UI Box office Day 14: 2024ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ 'ಯುಐ'? 14ನೇ ದಿನ ಗಳಿಸಿದ್ದೆಷ್ಟು?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾ 'ಯುಐ' ಬಿಡುಗಡೆ ಬಳಿಕ ಗೊಂದಲ ಹುಟ್ಟಿಸಿದೆ. ಕೆಲವರಿಗೆ ಉಪ್ಪಿಯ ಸಿನಿಮಾ ಸಿಕ್ಕಪಟ್ಟೆ ಇಷ್ಟ ಆಗಿದೆ. ಮತ್ತೆ ಕೆಲವರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ರಿಯಲ್‌ಸ್ಟಾರ್ ಫೋಕಸ್ ಮಾಡಿ ಸಿನಿಮಾ ನೋಡಿ ಅಂದ ಮೇಲೆ ಇನ್ನೊಮ್ಮೆ, ಮಗದೊಮ್ಮೆ ಹೋಗಿ ಸಿನಿಮಾ ನೋಡಿದವರು ಇದ್ದಾರೆ. ಇದು ಉಪೇಂದ್ರ ಸಿನಿಮಾದ ಸ್ಟೈಲ್.
ಮೊದಲೇ ನಿರೀಕ್ಷೆ ಮಾಡಿದಂತೆ ಉಪೇಂದ್ರ ಸಿನಿಮಾ 'ಯುಐ' ಹೀಗೆ ತಲೆಗೆ ಹುಳ ಬಿಡುತ್ತೆ ಅನ್ನೋ ನಿರೀಕ್ಷೆ ಇತ್ತು. ಅದನ್ನು ಇಟ್ಟುಕೊಂಡೇ ಸಿನಿಮಾ ನೋಡಿದ್ದರು. ಆದರೆ, ಈ ಬಾರಿ ಯಾಕೋ ಉಪ್ಪಿ ತಂತ್ರ ಆ ಮಟ್ಟಿಗೆ ವರ್ಕ್‌ಔಟ್ ಆಗಿಲ್ಲ ಅನ್ನೋದನ್ನು ತಳ್ಳಿ ಹಾಕುವಂತಿಲ್ಲ. ಹಾಗಂತ ಇದು ರೆಗ್ಯೂಲರ್ ಸಿನಿಮಾ ಅಂತೂ ಕಂಡಿತಾ ಅಲ್ಲವೇ ಅಲ್ಲ. ಡಿಫ್ರೆಂಟ್ ಸಿನಿಮಾ ಬೇಕು ಅನ್ನುವವರಿಗೆ ಇದು ಖಂಡಿತಾ ಮಜಾ ಕೊಡುತ್ತೆ.

ಇನ್ನು 'ಯುಐ' ರಿಲೀಸ್ ಆದ ಐದೇ ದಿನಕ್ಕೆ 'ಮ್ಯಾಕ್ಸ್' ರಿಲೀಸ್ ಆಗಿತ್ತು. ಆ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ಬಂದಿದ್ದರಿಂದ 'ಯುಐ' ಕಲೆಕ್ಷನ್ ಡ್ರಾಪ್ ಆಗಿದೆ. ಎರಡು ವಾರ ಗ್ಯಾಪ್ ಕೊಟ್ಟು ಸಿನಿಮಾ ರಿಲೀಸ್ ಆಗಬಹುದಿತ್ತು ಅನ್ನೋ ಆರೋಪ 'ಮ್ಯಾಕ್ಸ್' ಮೇಲಿದೆ. ಆದರೆ, ಈ ಬಗ್ಗೆ ಉಪೇಂದ್ರ ಅಂಡ್ ಟೀಮ್ ತಲೆಕೆಡಿಸಿಕೊಂಡಂತೆ ಇಲ್ಲ. ಯಾಕಂದ್ರೆ, ಚಿತ್ರತಂಡ ಅಧಿಕೃತವಾಗಿ 2024ರಲ್ಲಿ ವಿಶ್ವದಾದ್ಯಂತ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂತ ಹೇಳಿಕೊಂಡಿದೆ. ಹಾಗಿದ್ದರೆ, 14 ದಿನಗಳಲ್ಲಿ ವಿಶ್ವದಾದ್ಯಂತ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ.
