'ಉಪಾಧ್ಯಕ್ಷ' ₹5.27ಕೋಟಿ ಕಲೆಕ್ಷನ್ ಮಾಡಿದ್ದು ನಿಜವೇ? ಅಕೌಂಟ್ ಫ್ರೀಜ್ ಆಗಿದೆ ಎಂದಿದ್ದೇಕೆ ಉಮಾಪತಿ?
ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದಾರೆ. 'ಉಪಾಧ್ಯಕ್ಷ'ನಾಗಿ ಹಾಸ್ಯದ ಹೊಳೆಯನ್ನು ಹರಿಸುವ ಭರವಸೆ ನೀಡಿದ್ದರು. 'ಹೆಬ್ಬುಲಿ','ರಾಬರ್ಟ್', 'ಮದಗಜ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಉಮಾಪತಿ ಹಣ ಹೂಡಿದ್ದಾರೆ.
ಗಣರಾಜ್ಯೋತ್ಸವಕ್ಕೆ ಕನ್ನಡದ ಎರಡು ಕಾಮಿಡಿ ಸಿನಿಮಾಗಳು ಬಿಡುಗಡೆಯಾಗಿದ್ದವು. ಒಂದು 'ಬ್ಯಾಚುಲರ್ ಪಾರ್ಟಿ'. ಇನ್ನೊಂದು 'ಉಪಾಧ್ಯಕ್ಷ'. ಈ ಎರಡೂ ಸಿನಿಮಾಗಳಲ್ಲಿ 'ಉಪಾಧ್ಯಕ್ಷ' ಸಿನಿಮಾ ಗಳಿಕೆಯಲ್ಲಿ ಸ್ವಲ್ಪ ಮುಂದಿದೆ ಅನ್ನೋ ಮಾತು ಚಿತ್ರರಂಗದಿಂದ ಕೇಳಿ ಬರುತ್ತಿದೆ. ಈ ಮಧ್ಯೆ ಮೂರು ದಿನಗಳ 'ಉಪಾಧ್ಯಕ್ಷ' ಕಲೆಕ್ಷನ್ ಬಗ್ಗೆನೂ ಸುದ್ದಿಯೊಂದು ಹರಿದಾಡಿತ್ತು.

ಮೊದಲ ಮೂರು ದಿನಗಳಲ್ಲಿ 'ಉಪಾಧ್ಯಕ್ಷ' ಕಲೆಕ್ಷನ್ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಮೊದಲ ಮೂರು ದಿನಗಳಲ್ಲಿ 5.27 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅನ್ನೋ ಪೋಸ್ಟರ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ಓಡಾಡಿತ್ತು. ಈ ಕಲೆಕ್ಷನ್ ಬಗ್ಗೆ ನಿರ್ಮಾಪಕ ಉಮಾಪತಿ ಗೌಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.
'ಉಪಾಧ್ಯಕ್ಷ' 3 ದಿನಗಳ ಕಲೆಕ್ಷನ್ ಎಷ್ಟು?
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ಪೋಸ್ಟರ್‌ನಲ್ಲಿ ಮೊದಲ ಮೂರು ದಿನಗಳ ಕಲೆಕ್ಷನ್ ಮಾಹಿತಿ ನೀಡಲಾಗಿತ್ತು. ಮೊದಲ ದಿನ 1.31 ಕೋಟಿ ರೂಪಾಯಿ, 2ನೇ ದಿನ 1.63 ಕೋಟಿ ರೂಪಾಯಿ, 3ನೇ ದಿನ 2.33 ಕೋಟಿ ರೂಪಾಯಿ ಗಳಿಸಿದ್ದು, ಮೂರು ದಿನಗಳ ಒಟ್ಟು ಕಲೆಕ್ಷನ್ 5.27ಕೋಟಿ ರೂಪಾಯಿ ಮಾಡಿದೆ ಎಂದು ವರದಿ ಮಾಡಲಾಗಿತ್ತು. ಈ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ ನೀಡಿದ್ದರು.

