"ನಾನು ಅಂಡರ್‌ಡಾಗ್ ಅಲ್ಲ ಡಾಗ್.. ಹಾರ್ಡ್ ಆಗಿ ಕಚ್ಚುತ್ತೀನಿ": 'ಟೋಬಿ' ಮತ್ತೆ ಗುದ್ದಿದ್ಯಾರಿಗೆ?
ಸ್ಯಾಂಡಲ್‌ವುಡ್ ಮಂದಿಯ ಆಲೋಚನೆಯನ್ನೇ ಬದಲಿಸಿದ ಫಿಲ್ಮ್ ಮೇಕರ್ ರಾಜ್ ಬಿ ಶೆಟ್ಟಿ. 'ಒಂದು ಮೊಟ್ಟೆಯ ಕಥೆ', 'ಗರುಡ ಗಮನ ವೃಷಭ ವಾಹನ' ದಂತಹ ಸಿನಿಮಾಗಳೇ ಸಾಕ್ಷಿ. ಹೊಸ ಶೈಲಿಯ ಸಿನಿಮಾಗಳನ್ನು ಮೇಕಿಂಗ್ ಮಾಡುತ್ತಿರುವ ರಾಜ್ ಬಿ ಶೆಟ್ಟಿ 'ಟೋಬಿ'ಯ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.
'ಟೋಬಿ' ರಾಜ್ ಬಿ ಶೆಟ್ಟಿಯ ಮೊದಲ ಪಕ್ಕಾ ಕಮರ್ಷಿಯಲ್ ಸಿನಿಮಾ. ಟ್ರೈಲರ್ ಲಾಂಚ್ ಆದಲ್ಲಿಂದ ಈ ಸಿನಿಮಾವನ್ನು ರಾಜ್ ಬಿ ಶೆಟ್ಟಿ ಯಾರಿಗೂ ತಿರುಗೇಟು ನೀಡುವುದಕ್ಕೆಂದೇ ಮಾಡಿದ ಸಿನಿಮಾ ಇರಬಹುದು ಎಂಬ ಅನುಮಾನ ಮೂಡಿದೆ.

'ಟೋಬಿ' ಟ್ರೈಲರ್ ಲಾಂಚ್ ವೇಳೆನೂ ರಾಜ್ ಬಿ ಶೆಟ್ಟಿ ಪರೋಕ್ಷವಾಗಿ ಯಾರಿಗೋ ಟಾಂಗ್ ಕೊಟ್ಟಿದ್ದರು. "ಯಾರು ಏನೇ ಮಾಡಲಿ. ಯಾಕಂದ್ರೆ ಈಗ ಅವರು ಹೆಸರು ಹೇಳುವಷ್ಟು ದೊಡ್ಡವರಲ್ಲ. ಯಾಕಂದ್ರೆ ಸಿನಿಮಾ ದೊಡ್ಡದಾಗಿದೆ. ಹೀಗಾಗಿ ಅವರಿಗೆ ಉತ್ತರವಾಗಿ ಟೋಬಿ" ಎಂದು ಹೇಳಿದ್ದರು. ಅಲ್ಲಿಂದ ರಾಜ್ ಬಿ ಶೆಟ್ಟಿಗೆ ಯಾರ ಮೇಲೋ ಸಿಟ್ಟಿದೆ ಅನ್ನೋದು ಕನ್ಫರ್ಮ್ ಆಗಿತ್ತು. ಈಗ ಮತ್ತೆ ಸಂದರ್ಶವೊಂದರಲ್ಲಿ ಇದೇ ರೀತಿ ಟಾಂಗ್ ಕೊಟ್ಟಿದ್ದಾರೆ.
ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಅಂಡರ್‌ಡಾಗ್?
'ಟೋಬಿ' ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ರಾಜ್ ಬಿ ಶೆಟ್ಟಿ ಅದಕ್ಕಾಗಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಫಿಲ್ಮ್ ಕಂಪಾನಿಯನ್‌ಗೆ ನೀಡಿದ ಸಂದರ್ಶನದಲ್ಲಿ ರಾಜ್ ಬಿ ಶೆಟ್ಟಿ ಅಂಡರ್‌ಡಾಗ್ ಅನ್ನೋ ಪ್ರಶ್ನೆ ಬಗ್ಗೆ ಉತ್ತರ ಕೊಟ್ಟಿದ್ದಾರೆ. ನಿರೂಪಕಿ ಅಂಡರ್‌ಡಾಗ್ ಪಾತ್ರಗಳ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಶೆಟ್ರು ಕೊಟ್ಟ ಉತ್ತರ ಹೀಗಿದೆ. "ನಮಗೆ ಕುರುಡು.. ನಾವು ಚಿಕ್ಕವರು, ಸಮಾಜ ನಮ್ಮನ್ನು ತುಳಿಯುತ್ತಿದೆ ಅಂತ ನಾವೆಲ್ಲರೂ ಅಂದು ಕೊಳ್ಳುತ್ತೇವೆ. ಇದು ನಮ್ಮೆಲ್ಲರ ಒಳಗಿರುವ ಭಾವನೆ. ಹಾಗಾಗಿ ಪ್ರತಿಬಾರಿ ಅಂಡರ್‌ಡಾಗ್ ಸ್ಟೋರಿಗಳು ಇಷ್ಟ ಜನರಿಗೆ ಆಗುತ್ತವೆ." ಎಂದಿದ್ದಾರೆ.