3ನೇ ವಾರಕ್ಕೆ ಕಾಲಿಟ್ಟ 'ಯುಐ'
'ಯುಐ' ರಿಲೀಸ್ ಆಗಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಕ್ರಿಸ್‌ಮಸ್‌ಗೂ ಮುನ್ನ ತೆರೆಕಂಡಿದ್ದ 'ಯುಐ' ವಿಭಿನ್ನ ಸಿನಿಮಾಗಳ ಹುಡುಕಾಟದಲ್ಲಿದ್ದ ಸಿನಿ ಪ್ರಿಯರಿಗೆ ಇಷ್ಟ ಆಗಿತ್ತು. ಉಪ್ಪಿ ಹೇಳುವುದಕ್ಕೆ ಹೊರಟಿದ್ದ ಗಂಭೀರ ವಿಷಯಗಳನ್ನು ಡಿಕೋಡ್ ಮಾಡಿದ್ದರು. ಇನ್ನು ಮೊದಲ ವಾರ 'ಯುಐ' ಭರ್ಜರಿ ಕಲೆಕ್ಷನ್ ಮಾಡಿತ್ತು. ಎರಡನೇ ವಾರ ಗಳಿಕೆಯಲ್ಲಿ ಹಿನ್ನಡೆಯನ್ನು ಕಂಡಿದೆ. ಇನ್ನು ಮೂರನೇ ವಾರ ಕೂಡ ಕಲೆಕ್ಷನ್ ಡ್ರಾಪ್ ಆಗಿದೆ.
14ನೇ ದಿನದ ಕಲೆಕ್ಷನ್ ಎಷ್ಟು?
ಉಪೇಂದ್ರ ನಿರ್ದೇಶನದ ಸಿನಿಮಾ ಇಂದಿಗೂ ಚರ್ಚೆಯಾಗುತ್ತಿವೆ. 'ಎ', 'ಉಪೇಂದ್ರ', 'ಸೂಪರ್' ಅಂತಹ ಸಿನಿಮಾಗಳು ಸಿನಿ ಪ್ರಿಯರನ್ನು ನಿದ್ದೆ ಕೆಡಿಸಿದ್ದವು. ಅದೇ ರೀತಿ 'ಯುಐ' ಕೂಡ ತಲೆಗೆ ಹುಳ ಅಂತೂ ಬಿಟ್ಟಿದೆ. ಇನ್ನೂ ಎರಡನೇ ವಾರದಲ್ಲಿ ಈ ಸಿನಿಮಾ ಕರ್ನಾಟಕದಲ್ಲಿ 20 ಲಕ್ಷ ರೂ. ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಇನ್ನೇನು ಮತ್ತೊಂದು ವೀಕೆಂಡ್ ಬಂದೇ ಬಿಟ್ಟಿದೆ. ಈ ಮೂರು ದಿನಗಳಲ್ಲಿ ಮತ್ತೆ ಏರಿಕೆ ಆಗುವ ಸಾಧ್ಯತೆಯಿದೆ.

14 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಯುಐ' ವಿದೇಶದಲ್ಲೂ ತೆರೆಕಂಡಿತ್ತು. ಕನ್ನಡಿಗರು ದೂರದ ಊರುಗಳಿಂದ ಈ ಸಿನಿಮಾ ನೋಡುವುದಕ್ಕೆ ಹೋಗಿದ್ದರು. ಸಿನಿಮಾ ನೋಡಿ ತಮ್ಮದೇ ಸ್ಟೈಲ್‌ನಲ್ಲಿ ಸಿನಿಮಾ ವಿಮರ್ಶೆ ಮಾಡಿದ್ದರು. ಮೂಲಗಳ ಪ್ರಕಾರ, 'ಯುಐ'ಗೆ ವಿದೇಶದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ಯಾಂಡಲ್‌ವುಡ್ ಮಂದಿಯ ಪ್ರಕಾರ 'ಯುಐ' 14 ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 40 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
ತೆಲುಗಿನಲ್ಲಿ ಹೇಗಿದೆ 'ಯುಐ' ಖದರ್?
'ಯುಐ' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಕನ್ನಡದಲ್ಲಿ ನಿರೀಕ್ಷೆಯಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗೇ ತೆಲುಗಿನಲ್ಲೂ ಭರ್ಜರಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ನಿರೀಕ್ಷೆಯಷ್ಟು ಕಲೆಕ್ಷನ್ ಆಗದೇ ಹೋದರೂ, ತೆಲುಗು ವರ್ಷನ್‌ನಿಂದ ಸುಮಾರು 5 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನು ತಮಿಳು ಹಾಗೂ ಹಿಂದಿಯಲ್ಲಿ ಕಲೆಕ್ಷನ್ ಅಷ್ಟಕ್ಕಷ್ಟೇ ಎನ್ನಲಾಗಿದೆ. ಸದ್ಯ 40 ಕೋಟಿ ರೂ. ಅಧಿಕ ಗಳಿಸಿದ್ದು, 50 ಕೋಟಿ ಕ್ಲಬ್ ಸೇರುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











