ಅಣ್ಣಾಮಲೈ ನಟಿಸಿದ ಮೊದಲ ಸಿನಿಮಾದ ಟ್ರೈಲರ್ ಔಟ್: ಆಕ್ಷನ್ ಮೂಡ್‌ನಲ್ಲಿ ಮಾಜಿ 'ಸಿಂಗಂ'
ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಕೆಲವು ವರ್ಷಗಳ ಹಿಂದೆ ಕನ್ನಡ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಕನ್ನಡದ ವಿಶಿಷ್ಠ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ಟ್ರೈಲರ್ ನಿನ್ನೆ (ಮಾರ್ಚ್ 13) ಬಿಡುಗಡೆಯಾಗಿದೆ.
ಅಣ್ಣಾಮಲೈಗೂ ಕನ್ನಡ ಸಿನಿಮಾಗೂ ಎಲ್ಲಿಂದ ಎಲ್ಲಿಯ ಸಂಬಂಧ ಅಂದ್ಕೊಂಡ್ರಾ? ಗಂಭೀರ ವ್ಯಕ್ತಿತ್ವದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ರಾಜ್ಯದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಸಿನಿಮಾದಲ್ಲಿ ನಟಿಸಲು ಸಾಧ್ಯವೇ? ಅನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ಅಣ್ಣಾಮಲೈ ಸುಮಾರು ಐದು ವರ್ಷಗಳ ಹಿಂದೆ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದುವೇ 'ಅರಬ್ಬಿ'.

ಅಣ್ಣಾಮಲೈ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುತ್ತಿದ ಬಳಿಕ ಕನ್ನಡದ 'ಅರಬ್ಬಿ' ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದರು. 2019ರ ಕೊನೆಯಲ್ಲಿ ಸೆಟ್ಟೇರಿದ್ದ ಬಳಿಕ ಈ ಸಿನಿಮಾ ಯಾಕೋ ಸೈಲೆಂಟ್ ಆಗಿತ್ತು. ಒಂದು ವರ್ಷದ ಹಿಂದೆ ಇದೇ ಸಿನಿಮಾದ ಚಿಕ್ಕೊಂದು ಟೀಸರ್ ರಿಲೀಸ್ ಆಗಿತ್ತು. ಆ ಬಳಿಕ ಈಗ ಟ್ರೈಲರ್ ಬಿಡುಗಡೆಯಾಗಿದ್ದು, ಕನ್ನಡಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಮುಂದೆ ಓದಿ.
ಅಣ್ಣಾಮಲೈ ಸಿನಿಮಾ 'ಅರಬ್ಬಿ'
ಕರ್ನಾಟಕದಲ್ಲಿ 'ಸಿಂಗಂ' ಎಂದೇ ಖ್ಯಾತಿಯಾಗಿದ್ದವರು ಅಣ್ಣಾಮಲೈ. ಪೊಲೀಸ್ ಇಲಾಖೆಯಲ್ಲಿ ಪೈಯರ್ ಬ್ರ್ಯಾಂಡ್ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದವರು. ಈಗ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನೇನು ರಾಜಕೀಯಕ್ಕೆ ಧುಮಕಬೇಕು ಅನ್ನುವುದರೊಳಗೆ ಅಣ್ಣಾಮಲೈ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದರು.
ಎರಡೂ ಕೈಗಳಿಲ್ಲದ ಅಂತರಾಷ್ಟ್ರೀಯ ಮಟ್ಟದ ಈಜುಪಟು ಕೆ.ಎಸ್ ವಿಶ್ವಾಸ್ ಈ 'ಅರಬ್ಬಿ' ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ವಿಶ್ವಾಸ್ ಅವರ ಬದುಕನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗಿದ್ದು, ಇದರಲ್ಲಿ ಅಣ್ಣಾಮಲೈ ಸ್ವಿಮ್ಮಿಂಗ್ ಕೋಚ್ ಆಗಿ ನಟಿಸಿದ್ದಾರೆ. ಕೆ.ಎಸ್. ವಿಶ್ವಾಸ್‌ಗೆ ಸ್ವಿಮ್ಮಿಂಗ್ ತರಬೇತಿ ನೀಡುವ ಪಾತ್ರ ಇವರದ್ದು.

