ಕರ್ನಾಟಕವನ್ನು ಕಡೆಗಣಿಸಿದ 'ಪುಷ್ಪ'; ತೆಲುಗು ಹಿಂದಿಕ್ಕಿ ಗೆದ್ದ ಕನ್ನಡದ ಚಿತ್ರಮಂದಿರಗಳ್ಯಾವುವು ಗೊತ್ತೆ?
ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ನಿನ್ನೆ (ಡಿಸೆಂಬರ್ 5) ವಿಶ್ವದಾದ್ಯಂತ ರಿಲೀಸ್ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಅಲ್ಲು ಅರ್ಜುನ್ ದಕ್ಷಿಣ ಭಾರತದ ತಮಿಳುನಾಡು, ಕೇರಳ ರಾಜ್ಯಗಳಿಗೂ ಭೇಟಿ ಕೊಟ್ಟಿದ್ದರು. 'ಪುಷ್ಪ 2 ಸಿನಿಮಾವನ್ನು ಪ್ರಚಾರ ಮಾಡಿದ್ದರು.
ತಮಿಳುನಾಡಿನಲ್ಲಿ ತಮಿಳಿನಲ್ಲಿ ಮಾತಾಡಿ ಆಯಾ ಭಾಷೆಗೆ, ಸಂಸ್ಕೃತಿಗೆ ಬೆಲೆ ಕೊಡುವುದಾಗಿ ಹೇಳಿದ್ದರು. ಹೀಗಾಗಿ ಕರ್ನಾಟಕಕ್ಕೆ ಬಂದು ಕನ್ನಡದಲ್ಲಿ ಮಾತಾಡುತ್ತಾರಾ? ಎಂದು ನೋಡುವುದಕ್ಕೆ ಕನ್ನಡಿಗರು ಕಾದು ಕೂತಿದ್ದರು. ಆದರೆ, ಅಲ್ಲು ಅರ್ಜುನ್ ಕರ್ನಾಟಕಕ್ಕೆ ಎಂಟ್ರಿ ಕೊಡಲಿಲ್ಲ. ಹಾಗಂತ 'ಪುಷ್ಪ 2' ಕನ್ನಡ ವರ್ಷನ್ ರಿಲೀಸ್ ಮಾಡಿಲ್ಲ ಅಂತಲ್ಲ. ಕರ್ನಾಟಕದಲ್ಲಿ ಕನ್ನಡದ ಅವತರಣಿಕೆಯನ್ನು ರಿಲೀಸ್ ಮಾಡಲಾಗಿತ್ತು.

ಕರ್ನಾಟಕದಲ್ಲಿ ಅಲ್ಲು ಅರ್ಜುನ್ 'ಪುಷ್ಪ 2' ಸುಮಾರು 160 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದೆ ಎನ್ನುವ ಮಾಹಿತಿಯಿದೆ. ಆದರೆ, ಕನ್ನಡಿಗರು ಕನ್ನಡ ವರ್ಷನ್ ಸಿನಿಮಾಗಳನ್ನು ನೋಡುವುದಿಲ್ಲ ಎನ್ನುವುದನ್ನು ಈ ಬಾರಿ ಅಳಿಸಿ ಹಾಕಿದ್ದಾರೆ. ಕನ್ನಡಿಗರು ಭಾಷೆಯ ಮೇಲೆ ಇರುವ ಸ್ವಾಭಿಮಾನವನ್ನು ಎತ್ತಿ ಹಿಡಿದಿದ್ದಾರೆ. ಅಲ್ಲು ಅರ್ಜುನ್ ಕರ್ನಾಟಕಕ್ಕೆ ಬಂದು ಕನ್ನಡ ಮಾತಾಡದೇ ಹೋದರೂ ಕನ್ನಡಿಗರು ಕೆಲವು ಜಿಲ್ಲೆಗಳಲ್ಲಿ ತಮ್ಮ ಸ್ವಾಭಿಮಾನವನ್ನು ಮೆರೆದಿದ್ದಾರೆ. ಹಾಗಿದ್ದರೆ ತೆಲುಗು ವರ್ಷನ್ ಅನ್ನು ಹಿಂದಿಕ್ಕಿ ಗೆದ್ದ ಕನ್ನಡದ ಆ ಚಿತ್ರಮಂದಿರಗಳು ಯಾವುವು? ತಿಳಿಯಲು ಮುಂದೆ ಓದಿ.
