ಟಿವಿ ಕ್ಲಬ್‌ನ ಹಣ ದುರುಪಯೋಗ; ತಮ್ಮ ಮೇಲಿನ ಆರೋಪಕ್ಕೆ ನಟ ರವಿಕಿರಣ್ ತಿರುಗೇಟು!
ಟೆಲಿವಿಷನ್ ಕಲ್ಚರಲ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯದರ್ಶಿ ಆಗಿದ್ದ ನಟ ರವಿಕಿರಣ್ ವಿರುದ್ಧ ನಿನ್ನೆ (ಫೆಬ್ರವರಿ 12) ಕೆಲವು ಸದಸ್ಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಕ್ಲಬ್‌ಗೆ ಸೇರಿದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾಗಿ ಆರೋಪ ಮಾಡಿದ್ದಾರೆ. ಈ ಸಂಬಂಧ ಸುಬ್ರಹ್ಮಣ್ಮಪುರ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ನಿರ್ದೇಶಕ ಲಿಂಗದೇವರು, ನಟ ಸುನೀಲ್ ಪುರಾಣಿಕ್ ಸೇರಿದಂತೆ ಹಲವರು ರವಿಕಿರಣ್ ವಿರುದ್ಧ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ರವಿಕಿರಣ್ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮೇಲ ಮಾಡಿದ ಎಲ್ಲಾ ಆರೋಪಗಳಿಗೆ ಉತ್ತರ ಕೊಟ್ಟಿದ್ದು, ತಮ್ಮ ವರ್ಷನ್ ಏನು ಅನ್ನೋದನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ.

"ನಾನು 6 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡಿದ್ದು ನಿಜ. ಆದರೆ, ನಾನು ಇಟ್ಟ ಹಣವನ್ನು ನಾನು ತೆಗೆದುಕೊಂಡಿದ್ದು ತಪ್ಪಾ?" ಎಂದು ರವಿ ಕಿರಣ್ ಪ್ರಶ್ನೆ ಮಾಡಿದ್ದಾರೆ. "ನನ್ನನ್ನು ಕಳ್ಳ ಎಂದು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಕಳ್ಳ ಅನ್ನುವ ಪದವನ್ನು ಬಳಿಸಿದರೆ, ನಾನು ಅವರ ಮುಂದೆ ಮಾನನಷ್ಟ ಮೊಕದ್ದಮೆಯನ್ನು ಹೂಡುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
ಕಳೆದ ಡಿಸೆಂಬರ್‌ಗೆ ತಮ್ಮ ಅವಧಿ ಮುಗಿದಿದ್ದು, ಮತ್ತೆ ಚುನಾವಣೆ ನಡೆಸಿಲ್ಲ. ಇದೀಗ ಹೊಸ ಸದಸ್ಯರೆಲ್ಲ ಸೇರಿಕೊಂಡು ಹೊಸ ಕಮಿಟಿ ಮಾಡಿಕೊಂಡು, ಕಾನೂನು ಬಾಹಿರವಾಗಿ ಚಟುವಟಿಕೆ ನಡೆಸುತ್ತಿದ್ದಾರೆ. ಈ ಕ್ಲಬ್‌ನಿಂದ ತನ್ನನ್ನು ತೆಗೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಅವರೇ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾಗಿ ರವಿಕಿರಣ್ ಪ್ರತ್ಯಾರೋಪ ಮಾಡಿದ್ದಾರೆ.
"ಕೊರೊನಾಗಿಂತ ಮುನ್ನ ಈ ಕ್ಲಬ್ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಕೊರೊನಾ ಬಳಿಕ ಒಂದೂವರೆ ವರ್ಷ ಏನೂ ವ್ಯವಹಾರ ನಡೆದಿಲ್ಲ. ಹೀಗಾಗಿ ಜಿಎಸ್‌ಟಿ ಕಟ್ಟಿಲ್ಲ. ಅದನ್ನು ಸ್ವಲ್ಪ ಕಟ್ಟಿ. ಇನ್ನು ಸ್ವಲ್ಪ ಉಳಿಸಿಕೊಳ್ಳುತ್ತಾ ಬಂದಿದ್ದೇನೆ. ಈ ಕೆಲಸವನ್ನು ಕ್ಲಬ್ ಖಜಾಂಚಿಯ ಕೆಲಸ. ಅವರು ಮಾಡಬೇಕಿದ್ದನ್ನು ನಾನು ಮಾಡುತ್ತಾ ಬಂದಿದ್ದೇನೆ. ಕ್ಲಬ್‌ನ ಸಿಬ್ಬಂದಿಯ ವೇತನ, ಕ್ಲಬ್ ಖರ್ಚು ಅಂತೆಲ್ಲ 60 ಲಕ್ಷ ರೂಪಾಯಿ ಸಾಲ ಆಗಿದೆ. ಅದನ್ನು ನನಗೆ ಹಿಂತಿರುಗಿಸಲಿ. ಈ ಕ್ಷಣವೇ ಕ್ಲಬ್‌ಗೆ ರಾಜೀನಾಮೆ ಕೊಟ್ಟು ಹೋಗುತ್ತೇನೆ" ಎಂದು ದೂರು ಕೊಟ್ಟ ಸದಸ್ಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಹಾಗೇ ಕ್ಲಬ್‌ಗೆ ನಡೆಯಬೇಕಿರುವ ಚುನಾವಣೆ ಬಗ್ಗೆನೂ ಮಾತಾಡಿದ್ದಾರೆ. "ಸೊಸೈಟಿ ಕಾಯ್ದೆ ಆಕ್ಟ್ ಪ್ರಕಾರ, ನಮ್ಮ ಅವಧಿ ಕಳೆದ ಡಿಸೆಂಬರ್‌ಗೆ ಮುಗಿದಿದೆ. ಡಿಸೆಂಬರ್‌ನಲ್ಲೇ ಚುನಾವಣೆ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆಗಿಲ್ಲ. ಅದಕ್ಕೆ ಜನವರಿಗೆ ಚುನಾವಣೆ ಮಾಡಬೇಕು ಅಂದುಕೊಂಡೆ. ಅಷ್ಟರಲ್ಲೇ ಇವರೆಲ್ಲ ಸೇರಿಕೊಂಡು ನನಗೆ ಸಸ್ಪೆನ್ಷನ್ ಲೆಟರ್ ಕಳಿಸಿ ನನ್ನನ್ನು ವಜಾ ಮಾಡಿದ್ದಾರೆ. ಕಾಯ್ದೆ ಪ್ರಕಾರ ಹಾಗೆ ಮಾಡುವಂತಿಲ್ಲ." ಎಂದು ರವಿಕಿರಣ್ ಹೇಳಿದ್ದಾರೆ.
"ಮುಂದೆ ಸರ್ಕಾರ ನಿಯೋಜಿಸಿದ ಅಧಿಕಾರಿ ಬರುತ್ತಾರೆ. ಅವರೇ ಚುನಾವಣೆ ಮಾಡುತ್ತಾರೆ. ಬಳಿಕ ಕಮಿಟಿಯನ್ನು ಮಾಡಿ ಬಳಿಕ ಹೋಗುತ್ತಾರೆ. ಆಮೇಲೆ ಏನಾಗುತ್ತೋ ನೋಡೋಣ" ಎಂದು ನಟ ರವಿಕಿರಣ್ ಹೇಳಿದ್ದಾರೆ.


Click it and Unblock the Notifications











