"₹200-₹300 ಕೋಟಿ ಆಯ್ತು ಅಂತಾರಲ್ಲ ಅದೇನು ಆಗಿರಲ್ಲ"; ಉಮಾಪತಿ ಯಾವ ಸಿನಿಮಾ ಬಗ್ಗೆ ಹೇಳಿದ್ದು?
ಸ್ಯಾಂಡಲ್‌ವುಡ್‌ನ ದುಬಾರಿ ನಿರ್ಮಾಪಕರ ಸಾಲಿನಲ್ಲಿ 'ಉಪಾಧ್ಯಕ್ಷ' ನಿರ್ಮಾಪಕ ಉಮಾಪತಿ ಕೂಡ ನಿಲ್ಲುತ್ತಾರೆ. ಕಿಚ್ಚ ಸುದೀಪ್, ದರ್ಶನ್, ಶ್ರೀಮುರಳಿ ಅಂತಹ ದಿಗ್ಗಜರಿಗೆ ಸಿನಿಮಾ ಮಾಡಿರೋ ನಿರ್ಮಾಪಕ ಈಗ ಚಿಕ್ಕಣ್ಣರನ್ನು ಹೀರೊ ಮಾಡುವುದಕ್ಕೆ ಹೊರಟಿದ್ದಾರೆ. ಈ ನಾಲ್ಕು ಸಿನಿಮಾಗಳ ನಿರ್ಮಾಪಕನಿಗೆ ಚಿತ್ರರಂಗದ ಬಗ್ಗೆ ಒಳಗೂ ಹೊರಗೂ ಸಾಕಷ್ಟು ಅನುಭವ ಆಗಿದೆ.
ಇತ್ತೀಚೆಗಷ್ಟೇ ಕನ್ನಡ ಸಿನಿಮಾರಂಗ ಸ್ಥಿತಿ-ಗತಿಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದರು. ಕನ್ನಡ ಸಿನಿಮಾಗಳ ಓಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳು ಸೇಲ್ ಆಗುತ್ತಿಲ್ಲ. ನಿರ್ಮಾಪಕ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿ ಎಂದು ಹೇಳಿದ್ದರು.

ಈಗ ಕನ್ನಡ ಸಿನಿಮಾಗಳು 200 ಕೋಟಿ, 300 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಅನ್ನೋದೆಲ್ಲ ಸುಳ್ಳು ಅಂತ ಹೇಳಿದ್ದಾರೆ. ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಉಮಾಪತಿ ಹೀಗಂದಿದ್ಯಾಕೆ? ಯಾವ ಸಿನಿಮಾ ಬಗ್ಗೆ ಹೇಳಿದ್ದು ಅನ್ನೋದನ್ನು ತಿಳಿಯಲು ಮುಂದೆ ಓದಿ.
ನಿರ್ಮಾಪಕ ಉಮಾಪತಿ ತಮ್ಮ ಸಿನಿಮಾ ಪಯಣದ ಬಗ್ಗೆ ಓಪನ್ ಆಗಿ ಮಾತಾಡುತ್ತಾರೆ. ಲಾಭ-ನಷ್ಟದ ಬಗ್ಗೆನೂ ಮಾತಾಡುತ್ತಲೇ ಇರುತ್ತಾರೆ. ಈ ಸಂದರ್ಶನದಲ್ಲೂ ಸಿನಿಮಾ ಗೆಲ್ಲುತ್ತೋ ಬಿಡುತ್ತೋ ತಮ್ಮ ಜೊತೆ ಕೆಲಸ ಮಾಡಿದವರು ಹಸಿದುಕೊಂಡಿರೋಕೆ ಬಿಡೋದಿಲ್ಲ ಎಂದಿದ್ದಾರೆ.