ಡಬ್ಬಿಂಗ್ ಸಿನಿಮಾಗೆ ಜೈ ಎಂದ ಕನ್ನಡಿಗರು
ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಾ ಓಡುವುದಿಲ್ಲ ಅನ್ನೋ ಆರೋಪವನ್ನು ನಿರ್ಮಾಪಕರು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಲೇ ಇದ್ದಾರೆ. ಕನ್ನಡಿಗರು ಕೂಡ ಡಬ್ಬಿಂಗ್ ವರ್ಷನ್‌ಗೆ ಅಷ್ಟೊಂದು ರೆಸ್ಪಾನ್ಸ್ ಕೊಟ್ಟಿರಲಿಲ್ಲ. ಆದ್ರೀಗ ಇದೇ ಮೊದಲ ಬಾರಿಗೆ ಕನ್ನಡ ಡಬ್ಬಿಂಗ್ ವರ್ಷನ್‌ಗೆ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. 'ಪುಷ್ಪ 2' ಕನ್ನಡ ವರ್ಷನ್‌ಗೆ ಕೆಲವು ಏರಿಯಾಗಳಲ್ಲಿ ಕನ್ನಡಿಗರು ಜೈ ಎಂದಿದ್ದಾರೆ. ಕನ್ನಡ ಗೆಲ್ಲಿಸಿದ ಜಿಲ್ಲೆಗಳ್ಯಾವುವು? ಮೊದಲ ದಿನ ತೆಲುಗು ವರ್ಷನ್‌ಗೆ ಕಿಕ್ ಕೊಟ್ಟ ಆ ಕನ್ನಡ ಚಿತ್ರಮಂದಿರಗಳ ಲಿಸ್ಟ್ ಇಲ್ಲಿದೆ.
ಮಂಡ್ಯದಲ್ಲಿ ಗುರುಶ್ರೀ ಚಿತ್ರಮಂದಿರ
ಅಪ್ಪಟ ಕನ್ನಡಿಗರು ಇರುವ ಜಿಲ್ಲೆ ಮಂಡ್ಯ. ಇಲ್ಲಿ ಗುರುಶ್ರೀ ಹಾಗೂ ಮಹಾವೀರ ಎಂಬ ಎರಡು ಚಿತ್ರಮಂದಿರಗಳಲ್ಲಿ 'ಪುಷ್ಪ 2' ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಗುರುಶ್ರೀ ಚಿತ್ರಮಂದಿರಲ್ಲಿ ಕನ್ನಡ ವರ್ಷನ್ ಹಾಕಿದ್ದರೆ, ಮಹಾವೀರದಲ್ಲಿ ತೆಲುಗು ವರ್ಷನ್ ಹಾಕಿದ್ದರು. ಟ್ರೇಡ್ ಎಕ್ಸ್‌ಪರ್ಟ್‌ಗಳಿಗೆ ಸಿಕ್ಕಿರುವ ಲೆಕ್ಕದ ಪ್ರಕಾರ ಕನ್ನಡ ವರ್ಷನ್ ಪ್ರದರ್ಶನ ಮಾಡುತ್ತಿರುವ ಗುರುಶ್ರೀ ಚಿತ್ರಮಂದಿರ ಮೊದಲ ದಿನ 5.96 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಅದೇ ತೆಲುಗು ವರ್ಷನ್ ಹಾಕಿದ್ದ ಮಹಾವೀರ 2.90 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಶಿವಮೊಗ್ಗ ಮಲ್ಲಿಕಾರ್ಜುನ
ಮತ್ತೊಂದು ಕನ್ನಡ ಏರಿಯಾ ಶಿವಮೊಗ್ಗ. ಇಲ್ಲೂ ಎರಡು ಚಿತ್ರಮಂದಿರಗಳಲ್ಲಿ 'ಪುಷ್ಪ 2' ಸಿನಿಮಾವನ್ನು ಪ್ರದರ್ಶನ ಮಾಡಲಾಗಿತ್ತು. ಮಲ್ಲಿಕಾರ್ಜುನ ಚಿತ್ರಮಂದಿರಲ್ಲಿ 'ಪುಷ್ಪ 2' ಕನ್ನಡ ವರ್ಷನ್ ಹಾಕಿದ್ದರೆ, ತೆಲುಗು ವರ್ಷನ್ ಅನ್ನು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡುತ್ತಿದ್ದರೆ. ವಿತರಕರ ವಲಯದ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕನ್ನಡದ ವರ್ಷನ್ ಹಾಕಿದ್ದ ಮಲ್ಲಿಕಾರ್ಜುನದಲ್ಲಿ 1.7 ಲಕ್ಷ ರೂಪಾಯಿ, ತೆಲುಗು ವರ್ಷನ್ ಹಾಕಿದ್ದ ವೀರಭದ್ರೇಶ್ವರದಲ್ಲಿ 1.6 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.
