"ಜೈಲ್‌ನಲ್ಲಿ ಹೀಗೆ ನಡೆಯುತ್ತಾ ಇರೋದು ಇದೇ ಮೊದಲ? ಎದೆ ಮುಟ್ಕೊಂಡು ಹೇಳಿ"; ಸುಮಲತಾ
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್‌ಗೆ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ದೊಡ್ಡ ಮಟ್ಟಕ್ಕೆ ಸಂಚಲನ ಸೃಷ್ಟಿಸುತ್ತಿದೆ. ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇದೇ ವೇಳೆ ದರ್ಶನ್‌ಗೆ ಆತ್ಮೀಯರಾಗಿರುವ ಸುಮಲತಾ ಇಂದು (ಆಗಸ್ಟ್ 27) ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದರು. ಸುಮಾರು 2 ತಿಂಗಳಿನಿಂದ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇದ್ದಾರೆ. ಅಲ್ಲಿಂದ ಪ್ರತಿ ದಿನ ಏನಾದರೂ ಒಂದು ದರ್ಶನ್ ಬಗ್ಗೆ ಸುದ್ದಿ ಸದ್ದು ಮಾಡುತ್ತಲೇ ಇದೆ. ಕೆಲವು ದಿನಗಳ ಹಿಂದೆ ದರ್ಶನ್ ಜೈಲಿನಲ್ಲಿ ಲೋಕಲ್ ರೌಡಿ ಜೊತೆ ಸಿಗರೇಟು ಸೇದುತ್ತಾ ಕೂತ್ತಿದ್ದ ಫೋಟೋ ಲೀಕ್ ಆಗಿತ್ತು.

ಇದರ ಜೊತೆ ರೌಡಿಯ ಮಗನೊಂದಿಗೆ ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತಾಡುತ್ತಿರುವ ವಿಡಿಯೋ ಕೂಡ ಹೊರಬಿದ್ದಿತ್ತು. ಅಲ್ಲಿಂದ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೇ ವಿಚಾರವಾಗಿ ದರ್ಶನ್ ಅಮ್ಮನ ಸ್ಥಾನದಲ್ಲಿರುವ ಸುಮಲತಾ ಕೊನೆಗೂ ಪ್ರತಿಕ್ರಿಯೆ ನೀಡಿದ್ದು, ಪರೋಕ್ಷವಾಗಿ ಬೆಂಬಲಕ್ಕೆ ನಿಂತಿದ್ದಾರೆ.
ಪ್ರತಿಕ್ರಿಯೆ ನೀಡಿದ್ರೆ ವಿವಾದ ಆಗ್ಬಹುದು
ದರ್ಶನ್ ಜೈಲಿನಲ್ಲಿರುವ ಫೋಟೋ ಹಾಗೂ ವಿಡಿಯೋ ಲೀಕ್ ವಿಚಾರ ರಾಜ್ಯದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಈ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ಮುಜುಗರವಾಗಿ ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ. ಈ ಬೆನ್ನಲ್ಲೇ ಸುಮಲತಾ ಪ್ರತಿಕ್ರಿಯೆ ಹೀಗಿದೆ. "ಮಾಹಿತಿ ಇಲ್ಲದೆ ಇರುವ ವಿಚಾರವನ್ನು ನಾವು ಹೆಚ್ಚಾಗಿ ಮಾತಾಡುವುದಕ್ಕೆ ಇಷ್ಟ ಪಡುವುದಿಲ್ಲ. ನಾನು ಈ ವಿಷಯಕ್ಕೆ ಹೇಗೆ ಪ್ರತಿಕ್ರಿಯೆ ನೀಡಿದರೂ ಅದು ವಿವಾದ ಆಗಬಹುದು. ಯಾಕಂದ್ರೆ ದರ್ಶನ್ ನಮಗೆ ಆಪ್ತರು, ಹತ್ತಿರದವರು. ಹಾಗಾಗಿ ನಾನು ಇದಕ್ಕೆ ಕಾಮೆಂಟ್ ಮಾಡುವುದು ಸರಿ ಹೋಗಲ್ಲ ಅಂತ ಅನಿಸುತ್ತೆ. " ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
