"ಏನು 200 ವರ್ಷ ಬದುಕಬೇಕು ಅಂತ ಆಸೆನಾ?" ಅಣ್ಣಾವ್ರಿಗೆ ರಜನಿ ಹೀಗೆ ಕೇಳಿದ್ದಿದ್ದು ಏಕೆ?
ಕನ್ನಡ ಚಿತ್ರರಂಗ ವರನಟ ಡಾ.ರಾಜ್‌ಕುಮಾರ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ದೋಸ್ತಿ ಹೇಗಿತ್ತು ಅನ್ನೋದು ಗೊತ್ತಿರುವ ವಿಷಯವೇ. ಅಣ್ಣಾವ್ರ ಮನೆಯ ದೊಡ್ಡ ಕಾರ್ಯಕ್ರಮಗಳಿಗೆ ರಜನಿಕಾಂತ್ ಉಪಸ್ಥಿತಿ ಇದೇ ಇರುತ್ತಿತ್ತು. ಅದ್ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ಆದರೂ ಸೂಪರ್‌ಸ್ಟಾರ್‌ಗೆ ಆಹ್ವಾನ ಹೋಗುತ್ತಿತ್ತು. ಆ ಮಟ್ಟಿಗೆ ರಜನಿಗೂ ಡಾ.ರಾಜ್‌ಕುಮಾರ್‌ಗೂ ಆತ್ಮೀಯತೆ ಇತ್ತು.
ರಾಜ್‌ಕುಮಾರ್ ಸರಳತೆಯನ್ನು ಸೂಪರ್‌ಸ್ಟಾರ್ ರಜನಿಕಾಂತ್ ಮೆಚ್ಚಿಕೊಂಡಿದ್ದರು. ಅಣ್ಣಾವ್ರಂತೆಯೇ ಸರಳತೆಯನ್ನು ರಜನಿಕಾಂತ್ ಕೂಡ ಮೈಗೂಡಿಸಿಕೊಂಡಿದ್ದಾರೆ. ಹೀಗೆ ಡಾ.ರಾಜ್‌ಕುಮಾರ್ ಹಲವರ ಮೇಲೆ ಪ್ರಭಾವ ಬೀರಿದ್ದಾರೆ. ಅಣ್ಣಾವ್ರ ವ್ಯಕ್ತಿತ್ವ ಅಷ್ಟೇ ಅಲ್ಲ, ಅವರ ಕಟುಮಸ್ತಾದ ದೇಹ ಕೂಡ ಹಲವರಿಗೆ ಪ್ರೇರಣೆಯಾಗಿತ್ತು. ತೆರೆಮೇಲೆ ತನ್ನ ಅಭಿಮಾನಿಗಳನ್ನು ಖುಷಿ ಪಡಿಸುವುದಕ್ಕಾಗಿ ದೇಹವನ್ನು ಹುರಿಗೊಳಿಸುತ್ತಿದ್ದರು.

ಅಣ್ಣಾವ್ರು ತನ್ನ ಮಧ್ಯ ವಯಸ್ಸಿನಲ್ಲಿ ಯೋಗವನ್ನು ಆರಂಭಿಸಿದ್ದರು. ಬಹುಬೇಗನೇ ಯೋಗ ಕಲಿತು ಅದ್ಭುತ ಸಾಧನೆ ಮಾಡಿದ್ದರು. ರಾಜ್‌ಕುಮಾರ್ ಯೋಗ ಮಾಡುತ್ತಿದ್ದದ್ದು ಹಲವರ ಹುಬ್ಬೇರಿಸಿತ್ತು. ಅದರಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಒಬ್ಬರು. ಹೀಗೊಮ್ಮೆ ಯೋಗ ಮಾಡುತ್ತಿದ್ದ ಅಣ್ಣಾವ್ರನ್ನ ನೋಡಿ "ಏನು 200 ವರ್ಷ ಬದುಕಬೇಕು ಅಂತ ಆಸೆನಾ?" ಅಂತ ಹೇಳಿದ್ದರಂತೆ.
