ಕಿಚ್ಚನ 'ಮ್ಯಾಕ್ಸ್' ಎದುರು ಅಖಾಡಕ್ಕಿಳಿದ 'ರಾಬಿನ್‌ಹುಡ್'; 'ಪುಷ್ಪ 2' ನಿರ್ಮಾಪಕರ ಮಾಸ್ಟರ್ ಪ್ಲ್ಯಾನ್ ಏನು?
'ವಿಕ್ರಾಂತ್ ರೋಣ' ಬಳಿಕ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ರಿಲೀಸ್‌ಗೆ ರೆಡಿಯಾಗುತ್ತಿದೆ. ಕನ್ನಡದ ಎರಡು ಸಿನಿಮಾಗಳು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಕಿಚ್ಚ ಸುದೀಪ್ 'ಮ್ಯಾಕ್ಸ್' ಹಾಗೂ ಉಪೇಂದ್ರ 'ಯುಐ' ಎರಡೂ ಸಿನಿಮಾ ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ.
ಕನ್ನಡದ ಈ ಎರಡೂ ಸಿನಿಮಾಗಳಿಗೂ ಪರಭಾಷೆಯ ಸಿನಿಮಾಗಳು ಪೈಪೋಟಿ ಕೊಡುವುದಕ್ಕೆ ಸಜ್ಜಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಡಿಸೆಂಬರ್ 20ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಇದೇ ದಿನ ಮಕ್ಕಳ ಫೇವರಿಟ್ ಸಿನಿಮಾ 'ಮುಫಾಸ: ದಿ ಲಯನ್ ಕಿಂಗ್' ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಕನ್ನಡದಲ್ಲಿ ಅಲ್ಲದೇ ಹೋದರೂ ಬೇರೆ ರಾಜ್ಯಗಳಲ್ಲಿ 'ಯುಐ'ಗೆ ಏಟು ಕೊಡಬಹುದು.

'ಯುಐ' ರಿಲೀಸ್ ಆದ ಐದು ದಿನಗಳ ಬಳಿಕ 'ಮ್ಯಾಕ್ಸ್' ರಿಲೀಸ್ ಆಗುತ್ತಿದೆ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಐದು ಭಾಷೆಗಳಲ್ಲಿ ಕಿಚ್ಚನ ಸಿನಿಮಾ ಅಬ್ಬರಿಸಲು ರೆಡಿಯಾಗಿದೆ. ಸುದೀಪ್ ಹಿಂದಿ, ತೆಲುಗು, ತಮಿಳು ಎಲ್ಲಾ ಭಾಷೆಯ ಸಿನಿಪ್ರಿಯರಿಗೂ ಪರಿಚಯವಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಬಹುದು ಎಂದು ನಿರೀಕ್ಷೆಯಿದೆ. ಆದ್ರೀಗ ತೆಲುಗಿನಲ್ಲಿ 'ಪುಷ್ಪ 2' ನಿರ್ಮಾಪಕರು ನಿರ್ಮಿಸಿದ ಮತ್ತೊಂದು ಸಿನಿಮಾವನ್ನು ಅದೇ ದಿನ ಅನೌನ್ಸ್ ಮಾಡಿದ್ದಾರೆ. ಅದುವೇ 'ರಾಬಿನ್‌ಹುಡ್'.
ಇನ್ನೊಂದು ವಾರದಲ್ಲಿ 'ಪುಷ್ಪ 2' ಹವಾ ಕಡಿಮೆ ಆಗುತ್ತೆ. ಅಗತ್ಯಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡಿದ್ದರಿಂದ ಎರಡು ವಾರದೊಳಗೆ ಥಿಯೇಟರ್‌ಗೆ ಬರುವವರ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ 'ಪುಷ್ಪ 2' ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ರಾಬಿನ್‌ಹುಡ್' ಸಿನಿಮಾವನ್ನು ರಿಲೀಸ್ ಮಾಡಿ, ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಲಾಭ ಪಡೆಯುವುದಕ್ಕೆ ಹೊರಟಿದೆ.
'ರಾಬಿನ್‌ಹುಡ್' ಸಿನಿಮಾದಲ್ಲಿ ತೆಲುಗು ನಟ ನಿತಿನ್ ಹಾಗೂ ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ರಿಲೀಸ್ ಆಗುತ್ತಿರುವ ದಿನವೇ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಕೂಡ ರಿಲೀಸ್ ಆಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಕನ್ನಡದ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ತೆಲುಗು ಏರಿಯಾಗಳಲ್ಲಿ ಕಿಚ್ಚ ಸುದೀಪ್ ಸಿನಿಮಾಗೆ ಕ್ರೇಜ್ ಕಡಿಮೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