"ನಾನು ಅಂಡರ್‌ಡಾಗ್ ಅಲ್ಲ.. ಡಾಗ್"
ಇದೇ ಸಂದರ್ಶನದಲ್ಲಿ ರಾಜ್ ಬಿ ಶೆಟ್ಟಿ ತಾನು ಅಂಡರ್‌ಡಾಗ್ ಅಲ್ಲ ಅಂತ ಖಡಕ್ ಆಗಿ ತಿರುಗೇಟು ಕೊಟ್ಟಿದ್ದಾರೆ. "ನನಗೆ ನಾನು ಅಂಡರ್‌ಡಾಗ್ ಅಂತ ಅಂದುಕೊಳ್ಳುವುದಿಲ್ಲ. ನಾನು ತುಂಬಾ ಹಾರ್ಡ್ ಆಗಿ ಕಚ್ಚುತ್ತೀನಿ. ನಾನು ಡಾಗ್ ಇದ್ದಂತೆ. ನನ್ನನ್ನು ಅಂಡರ್‌ಡಾಗ್ ಅಂತ ಅಂದುಕೊಳ್ಳಬೇಡಿ ಅಷ್ಟೇ." ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರೇಕ್ಷಕರಿಗಲ್ಲ.. ಪ್ರೀತಿ ಪಾತ್ರರಿಗೆ ಟಾಂಗ್?
ರಾಜ್ ಬಿ ಶೆಟ್ಟಿ ಕೊಟ್ಟ ಹೇಳಿಕೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಮತ್ತೆ ಟಾಂಗ್ ಕೊಟ್ಟಿದ್ದು ಯಾರಿಗೆ? ಈ ಪ್ರಶ್ನೆಗೆ ಉತ್ತರವನ್ನೂ ಕೊಟ್ಟಿದ್ದಾರೆ. "ಪ್ರೇಕ್ಷಕರಿಗೆ ಅಂಡರ್‌ಡಾಗ್ ಅಂತ ಅಂದುಕೊಳ್ಳಬೇಡಿ ಅಂತ ಹೇಳುತ್ತಿಲ್ಲ. ಅವರು ಏನು ಅಂದುಕೊಂಡರೂ ಪರವಾಗಿಲ್ಲ. ನಾನು ಹೇಳುತ್ತಿರುವುದು ನನ್ನ ಪ್ರಿಯರಿಗೆ. ನನ್ನ ಪ್ರಿಯರು ಏನಿದ್ದಾರೆ.. ಅವರಿಗೆ ಹೇಳುತ್ತಿರೋದು." ಎಂದಿದ್ದಾರೆ.
"ನನ್ನ ಹತ್ತಿರ ಆರ್ಮಿನೇ ಇದೆ"
ಈ ಹೇಳಿಕೆಗಳನ್ನು ನೋಡುತ್ತಿದ್ದರೆ ರಾಜ್ ಬಿ ಶೆಟ್ಟಿಯನ್ನು ಯಾರೋ ಕೆಣಕಿದ್ದಾರೆ ಅನ್ನೋದಂತೂ ಕನ್ಫರ್ಮ್. ಯಾರಿರಬಹುದು ಅನ್ನೋ ಗುಮಾನಿ ಇದ್ದರೂ, ಆ ಗುಟ್ಟು ಮಾತ್ರ ರಿವೀಲ್ ಆಗಿಲ್ಲ. ಅಲ್ಲದೆ ತನ್ನ ಬಳಿ ಆರ್ಮಿನೇ ಇದೆ ಅಂತ ವಾರ್ನಿಂಗ್ ಕೊಟ್ಟಿದ್ದಾರೆ. "ನನ್ನ ಅಂಡರ್‌ಡಾಗ್ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ, ನನ್ನ ಹತ್ತಿರ ಆರ್ಮಿನೇ ಇದೆ. ಜೊತೆಗಿರೋದು 12 ವರ್ಷದಿಂದ ಜೀವಕ್ಕೆ ಜೀವಕೊಡುವ ಸ್ನೇಹಿತರು. ನಾವು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ಮಾನಸ್ಸು ಮಾಡಿಲ್ಲ ಅಂತ ನೀವೇನಾದರೂ ಮೇಲಿದ್ದೀರಾ ಅಂತ ಅಂದುಕೊಂಡರೆ, ನಾವು ಕಚ್ಚುತ್ತೇವೆ." ಎಂದು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











