ತೆಲುಗಿಗೆ 236, ಕನ್ನಡಕ್ಕೆ 167: ಕನ್ನಡಾಂಬೆ ಧನ್ಯ
ಇದು ಕರ್ನಾಟಕದಲ್ಲಿ ಕನ್ನಡ ಚಿತ್ರಗಳ 'ಪಾಡು'. ಚಿರಂಜೀವಿ ಪುತ್ರ ರಾಮ್ ಚರಣ್ ತೇಜ್ ಅಭಿನಯದ 'ನಾಯಕ್ ' ಮತ್ತು ವೆಂಕಟೇಶ್, ಮಹೇಶ್ ಬಾಬು ನಟಿಸಿರುವ 'ಸೀತಮ್ಮ ವಾಕಿಟ್ಲು ಸಿರಿಮಲ್ಲೆ ಚಿಟ್ಟು' ಈ ಎರಡು ತೆಲುಗು ಚಿತ್ರಗಳು ರಾಜ್ಯದ ಸುಮಾರು 236 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಇತ್ತ ಪ್ರಜ್ವಲ್ ದೇವರಾಜ್ ಅಭಿನಯದ ' ಗಲಾಟೆ ', ಅಜಿತ್ ಅಭಿನಯದ 'ಈ ಭೂಮಿ ಆ ಬಾನು ', 'ಮನಸಿನ ಪುಟದಲಿ' ಮತ್ತು ' ಕೊಟ್ಳಲ್ಲಪ್ಪೋ ಕೈ' ಹೀಗೆ ನಾಲ್ಕು ಚಿತ್ರಗಳು ಸೇರಿ ರಾಜ್ಯದ 167 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಎರಡು ತೆಲುಗು ಚಿತ್ರಗಳು ಬೆಂಗಳೂರಿನ 73 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ನಾಯಕ್ ಚಿತ್ರ ಬೆಂಗಳೂರಿನ ಸುಮಾರು 39 ಮತ್ತು ಸೀತಮ್ಮ ವಾಕಿಟ್ಲು ಚಿತ್ರ 34 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ಅಭಿನಯದ ಗಲಾಟೆ ಚಿತ್ರ ನಗರದ 24 ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ.

ಮಗಧೀರ ಚಿತ್ರದ ನಂತರ ತೆಲುಗು ಚಿತ್ರದ ಕರ್ನಾಟಕ ಡಿಸ್ತ್ರಿಬ್ಯೂಶನ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಚಿತ್ರದ ರೈಟ್ಸ್ ಅನ್ನು 4.14 ಕೋಟಿ ರೂಪಾಯಿಗೆ ನಿರ್ಮಾಪಕ ದಾನಯ್ಯ ಮಾರಾಟ ಮಾಡಿದ್ದಾರೆ.
ಕೆ ಜಿ ರಸ್ತೆಯಲ್ಲಿರುವ ಭೂಮಿಕಾ ಚಿತ್ರ ಮಂದಿರದ ಮಾಲೀಕರು ಚಿತ್ರದ ಕರ್ನಾಟಕ ರೈಟ್ಸ್ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿಯಿದೆ.
ಇಷ್ಟಾದ ಮೇಲೂ ಕನ್ನಡ ಚಿತ್ರಗಳ ಬವಣೆ ಮುಗಿಯುವುದಿಲ್ಲ. ಕಾರ್ತಿ ಅಭಿನಯದ ತಮಿಳು 'ಅಲೆಕ್ಸ್ ಪಾಂಡಿಯನ್' ಚಿತ್ರ ಕೂಡಾ ನಾಳೆ ಬಿಡುಗಡೆಯಾಗಲಿದೆ. ಅದಕ್ಕೆ ಬೆಂಗಳೂರು ನಗರದ 29 ಚಿತ್ರಮಂದಿರಗಳನ್ನು ಧಾರೆ ಎರೆಯಲಾಗಿದೆ. ರಾಜ್ಯದಲ್ಲಿ ಈ ಚಿತ್ರ ಎಷ್ಟು ಚಿತ್ರಮಂದಿರಗಳನ್ನು ಆವರಿಸಿಕೊಳ್ಳುತ್ತಿದೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ.
ಶಿವರಾಜ್ ಕುಮಾರ್ ಅಭಿನಯದ ಲಕ್ಷ್ಮಿ ಚಿತ್ರ ಈ ವಾರ ಬಿಡುಗಡೆಯಾಗಬೇಕಿತ್ತು. ಸುದೀಪ್, ಚಿರಂಜೀವಿ ಸರ್ಜಾ ಮುಖ್ಯ ಭೂಮಿಕೆಯಲ್ಲಿರುವ 'ವರದನಾಯಕ', ಕಿಶೋರ್ ಅಭಿನಯದ 'ಅಟ್ಟಹಾಸ' ಮುಂತಾದ ಚಿತ್ರಗಳೂ ಥಿಯೇಟರ್ ಸಮಸ್ಯೆ ಎದುರಿಸುತ್ತಿದೆ.
ಕನ್ನಡ ಚಿತ್ರರಂಗವೆಂಬ ಸಣ್ಣ ಮಾರುಕಟ್ಟೆ, ಅದರಲ್ಲಿನ ಅಹಿತಕರ ಪೈಪೋಟಿ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಇತರ ಭಾಷೆಗಳ ಪ್ರಾಬಲ್ಯ, ಇದರ ಮಧ್ಯೆ ವಾರಕ್ಕೆ ನಾಲ್ಕೈದು ಚಿತ್ರಗಳು ಬಿಡುಗಡೆ ಆಗಬೇಕಾ?
ಹೀಗಾದಲ್ಲಿ ಇತರ ಭಾಷೆಯ ಚಿತ್ರಗಳಿಗೆ ರಾಜ್ಯದಲ್ಲಿ 'ಸಂಕ್ರಾಂತಿ ಹಬ್ಬ' ಆಗದೇ ಇರುತ್ತಾ?
ಅದ್ಯಾವಾಗ ನಮ್ಮವರು marketing strategy ಕಲಿತಾರೋ. Any way.. ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಿಗೆ ಆಲ್ ದಿ ಬೆಸ್ಟ್..


Click it and Unblock the Notifications











