ರಾಜ್ಯದಲ್ಲಿ 'ಥಗ್ ಲೈಫ್' ಬ್ಯಾನ್ ವಿಚಾರ; ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಇನ್ನು ಬಿಡುಗಡೆಯಾಗಿಲ್ಲ. ಸಿನಿಮಾ ಬಿಡುಗಡೆಗೆ ಅವಕಾಶ ಕೋರಿ ಕಮಲ್ ಒಡೆತನದ 'ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್' ಸಂಸ್ಥೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
'ಥಗ್ ಲೈಫ್' ಚಿತ್ರ ಬಿಡುಗಡೆಗೆ ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಜೂನ್ 13) ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೋರಿ ನೋಟಿಸ್ ನೀಡಿದೆ. ಕಳೆದ ವಾರ ಇದೇ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಮಸ್ಯೆಯನ್ನು ಹೈಕೋರ್ಟ್‌ನಲ್ಲೇ ಬಗೆಹರಿಸಿಕೊಳ್ಳುವಂತೆ ಹೇಳಿತ್ತು. ಆದರೆ ಈಗ ರಾಜ್ಯ ಸರ್ಕಾರದ ಪ್ರತಿಕ್ರಿಯೆ ನೀಡುವಂತೆ ಆಗ್ರಹಿಸಿದೆ.

ಈಗಾಗಲೇ ಸೆನ್ಸಾರ್ ಆಗಿರುವ ಸಿನಿಮಾವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡುತ್ತಿಲ್ಲ. ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳ ವಿರುದ್ಧ ಹಿಂಸಾಚಾರದ ಬೆದರಿಕೆ ಒಡ್ಡಿ ಅನಧಿಕೃತವಾಗಿ ನಿಷೇಧ ಹೇರಲಾಗಿದೆ ಎಂಬ ಆರೋಪವನ್ನು ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಮನಮೋಹನ್ ಅವರ ಪೀಠವು ಪರಿಗಣನೆಗೆ ತೆಗೆದುಕೊಂಡಿದೆ. "ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು" ಎಂದು ಕಮಲ್ ಹಾಸನ್ ಹೇಳಿಕೆ ನೀಡಿದ್ದು ಗೊತ್ತೇಯಿದೆ. ಇದಕ್ಕೆ ಕ್ಷಮೆ ಕೇಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ. ಕ್ಷಮೆ ಕೇಳದ ಹೊರತು 'ಥಗ್ ಲೈಫ್' ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.
'ಥಗ್ ಲೈಫ್' ಸಿನಿಮಾ ಸೆನ್ಸಾರ್ ಪ್ರಮಾಣಪತ್ರ ಪಡೆದಿದ್ದರೂ ಕೆಲವು ಸಂಘಟನೆಗಳ ಬೆದರಿಕೆ ಮತ್ತು ರಾಜ್ಯ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಕರ್ನಾಟಕದಲ್ಲಿ ನಿಷೇಧಿಸಲಾಗಿದೆ ಎಂದು ಆರೋಪಿಸಿ ಬೆಂಗಳೂರು ನಿವಾಸಿ ಎಂ. ಮಹೇಶ್ ರೆಡ್ಡಿ ಎಂಬುವವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯ ಸಂಪೂರ್ಣವಾಗಿ ಇದರಲ್ಲಿ ಶರಣಾಗಿ ಕೆಲ ಸಂಘಟನೆಗಳ ಜೊತೆ ಕೈಜೋಡಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಇನ್ನೂ ಒಳಗೆ ಇರುವಾಗ ಒಂದು ಚಿತ್ರಮಂದಿರ(ವಿಕ್ಟರಿ)ವನ್ನು ಮೇಲೆ ದಾಳಿ ನಡೆಸಲಾಗಿತ್ತು. ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಚಿತ್ರಮಂದಿರದ ಆಡಳಿತ ಮಂಡಳಿ ರಕ್ಷಣೆಗಾಗಿ ಓಡುತ್ತಿತ್ತು" ಎಂದು ರೆಡ್ಡಿ ಪರ ವಕೀಲ ಎ. ವೇಲನ್ ವಾದಿಸಿದ್ದಾರೆ.
ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ದೊಡ್ಡ ಪ್ರಮಾಣದ ಹಿಂಸಾಚಾರದ ಪ್ರಚೋದನೆಗೆ ಕುಮ್ಮಕ್ಕು ನೀಡಿದ್ದಾರೆ. ಭಯದ ವಾತಾವರಣ ನಿರ್ಮಾಣವಾಗುವಂತೆ ಮಾಡಿದ್ದಾರೆ. ಹಾಗಾಗಿ ಅರ್ಜಿಯ ತುರ್ತು ಮತ್ತು ಈ ನ್ಯಾಯಾಲಯದ ಮುಂದೆ ಇಟ್ಟಿರುವ ಸಮಸ್ಯೆಯನ್ನು ಪರಿಗಣಿಸಿ, ನಾವು ಪ್ರತಿವಾದಿಗಳಿಗೆ(ಸರ್ಕಾರ) ನೋಟಿಸ್ ನೀಡುತ್ತೇವೆ" ಎಂದು ಪೀಠವು ಆದೇಶದಲ್ಲಿ ತಿಳಿಸಿದೆ.
ಈ ಹಿಂದೆ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮುಂದಾಗಿರಲಿಲ್ಲ. ನ್ಯಾಯಮೂರ್ತಿ ಪಿ.ಕೆ ಮಿಶ್ರಾ ಆರಂಭದಲ್ಲಿ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದ್ದರು. ಹೈಕೋರ್ಟ್ ಬಳಿ ಹೋಗುವಂತೆ ಅರ್ಜಿದಾರರಿಗೆ ಹೇಳಿದ್ದರು. ಚಿತ್ರದ ನಿರ್ಮಾಪಕರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು, ಆದರೆ ಯಾವುದೇ ಪರಿಹಾರ ಸಿಗಲಿಲ್ಲ. "ಹೈಕೋರ್ಟ್ ನಡೆ ಹೇಗಿತ್ತು ಅಂದರೆ ನಟರನ್ನು ಬೆದರಿಸುವವರ ರಾಜಿ ಮಾಡಿಕೊಳ್ಳುವುದಾಗಿತ್ತು" ಎಂದು ವಕೀಲರು ವಾದಿಸಿದ್ದಾರೆ. ಹಾಗಾಗಿ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆಗೆ ಒಪ್ಪಿತ್ತು.


Click it and Unblock the Notifications