"ನಮ್ಮ ಪ್ರೊಡಕ್ಷನ್ ಶುರು ಮಾಡುವುದರಿಂದ ಹತ್ತಾರು ಕುಟುಂಬಗಳಿಗೆ ಅನ್ನ ಸಿಗುತ್ತೆ. ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ಒಬ್ಬ ತಾಯಿಗೆ ಮಕ್ಕಳು ಮನೆಗೆ ಬಂದಾಗ ಹೊಟ್ಟೆ ತುಂಬಾ ಊಟ ಹಾಕಿ ಮಕ್ಕಳು ಖುಷಿಯಾಗಿ ಕೂತುಕೊಳ್ಳುತ್ತಾರಲ್ಲ ಅದರಷ್ಟು ತೃಪ್ತಿ ತಾಯಿಗೆ ಬೇರೆ ಏನೂ ಸಿಗೋದಿಲ್ಲ. ಒಂದು ಸಿನಿಮಾ ಗೆಲ್ಲುತ್ತೋ ಇಲ್ವೋ. ನಮ್ಮ ಮನೆ ಉರಿಯುತ್ತೋ ಬಿಡುತ್ತೋ ಬೇರೆಯವರ ಮನೆ ಉರಿಯೋಕೆ ಬಿಡೋದಿಲ್ಲ." ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
ಇದೇ ವೇಳೆ ಸಿನಿಮಾಗಳು 200 ಕೋಟಿ ರೂಪಾಯಿ, 300 ಕೋಟಿ ರೂಪಾಯಿ ಅಂತ ಬರೆಸುತ್ತಾರೆ. ಆದರೆ, ಅಷ್ಟೊಂದು ಕಲೆಕ್ಷನ್ ಆಗಿರಲ್ಲ. ಎಲ್ಲಾ ಸಿನಿಮಾಗಳ ಕಲೆಕ್ಷನ್ ಲೆಕ್ಕವನ್ನೂ ನಾನು ಕೊಡುತ್ತೇನೆ ಎಂದು ಹೇಳಿದ್ದಾರೆ. "ಆ ಮೇಲೆ ಬರೆಸುತ್ತಾರಲ್ಲ.. 300 ಕೋಟಿ ಆಯ್ತು.. 200 ಕೋಟಿ ಆಯ್ತು ಅಂತಾರಲ್ಲ ಅದೇನು ಆಗಿರಲ್ಲ ಸರ್. ನನಗೆ ಕೇಳಿದ್ರೆ ಎಲ್ಲಾ ಸಿನಿಮಾದ್ದೂ ಲೆಕ್ಕ ಕೊಡುತ್ತೇನೆ. ಅದೇನಾಗುತ್ತೆ ಅಂದರೆ, ಅವರವರ ಫ್ಯಾನ್ಸ್‌ಗೆ ಹರ್ಟ್ ಆಗುತ್ತೆ. ಅದಕ್ಕೆ ಅದನ್ನು ಟಚ್ ಮಾಡುವುದಕ್ಕೆ ಹೋಗುವುದಿಲ್ಲ. ನಮಗೆ ಅದ್ಬುತ ಲಾಭ ಬೇಡ. ಹಾಕಿರೋ ದುಡ್ಡಿಗೆ ಬಡ್ಡಿ ಎಲ್ಲಾ ಕಳೆದು ಒಂದು ಚೂರು ಲಾಭ ಸಿಕ್ಕರೂ ಸಾಕು" ಎಂದಿದ್ದಾರೆ.
ಈ ಹೇಳಿಕೆ ಬಳಿಕ ಉಮಾಪತಿ ಯಾವ ಸಿನಿಮಾ ಬಗ್ಗೆ ಹೇಳಿದ್ದು ಅಂತ ಕೆಲವರು ತಲೆಕೆಡಿಸಿಕೊಂಡಿದ್ದಾರೆ. ಕೆಲವರು ಸೋಶಿಯಲ್ ಮೀಡಿಯದಲ್ಲಿ ದರ್ಶನ್ ಸಿನಿಮಾ 'ಕಾಟೇರ' ಬಗ್ಗೆನೇ ಹೇಳಿರೋದು ಅಂತ ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ 200 ಕೋಟಿ ರೂಪಾಯಿ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿತ್ತು. ಇನ್ನು ಕೆಲವರು 'ಕೆಜಿಎಫ್' ಹಾಗೂ 'ಕಾಂತಾರ' ಸಿನಿಮಾ ಅಂತ ಕಮೆಂಟ್ ಮಾಡುತ್ತಿದ್ದಾರೆ. ಹಾಗೇ ಮತ್ತೆ ಕೆಲವರು 'ರಾಬರ್ಟ್' 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಲ್ವಾ? ಅಂಯ ಉಮಾಪತಿಗೆ ಕಮೆಂಟ್ ಮಾಡುತ್ತಿದ್ದಾರೆ.
ಇದೇ ವೇಳೆ ನಿರ್ಮಾಪಕರು ಯಾಕೆ ಕಲೆಕ್ಷನ್ ವಿಷಯ ರಿವೀಲ್ ಮಾಡೋದಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಇಲ್ಲಿವರೆಗೂ ನಿರ್ಮಾಪಕರು ಯಾರಾದರೂ ಹೇಳಿದ್ದಾರಾ? ನನಗೆ ಇಷ್ಟಾಗಿದೆ ಅಂತ. ಹೇಳಿದ್ರೆ, ನೆಂಟರು ಮಾರನೇ ದಿನವೇ ಮನೆಗೆ ಬರುತ್ತಾರೆ. ತೆಗಿಯಪ್ಪ ಲೆಕ್ಕಾ. ಹತ್ತು ವರ್ಷದಿಂದ ಲೆಕ್ಕಾ ತೆಗಿಯಪ್ಪ ಅಂತಾರೆ. ಶೇರ್ ಅಮೌಂಟ್ ತೆಗೆದುಕೊಳ್ಳೋದು ಅಷ್ಟು ಸುಲಭ ಅಲ್ಲ. ಕೆಲವೊಬ್ಬ ವಿತರಕರು ಜಿಎಸ್‌ಟಿ ಅಮೌಂಟ್ ಕಟ್ಟೋದಿಲ್ಲ." ಎಂದೂ ನಿರ್ಮಾಪಕ ಉಮಾಪತಿ ಹೇಳಿದ್ದಾರೆ.


Click it and Unblock the Notifications