ರಾಜ್‌ಕುಮಾರ್ ಯೋಗ ಮಾಡುವಂತೆ ಮತ್ಯಾವ ನಟರೂ ಮಾಡಿದ್ದು ನೋಡಿಲ್ಲ. ಯೋಗದಲ್ಲಿ ರಾಜ್‌ಕುಮಾರ್ ಪರಿಣಿತರಾಗಿಬಿಟ್ಟಿದ್ದರು. ಹೀಗೊಮ್ಮೆ ರಾಜ್‌ಕುಮಾರ್ ಯೋಗ ಮಾಡುವ ಕುರಿತು ರಜನಿಕಾಂತ್ ಹೇಳಿದ್ದನ್ನು ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್ ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಿಸಿದ್ದಾರೆ. ಹಾಗೇ ರಾಜ್‌ಕುಮಾರ್ ಹೇಗೆ ಯೋಗ ಕಡೆಗೆ ವಾಲಿದರು? ಅಣ್ಣಾವ್ರ ಯೋಗ ನೋಡಿ ರಜನಿಕಾಂತ್ ಏನು ಹೇಳಿದ್ದರು ಎನ್ನುವುದನ್ನು ಸ್ವಾರಸ್ಯಕರವಾಗಿ ವಿವರಿಸಿದ್ದಾರೆ.
ಯೋಗ ಕಲಿತಿದ್ದು ಯೋಗಾಯೋಗವೇ
ರಾಜ್‌ಕುಮಾರ್ ಮೊದಲಿನಿಂದಲೂ ಫಿಟ್ನೆಸ್‌ಗೆ ಹೆಚ್ಚು ಗಮನ ಹರಿಸಿದ್ದವರು. ಈಗಿನ ಹೀರೋಗಳ ಹಾಗೆ ಜಿಮ್‌ಗೆ ಹೋದವರಲ್ಲ. ಆದರೆ ಪ್ರತಿದಿನ ವ್ಯಾಯಾಮವನ್ನು ಮಾತ್ರ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. "ಡಾ.ರಾಜ್‌ಕುಮಾರ್ ಮಧ್ಯ ವಯಸ್ಸಿನಲ್ಲಿ ಯೋಗವನ್ನು ಕರಗತ ಮಾಡಿಕೊಂಡವರು. ಅಣ್ಣಾವ್ರು ಯೋಗ ಕಲಿತಿದ್ದು ಒಂದು ಯೋಗಾಯೋಗವೇ. ಅವರು ಯೋಗವನ್ನು ಕಲಿಯಲೇಬೇಕು ಅಂತ ಹೊರಟವರಲ್ಲ. ಚಿತ್ರರಂಗಕ್ಕೆ ಬಂದ ಆರಂಭದ ದಿನದಿಂದಲೇ ತಮ್ಮ ದೇಹದಾಡ್ಯತೆಯನ್ನು ಕಾಪಾಡಿಕೊಂಡು ಬಂದವರು. ಅದಕ್ಕಾಗಿ ಬೆಳಗಿನ ಜಾವ ಎದ್ದು ವ್ಯಾಯಾಮವನ್ನು ಮಾಡುತ್ತಿದ್ದವರು." ಎನ್ನುತ್ತಾರೆ ಹಿರಿಯ ಪತ್ರಕರ್ತ ಹರಿಹರಪುರ ಮಂಜುನಾಥ್.

ಅಣ್ಣಾವ್ರು ಯೋಗ ಕಲಿತಿದ್ದೇಕೆ?
"ರಾಜ್‌ಕುಮಾರ್ ದೇಹದಾಢ್ಯತೆಯನ್ನು ಉಳಿಸಿಕೊಂಡು ಬಂದಿದ್ದು ತಾನು ನಂಬರ್ 1 ನಟನಾಗಿರಬೇಕು ಎಂಬ ಆಸೆಯಿಂದ ಅಲ್ಲ. ಅಭಿಮಾನಿಗಳು ತಮ್ಮನ್ನು ವಿವಿಧ ಪಾತ್ರಗಳಲ್ಲಿ ನೋಡುವುದಕ್ಕೆ ಇಷ್ಟ ಪಡುತ್ತಾರೆ. ಆ ಪಾತ್ರವನ್ನು ನಿಭಾಯಿಸಬೇಕಾದರೆ, ನಾನು ಆ ದೇಹವನ್ನು ಕಾಪಾಡಿಕೊಳ್ಳಬೇಕು. ರಾಜ, ದೇವರು ಇಂತಹ ಪಾತ್ರಗಳಿಗೆ ಸರಿ ಹೊಂದಬೇಕು. ತನ್ನ ಅಭಿಮಾನಿಗಳನ್ನು ನಿರಾಸೆಗೊಳಿಸಬಾರದು ಎಂದು ತಮ್ಮ ದೇಹವನ್ನು ಕಾಪಾಡಿಕೊಂಡಿದ್ದರು." ಎನ್ನುತ್ತಾರೆ.
