ಉಪ್ಪಿಯ ಆಪ್ತ.. 'ನಾಗರಹಾವು' ಸಿನಿಮಾ ನಿರ್ದೇಶಕ ಮುರಳಿ ಮೋಹನ್ ನಿಧನ
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ಮುರಳಿ ಮೋಹನ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಮುರಳಿ ಮೋಹನ್ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಟ್ರಸ್ಟ್‌ವೆಲ್ ಆಸ್ಪತ್ರೆಯಲ್ಲಿ ಇಂದು (ಆಗಸ್ಟ್ 13) ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆಂದು ವರದಿಯಾಗಿದೆ.
ಸುಮಾರು ಮೂರು ದಶಕಗಳಿಂದ ಮುರಳಿ ಮೋಹನ್ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರಂಭದಲ್ಲಿ ಉಪೇಂದ್ರ ಜೊತೆ ಮುರಳಿ ಮೋಹನ್ ಗುರುತಿಸಿಕೊಂಡಿದ್ದರು. ಉಪ್ಪಿ ನಿರ್ದೇಶಿಸಿದ 'ಓಂ' ಸೇರಿದಂತೆ ಹಲವು ಚಿತ್ರಗಳಿಗೆ ಮುರಳಿ ಮೋಹನ್ ಸಹಾಯಕ ನಿರ್ದೇಶಕರಾಗಿ, ಬರಹಗಾರರಾಗಿ ಕೆಲಸ ಮಾಡಿದ್ದರು. ಜೊತೆಗೆ ಕನ್ನಡದ ದಿಗ್ಗಜರ ಸಿನಿಮಾಗಳಿಗೂ ಆಕ್ಷನ್ ಕಟ್ ಹೇಳಿದ್ದಾರೆ.

ಗೆಳೆಯ ಉಪೇಂದ್ರ ನಟಿಸಿದ 'ನಾಗರಹಾವು' ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದರು. ಜೊತೆಗೆ ಶಿವರಾಜ್‌ಕುಮಾರ್ ಅಭಿನಯದ 'ಸಂತ', ರವಿಚಂದ್ರನ್ ನಟನೆಯ 'ಮಲ್ಲಿಕಾರ್ಜುನ' ಸೇರಿದಂತೆ ಹಲವು ಜನಪ್ರಿಯ ಸಿನಿಮಾಗಳನ್ನು ಮುರಳಿ ಮೋಹನ್ ನಿರ್ದೇಶನ ಮಾಡಿದ್ದಾರೆ. ಇವರು ನಿರ್ದೇಶನದ ಜೊತೆಗೆ ಬರಹಗಾರ, ಸಂಭಾಷಣೆಕಾರ ಮತ್ತು ಗೀತ ರಚನೆಕಾರರಾಗಿಯೂ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.
ಮುರಳಿ ಮೋಹನ್ 2018ರಿಂದಲೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆ ತನಗೆ ಕಿಡ್ನಿ ಸಮಸ್ಯೆ ಇರುವ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಜೊತೆಗೆ ಕಿಡ್ನಿ ಕಸಿ ಮಾಡಿಸಿಕೊಳ್ಳುತ್ತಿರುವ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದು, ಸಹಾಯ ಕೇಳಿದ್ದರು. ಉಪೇಂದ್ರ ಸೇರಿದಂತೆ ಹಲವು ಗಣ್ಯರು ಮುರಳಿ ಮೋಹನ್ ಅವರಿಗೆ ಸಹಾಯ ಹಸ್ತವನ್ನು ಚಾಚಿದ್ದರು.
ಎಸ್ ಮುರಳಿ ಮೋಹನ್ ಕೆಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಕಿಡ್ನಿ ವೈಫಲ್ಯದಿಂದ ಅವರ ಆರೋಗ್ಯ ಸಮಸ್ಯೆ ಉಲ್ಭಣಿಸಿತ್ತು. ಸುಮಾರು ಐದಾರು ವರ್ಷಗಳಿಂದ ಅವರು ಡಯಾಲಿಸಿಸ್ ಮಾಡಿಕೊಳ್ಳುತ್ತಿದ್ದರು. ಕೆಲವು ವರ್ಷಗಳಿಂದ ಕಿಡ್ನಿಯನ್ನು ಕಸಿ ಮಾಡಿಸಿಕೊಳ್ಳುವುದಕ್ಕೆ ಓಡಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಕಿಡ್ನಿ ಕಸಿಗೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೆಲವು ಮೂಲಗಳ ಪ್ರಕಾರ ಅವರಿಗೆ ಕಿಡ್ನಿ ಕಸಿ ಕೂಡ ಆಗಿತ್ತು. ಆದರೆ, ಅದು ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಈ ಹಿಂದೆ ಮುರಳಿ ಮೋಹನ್ ಕಿಡ್ನಿ ಸಮಸ್ಯೆ ಬಹಿರಂಗ ಪತ್ರ ಬರೆದಿದ್ದರು. "ನಾನು ಸುಮಾರು 36 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಸಂಭಾಷಣೆಕಾರ ಮತ್ತು ಗೀತ ರಚನೆಕಾರನಾಗಿ ಕೆಲಸ ಮಾಡುತ್ತಿದ್ದೇನೆ. 2018 ರಿಂದ ನನಗೆ ಆರೋಗ್ಯ ಸಮಸ್ಯೆ ಇದೆ. ಮೂತ್ರಪಿಂಡ ವೈಫಲ್ಯದಿಂದ ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. 2020ರಲ್ಲಿ ಮೂತ್ರಪಿಂಡ ಕಸಿಗಾಗಿ 'ಜೀವನ ಸಾರ್ಥಕತೆ' ಕಾರ್ಯಕ್ರಮದಲ್ಲಿ ನೋಂದಾಯಿಸಿಕೊಂಡಿದ್ದೇನೆ. ಈಗ ನನಗೆ ಮೂತ್ರಪಿಂಡ ಕಸಿ ಮಾಡಿಸುವ ಸಮಯ ಬಂದಿದೆ ಎಂದು ಜೆ.ಸಿ. ನಗರದ ಟ್ರಸ್ಟ್‌ವೆಲ್ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ." ಎಂದು ಪತ್ರದಲ್ಲಿ ಉಲ್ಲೇಖಿಸಿ, ಚಿಕಿತ್ಸೆ ಹಣದ ನೆರವನ್ನು ಕೇಳಿದ್ದರು.


Click it and Unblock the Notifications











