300 ಸಿನಿಮಾ ಮಾಡಿದ್ರೂ ಅವಾರ್ಡ್ ಸಿಕ್ಕಿಲ್ಲ; ಈ ಬಾರಿ ಗ್ಯಾರಂಟಿ ಅಂದ್ಕೊಂಡಿದ್ದ ಸುಧೀರ್‌ಗೆ ಮತ್ತೆ ನಿರಾಸೆ.. ಆ ಸಿನಿಮಾ ಯಾವುದು?
ತರುಣ್ ಸುಧೀರ್ ಇಂದು ಸ್ಯಾಂಡಲ್‌ವುಡ್‌ನ ಬಹು ಬೇಡಿಕೆಯ ನಿರ್ದೇಶಕ. ದರ್ಶನ್ ನಟಿಸಿದ 'ಚೌಕ', 'ರಾಬರ್ಟ್', 'ಕಾಟೇರ' ದಂತಹ ಯಶಸ್ವಿ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಸುಧೀರ್ ಅವರ ಪುತ್ರ ಅನ್ನೋದು ಇನ್ನೊಂದು ಹೆಮ್ಮೆ. ಈಗ ಸುಧೀರ್ ನಿರ್ಮಾಪಕರಾಗಿಯೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. 'ಏಳು ಮಲೆ' ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಹೀಗಾಗಿ ನಿರ್ದೇಶನದ ಕಡೆಗೆ ವಾಲಿದ್ದರು. ಈಗ ನಿರ್ದೇಶನದಲ್ಲಿ ಅವರಿಗೆ ಯಶಸ್ಸಿ ಸಿಕ್ಕಿದೆ. 'ಏಳು ಮಲೆ' ಸಿನಿಮಾದ ಟೈಟಲ್ ಲಾಂಚ್ ಬಳಿಕ ತರುಣ್ ಸುಧೀರ್ ತಮ್ಮ ತಂದೆಯ ಕೊರಗಿನ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ತಮ್ಮ ತಂದೆ ಕನ್ನಡದಲ್ಲಿ 300 ಸಿನಿಮಾಗಳಲ್ಲಿ ನಟಿಸಿದ್ದರೂ ಒಂದೇ ಒಂದು ಅವಾರ್ಡ್ ಸಿಕ್ಕಿಲ್ಲ. ಆ ಕೊರಗು ಅವರಿಗಿತ್ತು ಎಂದು ಫಿಲ್ಮಿ ಫಸ್ಟ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜರಲ್ಲಿ ಸುಧೀರ್ ಕೂಡ ಒಬ್ಬರು. ಬಹುತೇಕ ಖಳನಟನಾಗಿ ತೆರೆಮೇಲೆ ಅಬ್ಬರಿದ್ದಾರೆ. ಹಾಗಂತ ಕೇವಲ ಸಿನಿಮಾ ಅಷ್ಟೇ ಅಲ್ಲ. ನಾಟಕಗಳಲ್ಲಿಯೂ ತರುಣ್ ಸುಧೀರ್ ನಟಿಸುತ್ತಿದ್ದರು. ಕಲಾ ಜಗತ್ತಿಗೆ ಸುಧೀರ್ ಅವರ ಕೊಡುಗೆ ಅಪಾರ. ಈಗ ಅವರ ಇಬ್ಬರು ಪುತ್ರರು ನಂದ ಕಿಶೋರ್ ಹಾಗೂ ತರುಣ್ ಸುಧೀರ್ ಇದೇ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. 'ಏಳು ಮಲೆ' ಬಗ್ಗೆ ಮಾತಾಡುವಾಗ ತಂದೆಗಿದ್ದ ಒಂದು ಕೊರಗಿನ ಬಗ್ಗೆ ಹೇಳಿಕೊಂಡಿದ್ದಾರೆ.
"ನಮ್ಮ ತಂದೆಯವರಿಗೆ ಒಂದೇ ಒಂದು ಅವಾರ್ಡ್ ಬಂದಿಲ್ಲ. ಸ್ಟೇಟ್ ಅವಾರ್ಡ್ ಅದೂ ಇದೂ ಯಾವುದೂ ಬಂದಿಲ್ಲ. ನಮ್ಮ ತಂದೆ 250 ರಿಂದ 300 ಸಿನಿಮಾಗಳನ್ನು ಮಾಡಿದರೂ ಅವರಿಗೆ ಯಾವುದೇ ಅವಾರ್ಡ್ ಕೂಡ ಬಂದಿರಲಿಲ್ಲ. ನಮ್ಮ ತಂದೆಗೆ ಅವಾರ್ಡ್ ಬಂದಿಲ್ಲ ಎನ್ನುವ ಕೊರಗು ಇತ್ತು. ನಾನು ಇಷ್ಟೊಂದು ಆಕ್ಟಿಂಗ್ ಮಾಡಿದ್ದೇನೆ. ಅದ್ಯಾವುದೂ ಮನಸ್ಸಿಗೆ ಮುಟ್ಟಿಲ್ವೇನೋ ಅನ್ನೋದು ಇತ್ತು." ಎಂದು ತರುಣ್ ಸುಧೀರ್ ಫಿಲ್ಮಿ ಫಸ್ಟ್ ಸಂದರ್ಶನದ ವೇಳೆ ಹೇಳಿಕೊಂಡಿದ್ದಾರೆ.