ಅಣ್ಣಾವ್ರ ಆಯಸ್ಸಿನ ಬಗ್ಗೆ ರಜನಿ ಹೇಳಿದ್ದೇನು?
ಅಣ್ಣಾವ್ರ ಕುಟುಂಬಕ್ಕೆ ರಜನಿಕಾಂತ್ ಆತ್ಮೀಯರು. ಹೀಗಾಗಿ ರಾಜ್‌ಕುಮಾರ್ ಅವರೊಂದಿಗೆ ಸಲುಗೆಯಿಂದ ಮಾತಾಡಬಲ್ಲವರಾಗಿದ್ದರು. ಅಣ್ಣಾವ್ರ ಯೋಗ ಸಾಧನೆಯನ್ನು ನೋಡಿ 200 ವರ್ಷ ಬದುಕಬೇಕು ಅಂತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದರು. "ರಜನಿಕಾಂತ್ ಒಮ್ಮೆ ರಾಜ್‌ಕುಮಾರ್ ಅವರನ್ನು ಭೇಟಿ ಮಾಡುತ್ತಾರೆ. ಆಗ ತಮಾಷೆಯಾಗಿ ಏನಣ್ಣ ನೀವು ಈ ಮಟ್ಟಿಗೆ ದೇಹವನ್ನು ಕಾಪಾಡಿಕೊಳ್ಳುತ್ತಿದ್ದಿರಲ್ಲ. ಏನು ಇನ್ನೂರು ವರ್ಷ ಬದುಕಬೇಕು ಅಂತ ಆಸೆನಾ? ಎಂದು ರಜನಿ ಕೇಳಿದ್ದರು. ಆಗ ರಾಜ್‌ಕುಮಾರ್ ಅಷ್ಟೇ ತಮಾಷೆಯಾಗಿ ಇನ್ನೂರು ವರ್ಷ ಬದುಕಬೇಕು ಅಂತಲ್ಲ. ಎಷ್ಟು ವರ್ಷ ಬದುಕುತ್ತೇನೋ ಅಷ್ಟು ವರ್ಷ ಆರೋಗ್ಯವಾಗಿ ಇರಬೇಕು. ಅದಕ್ಕೆ ಈ ದೇಹವನ್ನು ಕಾಪಾಡಿಕೊಂಡು ಬಂದಿದ್ದೀನಿ ಎನ್ನುತ್ತಾರೆ" ಎಂದು ಹರಿಹರಪುರ ಮಂಜುನಾಥ್ ಇಬ್ಬರು ದಿಗ್ಗಜರ ನಡುವಿನ ಸಂಭಾಷಣೆಯನ್ನು ವಿವರಿಸಿದ್ದಾರೆ.
ಯೋಗ ಪರಿಚಯ ಆಗಿದ್ದು ಹೇಗೆ?
ರಾಜ್‌ಕುಮಾರ್ ಮಧ್ಯ ವಯಸ್ಸಿನ ಆಸುಪಾಸಿನಲ್ಲಿ ಇದ್ದಾಗ ಅವರಿಗೆ ಒಬ್ಬ ವ್ಯಕ್ತಿಯ ಪರಿಚಯವಾಗುತ್ತೆ. ಅವರಿಂದಾಗಿ ಯೋಗದ ಕಡೆಗೆ ಆಸಕ್ತಿ ಬೆಳೆಯುತ್ತೆ. ಆ ವ್ಯಕ್ತಿಯೇ ಎಚ್ ಎಫ್ ನಾಯ್ಕರ್. ಇವರು ಪೊಲೀಸ್ ಹುದ್ದೆಯಲ್ಲಿ ಇರುತ್ತಾರೆ. 1960ರಲ್ಲಿ ರಾಜ್‌ಕುಮಾರ್ ಅವರು ನೆರೆ ಪರಿಹಾರ ನಿಧಿಯ ಸಲುವಾಗಿ ಒಂದು ಪಾದ ಯಾತ್ರೆಯನ್ನು ಮಾಡುತ್ತಿರುತ್ತಾರೆ. ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಅಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ವೇಳೆ ರಾಜ್‌ಕುಮಾರ್ ಅವರನ್ನು ಕಾಣುತ್ತಾರೆ. ಬಳಿಕ ನಾಯ್ಕರ್ ಅವರು ತಮಿಳುನಾಡಿಗೆ ವರ್ಗ ಆದಾಗ ಒಮ್ಮೆ ರಾಜ್‌ಕುಮಾರ್ ಅವರನ್ನು ಚೆನ್ನೈನ ಮನೆಯಲ್ಲಿ ಭೇಟಿ ಮಾಡಿ ಯೋಗ ಮಾಡುವುದಕ್ಕೆ ಪ್ರೇರಣೆಯಾಗುತ್ತಾರೆ.
