ತುಳುನಾಡ ದೈವ 'ಕೊರಗಜ್ಜ'ನ ಸಿನಿಮಾ ಬಹುತೇಕ ಮುಕ್ತಾಯ: ಸಿನಿಮಾ ಬಗ್ಗೆ ಕಬೀರ್ ಬೇಡಿ ಹೇಳಿದ್ದೇನು?
'ಕಾಂತಾರ' ಸಿನಿಮಾದ ಬಳಿಕ ತುಳುನಾಡಿನ ದೈವಗಳನ್ನು ತೆರೆಮೇಲೆ ತರುವುದಕ್ಕೆ ಮತ್ತೊಂದು ತಂಡ ಮುಂದಾಗಿತ್ತು. 'ಪಂಜುರ್ಲಿ' ಹಾಗೂ 'ಗುಳಿಗ' ಮಹಿಮೆಯನ್ನು ತೆರೆಮೇಲೆ ನೋಡಿದ ಬಳಿಕ ಕೊರಗಜ್ಜನ ಸಿನಿಮಾವನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ.
ಕೊರಗಜ್ಜನ ಮಹಿಮೆಯನ್ನು ಹೇಳುವ 'ಕರಿ ಹೈದ.. ಕರಿ ಅಜ್ಜ' ಸಿನಿಮಾ ಬಹುತೇಕ ಸಿನಿಮಾ ಮುಗಿದೆ. ಸುಧೀರ್ ಅತ್ತಾವರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕ್ಷೇತ್ರದ ದಿಗ್ಗಜರಾದ ಕಬೀರ್ ಬೇಡಿ, ಭವ್ಯಾ, ಶ್ರುತಿ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.
'ಕಾಂತಾರ' ಪಂಚ ಭಾಷೆಯಲ್ಲೂ ಮಿಂಚಿದ ಹಾಗೇ ಈ ಸಿನಿಮಾ ಎಲ್ಲೆಲ್ಲಿ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ. ಹಾಗೇ ಕೊರಗಜ್ಜನ ಮಹಿಮೆಯನ್ನು ಸಿನಿಮಾ ಹೇಗೆ ತೋರಿಸಲಾಗಿದೆ ಅನ್ನೋದನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕೂ ಮುನ್ನ ಅಂತರಾಷ್ಟ್ರೀಯ ಮಟ್ಟದ ನಟ ಕಬೀರ್ ಬೇಡಿ ಈ ಸಿನಿಮಾ ನಟಿಸಿದ್ದು, ತಮ್ಮ ಪಾತ್ರದ ಸುಳಿವು ಬಿಟ್ಟುಕೊಟ್ಟಿದ್ದಾರೆ.

'ಕೊರಗಜ್ಜ'ನ ಸಿನಿಮಾ ಮುಕ್ತಾಯ
ಕೊರಗಜ್ಜನ ಕುರಿತಾದ ಸಿನಿಮಾ ಈಗಾಗಲೇ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಬೆಳ್ತಂಗಡಿ ಸುತ್ತಮುತ್ತವೇ ಬಹುತೇಕ ಚಿತ್ರೀಕರಣ ಮುಗಿದೆ. ನಿರ್ಮಾಪಕ ತ್ರಿವಿಕ್ರಮ ಸಪಲ್ಯಗೆ ಕೊರಗಜ್ಜ ಮೇಲೆ ಸಿನಿಮಾ ಮಾಡಬೇಕು ಅಂತ ಅನಿಸಿತ್ತು. ಈ ಕಾರಣಕ್ಕೆ 'ಕರಿ ಹೈದ.. ಕರಿ ಅಜ್ಜ' ನಿರ್ಮಾಣ ಆಗಿದೆ. "ಕೊರಗಜ್ಜನ ಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ, ಕೊರಗಜ್ಜನ ಜನಾಂಗದ ಮಹನೀಯರೊಂದಿಗೆ ಚರ್ಚೆ ಮಾಡಿ, 12ನೇ ಶತಮಾನದಲ್ಲಿದ್ದ ಕೊರಗಜ್ಜನ ಬಗ್ಗೆ ಯಾರಿಗೂ ಗೊತ್ತಿರದ ನಿಜ ಬದುಕಿನ ವಿಷಯವನ್ನು ತಿಳಿಸುವ ಪ್ರಯತ್ನ ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ." ಎಂದು ಹೇಳಿದ್ದಾರೆ ಸುಧೀರ್ ಅತ್ತಾವರ್.

