ವೈವಾಹಿಕ ಜೀವನಕ್ಕೆ 'ಟಗರು ಪಲ್ಯ' ನಟ ನಾಗಭೂಷಣ ಎಂಟ್ರಿ; ಎಲ್ಲಿ ಮದುವೆ?
ಕನ್ನಡ ಚಿತ್ರರಂಗ ಹಾಸ್ಯ ನಟ ನಾಗಭೂಷಣ ಹಲವು ಸಿನಿಮಾಗಳಲ್ಲಿ ನಟಿ ಜನಪ್ರಿಯರಾಗಿದ್ದಾರೆ. ತನ್ನ ವಿಶಿಷ್ಟ ಮ್ಯಾನರಿಸಂ ಮೂಲಕವೇ ಪ್ರೇಕ್ಷಕರ ಮನಗೆದ್ದಿರೋ ನಟ. ಇತ್ತೀಚೆಗೆ ಡಾಲಿ ಧನಂಜಯ್ ನಿರ್ಮಿಸಿದ್ದ 'ಟಗರು ಪಲ್ಯ' ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಈಗ ಡಾಲಿ ಧನಂಜಯ್ ನಿರ್ಮಾಣ ಮಾಡುತ್ತಿರುವ ಮತ್ತೊಂದು ಸಿನಿಮಾ 'ವಿದ್ಯಾಪತಿ'ಗೆ ನಾಗಭೂಷಣ ನಾಯಕನಾಗಿ ಆಯ್ಕೆ ಆಗಿದ್ದಾರೆ. ಇದೇ ಖುಷಿಯಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಗೆಳತಿ ಪೂಜಾ ಪ್ರಕಾಶ್ ಅವರೊಂದಿಗೆ ನಾಗಭೂಷಣ ಇಂದು (ಜನವರಿ 28) ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ನಟ ನಾಗಭೂಷಣ್ ಹಾಗೂ ಪೂಜಾ ಪ್ರಕಾಶ್ ಇಬ್ಬರ ಮದುವೆ ಬೆಳಗಾವಿಯಲ್ಲಿ ನಡೆದಿದೆ. ಡಾಲಿ ಧನಂಜಯ್ ಸೇರಿದಂತೆ ನಾಗಭೂಷಣ ಆಪ್ತರು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಬೆಳಗಾವಿಯ ಯಾವ ಭಾಗದಲ್ಲಿ ಮದುವೆ ನಡೆದಿದೆ ಎಂಬಿತ್ಯಾದಿ ವಿಷಯಗಳು ಹೊರಬೀಳಬೇಕಿದೆ.
ನಾಗಭೂಷಣ ಅವರಂತೆ ಪೂಜಾ ಪ್ರಕಾಶ್ ಕೂಡ ಕಲಾವಿದರು. ಆದರೆ, ಸಿನಿಮಾರಂಗದಲ್ಲಿ ಅಲ್ಲ. ಪೂಜಾ ಪ್ರಕಾಶ್ ಚಿತ್ರಕಲೆ ಹಾಗೂ ಗ್ರಾಫಿಕ್ಸ್ ಡಿಸೈನಿಂಗ್‌ನಲ್ಲಿ ಪರಿಣಿತಿಯನ್ನು ಪಡೆದುಕೊಂಡಿದ್ದಾರೆ. ಇವರ ಕ್ಷೇತ್ರದಲ್ಲಿ ಯಶಸ್ಸು ಕಂಡಿರೋ ಪೂಜಾ ಪ್ರಕಾಶ್ ಇಂದು (ಜನವರಿ 28) ಆಪ್ತರ ಸಮ್ಮುಖದಲ್ಲಿ ನಾಗಭೂಷಣ ಅವರೊಂದಿಗೆ ಜೀವನ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.
ನಾಗಭೂಷಣ ಇತ್ತೀಚೆಗೆ ಕಾರು ಅಪಘಾತ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ಈ ವೇಳೆ ಮಾನಸಿಕವಾಗಿ ಕುಗ್ಗಿದ್ದ ನಟನಿಗೆ ನಾಯಕನಾಗಿ ನಟಿಸಿದ 'ಟಗರು ಪಲ್ಯ' ಸಿನಿಮಾ ಹೊಸ ಹುರುಷು ನೀಡಿತ್ತು. ಈ ಸಿನಿಮಾ ಇತ್ತೀಚೆಗೆ ಕಿರುತೆರೆಯಲ್ಲಿ ಪ್ರಸಾರ ಕಂಡು, 7.2 ರೇಟಿಂಗ್ ಗಿಟ್ಟಿಸಿಕೊಂಡಿತ್ತು. ಈ ಮೂಲಕ ಜನಪ್ರಿಯತೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ.
'ಟಗರು ಪಲ್ಯ' ಗೆದ್ದ ಜೋಷ್‌ನಲ್ಲಿಯೇ ಡಾಲಿ ಧನಂಜಯ್ ಮತ್ತೊಂದು ಸಿನಿಮಾ 'ವಿದ್ಯಾಪತಿ'ಯನ್ನು ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾದಲ್ಲೂ ನಾಗಭೂಷಣ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮಧ್ಯೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ನಟಿ ವೈಯಕ್ತಿಕ ಬದುಕಿನಲ್ಲಿ ಹೊಸ ಅದ್ಯಾಯವನ್ನು ಆರಂಭಿಸಿದ್ದಾರೆ. ಬೆಳಗಾವಿಯಲ್ಲಿ ಮದುವೆ ನಡೆದಿದ್ದರೂ, ಫೆಬ್ರವರಿ 2ರಂದು ಮೈಸೂರಿನಲ್ಲಿ ಆರತಕ್ಷತೆ ನಡೆಯಲಿದೆ.


Click it and Unblock the Notifications