ನಾಯ್ಕರ್ ದೊಡ್ಡ ಪೊಲೀಸ್ ಆಫೀಸರ್ ಆಗಿದ್ವವರು. ಅವರು ರಾಜ್‌ಕುಮಾರ್ ಅವರಿಗೆ ಯೋಗ ಹೇಳಿಕೊಡುತ್ತೇನೆ ಅಂತ ಹಠ ಹಿಡಿದಿದ್ದರು. ಆಗ ಅಣ್ಣಾವ್ರು ಚೆನ್ನೈನ ಮನೆಯಲ್ಲಿದ್ದರು. ಆಗ ಅವರ ಮನೆಗೆ ಹೋಗಿ ಮೂರರಿಂದ ನಾಲ್ಕು ಬಾರಿ ಹೋಗಿ ನಿಮಗೆ ಯೋಗ ಹೇಳಿ ಕೊಡಲೇ ಬೇಕು ಅಂತ ಹಠ ಹಿಡಿದಿದ್ದರಂತೆ. ಆಗ ಅಣ್ಣಾವ್ರು ನೀವು ಇಲ್ಲಿಗೆ ಬರೋದು ಬೇಡ. ನಾನು ಬೆಂಗಳೂರಿಗೆ ಬರುತ್ತೇನೆ. ಅಲ್ಲಿ ಹೇಳಿಕೊಡಿ ನನಗೆ ಸಮಯವಿಲ್ಲ ಅಂತ ಅದೆಷ್ಟೇ ಬಾರಿ ಹೇಳಿದರೂ, ಇಲ್ಲ ನಾನು ನಿಮಗೆ ಹೇಳಿಕೊಡಲೇ ಬೇಕು ಅಂತ ಹಠಕ್ಕೆ ಬಿದ್ದಿದ್ದರಂತೆ. ರಾಜ್‌ಕುಮಾರ್ ಅವರ ಬಳಿ ಬಂದು ನಿಮಗೆ ಯೋಗ ಮಾಡುವ ಯೋಗವಿದೆ. ನಾನು ಹೇಳಿ ಕೊಡಲೇ ಬೇಕು. ನೀವು ಕಲಿಯಲೇಬೇಕು ಎಂದು ಒತ್ತಾಯ ಮಾಡಿದ್ದರು.
ಕೊನೆಗೂ ಒಪ್ಪಿದ ರಾಜ್‌ಕುಮಾರ್ ಯೋಗ ಮಾಡುವುದಕ್ಕೆ ಮುಂದಾಗುತ್ತಾರೆ. ಆರಂಭದಲ್ಲಿ ಹೊನ್ನವಳ್ಳಿ ಕೃಷ್ಣ, ಪಾರ್ವತಮ್ಮ ರಾಜ್‌ಕುಮಾರ್ ಎಲ್ಲರೂ ಯೋಗ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ದಿನ ಕಳೆಯುತ್ತಿದ್ದಂತೆ ಒಬ್ಬೊಬ್ಬರೇ ಯೋಗಾಭ್ಯಾಸದಿಂದ ಹಿಂದೆ ಸರಿದು ಬಿಟ್ಟರು. ಆದರೆ, ರಾಜ್‌ಕುಮಾರ್ ಮಾತ್ರ ಯೋಗವನ್ನು ಮುಂದುವರೆಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ಸಿಕ್ಕಾಪಟ್ಟೆ ಬ್ಯುಸಿ ಹಾಗೂ ದೇಹದ ಸಮಸ್ಯೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ರಾಜ್‌ಕುಮಾರ್ ಹಾಗೂ ನಾಯ್ಕರ್ ಇಬ್ಬರೇ ಯೋಗವನ್ನು ಮುಂದುವರೆಸುತ್ತಾರೆ. ನಾಯ್ಕರ್ ಏನು ಕಲಿತಿದ್ದರೋ ಅದೆಲ್ಲವನ್ನೂ ಕಲಿಸುತ್ತಾ ಹೋಗುತ್ತಾರೆ.
