"ಉಗ್ರಂ ಸ್ಯಾಟಲೈಟ್ ರೈಟ್ಸ್ ಯಾರೂ ತೆಗೊಂಡಿರಲಿಲ್ಲ.. ಪ್ರಶಾಂತ್ ನೀಲ್ ಕಷ್ಟ ಪಟ್ಟಿದ್ದು ನಂಗೆ ಗೊತ್ತು"- ಯಶ್!
ರಾಕಿಂಗ್ ಸ್ಟಾರ್ ಯಶ್ ಇಂದು (ಫೆಬ್ರವರಿ 14) ತಮ್ಮ ಫಿಟ್ನೆಸ್ ಟ್ರೈನರ್ ಕಿಟ್ಟಿಯ ಹೊಸ ವೆಂಚರ್ 'ಕಿಟ್ಟೀಸ್ ಮಸಲ್ ಪ್ಲಾನೆಟ್' ಜಿಮ್ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್ ತಮ್ಮ ಫಿಟ್ನೆಸ್ ಟ್ರೈನರ್ ಪಾನಿಪುರಿ ಕಿಟ್ಟಿ ಬಗ್ಗೆನೂ ಮಾತಾಡಿದ್ದಾರೆ. ಪಾನಿಪುರಿ ಕಿಟ್ಟಿ ಬಹಳ ವರ್ಷಗಳಿಂದ ಯಶ್ ಟ್ರೈನರ್. ಹೀಗಾಗಿ ಕಿಟ್ಟಿಯ 'ಕಿಟ್ಟೀಸ್ ಮಸಲ್ ಪ್ಲಾನೆಟ್' ಉದ್ಘಾಟನೆಗೆ ಬಂದಿದ್ದರು.
ಇನ್ನು ಯಶ್ ಜೊತೆಗೆ ನೆನಪಿರಲಿ ಪ್ರೇಮ್, ಅಜೇಯ್ ರಾವ್ ಕೂಡ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಕಿಟ್ಟಿಯ ಶಿಸ್ತು. ಫಿಟ್ನೆಸ್ ಮೇಲಿನ ಕಾಳಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಮ್ಮ ಮುಂದಿನ ಸಿನಿಮಾ 'ಟಾಕ್ಸಿಕ್' ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದು, ಆದಷ್ಟು ಬೇಗ ಶೂಟಿಂಗ್ ಶುರುವಾಗುತ್ತೆ ಎಂದಿದ್ದಾರೆ.

ಈ ವೇಳೆ ಯಶ್ ಚಿತ್ರರಂಗದ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಕೆಲವು ದಿನಗಳಿಂದ ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಅದರ ಎಫೆಕ್ಟ್‌ಗಳ ಬಗ್ಗೆ ಚರ್ಚೆಯಾಗುತ್ತಿತು. ಹೀಗಾಗಿ ಹೊಸ ಪ್ರತಿಭೆಗಳಿಗೆ ಚಿತ್ರರಂಗ ಪ್ರೋತ್ಸಾಹ ಕೊಡಬೇಕು. ಅವರನ್ನು ಬೆಳೆಸಬೇಕು ಎಂದು ಹೇಳಿದ್ದಾರೆ. ಈ ವೇಳೆ 'ಉಗ್ರಂ' ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ನೀಲ್ ಸ್ಯಾಟಲೈಟ್ ರೈಟ್ಸ್ ಮಾರುವುದಕ್ಕೆ ಪಟ್ಟ ಪಾಡು, ಅವರ ಕಷ್ಟಗಳ ಬಗ್ಗೆ ಹೇಳಿದ್ದಾರೆ. ಯಶ್ ಮಾತಿನ ಝಲಕ್ ಇಲ್ಲಿದೆ.
ಯಶ್ ಒಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ
ಪಾನಿಪುರಿ ಕಿಟ್ಟಿ ಜಿಮ್ ಉದ್ಘಾಟನೆ ಬಳಿಕ ಯಶ್ ಚಿತ್ರರಂಗದ ಸದ್ಯದ ಪರಿಸ್ಥಿತಿಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಯಶ್ ಒಬ್ಬನಿಂದ ಕನ್ನಡ ಚಿತ್ರರಂಗ ಅಲ್ಲ.. ಕನ್ನಡ ಚಿತ್ರರಂಗಕ್ಕೆ ನಾನು ಯಾವುದೋ ಒಂದು ಭಾಗದಲ್ಲಿ , ಯಾವುದೋ ಒಂದು ರೀತಿಯಲ್ಲಿ ನನ್ನ ಕೆಲಸ ಮಾಡಬಹುದು. ನನ್ನ ಸೇವೆ ಏನು ಕನ್ನಡ ಚಿತ್ರರಂಗಕ್ಕೆ ಅಂತ ಯೋಚನೆ ಮಾಡಿದ್ರೆ, ಹಿಂದೆ ಹೇಗೆ ನೋಡುತ್ತಿದ್ದರು. ಈಗ ಹೇಗೆ ನೋಡುವ ಹಾಗೆ ಆಗಿದೆ. ಈಗ ಭಾರತೀಯರು ಕೊಟ್ಟಿರುವ ಶಕ್ತಿಯಂದ ಮುಂದೆ ಏನು ಮಾಡಬಹುದು. ಇದನ್ನು ನಾನು ಯೋಚಿಸಬೇಕು. ಅದಕ್ಕೆ ತಕ್ಕಂತೆ ನಾನು ಏನು ಮಾಡಬೇಕು ಅಂತ ನೋಡಬೇಕು." ಎಂದಿದ್ದಾರೆ.
"ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡಿ"
"ಈಗ ಹೊಸ ಪ್ರತಿಭೆಗಳು ಬಂದಾಗ ಪ್ರೋತ್ಸಾಹ ಕೊಡದೇ ಇರುವ ಮೂರು ಜನಕ್ಕೆ ಅವರು ಮತ್ತೆ ಮತ್ತೆ ಮಾಡಿ ಅಂತ ಹೇಳುವುದು. ಮಾಡಿದ ಮೇಲೆ ಕ್ವಾಲಿಟಿ ಇಲ್ಲ ಅಂತ ಹೇಳುವುದು ತಪ್ಪಾಗುತ್ತೆ. ಪ್ರೇಮ್ ಸಿನಿಮಾ ಮಾಡುತ್ತಿರುತ್ತಾರೆ. ಅಜಯ್ ಸಿನಿಮಾ ಮಾಡುತ್ತಿರುತ್ತಾರೆ. ಆಗ ಇಡೀ ಚಿತ್ರರಂಗ ಸಪೋರ್ಟ್ ಮಾಡಬೇಕು. ಚಾನೆಲ್‌ಗಳು ಆಗಬಹುದು. ರೈಟ್ಸ್ ಕೊಟ್ಟು ಸಪೋರ್ಟ್ ಮಾಡಬೇಕು. ಹೀರೊಗಳನ್ನು ದಿನಾ ಹುಟ್ಟಾಕುವುದಕ್ಕೆ ಆಗಲ್ಲ. ಅವರು ಕಷ್ಟ ಪಟ್ಟು ಬೆಳೆದಿರುತ್ತಾರೆ. ಇಡೀ ಚಿತ್ರರಂಗ ಸಪೂರ್ಟ್ ಮಾಡಬೇಕು." ಎಂದಿದ್ದಾರೆ.

"ಉಗ್ರಂ ಸ್ಯಾಟಲೈಟ್ ರೈಟ್ಸ್ ಯಾರು ತಗೊಂಡ್ರು?"
"ಪ್ರಶಾಂತ್ ನೀಲ್‌ದೇ ಉದಾಹರಣೆ ತೆಗೆದುಕೊಳ್ಳೋಣ. ಈಗ ಉಗ್ರಂ ಸಿನಿಮಾ ಸ್ಯಾಟಲೈಟ್ ರೈಟ್ಸ್ ಯಾರು ತಗೊಂಡ್ರು? ಅವರೇ ಪ್ರೊಡ್ಯೂಸ್ ಮಾಡಿದ್ದರು. ನನಗೆ ಗೊತ್ತು ಪ್ರಶಾಂತ್ ಎಷ್ಟು ಕಷ್ಟ ಪಟ್ಟಿದ್ದಾರೆ ಅಂತ. ಸ್ಯಾಟಲೈಟ್ಸ್ ಯಾರೂ ತೆಗೆದುಕೊಳ್ಳದೆ. ಯಾರಿಗೋ ಕಮ್ಮಿಗೆ ಮೀಡಿಯೇಟರ್‌ಗೆ ಮಾರಿದ್ರು. ಪ್ರಶಾಂತ್‌ನೀಲ್‌ಗೆ ಕೆಜಿಎಫ್ ಬಂದು ವರ್ಕ್ ಆಯ್ತು. ನಾವೆಲ್ಲ ನಂಬಿ ಏನೋ ಮಾಡಿದ್ವಿ. ಅವ್ರಿಗೆ ಟ್ಯಾಲೆಂಟ್ ಇತ್ತು ಆಯ್ತು. ಆತರ ನಷ್ಟ ಆದಾಗ ಯಾರೋ ಇಂಡಸ್ಟ್ರಿಯನ್ನೇ ಬಿಟ್ಟು ಹೋಗಬಹುದಿತ್ತಲ್ಲ. ಅದು ಯಾರ ಜವಾಬ್ದಾರಿ? ಇಂಡಸ್ಟ್ರಿ ಜವಾಬ್ದಾರಿ." ಎಂದು ಯಶ್ ಹೇಳಿದ್ದಾರೆ.
ರಾಜಕೀಯದಿಂದ ದೂರ.. ನನ್ನ ಗುರಿ ಬೇರೆನೇ ಇದೆ
" ಸುಮಾರು ದಿನಗಳಿಂದ ನೋಡಿದ್ದೀರ. ನಾನು ಯಾವುದೇ ರಾಜಕೀಯಕ್ಕೆ ಹೋಗದೆ ದೂರನೇ ಉಳಿದಿದ್ದೇನೆ. ನನ್ನ ಗುರಿ ಬೇರೆನೇ ಇದೆ. ನನ್ನ ಕೆಲಸ ಬೇರೆನೇ ಇದೆ. ಅದನ್ನು ಮಾಡುತ್ತಿರುತ್ತೇನೆ. ಎಲ್ಲೂ ಹೋಗಲ್ಲ. " ಎಂದು ಯಶ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











