಕ ಸುಧೀರ್ ಅತ್ತಾವರ್ ಅವರ ಹಿರಿಯರಿದ್ದ ಮನೆಯಲ್ಲಿ ಗುಳಿಗ ದೈವದ ಸಾನಿಧ್ಯವಿತ್ತು. ಹಲವಾರು ವರ್ಷಗಳಿಂದ ಆ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಹೀಗಾಗಿ ದೈವಕ್ಕೆ ಪೂಜೆ ಪುರಸ್ಕಾರಗಳು ನಡೆಯದೆ ಹೀಗಾಗುತ್ತಿತ್ತು ಎಂದಿದೆ ಚಿತ್ರತಂಡ. ಆ ಕೂಡಲೇ ನಿರ್ದೇಶಕರು ದೈವಕ್ಕೆ ಗುಡಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಸಿನಿಮಾದ ಎಡಿಟಿಂಗ್ ಕೆಲಸ ಮುಗಿಯುತ್ತಿದ್ದಂತೆ ದೈವಸ್ಥಾನದ ಕಾರ್ಯ ಮುಗಿಸಿ, ಗುಳಿಗ ಹಾಗೂ ಕಲ್ಲುರ್ಟಿ ದೈವಗಳಿಗೆ ಕೋಲ ಸೇವೆ ಮಾಡಿದ್ದಾರೆ.
ಈ ವೇಳೆ ಹಿರಿಯ ನಟಿ ಭವ್ಯಾ, ನಿರ್ಮಾಪಕರಾದ ತ್ರಿವಿಕ್ರಮ ಸಾಫಲ್ಯ, ಕಲಾವಿದರಾದ ಭರತ್ ಸೂರ್ಯ ಹಲವು ತಂತ್ರಜ್ಞರು ಕೋಲಸೇವೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಚಿತ್ರತಂಡವು ಶೂಟಿಂಗ್ ಮುಗಿದ ಕೂಡಲೇ ಕೊರಗಜ್ಜನಿಗೂ ಕೋಲಸೇವೆ ಮಾಡಿತ್ತು.


Click it and Unblock the Notifications