ಆಕ್ಷನ್ ಸೀನ್‌ನಲ್ಲಿ ಅಣ್ಣಾಮಲೈ
'ಅರಬ್ಬಿ' ಸಿನಿಮಾದಲ್ಲಿ ಅಣ್ಣಾಮಲೈ ವಿಶೇಷ ಪಾತ್ರದಲ್ಲಿ ನಟಿಸಿದ್ದರೂ, ತಮ್ಮ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಈ ಸಿನಿಮಾ ಟ್ರೈಲರ್‌ನಲ್ಲಿ ವಿಶ್ವಾಸ್ ಅಷ್ಟೇ ಪ್ರಮುಖ ಪಾತ್ರದಲ್ಲಿ ಅಣ್ಣಾಮಲೈ ರೋಲ್ ಕೂಡ ಇರಬಹುದೆಂಬ ಸೂಚನೆ ಸಿಕ್ಕಿದೆ. ಈ ಟ್ರೈಲರ್‌ನಲ್ಲಿ ಅಣ್ಣಾಮಲೈ ಕೆಲವು ಆಕ್ಷನ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಯಾಗಿದ್ದಾಗ ಇದ್ದಂತೆ ಖಡಕ್ ಆಗಿ, 'ಅರಬ್ಬಿ' ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಎರಡೂ ಕೈಗಳನ್ನು ಕಳೆದುಕೊಂಡು ಜೀವನದಲ್ಲಿ ಉತ್ಸಾಹವಿಲ್ಲದಂತಾಗಿದ್ದ ವಿಶ್ವಾಸ್‌ಗೆ ಸ್ವಿಮ್ಮಿಂಗ್ ಕೋಚ್ ಆಗಿರುವ ಅಣ್ಣಾಮಲೈ ಉತ್ಸಾಹ ತುಂಬುವ ಪಾತ್ರವಿದು. ಸಿನಿಮಾದಲ್ಲಿಯೂ ಅಣ್ಣಾಮಲೈ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಂದು ರೂಪಾಯಿ ಸಂಭಾವನೆ
ವಿಶೇಷ ಚೇತನರಾಗಿರುವ ವಿಶ್ವಾಸ್ ಅವರ ಬದುಕು ಸ್ಪೂರ್ತಿದಾಯಕವಾಗಿದೆ. ಇವರ ರಿಯಲ್ ಲೈಫ್ ಸಾಧನೆಯನ್ನು ಮೆಚ್ಚಿಕೊಂಡು ಅಣ್ಣಾಮಲೈ 'ಅರಬ್ಬಿ' ಸಿನಿಮಾದಲ್ಲಿಸ ನಟಿಸಲು ಒಪ್ಪಿಕೊಂಡಿದ್ದರು. ಆದರೆ, ಈ ಸಿನಿಮಾದಲ್ಲಿ ನಟಿಸಲು ಅಣ್ಣಾಮಲೈ ಒಂದು ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.
ರಾಜ್‌ಕುಮಾರ್ ನಿರ್ದೇಶನದ ಈ ಸಿನಿಮಾಗೆ ಸರಿಗಮಪ ಖ್ಯಾತಿಯ ಗಾಯಕ ಕಂಬದ ರಂಗಯ್ಯ ಸಂಗೀತ ನೀಡಿದ್ದಾರೆ. ಸದ್ಯ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಅಣ್ಣಾಮಲೈ ಮತ್ತೆ ಕರ್ನಾಟಕದಲ್ಲಿ ಶೈನ್ ಆಗುತ್ತಿದ್ದಾರೆ. 'ಅರಬ್ಬಿ' ಟ್ರೈಲರ್ ಅಣ್ಣಾಮಲೈ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ.


Click it and Unblock the Notifications











