2022ರಲ್ಲಿ ಯಾವ ತಿಂಗಳಲ್ಲಿ ಯಾವ ಕನ್ನಡದ ಪ್ಯಾನ್ ಇಂಡಿಯ ಸಿನಿಮಾ ರಿಲೀಸ್ ಆಗುತ್ತೆ
ಪ್ಯಾನ್ ಇಂಡಿಯಾ ಸಿನಿಮಾಗಳು ನೂರಾರು ಕೋಟಿ ಮೀರಿ ಸಾವಿರ ಕೋಟಿವರಗೆ ವಹಿವಾಟು ನಡೆಸೋದು ನೋಡಿ ಇಡೀ ಭಾರತೀಯ ಚಿತ್ರರಂಗ ಅಚ್ಚರಿಯಿಂದಲೇ ನೋಡುತ್ತಿದೆ. ಇಂಥಾ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಅನ್ನೋ ಈ ಕಾನ್ಸೆಪ್ಟ್ ಸರ್ವೇಸಾಮಾನ್ಯ ಎನ್ನುವಂತೆಯೂ ಆಗುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ಚಿತ್ರಗಳಿಗೆ ಪ್ಯಾನ್ ಇಂಡಿಯಾ ಕ್ರೇಜ್ ಮತ್ತು ಧೈರ್ಯ ಎರಡೂ ತುಸು ಹೆಚ್ಚೇ ಇದೆ ಎನ್ನಬಹುದು.
ಇದಕ್ಕೆ ಕಾರಣ ಕೆಜಿಎಫ್, ಪುಷ್ಪಾ, ಬಾಹುಬಲಿ, RRR ರೀತಿಯ ಸಿನಿಮಾಗಳೇ. ಯಾವಾಗ ಪ್ರಾದೇಶಿಕ ಭಾಷೆಗೆ ಸೀಮಿತವಾಗಿದ್ದ, ಹೆಚ್ಚೆಂದರೆ ಒಂದೆರಡು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗ್ತಿದ್ದ ಸಿನಿಮಾಗಳು ದೇಶದ ನಾನಾ ಭಾಗಗಳು ಮಾತ್ರವಲ್ಲ, ವಿಶ್ವದ ಮೂಲೆಗಳನ್ನು ತಲುಪಲು ಸಾಧ್ಯವಾಯಿತೋ, ಆಗಲೇ ಭಾರತ ಚಿತ್ರರಂಗ ಎಂದರೆ ಕೇವಲ ಬಾಲಿವುಡ್ ಎಂದು ಭಾವಿಸಿದ್ದ ಹಲವರ ಭ್ರಮೆಯನ್ನು ಈ ಚಿತ್ರಗಳು ಧ್ವಂಸ ಮಾಡಿದಂತಾಗಿದೆ.
ಈಗ 'ಕೆಜಿಎಫ್ 2' ಜೋಶ್ನಲ್ಲೇ ಸಾಲು ಸಾಲು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗ್ತಿದೆ. ಮುಂದಿನ ಐದು ತಿಂಗಳಲ್ಲಿ ಪ್ರತೀ ತಿಂಗಳಿಗೆ ಒಂದರಂತೆ ಕನ್ನಡ ಚಿತ್ರಗಳ ಪ್ಯಾನ್ ಇಂಡಿಯಾ ಮೇಳ ನಡೆಯಲು ಸಜ್ಜಾಗಿದೆ. ಇದು ಚಿತ್ರರಸಿಕರ ಪಾಲಿಗಂತೂ ಹಬ್ಬವೇ ಸರಿ. ಹಾಗಿದ್ದರೆ, 2022ರಲ್ಲಿ ಕನ್ನಡದ ಯಾವ್ಯಾವ ಪ್ಯಾನ್ ಇಂಡಿಯಾ ಸಿನಿಮಾ, ಯಾವಾ ತಿಂಗಳಲ್ಲಿ ಬಿಡುಗಡೆಯಾಗುತ್ತೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಜಗ್ಗೇಶ್ ನಟನೆಯ 'ತೋತಾಪುರಿ ಚಾಪ್ಟರ್ 1'
ಮೇ ತಿಂಗಳಲ್ಲಿ ನವರಸನಾಯಕ ಜಗ್ಗೇಶ್ ಅಭಿನಯದ 'ತೋತಾಪುರಿ ಚಾಪ್ಟರ್ 1' ಬಿಡುಗಡೆಯಾಗಲಿದೆ. ಇದು ಕೂಡ ಎರಡು ಚಾಪ್ಟರ್‌ಗಳಲ್ಲಿ ರಿಲೀಸ್ ಆಗಲಿದೆ. ಪಕ್ಕಾ ಹಾಸ್ಯ ಪ್ರಧಾನ ಚಿತ್ರವೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರೋದು ಇದೇ ಮೊದಲು. ನವರಸ ನಾಯಕ ಇದ್ದ ಮೇಲೆ ನಗುವಿಗೇನೂ ಬರವಿರಲ್ಲ. ಅದರೂ ಪ್ಯಾನ್ ಇಂಡಿಯಾ ಸಿನಿಮಾ ಎಂದ್ಮೇಲೆ ನಾನಾ ಭಾಷೆಗಳಲ್ಲಿ 'ತೋತಾಪುರಿ 1' ಬಿಡುಗಡೆಯಾಗಲಿದೆ, ಜಗ್ಗೇಶ್ ಹಾಸ್ಯದ ಹೊಸಲು ದೇಶದೆಲ್ಲೆಡೆ ಹರಿಯಲು ಸಜ್ಜಾಗಿದೆ. ಈ ಸಿನಿಮಾ ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ'
ಇನ್ನು ಜೂನ್ ತಿಂಗಳಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಬಿಡುಗಡೆಯಾಗಲಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನೇ ಕಥೆಯನ್ನಾಗಿಟ್ಟುಕೊಂಡು ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ವಿಶಿಷ್ಟ ಸಿನಿಮಾಗಳಲ್ಲಿ ನಟಿಸೋ ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಕನ್ನಡ ಪ್ರೇಕ್ಷಕರಿಗೆ ಒಂದು ಹೊಸಾ ಫ್ರೆಶ್ನೆಸ್ ಕೊಡುತ್ತದೆ ಎಂದಿದ್ದಾರೆ. ವಿಶೇಷ ಅಂದ್ರೆ, ಮಳೆಗಾಲದಲ್ಲಿ '777 ಚಾರ್ಲಿ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಿದೆ.