ಸುಧೀರ್ ಅವರಿಗೆ ಒಂದು ಸಿನಿಮಾದಲ್ಲಿ ಅವಾರ್ಡ್ ಬಂದೇ ಬರುತ್ತೆ ಅನ್ನೋ ಆಸೆ ಇಟ್ಟುಕೊಂಡಿದ್ದರು. ಅದು ಶಿವಣ್ಣನ ಜೊತೆ ನಟಿಸಿದ ಸಿನಿಮಾ. "ಒಂದು ಸಿನಿಮಾದಲ್ಲಿ ಮಾತ್ರ ಅವರು ತುಂಬಾನೇ ಹೋಪ್ ಇಟ್ಟುಕೊಂಡಿದ್ದರು. ಈ ಸಿನಿಮಾಗೆ ನನಗೆ ಅವಾರ್ಡ್ ಬರಬಹುದು ಅಂತ ಅಂದುಕೊಂಡಿದ್ದರು. ಅದ್ಯಾವುದು ಅಂದರೆ, ಶಿವಣ್ಣ ಮಾಡಿದ ದೊರೆ ಎನ್ನುವ ಸಿನಿಮಾ. ಅದರಲ್ಲಿ ಅವರು ಗೆಟಪ್ ಚೇಂಜ್ ಮಾಡಿದ್ದರು. ಅವರಿಗೆ ಎರಡೆರಡು ಗೆಟಪ್ ಹಾಕಿದ್ದರು. ಆದರೂ ಅವರಿಗೆ ಅವಾರ್ಡ್ ಬಂದಿರಲಿಲ್ಲ." ಎಂದು ತರುಣ್ ಸುಧೀರ್ ಹೇಳಿದ್ದಾರೆ.

ಇನ್ನು ಶಿವಣ್ಣನೊಂದಿಗೆ ತರುಣ್ ಸುಧೀರ್ ಒಂದು ಸಿನಿಮಾ ಮಾಡಬೇಕಿತ್ತು. ಆ ಬಗ್ಗೆನೂ ಹೇಳಿಕೊಂಡಿದ್ದಾರೆ. "ನನಗೆ ಮೊದಲು ಶಿವಣ್ಣನೊಂದಿಗೆ ಕೆಲಸ ಮಾಡುವುದಕ್ಕೆ ಸಿಕ್ಕಿದ್ದು ಚೆಲುವೆಯೇ ನಿನ್ನ ನೋಡಲು ಎನ್ನುವ ಸಿನಿಮಾ. ರಘು ರಾಮ್ ಅವರು ಡೈರೆಕ್ಟ್ ಮಾಡಿದರು. ಆ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದೆ. ಅವರೊಂದಿಗೆ ಟ್ರಾವೆಲ್ ಮಾಡುವ ಪಾತ್ರವದು. ಹೀರೋ ಆಗಿ ಅಷ್ಟು ವರ್ಕ್ ಆಗುತ್ತಿರಲಿಲ್ಲ. ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಬರುತ್ತೇನೆ ಅಂದಾಗ ನನ್ನ ಸ್ನೇಹಿತರಾದ ಶರಣ್ ಅವರೆಲ್ಲ, ನಿನ್ನ ಡೈರೆಕ್ಷನ್ ಆಲೋಚನೆಗಳು ಚೆನ್ನಾಗಿವೆ. ನೀನು ಅದರ ಬಗ್ಗೆ ಯೋಚನೆ ಮಾಡು ಅಂದಿದ್ದರು." ಎಂದು ನಿರ್ದೇಶನಕ್ಕೆ ಇಳಿದ ಬಗ್ಗೆ ರಿವೀಲ್ ಮಾಡಿದ್ದಾರೆ.
"ಒಂದು ಕಥೆ ಮಾಡಿಕೊಂಡಿದ್ದೆ. ಅದನ್ನು ನಾನು ಡೈರೆಕ್ಟರ್ ರಘು ಅವರಿಗೆ ಹೇಳಿದ್ದೆ. ಶಿವಣ್ಣ ಅವರು ಇದ್ದರೆ, ಈ ಸಿನಿಮಾ ಎಕ್ಸ್‌ಟ್ರಾರ್ಡಿನರಿ. ಆದರೆ, ನಾನು ಏನೂ ಪ್ರೂವ್ ಮಾಡಿಲ್ಲ, ಏನೂ ಗೊತ್ತಿಲ್ಲ ಅಂತ ಹೇಳಿದೆ. ಅದನ್ನು ತೆಗೆದುಕೊಂಡು ಹೋಗಿ ರಘು ಶಿವಣ್ಣನಿಗೆ ಹೇಳಿದ್ದಾರೆ. ಆ ಶಿವಣ್ಣ ಅದಕ್ಕೆಲ್ಲ ಏನಮ್ಮ ಯೋಚನೆ ಮಾಡುತ್ತಿದ್ದೀಯ ಎಂದು ಕೂಡಿಸಿಕೊಂಡು ಕಥೆ ಹೇಳು ಅಂದರು. ಕಥೆ ಹೇಳಿದಾಗ ಒಂದು ಸಿಟಿಂಗ್‌ನಲ್ಲಿಯೇ ಅದ್ಭುತವಾಗಿದೆ ಎಂದರು. ಕರೆಕ್ಟ್ ಆಗಿ ಸಿನಿಮಾ ಮಾಡಿದರೆ, ಇದು ಇನ್ನೊಂದು ಓಂ ಆಗುತ್ತೆ ಎಂದಿದ್ದರು. ಆದರೆ, ನನಗೆ ಆಗ ಇನ್ನೂ ಡೈರೆಕ್ಷನ್‌ನಲ್ಲಿ ಸ್ಟ್ರಾಂಗ್ ಆಗಿರಬೇಕು ಅಂತ ಅನಿಸಿತ್ತು. ಹೀಗಾಗಿ ಆ ಸಿನಿಮಾ ಮಾಡುವುದಕ್ಕೆ ಆಗಲಿಲ್ಲ." ಎಂದಿದ್ದಾರೆ.


Click it and Unblock the Notifications











