ಎನ್ ಟಿ ಆರ್ ಮಗನಾಗಿದ್ದರೂ ಹೆಚ್ಚು ಸಿನಿಮಾ ಮಾಡಲಿಲ್ಲ ಹರಿಕೃಷ್ಣ
ತೆಲುಗು ನಟ ನಂದಮೂರಿ ಹರಿಕೃಷ್ಣ (61) ಇಂದು ನಿಧನ ಹೊಂದಿದ್ದಾರೆ. ರಸ್ತೆ ಅಪಘಾತದಲ್ಲಿ ಈ ನಟ ತನ್ನ ಜೀವವನ್ನು ಕಳೆದುಕೊಂಡಿದ್ದಾರೆ. ಟಾಲಿವುಡ್ ಚಿತ್ರರಂಗ ಮತ್ತೊಬ್ಬ ನಟನನ್ನು ಕಳೆದುಕೊಂಡ ದುಖಃದಲ್ಲಿ ಇದೆ.
ನಂದಮೂರಿ ಹರಿಕೃಷ್ಣ ತೆಲುಗು ಚಿತ್ರರಂಗ ಕಂಡ ಮಹಾನ್ ನಟ ನಂದಮೂರಿ ತಾರಕ ರಾಮ ರಾವ್ (ಎನ್ ಟಿ ಆರ್) ಅವರ ಪುತ್ರ. ಹೀಗಿದ್ದರೂ ಹರಿಕೃಷ್ಣ ಅವರು ಹೆಚ್ಚು ಹೆಚ್ಚು ಸಿನಿಮಾ ಮಾಡಲಿಲ್ಲ. ಪ್ರಾರಂಭದಲ್ಲಿ ಅಪ್ಪನ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದ ಇವರು ನಂತರ ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾತ್ರ ಮಾಡಿದರು.
ಬಾಲ ನಟ ಹಾಗೂ ವಿಶೇಷ ಪಾತ್ರಗಳು ಸೇರಿದಂತೆ ಕೇವಲ 12 ಸಿನಿಮಾಗಳಲ್ಲಿ ಮಾತ್ರ ಅವರು ಕಾಣಿಸಿಕೊಂಡರು. ಇನ್ನೊಂದು ಕಡೆ ಸಿನಿಮಾ ಮತ್ತು ರಾಜಕೀಯ ಎರಡು ದೋಣಿ ಮೇಲೆ ಹರಿಕೃಷ್ಣ ಪ್ರಯಾಣ ಮಾಡಿದರು.
ಅಂದಹಾಗೆ, ನಟ ಹರಿಕೃಷ್ಣ ಅವರ ಸಿನಿಮಾ ಜರ್ನಿಯ ಪ್ರಮುಖ ಘಟ್ಟಗಳು ಮುಂದಿದೆ ಓದಿ...

ಎನ್ ಟಿ ಆರ್ ಅವರ ನಾಲ್ಕನೇ ಪುತ್ರ
ನಟ ನಂದಮೂರಿ ಹರಿಕೃಷ್ಣ ಸಪ್ಟೆಂಬರ್ 2 1956ರಲ್ಲಿ ಆಂಧ್ರ ಪ್ರದೇಶದಲ್ಲಿ ಜನಸಿದರು. ಹರಿಕೃಷ್ಣ ಅವರು ತೆಲುಗಿನ ಮಹಾನ್ ನಟ ಹಾಗೂ ಮಾಜಿ ಮುಖ್ಯಮಂತ್ರಿಯಾಗಿದ್ದ ನಂದಮೂರಿ ತಾರಕ ರಾಮ ರಾವ್ (ಎನ್ ಟಿ ಆರ್) ಅವರ ನಾಲ್ಕನೇ ಪುತ್ರ. ಹರಿಕೃಷ್ಣ ಅವರಿಗೆ ಮೊದಲ ಪತ್ನಿಯಿಂದ ಜಾನಕಿ ರಾಮ್, ಕಲ್ಯಾಣ ರಾಮ್ ಮತ್ತು ಸುಹಾಸಿನಿ ಎಂಬ ಮಕ್ಕಳಿದ್ದಾರೆ. ಬಳಿಕ ಮತ್ತೊಂದು ಮದುವೆಯಾಗಿದ್ದ ಅವರಿಗೆ ಜೂನಿಯರ್ ಎನ್‌ಟಿಆರ್ ಜನಿಸಿದ್ದರು.