ಭದ್ರಾವತಿಯಲ್ಲೂ ಕನ್ನಡಕ್ಕೆ ಜೈ
ಭದ್ರಾವತಿಯಲ್ಲಿ ತೆಲುಗು, ತಮಿಳು ಮಾತನಾಡುವ ಜನರು ಇದ್ದಾರೆ. ಹೀಗಾಗಿ ಎರಡು ಚಿತ್ರಮಂದಿರಗಳಲ್ಲಿ ಕನ್ನಡ ಹಾಗೂ ತೆಲುಗು ವರ್ಷನ್ ಅನ್ನು ಪ್ರದರ್ಶನ ಮಾಡಲಾಗಿತ್ತು. ಇಲ್ಲಿ ಸತ್ಯ ಚಿತ್ರಮಂದಿರಲ್ಲಿ 'ಪುಷ್ಪ 2' ಕನ್ನಡ ವರ್ಷನ್ ಅನ್ನು ಪ್ರದರ್ಶನ ಮಾಡಲಾಗುತ್ತಿದೆ. ಮೊದಲ ದಿನ ಈ ಚಿತ್ರಮಂದಿರ 80 ಸಾವಿರ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಅದೇ ತೆಲುಗು ವರ್ಷನ್ ಹಾಕಿದ ಚಿತ್ರಮಂದಿರ 73 ಸಾವಿರ ಗಳಿಸಿದೆ.
ಕರ್ನಾಟಕದಾದ್ಯಂತ ಕನ್ನಡ ವರ್ಷನ್ ಗಳಿಸಿದ್ದೆಷ್ಟು?
ಅಲ್ಲು ಅರ್ಜುನ್ 'ಪುಷ್ಪ 2' ತೆಲುಗು ವರ್ಷನ್ ಕರ್ನಾಟಕದಲ್ಲಿ ಸುಮಾರು 245 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿದ್ದವು. ತಮಿಳು 70, ಹಿಂದಿ 135 ಹಾಗೂ ಕನ್ನಡ ವರ್ಷನ್ ಅನ್ನು 160 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಿದ್ದರು. ಇಷ್ಟು ದಿನ ಕನ್ನಡ ವರ್ಷನ್ ನೋಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಆದ್ರೀಗ ಮೂಲಕ ಕನ್ನಡ ವರ್ಷನ್ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. 'ಜೈಲರ್' ಕನ್ನಡ ವರ್ಷನ್‌ಗೂ ರೆಸ್ಪಾನ್ಸ್ ಚೆನ್ನಾಗಿತ್ತು. ಅದು ಈಗ ಪುಷ್ಟಾಗೂ ಮುಂದುವರೆದಿದ್ದು, ಮೊದಲ ದಿನ 75 ಲಕ್ಷ ರೂಪಾಯಿಯಿಂದ 90 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ.
ಸೂಚನೆ: ಈ ಅಂಕಿ ಅಂಶಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ಇದನ್ನು ಚಿತ್ರಮಂದಿರಗಳಾಗಲಿ, ಚಿತ್ರತಂಡವಾಗಲಿ ಅಧಿಕೃತವಾಗಿ ಹೇಳಿರುವುದಿಲ್ಲ. ಮೊದಲ ದಿನ ಕರ್ನಾಟಕದ ಅಂಕಿ ಅಂಶಗಳನ್ನು ವಿತರಕರು ಬಹಿರಂಗ ಪಡಿಸಬೇಕಿದೆ.


Click it and Unblock the Notifications











