ಅದಿತಿ ಪ್ರಭುದೇವ, ಶ್ರೀನಿ ಅಭಿನಯದ 'ಓಲ್ಡ್ ಮಾಂಕ್' ವಿದೇಶದಲ್ಲೂ ರಿಲೀಸ್
ಸ್ಯಾಂಡಲ್‌ವುಡ್ ಕಾಮಿಡಿ ಕಮ್ ಫ್ಯಾಮಿಲಿ ಸಿನಿಮಾ 'ಓಲ್ಡ್ ಮಾಂಕ್'. ಈ ಸಿನಿಮಾ ಫೆಬ್ರವರಿ 25ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಈ ಸಿನಿಮಾ ನೋಡಿದವರು 'ಓಲ್ಡ್ ಮಾಂಕ್'ಗೆ ಭೇಷ್ ಎಂದಿದ್ದರು. ಮೌತ್ ಟಾಕ್‌ನಿಂದ ಸಿನಿಮಾ ನೋಡಲು ಇನ್ನೇನು ಪ್ರೇಕ್ಷಕರು ಚಿತ್ರಮಂದಿರದ ಕಡೆಗೆ ಬರುತ್ತಿದ್ದಾರೆ ಎನ್ನುವಾಗಲೇ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆ ಸಜ್ಜಾಗಿದೆ. ಇದರಿಂದ ಚಿತ್ರಮಂದಿರಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಫಸ್ಟ್ ಡೇ ಫಸ್ಟ್ ಶೋ ನೋಡಿದವರು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೌಟುಂಬಿಕ ಕಥೆಯೊಂದಿಗೆ ಕಾಮಿಡಿ ಮಿಕ್ಸ್ ಮಾಡಿದ್ದರಿಂದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದರಿಂದ ಎರಡನೇ ವಾರ 80 ಚಿತ್ರಮಂದಿರಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು. ಈಗ ಚಿತ್ರತಂಡ ಮತ್ತೊಂದು ಹೆಜ್ಜೆ ಇಡುವುದಕ್ಕೆ ಮುಂದಾಗಿದೆ. 'ಓಲ್ಡ್ ಮಾಂಕ್' ಸಿನಿಮಾವನ್ನೂ ವಿದೇಶದಲ್ಲಿಯೂ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
ವಿದೇಶದಲ್ಲಿ 'ಓಲ್ಡ್ ಮಾಂಕ್' ಸಿನಿಮಾ ರಿಲೀಸ್
'ಓಲ್ಡ್ ಮಾಂಕ್' ಸಿನಿಮಾ ರೆಸ್ಪಾನ್ಸ್ ಚೆನ್ನಾಗಿದೆ. ಆದರೂ ಇಡೀ ಚಿತ್ರತಂಡ ಆತಂಕದಲ್ಲಿದೆ. ಸಿನಿಮಾ ಗೆಲ್ಲುವ ಮುನ್ನವೇ ಎಲ್ಲಿ ನಮ್ಮ ಸಿನಿಮಾ ಚಿತ್ರಮಂದಿರದಿಂದ ಎತ್ತಂಗಡಿಯಾಗುತ್ತೋ ಅನ್ನುವ ಆತಂಕದಲ್ಲಿದ್ದಾರೆ. ಆದರೂ, ಗೆಲ್ಲಲು ಏನೇನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತಲೇ ಇದ್ದಾರೆ. ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಕೆನಡಾ, ಅಮೆರಿಕ ಹಾಗೂ ಆಸ್ಟ್ರೇಲಿಯಾದಲ್ಲೂ 'ಓಲ್ಡ್ ಮಾಂಕ್' ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

'ಓಲ್ಡ್ ಮಾಂಕ್' ಸಿನಿಮಾವನ್ನು 'ಶ್ರೀನಿವಾಸ ಕಲ್ಯಾಣ' ಖ್ಯಾತಿಯ ಶ್ರೀನಿ ನಿರ್ದೇಶಿಸುವುದರ ಜೊತೆಗೆ ನಟಿಸಿದ್ದಾರೆ. ಶ್ರೀನಿಗೆ ನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಸಿಕ್ಕಿರುವ ರೆಸ್ಪಾನ್ಸ್ ಬಗ್ಗೆ ಇಡೀ ಚಿತ್ರತಂಡ ಖುಷಿಯಾಗಿದ್ದಾರೆ. ತಮಗೆ ಸಿಕ್ಕಿರುವ ಪಾತ್ರಗಳ ಬಗ್ಗೆನೂ ಖುಷಿಯಾಗಿದ್ದಾರೆ. ಹಾಗೇ ಸಿನಿಮಾ ಗೆಲ್ಲಿಸಲು ಇಡೀ ತಂಡ ಹರಸಾಹಸ ಮಾಡುತ್ತಿದ್ದಾರೆ.

ಮೊದಲು ಕನ್ನಡ ಸಿನಿಮಾ ನೋಡಿ
'ಓಲ್ಡ್ ಮಾಂಕ್' ಸಿನಿಮಾ ಪ್ರತಿವಾರ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇನ್ನೇನು ಪಿಕಪ್ ಆಗುತ್ತಿದೆ ಎನ್ನುವಾಗಲೇ ಪರಭಾಷಾ ಸಿನಿಮಾಗಳು ಪೈಪೋಟಿ ಎದುರಿಸಬೇಕಾಗಿದೆ. ಹೀಗಾಗಿ ಚಿತ್ರದ ನಿರ್ದೇಶಕ ಕಮ್ ನಟ ಶ್ರೀನಿ ಕನ್ನಡ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. "ಪರಭಾಷಾ ಚಿತ್ರಗಳನ್ನು ಆಮೇಲೆ ನೋಡಿ. ಮೊದಲು ಕನ್ನಡ ಸಿನಿಮಾವನ್ನು ನೋಡಿ. ನಮ್ಮ ಸಿನಿಮಾ ನೋಡಿರುವವರನ್ನು ಕೇಳಿಕೊಂಡು, ಅವರು ಚೆನ್ನಾಗಿದೆ ಅಂದ್ಮೇಲೆ ಮಾತ್ರ ಸಿನಿಮಾ ನೋಡಿ." ಎಂದು ನಟ-ನಿರ್ದೇಶಕ ಶ್ರೀನಿ ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅಂದ್ಹಾಗೆ, ಸಿನಿಮಾ ಗೆದ್ದಿದೆ ಅಂತ ಚಿತ್ರತಂಡ ಹೇಳುವುದು ಸಹಜ. ಇನ್ನೊಂದು ಕಡೆ ಸಿನಿಮಾ ಸೋಲಿನ ಬಗ್ಗೆ ಮಾತಾಡುವುದೂ ಕೂಡ ಇದೆ. ಆದರೆ, ಈ ತಂಡ ಮಾತ್ರ ಸಿನಿಮಾ ಯಶಸ್ಸು ಕಾಣಲಿ ಅಂತ ಪ್ರೆಸ್ ಮೀಟ್ ಮಾಡಿದ್ದಾರೆ. 'ಓಲ್ಡ್ ಮಾಂಕ್' ಸಿನಿಮಾ ಚೆನ್ನಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಸಿನಿಮಾ ಗೆಲ್ಲಿಸುವುದು ಪ್ರೇಕ್ಷಕರ ಮೇಲೆ ನಿಂತಿದೆ.


Click it and Unblock the Notifications











