ದಕ್ಷಿಣದ ರಾಜಕಾರಣದಲ್ಲಿ ಹೊಸ ಅಧ್ಯಾಯ: ಸಿಎಂ ಡಿಕೆ ಶಿವಕುಮಾರ್‌ಗೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಶುಭಾಶಯ
ದಕ್ಷಿಣ ಭಾರತದ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಅದರಲ್ಲೂ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಕೇರಳದಲ್ಲಿ ಹೊಸ ಸಿಎಂ ನೇಮಕವಾಗಿದ್ದಾರೆ. ತಮಿಳುನಾಡಿನಲ್ಲಿ ಜೋಸೆಫ್ ವಿಜಯ್ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರೆ, ಇತ್ತ ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿ ರಾಜ್ಯವನ್ನು ಇಂದಿನಿಂದ (ಜೂನ್ 3) ಮುನ್ನಡೆಸುತ್ತಿದ್ದಾರೆ.
ಕನಕಪುರ ಬಂಡೆ ಎಂದೇ ಜನಪ್ರಿಯರಾಗಿರುವ ಡಿ.ಕೆ. ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಶುಭಾಶಯಗಳು ಹರಿದು ಬರುತ್ತಿವೆ. ರಾಜಕೀಯ ಮುಖಂಡರು ಸಿಎಂ ಡಿಕೆ ಶಿವಕುಮಾರ್‌ಗೆ ವಿಶ್ ಮಾಡುತ್ತಿದ್ದಾರೆ. ಅದರಲ್ಲೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಕರ್ನಾಟಕದ ಸಾರಥ್ಯ ವಹಿಸಿಕೊಂಡಿರುವ ಡಿಕೆ ಶಿವಕುಮಾರ್‌ಗೆ ಎಕ್ಸ್ ಖಾತೆಯ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ.

ಇತ್ತೀಚೆಗೆ ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಕೊಟ್ಟ ಹೇಳಿಕೆಗೆ ತಮಿಳು ಸಿನಿಮಾ ಸಿಎಂ ವಿಜಯ್ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲೇ ಮೋದಿಯನ್ನು ಭೇಟಿ ಮಾಡಿ ಮೇಕೆದಾಟು ಅಣೆಕಟ್ಟು ಕಟ್ಟಲು ಭೂಮಿ ಪೂಜೆ ಮಾಡಲು ಮುಂದಾಗಿರುವ ಕರ್ನಾಟಕದ ನಡೆಯ ವಿರುದ್ಧ ದೂರನ್ನು ನೀಡಿದ್ದರು. ಹೀಗಾಗಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿದ್ದು ವಿಜಯ್ ಸರ್ಕಾರಕ್ಕೆ ಕಠಿಣ ಸವಾಲು ಆಗಬಹುದು.
ಸಿಎಂ ಡಿಕೆಶಿಗೆ ಶುಭಕೋರಿದ ಸಿಎಂ ವಿಜಯ್
ಈ ಬೆನ್ನಲ್ಲೇ ಜೋಸೆಫ್ ವಿಜಯ್ ತಮಿಳುನಾಡು ಸಿಎಂಒ ಎಕ್ಸ್ ಖಾತೆಯ ಮೂಲಕ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಮಿಳು ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲೂ ಶುಭ ಕೋರಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಹಾಗೂ ವಿಜಯ್ ನಡುವಿನ ಬಾಂಧವ್ಯ ಹೇಗಿರುತ್ತೆ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
"ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಗೌರವಾನ್ವಿತ ಡಿ.ಕೆ. ಶಿವಕುಮಾರ್ ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು" ಎಂದು ವಿಜಯ್ ತಮಿಳುನಾಡು ಸಿಎಂಒ ಎಕ್ಸ್ ಖಾತೆಯ ಮೂಲಕ ಶುಭ ಕೋರಿದ್ದಾರೆ. ಮೂಲಗಳ ಪ್ರಕಾರ, ಇಬ್ಬರೂ ದೂರವಾಣಿ ಮೂಲಕ ಪರಸ್ಪರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಎರಡೂ ರಾಜ್ಯಗಳ ಪ್ರಗತಿ ಹಾಗೂ ಜನರ ಕಲ್ಯಾಣಕ್ಕಾಗಿ ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯಿಂದ ಮುನ್ನಡೆಯುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಡಿಕೆಶಿ-ವಿಜಯ್.. ದಕ್ಷಿಣದ ಪವರ್‌ಫುಲ್ ನಾಯಕರು
ಡಿಕೆ ಶಿವಕುಮಾರ್ ಕರ್ನಾಟಕದ ಫೈರ್ ಬ್ರ್ಯಾಂಡ್. ಅತ್ತ ವಿಜಯ್ ಕೂಡ ಅಪಾರ ಅಭಿಮಾನಿಗಳನ್ನು ಹೊಂದಿರುವ ನಾಯಕ. ಇಬ್ಬರ ಕಾರ್ಯವೈಖರಿ ಬೇರೆ ಬೇರೆಯಾಗಿದ್ದರೂ, ದಕ್ಷಿಣ ಭಾರತ ಪವರ್‌ಫುಲ್ ನಾಯಕರು ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರೂ ಶ್ರೀಮಂತ ನಾಯಕರು. ನೂರಾರು ಕೋಟಿ ಆಸ್ತಿ ಹೊಂದಿದ್ದಾರೆ. ಸಾಂಪ್ರದಾಯಿಕ ದ್ರಾವಿಡ ರಾಜಕಾರಣದ ನಡುವೆ ಹೊಸ ಅಲೆಯನ್ನು ಸೃಷ್ಟಿಸಿದ ಯುವ ನಾಯಕ ವಿಜಯ್. ಇತ್ತ ಡಿಕೆ ಶಿವಕುಮಾರ್ ಸಂಘಟನಾ ಚತುರ. ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್.
ಸದ್ಯ ಇಬ್ಬರು ನಾಯಕ ಮುಂದಿರುವುದು ಮೇಕೆದಾಟು ಅಣೆಕಟ್ಟು ಪ್ರಾಜೆಕ್ಟ್. ಇದು ಡಿಕೆ ಶಿವಕುಮಾರ್ ಅವರ ಡ್ರೀಮ್ ಪ್ರಾಜೆಕ್ಟ್. ಅಣೆಕಟ್ಟು ಮಾಡಿಯೇ ಸಿದ್ಧ ಎಂದು ಪಣತೊಟ್ಟಿದ್ದಾರೆ. ಅದೇ ಇನ್ನೊಂದು ಕಡೆ ವಿಜಯ್ ಈ ಪ್ರಾಜೆಕ್ಟ್ ಅನ್ನು ತಡೆಯುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಹೀಗಾಗಿ ಇಬ್ಬರೂ ನಾಯಕರು ಹೊಸ ಆಲೋಚನೆ ಹಾಗೂ ಬಲಿಷ್ಠ ಜನಬೆಂಬಲದೊಂದಿಗೆ ಮುನ್ನಡೆಯುತ್ತಿರೋದ್ರಿಂದ ಈ ಜಲವಿವಾದ ಹೇಗೆ ಬಗೆ ಹರಿಯುತ್ತೆ ಅನ್ನೋ ಕುತೂಹಲವಿದೆ. ಕೇವಲ ರಾಜಕೀಯವಾಗಿ ನೋಡದೆ, ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳುತ್ತಾರಾ ಅನ್ನೋದು ಕುತೂಹಲ.


Click it and Unblock the Notifications