ಒಂದು ದಡ ಸೇರಿ ಮುಂದಕ್ಕೆ ಬಂದಿದ್ದೇವೆ
ನಿರ್ಮಾಪಕ ಉಮಾಪತಿ 'ಉಪಾಧ್ಯಕ್ಷ' ಸಿನಿಮಾದ ಕಲೆಕ್ಷನ್ ಬಗ್ಗೆ ಖುಷಿಯಾಗಿದ್ದಾರೆ."ಈ ಸಿನಿಮಾದ ವಿತರಕನಾಗಿ ನಾನು ಬಹಳ ಖುಷಿಯಿಂದ ಇದ್ದೇನೆ. ಉಪಾಧ್ಯಕ್ಷ ಪ್ರೀ ರಿಲೀಸ್‌ನಲ್ಲಿ ಅರ್ಧಭಾಗ ಮಾತ್ರ ದಡ ತಲುಪಿದ್ದೆವು. ದೇವರ ದಯೆಯಿಂದ ಜನರ ಆಶೀರ್ವಾದದಿಂದ ಚಿತ್ರರಂಗದ ಬೆಂಬಲದಿಂದ ಮೂರು ದಿನ ಕಳೆದು ನಾಲ್ಕನೇ ದಿನಕ್ಕೆ ಇದ್ದೇವೆ. ಒಂದು ದಡ ಸೇರಿ, ಇನ್ನೊಂದಿಷ್ಟು ಮುಂದಕ್ಕೆ ಬಂದಿದ್ದೇವೆ. ಭಗವಂತ ನಮಗೆ ಆಶೀರ್ವಾದ ಮಾಡಿದ್ದಾನೆ." ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
"ಉಮಾಪತಿ ಫಿಲ್ಮ್ಸ್ ಅಕೌಂಟ್ ಫ್ರೀಜ್ ಆಗಿದೆ"
ಇತ್ತೀಚೆಗೆ 'ಉಪಾಧ್ಯಕ್ಷ' ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ ನಿರ್ಮಾಪಕ ಉಮಾಪತಿಗೆ ಮೊದಲ ಮೂರು ದಿನಗಳ ಕಲೆಕ್ಷನ್ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪೋಸ್ಟರ್ ನಿಜವೇ ಎಂದು ಪ್ರಶ್ನೆ ಮಾಡಿದ್ದರು. "ಹೀಗೆ ಹೇಳಿ ಹೇಳಿ.. ಉಮಾಪತಿ ಫಿಲ್ಮ್ಸ್ ಅಕೌಂಟ್ ಫ್ರೀಜ್ ಆಗಿದೆ. ಅದಕ್ಕೆ ಬೇಡ. ನಿಮಗೆ ಗೊತ್ತು, ಎಲ್ಲೇ ಕೂತರೂ ಮೊಬೈಲ್‌ನಲ್ಲೇ ಕಲೆಕ್ಷನ್ ರಿಪೋರ್ಟ್ ತೆಗೆದುಕೊಳ್ಳಬಹುದು. ಅದೇನು ಕಷ್ಟವೇನೂ ಇಲ್ಲ. ನನಗೆ ಬಹಳ ಖುಷಿಯಾಗಿದ್ದೇನು ಅಂದರೆ, ಸಾಕಷ್ಟು ಜನ ವಿತರಕರು ಹಾಗೂ ಪ್ರದರ್ಶಕರು ಥಿಯೇಟರ್‌ನಲ್ಲಿ ಬೇರೆ ಸಿನಿಮಾ ಇದ್ದರೂ, ಅದನ್ನು ತೆಗೆದು ನಮಗೆ ಕೊಟ್ಟಿದ್ದಾರೆ. ಈಗ ನೀವೇ ಕಲೆಕ್ಷನ್ ನೋಡುತ್ತಿದ್ದೀರ. ಅದು ನಮ್ಮ ತಂಡದ ಶ್ರಮ. ಸಕ್ಸಸ್ ಮೀಟ್‌ನಲ್ಲಿ ನಮ್ಮ ಚಿಕ್ಕಣ್ಣ ಕಲೆಕ್ಷನ್ ಬಗ್ಗೆ ಹೇಳ್ತಾರೆ. ಅದು ಪ್ರಡ್ಯೂಸ್ ಬಾಯಿಯಿಂದ ಬರಬಾರದು." ಎಂದು ನಿರ್ಮಾಪಕ ಉಮಾಪತಿ ನುಣುಚಿಕೊಂಡಿದ್ದಾರೆ.
ಪೈರಸಿ ವಿರುದ್ಧ ಆಕ್ರೋಶ
'ಉಪಾಧ್ಯಕ್ಷ' ಸಿನಿಮಾ ಪೈರಸಿ ಮಾಡುತ್ತಿರೋ ಬಗ್ಗೆ ನಿರ್ಮಾಪಕ ಉಮಾಪತಿ ಕಿಡಿಕಾರಿದ್ದಾರೆ. "ನಮ್ಮ ಚಿಕ್ಕಣ್ಣ ಅವರ ನಿದ್ದೆ, ಊಟವನ್ನು ಬಿಟ್ಟಿದ್ದಾರೆ. ಪೈರಸಿ ಇಷ್ಟು ಆಯ್ತಂತೆ ಅಂಥ ನನಗೆ ಕಳಿಸುತ್ತಲೇ ಇರುತ್ತಾರೆ. ನಾನು ಮನವಿ ಮಾಡಿಕೊಳ್ಳುವುದು ಇಷ್ಟೇ. ಕದ್ದು ತಿನ್ನುವುದು ಮಜಾ ಇರುತ್ತೆ. ಆದರೆ, ಕದಿಯೋರೆಲ್ಲ ಕಳ್ಳರೇ ಆಗಿರುತ್ತಾರೆ. ದಯವಿಟ್ಟು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ. ನಾವೇನು ಬೇರೆಯವರ ಹಾಗೆ 500, 1000 ರೂಪಾಯಿ ಟಿಕೆಟ್ ಇಟ್ಟಿಲ್ಲ. ಪೈರಸಿ ಮಾಡೋರು ಹೇಳಿದ್ರೆ, ಅವರಿಗೂ ಒಂದು ಸ್ಕ್ರೀನ್ ವ್ಯವಸ್ಥೆ ಮಾಡೋಣ." ಎಂದು ನಿರ್ಮಾಪಕ ಉಮಾಪತಿ ಆಕ್ರೋಶ ಹೊರ ಹಾಕಿದ್ದಾರೆ."


Click it and Unblock the Notifications











