UI Box office Day 2: 2ನೇ ದಿನವೂ ಉಪ್ಪಿಯ 'ಯುಐ' ಸಿನಿಮಾ ಮೇಲೆ ಫೋಕಸ್; ಕಲೆಕ್ಷನ್ ಕಮ್ಮಿಯೇನಿಲ್ಲ!
ಉಪೇಂದ್ರ ಗಿಮಿಕ್ ಮಾಡುತ್ತಾರಾ? ಅವರ ನಿರ್ದೇಶದ ಶೈಲಿನೇ ಅದೇನಾ? ಸಿನಿಪ್ರಿಯರಿಗೆ ಈ ಬಗ್ಗೆ ಗೊಂದಲ ಇರಬಹುದು. ಆದರೆ, ರಿಯಲ್ ಸ್ಟಾರ್‌ಗೆ ಈ ಸಿನಿಮಾ ಮೂಲಕ ಏನು ಹೇಳಬೇಕು ಅನ್ನೋ ಕ್ಲಾರಿಟಿ ಅಂತೂ ಇದೆ. ಉಪೇಂದ್ರ ನಿರ್ದೇಶಿಸಿದ 'ಯುಐ' ಮೇಲೆ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡು ಅಭಿಮಾನಿಗಳು ಕಾದು ಕೂತಿದ್ದರು. ಈ ಬಾರಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅದ್ಯಾವ ಮಟ್ಟಿಗೆ ಜಾದು ಮಾಡುತ್ತೆ ಅನ್ನೋದನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು.
'ಯುಐ' ಅಂದುಕೊಂಡಂತೆ ಗ್ರ್ಯಾಂಡ್ ಆಗಿ ರಿಲೀಸ್ ಆಯ್ತು. ಉಪ್ಪಿಯನ್ನು ಎರಡೆರಡು ಅವತಾರದಲ್ಲಿ ನೋಡಿ ಕೆಲವರು ಕನ್ಫ್ಯೂಸ್ ಆದರು. ಮತ್ತೆ ಕೆಲವರು ಅರ್ಥನೇ ಆಗದೇ ಮನೆ ಕಡೆಗೆ ಹೋದರು. ಅಲ್ಲಿಗೆ ಈ ಸಿನಿಮಾ ಕಥೆ ಅಂತ ಸಾಕಷ್ಟು ಮಂದಿ ಭವಿಷ್ಯ ನುಡಿಯುವುದಕ್ಕೆ ಆರಂಭಿಸಿದ್ದರು. ಎರಡನೇ ದಿನ ಕಲೆಕ್ಷನ್‌ನಲ್ಲಿ ಹಿಂದೆ ಬೀಳುತ್ತೆ ಅನ್ನೋ ಮಾತುಗಳು ಕೇಳಿದ್ದರು.

ಉಪೇಂದ್ರ ನಿರ್ದೇಶನದ ಸಿನಿಮಾ 'ಯುವ' ಎರಡನೇ ದಿನ ಚಮತ್ಕಾರ ಮಾಡಿದೆ. ಎರಡನೇ ದಿನವೂ ಸಿನಿಮಾದ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಉಪ್ಪಿ ಸಿನಿಮಾದಲ್ಲಿ ಫೋಕಸ್ ಅಂದಿದ್ದೇ ತಡ ಯುವಕರು ಎರಡೆರಡು ಬಾರಿ ಸಿನಿಮಾ ನೋಡುತ್ತಿದ್ದಾರೆ ಅಂತ ಅನಿಸುತ್ತಿದೆ. ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾಗೆ ರೆಸ್ಪಾನ್ಸ್ ಚೆನ್ನಾಗಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಗಳಿಕೆ ಚೆನ್ನಾಗಿದೆ. ಹಾಗಿದ್ದರೆ, 2ನೇ ದಿನ ಗಳಿಸಿದ್ದೆಷ್ಟು?
2ನೇ ದಿನ 'ಯುಐ' ಬಾಕ್ಸಾಫೀಸ್ ಎಷ್ಟು?
ರಿಯಲ್‌ಸ್ಟಾರ್ ಉಪೇಂದ್ರ 'ಯುಐ' ಸಿನಿಮಾ 2ನೇ ದಿನವೂ ಪ್ರತಿಕ್ರಿಯೆ ಉತ್ತಮವಾಗಿದೆ. ಜನರು ಥಿಯೇಟರ್‌ಗೆ ಬಂದು ಸಿನಿಮಾವನ್ನು ನೋಡಿದ್ದಾರೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಎರಡನೇ ದಿನ ಕಲೆಕ್ಷನ್‌ನಲ್ಲಿ ಹೇಳಿಕೊಳ್ಳುವಂತಹ ಏನೂ ಡ್ರಾಪ್ ಆಗಿಲ್ಲ. ಸಂಜೆ ಹಾಗೂ ನೈಟ್ ಶೋಗಳಿಗೆ ಹೆಚ್ಚು ರೆಸ್ಪಾನ್ಸ್ ಸಿಕ್ಕಿದೆ. sacnilk.com ಪ್ರಕಾರ ಎರಡನೇ ದಿನ ಈ ಸಿನಿಮಾ ಗಳಿಸಿದ್ದು 6.50 ಕೋಟಿ ರೂಪಾಯಿ. ಹೆಚ್ಚು ಕಡಿಮೆ ಮೊದಲ ದಿನದಷ್ಟೇ ಎರಡನೇ ದಿನವೂ ಕಲೆಕ್ಷನ್ ಆಗಿದೆ.

