ಕನ್ನಡ ಭಾಷೆ ಬಗ್ಗೆ 7ನೇ ತರಗತಿ ತಮಿಳು ಪುಸ್ತಕದಲ್ಲಿ ಪಠ್ಯ; ಅದರಲ್ಲಿರುವ ಉಲ್ಲೇಖ ಏನು?
'ಥಗ್ ಲೈಫ್' ಸಿನಿಮಾ ಆಡಿಯೋ ಲಾಂಚ್ ವೇದಿಕೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಕಮಲ್ ಹಾಸನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದು ಎಂದು ಕಮಲ್ ಹೇಳಿದ್ದರು. ಇದಕ್ಕೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಮಲ್ ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಕೇಳಬೇಕು ಎಂದು ಕನ್ನಡ ಪರ ಸಂಘಟನೆಗಳು ಆಗ್ರಹಿಸಿವೆ.
ಕಮಲ್ ಕ್ಷಮೆ ಕೇಳದ ಹೊರತು ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಕರ್ನಾಟಕ ಹೈಕೋರ್ಟ್ ಕೂಡ ಕಮಲ್ ಕ್ಷಮೆ ಕೇಳಬೇಕು ಎಂದು ಹೇಳಿದೆ. ಅಂದು ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್ ಸಹ ಭಾಗಿ ಆಗಿದ್ದರು. ಅವರ ಎದುರಲ್ಲೇ ಕಮಲ್ ಹಾಸನ್ ಇಂತಾದೊಂದು ಹೇಳಿಕೆ ನೀಡಿದ್ದರು. ಶಿವಣ್ಣ ಯಾಕೆ ಅಲ್ಲೇ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಭಾಷೆಯ ಇತಿಹಾಸದ ಬಗ್ಗೆ ಮಾತನಾಡಲು ಕಮಲ್ ಹಾಸನ್ ಇತಿಹಾಸಕಾರನಾ? ಭಾಷಾ ಪಂಡಿತನಾ? ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. ಆದರೆ ತಮಿಳರು ಯಾವುದನ್ನು ಸತ್ಯ ಎಂದು ಭಾವಿಸಿದ್ದಾರೋ ಅದನ್ನೇ ಕಮಲ್ ಹಾಸನ್ ವೇದಿಕೆಯಲ್ಲಿ ಹೇಳಿದ್ದಾರೆ. ತಮಿಳು, ಕನ್ನಡ ಸೋದರ ಭಾಷೆಗಳು. ಮೂಲದಲ್ಲಿ ಒಂದೇ ಭಾಷೆಯಾಗಿದ್ದು ಕಾಲಾನುಕ್ರಮದಲ್ಲಿ ಬೇರೆ ಕವಲುಗಳಾಗಿ ಬೆಳೆದು ಬಂದಿವೆ. ಆದರೆ ಈ ಬಗ್ಗೆ ಯಾಕೆ ಕನ್ನಡಿಗರ ಪ್ರಶ್ನೆ ಮಾಡುತ್ತಿಲ್ಲ. ಕಮಲ್ ಹಾಸನ್ ಹೇಳಿಕೆ ಆಧಾರ ಯಾಕೆ ಕೇಳುತ್ತಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
"ಕನ್ನಡಿಗರಿಗೆ ತಮ್ಮ ಬಗ್ಗೆ ತಮ್ಮ ಭಾಷೆಯ ಬಗ್ಗೆ ಅಭಿಮಾನ ಇಲ್ಲ. ನಿರಭಿಮಾನ ಹೆಚ್ಚಾಗಿದೆ. ಕನ್ನಡದ ಇತಿಹಾಸವನ್ನು ಕಲಿಸುವುದನ್ನು ಬಿಡಿ, ಕನ್ನಡ ಶಾಲೆಗಳನ್ನೇ ನೀವು ಮುಚ್ಚುತ್ತಿದ್ದೇವೆ. ಕನ್ನಡವನ್ನು ಮಾತನಾಡಿದರೆ ದಂಡ ವಿಧಿಸುವ ಶಾಲೆಗಳು ನಮ್ಮಲ್ಲಿವೆ" ಎಂದು ಡಾ|ನಾ. ಸೋಮೇಶ್ವರ ಹೇಳಿದ್ದಾರೆ. ಇದೆಲ್ಲದರ ನಡುವೆ ತಮಿಳುನಾಡಿನ 7ನೇ ತರಗತಿ ತಮಿಳು ಪಠ್ಯದ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ.