ಬೆಳಗ್ಗೆ ಎರಡೂ ಎರಡೂವರೆಗೆ ನಾಯ್ಕರ್ ಅಣ್ಣಾವ್ರ ಮನೆಗೆ ಬಂದು ಬಿಡುತ್ತಿದ್ದರು. ಕೊನೆಗೆ ಇವರಿಬ್ಬರನ್ನೇ ಬಿಟ್ಟುಬಿಟ್ಟಿದರು. ಅಲ್ಲಿ ಅಣ್ಣಾವ್ರು ಯೋಗಾಭ್ಯಾಸವನ್ನು ಚೆನ್ನಾಗಿ ಕಲಿಯುವುದಕ್ಕೆ ಶುರು ಮಾಡಿದ್ದರು. ಯಾವುದೋ ಒಂದು ದಿನ ಇದ್ದಕ್ಕಿದ್ದ ಹಾಗೇ ಪಾರ್ವತಮ್ಮ ರಾಜ್‌ಕುಮಾರ್ ಎದ್ದು ಯೋಗ ಮಾಡುತ್ತಿದ್ದ ಜಾಗಕ್ಕೆ ಹೋಗುತ್ತಾರೆ. ಅಣ್ಣಾವ್ರು ನೆಲದಿಂದ ಅರ್ಧ ಅಡಿ ಮೇಲಿರುತ್ತಾರೆ. ಪಾರ್ವತಮ್ಮ ರಾಜ್‌ಕುಮಾರ್ ಪ್ರಜ್ಞೆತಪ್ಪಿ ಬಿದ್ದು ಹೋಗುತ್ತಾರೆ ಎಂದು ಅಣ್ಣಾವ್ರನ್ನು ಹತ್ತಿರದಿಂದ ಬಲ್ಲವರಾದ ಶಂಕ್ರಪ್ಪ ಅವರು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಹೇಳಿದ್ದಾರೆ.
ಆಗ ನಾಯ್ಕರ್ ಅವರು ಅಕ್ಕ ನೀವ್ಯಾಕೆ ಇಲ್ಲಿಗೆ ಬರುವುದಕ್ಕೆ ಹೋದ್ರಿ. ಭಯ ಬೀಳಬೇಡಿ. ಅಣ್ಣಾವ್ರು ಆ ಮಟ್ಟಿಗೆ ಯೋಗದಲ್ಲಿ ಸಾಧನೆ ಮಾಡಿದ್ದಾರೆ. ಅವರು ಯೋಗದಲ್ಲಿ ದೊಡ್ಡದಾಗು ಸಾಧನೆ ಮಾಡುತ್ತಾರೆ ಬಿಡಿ" ಎಂದು ಪಾರ್ವತಮ್ಮ ರಾಜ್‌ಕುಮಾರ್‌ಗೆ ನಾಯ್ಕರ್ ಅವರು ಹೇಳಿದ್ದರಂತೆ. ಯೋಗದಲ್ಲಿ ಸಾಧನೆ ಮಾಡಿದ ಮೇಲೆ ರಾಜ್‌ಕುಮಾರ್ ಕಾಲುಗಳು ಪಳಪಳ ಅಂತ ಹೊಳೆಯುವುದಕ್ಕೆ ಶುರುವಾಗಿದ್ದವು. ಇದನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ಗಮನಿಸಿದ್ದರು. ಅಣ್ಣಾವ್ರು ಯೋಗದಲ್ಲಿ ಸಾಧನೆ ಮಾಡಿದ್ದರು. ಇದನ್ನು ಕಾಮನಬಿಲ್ಲಿ ಸಿನಿಮಾದಲ್ಲಿ ತೋರಿಸಲಾಗಿತ್ತು. ಎಷ್ಟು ಜನರು ಯೋಗ ಮಾಡುವುದಕ್ಕೆ ಮುಂದಾಗಿದ್ದರು.


Click it and Unblock the Notifications