ಬಾಲ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ
1964ರಲ್ಲಿ ಬಾಲ ನಟನಾಗಿ ನಂದಮೂರಿ ಹರಿಕೃಷ್ಣ ತೆಲುಗು ಚಿತ್ರರಂಗಕ್ಕೆ ಪರಿಚಯ ಆದರು. 'ಶ್ರೀ ಕೃಷ್ಣವಾತರಂ' ಸಿನಿಮಾ ಮಾಡಿದಾಗ ಅವರು ಕೇವಲ 8 ವರ್ಷದ ಹುಡುಗನಾಗಿದ್ದು, ಮೊದಲ ಸಿನಿಮಾದಲ್ಲಿ ಬಾಲ ಕೃಷ್ಣನಾಗಿ ಕಾಣಿಸಿಕೊಂಡಿದ್ದರು. ಕಮಲಾಕಾರ್ ಕಾಮೇಶ್ವರ ರಾವ್ ಅವರು ಹರಿಕೃಷ್ಣ ಅವರ ಮೊದಲ ಚಿತ್ರದ ನಿರ್ದೇಶನ ಮಾಡಿದ್ದರು. ಬಳಿಕ ಮತ್ತೊಂದು ಚಿತ್ರದಲ್ಲಿ ಬಾಲನಟನಾಗಿಯೇ ನಟಿಸಿದರು.

ಅಪ್ಪ ಹಾಗೂ ತಮ್ಮನ ಜೊತೆಗೆ ನಟನೆ
'ತಾತಮ್ಮ ಕಲ' ಸಿನಿಮಾದಲ್ಲಿ ತಮ್ಮ ತಂದೆ ಎನ್ ಟಿ ಆರ್ ಹಾಗೂ ಸಹೋದರ ಬಾಲಕೃಷ್ಣ ಅವರ ಜೊತೆಗೆ ಹರಿಕೃಷ್ಣ ನಟಿಸಿದರು. ಈ ಸಿನಿಮಾದ ಚಿತ್ರಕಥೆ, ನಿರ್ದೇಶನ, ನಿರ್ಮಾಣ ಜೊತೆಗೆ ನಟನೆ ಎಲ್ಲವನ್ನು ಎನ್ ಟಿ ಆರ್ ಅವರೇ ಮಾಡಿದ್ದರು. ಈ ಚಿತ್ರದಲ್ಲಿ ವೆಂಕಟೇಶಂ ಎಂಬ ಪಾತ್ರದಲ್ಲಿ ಹರಿಕೃಷ್ಣ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ಬಂದ 'ದಾನ ವೀರ ಶೂರ ಕರ್ಣ' ಚಿತ್ರದಲ್ಲಿಯೂ ಅಪ್ಪ ಮತ್ತು ಸಹೋದರ ಜೊತೆಗೆ ತೆರೆ ಹಂಚಿಕೊಂಡರು.

ಲೀಡ್ ರೋಲ್ ಚಿತ್ರಗಳು
ಪ್ರಾರಂಭದ ದಿನಗಳಲ್ಲಿ ತಂದೆಯ ಸಿನಿಮಾದಲ್ಲಿ ನಟಿಸುತ್ತಿದ್ದ ಹರಿಕೃಷ್ಣ ಅವರು ಕೆಲವು ಚಿತ್ರಗಳಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡರು. 'ರಾಮ್ ರಹೀಮ್' (1974), 'ಲಹಿರಿ ಲಹಿರಿ ಲಹಿರಿ' (2002), 'ಸೀತಯ್ಯ' (2003) ಹರಿಕೃಷ್ಣ ಅವರ ಪ್ರಮುಖ ಸಿನಿಮಾಗಳಾಗಿವೆ.

ಮಲ್ಟಿಸ್ಟಾರ್ ಸಿನಿಮಾಗಳು
1999ರಲ್ಲಿ ಬಂದ 'ಸೀತಾರಾಮ ರಾಜು' ಸಿನಿಮಾದಲ್ಲಿ ಹರಿಕೃಷ್ಣ ಅವರು ನಟ ಅಕ್ಕಿನೇನಿ ನಾಗರ್ಜುನ ಅವರ ಜೊತೆಗೆ ನಟಿಸಿದರು. ಇದೊಂದು ಆಕ್ಷನ್ ಸಿನಿಮಾ ಆಗಿತ್ತು. 2002ರಲ್ಲಿ ಬಿಡುಗಡೆಯಾದ 'ಶಿವ ರಾಮ ರಾಜು' ಸಿನಿಮಾದಲ್ಲಿ ಹರಿಕೃಷ್ಣ ಹಾಗೂ ಜಗಪತಿ ಬಾಬು ಒಟ್ಟಿಗೆ ನಟಿಸಿದರು.

ಕೊನೆಯ ಸಿನಿಮಾ
'ಶ್ರವಣ ಮಾಸಂ' ಹರಿಕೃಷ್ಣ ನಟನೆಯ ಕೊನೆಯ ಸಿನಿಮಾ ಆಗಿದೆ. 2005ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ನಂತರ ಅವರು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ಕೃಷ್ಣ ಅವರ ಜೊತೆಗೆ ಹರಿಕೃಷ್ಣ ನಟಿಸಿದ್ದರು.


Click it and Unblock the Notifications