"ಎದೆ ಮುಟ್ಟಿಕೊಂಡು ಹೇಳಿಬಿಡಿ"
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಸುಮಲತಾ ಮಾಧ್ಯಮಗಳಿಗೆ ಪ್ರಶ್ನೆ ಮಾಡಿದ್ದಾರೆ. "ಜನರಲ್ ಆಗಿ ಹೇಳಬೇಕು ಅಂದರೆ, ನಾನು ಮೀಡಿಯಾಗೂ ಪ್ರಶ್ನೆಯನ್ನು ಕೇಳಬೇಕಾಗುತ್ತೆ. ಜೈಲ್‌ನಲ್ಲಿ ಹೀಗೆ ನಡೆಯುತ್ತಾ ಇರೋದು ಇದೇ ಮೊದಲ ಅಂತ ನೀವೇ ಎದೆ ಮುಟ್ಟಿಕೊಂಡು ಹೇಳಿಬಿಡಿ. ಎಷ್ಟು ವರ್ಷಗಳಿಂದ ಈ ರೀತಿ ನಡೀತಾ ಇದೆ. ಯಾಕೆ ನೀವು ಇದನ್ನೆಲ್ಲಾ ಹೈಲೈಟ್ ಮಾಡಿಲ್ಲ. ದರ್ಶನ್ ಇರುವುದರಿಂದ ನೀವು ಫೋಕಸ್ ಮಾಡಿ, ಅವರದ್ದೇ ತಪ್ಪು ಅಂತ ಹೇಳಿ ಬಿಟ್ಟರೆ ಹೇಗೆ? ಆ ಕಾಲದಲ್ಲೇ ರೈಸ್ ಮಾಡಿದಾಗ ನೀವ್ಯಾಕೆ ಹೈಲೈಟ್ ಮಾಡಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ.

"ಹಣ ಕೊಟ್ಟ ಎಲ್ಲಾ ಸಿಗುತ್ತೆ"
ಜೈಲಿನಲ್ಲಿ ಇರುವ ಕೈದಿಗಳಿಗೆ ಅವರಿಗೆ ಬೇಕಿರುವ ಎಲ್ಲಾ ವಸ್ತುಗಳು, ಸೌಲಭ್ಯಗಳು ಸಿಗುತ್ತಿವೆ. ಸ್ವಲ್ಪ ಹಣ ಖರ್ಚು ಮಾಡಿದರೂ ಸಾಕು ಅವರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ ಎಂದು ಹೇಳಿದ್ದಾರೆ. "ರಾಜಕಾರಣಿಗಳದ್ದು ಮಾತ್ರ ಅಲ್ಲ. ಜೈಲ್ಲಿನಲ್ಲಿ ಎಲ್ಲರೂ ಹೇಳುವುದು ಏನಂದ್ರೆ? ಯಾರೇ ಕೈದಿಗಳು ಇರಲಿ. ಒಂದು ಸ್ವಲ್ಪ ಹಣ ಖರ್ಚು ಮಾಡಿದರೆ, ಅವರಿಗೆ ಎಲ್ಲಾ ಸಿಗುತ್ತೆ ಅನ್ನೋದನ್ನು ರೂಪ ಅವರ ಹೇಳಿಕೆಯಲ್ಲಿಯೇ ಕೇಳಿದ್ವಿ." ಎಂದು ಹೇಳೆ ಘಟನೆಯನ್ನು ನೆನೆದಿದ್ದಾರೆ.
ಪ್ರತಿಯೊಂದು ಕಡೆ ನಡೆಯುತ್ತೆ
"ಇನ್ನೊಂದು ಹೇಳಬೇಕು ಅಂದರೆ, ಇದು ಕೇವಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತ್ರ ನಡೆಯೋದು ಅಂತ ನನಗೆ ಅನಿಸುತ್ತಿಲ್ಲ. ಇದು ಪ್ರತಿಯೊಂದು ಕಡೆ ನಡೆಯುತ್ತಿರುವ ವಿಷಯ. ಪ್ರತಿಯೊಂದು ಜೈಲಿಗೆ ಹೋಗಿ ಈ ರೀತಿ ಹೈಲೈಟ್ ಮಾಡಿ " ಎಂದು ಮಾಧ್ಯಮಗಳಿಗೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