ಕಬೀರ ಬೇಡಿ ಪಾತ್ರವೇನು?
ಸುಧೀರ್ ಅತ್ತಾವರ್ ನಿರ್ದೇಶಿಸಿರುವ 'ಕರಿ ಹೈದ.. ಕರಿ ಅಜ್ಜ' ಸಿನಿಮಾದಲ್ಲಿ ಕಬೀರ್ ಬೇಡಿ ಅವರದ್ದು ಪ್ರಮುಖ ಪಾತ್ರ. ಈ ಸಿನಿಮಾದಲ್ಲಿ ರಾಜನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿಸಿದ ಅನುಭವದ ಬಗ್ಗೆ ಕಬೀರ್ ಬೇಡಿ ಮನಬಿಚ್ಚಿ ಮಾತಾಡಿದ್ದಾರೆ. " ಈ ಸಿನಿಮಾದಲ್ಲಿ ನಟಿಸಿದ್ದು ನನಗೆ ಖುಷಿಯಾಗಿದೆ. 'ಕೊರಗಜ್ಜ' ದೈವದ ಕುರಿತಾದ ಈ ಚಿತ್ರದಲ್ಲಿ ನನ್ನದು ರಾಜನ ಪಾತ್ರ. ಶ್ರುತಿ, ಭವ್ಯಾ, ಭರತ್ ಸೂರ್ಯ ಮುಂತಾದವರ ಜೊತೆ ನಟಿಸಿದ್ದು ಹೊಸ ಅನುಭವವನ್ನು ನೀಡಿದೆ" ಎಂದು ಕಬೀರ್ ಬೇಡಿ ಹೇಳಿದ್ದಾರೆ. ಹಾಗೇ ಬೆಂಗಳೂರಿನ ನೃತ್ಯ ಗ್ರಾಮಕ್ಕೆ ಬರುತ್ತಿದ್ದ ಕ್ಷಣಗಳು ಹಾಗೂ ಗಿರೀಶ್ ಕಾರ್ನಾಡ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ಕಬೀರ್ ಬೇಡಿ ರಾಜ.. ಭವ್ಯಾ ರಾಣಿ
ಕೊರಗಜ್ಜನ ಸಿನಿಮಾದಲ್ಲಿ ಹಾಲಿವುಡ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಕಬೀರ್ ಬೇಡಿ ರಾಜನಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಭವ್ಯಾ ರಾಣಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. "ಕಬೀರ್ ಬೇಡಿ ಅವರಂತಹ ಮಹಾನ್ ನಟನ ಜೊತೆ ಅಭಿನಯಿಸಿದ್ದು ತುಂಬಾ ಖುಷಿ ಕೊಟ್ಟಿದೆ. ನಾನು ಈ ಚಿತ್ರದಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುಧೀರ್ ಅತ್ತಾವರ್ ಒಳ್ಳೆಯ ಚಿತ್ರ ನಿರ್ದೇಶಿಸಿದ್ದಾರೆ" ಎಂದು ಹಿರಿಯ ನಟಿ ಭವ್ಯಾ ಹೇಳಿದ್ದಾರೆ.

'ಕೊರಗಜ್ಜ' ಹಿನ್ನೆಲೆಯೇನು?
ಕರಾವಳಿ ಜನರಿಗೆ ಕೊರಗಜ್ಜನ ಮೇಲೆ ಎಲ್ಲಿಲ್ಲದ ನಂಬಿಕೆ. ಕೊರಗಜ್ಜನ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಅದು ಕ್ಷಣಾರ್ಧದಲ್ಲಿ ಪರಿಹಾರವಾಗುತ್ತೆ ಅನ್ನೋದು ನಂಬಿಕೆ. ಹೀಗಾಗಿ ಕರಾವಳಿಯಲ್ಲಿ ಕೊರಗಜ್ಜನ ಹಲವು ದೇವಾಲಯಗಳನ್ನು ನೋಡಬಹುದು. ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳ ಮಗನೇ ತನಿಯ ಕೊರಗ. ಚಿಕ್ಕಂದಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾನೆ. ಆಗ ಬೈದರೆ ಜನಾಂಗದ ಮೈರಕ್ಕ ಬೈದರೆ ಎಂಬ ಮಹಿಳೆ ಈತನನ್ನು ಸಾಕುತ್ತಾಳೆ. ಈಕೆಯ ಕುಲಕಸುಬು ಸೇಂದಿ ತಯಾರಿಕೆ. ಸಾಮಾನ್ಯ ವ್ಯಕ್ತಿ ಎನಿಸಿಕೊಳ್ಳದ ತನಿಯ ಕರಗನ ಬಗ್ಗೆ ಶಕ್ತಿ ಸಾಮರ್ಥ್ಯದ ಬಗ್ಗೆ ಹಲವಾರು ಕಥೆಗಳಿವೆ. ಹೀಗೊಮ್ಮೆ ಕೊರಗ ಸೇಂದ್ರಿ ತಯಾರಿಕೆಗೆ ಹಣ್ಣಗಳನ್ನು ತರಲು ಹೋದಾಗ ಅದೃಶ್ಯನಾದ ಎಂಬ ನಂಬಿಕೆ ಕರಾವಳಿ ಪ್ರದೇಶದಲ್ಲಿದೆ. ಇಲ್ಲಿಂದ ಕರಾವಳಿ ಮಂದಿಗೆ ಕೊರಗಜ್ಜ ದೈವವಾಗಿ ಕಾಣುತ್ತಿದ್ದಾನೆ.


Click it and Unblock the Notifications