2 ದಿನಗಳ ಒಟ್ಟು ಕಲೆಕ್ಷನ್ ಎಷ್ಟಿದೆ?
ಉಪ್ಪಿ ಈ ಬಾರಿ ಕೆಲವು ಗಂಭೀರ ವಿಷಯಗಳನ್ನು ಫಿಲಾಸಫಿಕಲ್ ಆಗಿ ಹೇಳುವುದಕ್ಕೆ ಹೊರಟಿದ್ದರು. ಅದು ಕೆಲವರ ತಲೆಗೆ ಹೊಕ್ಕಿದೆ. ಮತ್ತೆ ಕೆಲವರಿಗೆ ತಲೆ ಬುಡನೂ ಅರ್ಥ ಆಗಿಲ್ಲ. ಉಪ್ಪಿ ಸಿನಿಮಾಗಳ ಗೀಳು ಬೆಳೆಸಿಕೊಂಡವರು ಎರಡೆರಡು ಬಾರಿ ಸಿನಿಮಾವನ್ನು ನೋಡಿದ್ದಾರೆ. ಶುಕ್ರವಾರದ ರಿವ್ಯೂ ಬಗ್ಗೆ ತಲೆಕೆಡಿಸಿಕೊಳ್ಳದೆ ಸಿನಿಮಾ ನೋಡಿದವರೂ ಇದ್ದಾರೆ. ಒಟ್ಟು ಎರಡು ದಿನಗಳಿಂದ sacnilk.com ಕೊಟ್ಟಿರುವ ಲೆಕ್ಕಾಚಾರ ಹೀಗಿದೆ.
2 ದಿನಗಳ ಬಾಕ್ಸಾಫೀಸ್ ಕಲೆಕ್ಷನ್
ಮೊದಲನೇ ದಿನ - 6.95 ಕೋಟಿ ರೂಪಾಯಿ
ಎರಡನೇ ದಿನ - 6.50 ಕೋಟಿ ರೂಪಾಯಿ
ಒಟ್ಟು - 13.45 ಕೋಟಿ ರೂಪಾಯಿ
ಭಾನುವಾರ ಕಲೆಕ್ಷನ್ ಮೇಲೆ ನಿರೀಕ್ಷೆ
ಭಾನುವಾರ ಈ ಸಿನಿಮಾಗೆ ಸಕ್ಸಸ್‌ಗೆ ತುಂಬಾನೇ ಮುಖ್ಯ. ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಆಗಬೇಕು. ಮೂರನೇ ದಿನ ಕಮ್ಮಿ ಅಂದರೂ 10 ಕೋಟಿ ರೂಪಾಯಿಯನ್ನಾದರೂ ಕಲೆಕ್ಷನ್ ಮಾಡಲೇಬೇಕು. ಆಗ ಸಿನಿಮಾದ ಕಲೆಕ್ಷನ್ 25 ಕೋಟಿ ರೂಪಾಯಿ ಸಮೀಪ ಬರಬಹುದು. ಈ ವರ್ಷದ ಕೊನೆಯಾಗಿರುವುದರಿಂದ ಜನರು ಯಾವ ಮೂಡ್ನಲ್ಲಿ ಇದ್ದಾರೋ ಇನ್ನು ಗೊತ್ತಿಲ್ಲ. ಹಾಲಿಡೇ ಮೂಡ್ನಲ್ಲಿ ಇದ್ದರೆ, ಕಲೆಕ್ಷನ್‌ನಲ್ಲಿ ಮತ್ತೆ ಡ್ರಾಪ್ ಆಗುತ್ತೆ.
'ಮ್ಯಾಕ್ಸ್' ಎಫೆಕ್ಟ್ ಕೊಡುತ್ತಾ?
'ಯುಐ' ಸಿನಿಮಾ ಬಿಡುಗಡೆಯಾಗಿ ಇನ್ನೇನು 5 ದಿನ ಆಗಿದೆ ಅನ್ನುವಾಗಲೇ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ರಿಲೀಸ್ ಆಗುತ್ತಿದೆ. ಮೊದಲ ನಾಲ್ಕೈದು ದಿನ ಆ ಸಿನಿಮಾ ಹವಾ ಇದ್ದೇ ಇರುತ್ತೆ. ಆಗ ಜನರು 'ಯುಐ' ಬಿಟ್ಟು 'ಮ್ಯಾಕ್ಸ್' ಕಡೆಗೆ ವಾಲುವ ಸಾಧ್ಯತೆಯಿದೆ. ಒಂದು ವೇಳೆ ಮ್ಯಾಕ್ಸ್ ಕೂಡ ನಿರಾಸೆ ಮಾಡಿದರೆ, 'ಯುಐ'ಗೆ ಲಾಭ ಆಗುತ್ತಾ ಅನ್ನೋ ಅನುಮಾನ ಕೂಡ ಇದೆ.


Click it and Unblock the Notifications