ಕಿಚ್ಚನ ವಿಕ್ರಾಂತ್ ರೋಣ
ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರೋ 'ವಿಕ್ರಾಂತ್ ರೋಣ' ಕೂಡ ಪ್ಯಾನ್ ಇಂಡಿಯಾ ಸಿನಿಮಾ. ಈ ಸಿನಿಮಾ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಸುದೀಪ್ ಈಗಾಗಲೇ ನಾನಾ ಭಾಷೆಗಳಲ್ಲಿ ಚಿರಪರಿಚಿತ ನಟ. ಹಾಗಾಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಿಚ್ಚ ಸುದೀಪ್ ಸಿನಿಮಾ ರಿಲೀಸ್ ಆಗಲಿದ್ದು, ಅವರ ಅಭಿಮಾನಿಗಳ ಪಾಲಿಗೆ ಹೆಚ್ಚಿನ ಖುಷಿ ಕೊಟ್ಟಿದೆ.

ಧ್ರುವ ಸರ್ಜಾ 'ಮಾರ್ಟಿನ್'
ಸೆಪ್ಟೆಂಬರ್ ತಿಂಗಳಲ್ಲಿ ಎ ಪಿ ಅರ್ಜುನ್ ನಿರ್ದೇಶನದಲ್ಲಿ ಧೃವ ಸರ್ಜಾ ಕಾಂಬಿನೇಶನ್ ಸಿನಿಮಾ ಮಾರ್ಟಿನ್ ಬಿಡುಗಡೆಯಾಗಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗಲಿದೆ. ಈ ಜೋಡಿಯ ಎರಡನೇ ಚಿತ್ರ ಇದಾಗಿದ್ದು ಧೃವ ಸರ್ಜಾಗೆ ಇರೋ ಮಾಸ್ ಆಡಿಯನ್ಸ್‌ಗೆ ಈ ಚಿತ್ರ ಸಖತ್ ಇಷ್ಟವಾಗಲಿದೆ ಎನ್ನುವ ಭರವಸೆ ಇದೆ. ಈಗಾಗಲೇ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು ಸೆಪ್ಟೆಂಬರ್‌ಗೆ ಅದ್ಧೂರಿಯಾಗಿ ತೆರೆ ಕಾಣಲಿದೆ. ಒಟ್ನಲ್ಲಿ ಸಾಲು ಸಾಲು ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಗೆ ಸಜ್ಜಾಗಿರೋದು ಅಭಿಮಾನಿಗಳಿಗಂತೂ ಸಖತ್ ಖುಷಿ ಕೊಟ್ಟಿದೆ.


Click it and Unblock the Notifications