ತಮಿಳುನಾಡಿನ ಪಠ್ಯದಲ್ಲಿ ಕನ್ನಡ, ತೆಲಗು, ಮಲಯಾಳಂಗಳ ತಾಯಿ ತಮಿಳು ಎಂದು ಉಲ್ಲೇಖಿಸಿರುವುದನ್ನು ಕೆಲವರು ತೋರಿಸುತ್ತಿದ್ದಾರೆ. ಕಮಲ್ ಹಾಸನ್ ತಮಿಳು ಕನ್ನಡದ ತಾಯಿ ಎಂದು ಹೇಳಿದ್ದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ? ನೀವೆಲ್ಲರೂ ತಮಿಳುನಾಡಿನಲ್ಲಿ 7 ನೇ ತರಗತಿ ಪುಸ್ತಕ ನೋಡಿದ್ದೀರಾ? ಪಠ್ಯಪುಸ್ತಕದಲ್ಲಿಯೇ ಈ ಬಗ್ಗೆ ಹೇಳಿದ್ದಾರೆ ಎಂದು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ. ಸದ್ಯ ಅದು ಚರ್ಚೆ ಹುಟ್ಟುಹಾಕಿದೆ.
ತಮಿಳುನಾಡಿನ 7ನೇ ತರಗತಿ ತಮಿಳು ಭಾಷೆ ಪುಸ್ತಕದಲ್ಲಿ 10ನೇ ಪುಟದಲ್ಲಿ ಈ ರೀತಿ ಬರೆಯಲಾಗಿದೆ. "ಒಂದೇ ಭಾಷೆಯನ್ನು ಮಾತನಾಡುವ ಜನರು ವಿಭಿನ್ನ ಸ್ಥಳಗಳಲ್ಲಿ ವಾಸಿಸುತ್ತಾರೆ. ಅವರು ವಾಸಿಸುವ ಸ್ಥಳದ ಸ್ಥಳಾಕೃತಿ, ನೈಸರ್ಗಿಕ ಅಡೆತಡೆಗಳು ಇತ್ಯಾದಿಗಳಿಂದಾಗಿ, ಅವರು ಮಾತನಾಡುವ ಭಾಷೆಯಲ್ಲಿ ಸ್ವಲ್ಪ ಬದಲಾವಣೆಗಳಿವೆ. ಅವುಗಳ ನಡುವಿನ ಸಂಪರ್ಕ ಕಡಿಮೆಯಾದಾಗ, ಈ ಬದಲಾವಣೆಗಳು ಹೆಚ್ಚಾಗುತ್ತವೆ ಮತ್ತು ಅವು ಹೊಸ ಭಾಷೆಯಾಗಿ ವಿಭಜನೆಯಾಗುತ್ತವೆ. ಈ ರೀತಿಯಲ್ಲಿ ರೂಪುಗೊಂಡ ಹೊಸ ಭಾಷೆಯನ್ನು ಉಪಭಾಷೆ ಎಂದು ಕರೆಯಲಾಗುತ್ತದೆ. ಕನ್ನಡ, ತೆಲುಗು, ಮಲಯಾಳಂ ಮುಂತಾದ ದ್ರಾವಿಡ ಭಾಷೆಗಳು ತಮಿಳಿನಿಂದ ಬೇರ್ಪಟ್ಟ ಉಪಭಾಷೆಗಳಾಗಿವೆ" ಎಂದು ಉಲ್ಲೇಖಿಸಲಾಗಿದೆ.
ತಮಿಳರು ತಾವು ಸತ್ಯ ಎಂದು ನಂಬಿರುವುದನ್ನೇ ಕಮಲ್ ಹಾಸನ್ ಹೇಳಿದ್ದಾರೆ ಎನ್ನುವುದು ಕೆಲವರ ಅಭಿಪ್ರಾಯ. ಕಮಲ್ ಕೂಡ ತಮ್ಮ ಹೇಳಿಕೆ ಹಿಂಪಡೆಯಲು ಸಿದ್ಧರಿಲ್ಲ. ನಾನು ತಪ್ಪು ಮಾತನಾಡಿಲ್ಲ, ಹಾಗಾಗಿ ಕ್ಷಮೆ ಕೇಳುವ ಮಾತೇಯಿಲ್ಲ ಎಂದು ವಾದಿಸುತ್ತಿದ್ದಾರೆ. ತಾವೇ ನಿರ್ಮಿಸಿ ನಟಿಸಿರುವ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗದಿದ್ದರೂ ಪರವಾಗಿಲ್ಲ. ನಾನು ಕ್ಷಮೆ ಕೇಳಲ್ಲ ಎಂದು ಹಠ ಹಿಡಿಯುತ್ತಿದ್ದಾರೆ.


Click it and Unblock the Notifications