ಕಿಚ್ಚ ಸುದೀಪ್ ಸಿನಿಮಾಗೆ 'ರಾಬಿನ್‌ಹುಡ್' ಕಂಟಕವೇನು ಅಲ್ಲ. ಕನ್ನಡದಲ್ಲಂತೂ 'ಯುಐ' ಹಾಗೂ 'ಮ್ಯಾಕ್ಸ್' ಸಿನಿಮಾಗಳು ಚಿತ್ರಮಂದಿಗಳನ್ನು ಆಕ್ರಮಿಸಿಕೊಂಡಿರುತ್ತವೆ. ಹೀಗಾಗಿ ಕರ್ನಾಟಕದಲ್ಲಿ ಅಂತಹ ಸಮಸ್ಯೆ ಏನೂ ಆಗುವುದಿಲ್ಲ. ಇನ್ನೂ ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಎಷ್ಟು ಥಿಯೇಟರ್‌ಗಳು ಸಿಗಬೇಕೋ ಅಷ್ಟು ಸಿಕ್ಕೇ ಸಿಗುತ್ತವೆ. ಆದರೆ, ತೆಲುಗು ಏರಿಯಾಗಳಲ್ಲಿ ಥಿಯೇಟರ್ ಸಂಖ್ಯೆ ಕಡಿಮೆ ಆಗಬಹುದೇನೋ.
ಇನ್ನು ಕಿಚ್ಚ ಸುದೀಪ್ ತೆಲುಗು ಆಡಿಯನ್ಸ್‌ಗೂ ಪರಿಚಯವಿರುವ ನಟ. 'ಈಗ', 'ಬಾಹುಬಲಿ', 'ರಕ್ತಚರಿತ್ರೆ' ಅಂತಹ ಸಿನಿಮಾಗಳಲ್ಲಿ ನಟಿಸಿರುವುದರಿಂದ ಅಲ್ಲೂ ಒಳ್ಳೆಯ ಓಪನಿಂಗ್ ಸಿಗುತ್ತೆ ಅನ್ನುವ ನಿರೀಕ್ಷೆಯಲ್ಲಿದ್ದಾರೆ. ತಮಿಳು ನಿರ್ಮಾಪಕ ನಿರ್ಮಾಣ ಮಾಡುತ್ತಿರುವುದರಿಂದ ತಮಿಳುನಾಡಿನಲ್ಲೂ ಈ ಸಿನಿಮಾಗೆ ಭರ್ಜರಿ ಪ್ರಚಾರ ಸಿಗುವ ಸಾಧ್ಯತೆಯಿದೆ. ಆದರೆ, ಕ್ರಿಸ್‌ಮಸ್‌ಗೆ ಹಲವು ಸಿನಿಮಾಗಳು ರಿಲೀಸ್ ಪ್ಲ್ಯಾನ್ ಮಾಡಿರುವುದರಿಂದ 'ಮ್ಯಾಕ್' ಪೈಪೋಟಿಯನ್ನು ಎದುರಿಸಬೇಕಾಗಿ ಬರಬಹುದು.


Click it and Unblock the Notifications











