ಮನೆಯಲ್ಲೇ ದೀಪಾವಳಿ ಮಾಡಿಲ್ಲ, ಕಬ್ಜ ಟೀಸರ್ ಹೇಗೆ ರಿಲೀಸ್ ಮಾಡಲಿ?
"ಪ್ಯಾನ್ ಇಂಡಿಯಾ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಲ್ಲ. ಇಲ್ಲಿವರೆಗೂ 'ಕಬ್ಜ' ಸಿನಿಮಾಗಾಗಿ ಏನು ಮಾಡಿದ್ದೀನಿ ಅನ್ನುವುದನ್ನು ಫೋಟೋಗಳೇ ಹೇಳಿವೆ. ಆದರೆ, ದೀಪಾವಳಿ ಹಬ್ಬಕ್ಕೆ ದೃಶ್ಯಗಳ ಮೂಲಕ ನೋಡುತ್ತೀರ ಅನ್ನುವ ಭರವಸೆ ನೀಡುತ್ತೇನೆ." ಎಂದು ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ಆರ್ ಚಂದ್ರು ಹೇಳಿದ್ದರು. ಆದರೆ, ದೀಪಾವಳಿ ಹಬ್ಬ ಮುಗಿದು ಈಗಾಗಲೇ ಒಂದು ವಾರ ಆಗಿದೆ. ಇನ್ನೂ 'ಕಬ್ಜ' ಚಿತ್ರದ ಟೀಸರ್ ರಿಲೀಸ್ ಆಗಿಲ್ಲ.
ಬೆಳಕಿನ ಹಬ್ಬಕ್ಕೆ ರಿಲೀಸ್ ಆಗಬೇಕಿದ್ದ 'ಕಬ್ಜ' ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಗುತ್ತೆ ಅನ್ನುವ ಸುಳಿವು ಇರಲಿಲ್ಲ. ಹೀಗಾಗಿ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಟೀಸರ್‌ಗಾಗಿ ಬೇಡಿಕೆ ಇಟ್ಟಿದ್ದರು. ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಯಾಕೆ ರಿಲೀಸ್ ಆಗಿಲ್ಲ ಅಂತ ಪ್ರಶ್ನೆ ಮಾಡಿದ್ದರು. ಕಬ್ಜ ಟೀಸರ್ ಯಾಕೆ ಬಿಟ್ಟಿಲ್ಲ ಅನ್ನುವ ಅಸಲಿ ಕಾರಣವನ್ನು ನಿರ್ದೇಶಕ ಆರ್ ಚಂದ್ರು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

ದೀಪಾವಳಿನೂ ಇಲ್ಲ.. ಟೀಸರ್ ಇಲ್ಲ
"ದೀಪಾವಳಿ ಹಬ್ಬಕ್ಕೆ 'ಕಬ್ಜ' ಚಿತ್ರದ ಟೀಸರ್ ರಿಲೀಸ್ ಮಾಡ್ತೀನಿ ಅಂತ ಹೇಳಿದ್ದೆ. ಆದರೆ, ನಮ್ಮೆಲ್ಲರ ಮೆಚ್ಚಿನ ಅಪ್ಪು ಸರ್ ನಿಧನದಿಂದ ನಮಗೆ ಹೊರಗೆ ಬರುವುದಕ್ಕೆ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುವುದು ಸರಿಯಿಲ್ಲ ಎಂದುಕೊಂಡಿದ್ದೆವು. ಆದರೆ, ಉಪ್ಪಿ ಹಾಗೂ ಕಿಚ್ಚನ ಅಭಿಮಾನಿಗಳು ಟೀಸರ್ ಯಾಕೆ ಬಿಟ್ಟಿಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಪ್ಪು ಅಗಲಿಕೆ ನೋವಲ್ಲಿ ನಮ್ಮ ಮನೆಯಲ್ಲೇ ದೀಪಾವಳಿ ಮಾಡಿಲ್ಲ. ಇನ್ನು ಟೀಸರ್ ಹೇಗೆ ಬಿಡಲಿ. ಅದಕ್ಕೆ ಪೋಸ್ಟ್‌ಪೋನ್ ಮಾಡಿದ್ದೇವೆ." ಅಂತಾರೆ ನಿರ್ದೇಶಕ ಆರ್. ಚಂದ್ರು.

'ಕಬ್ಜ' ಶೂಟಿಂಗ್ ಸೆಟ್ಟಿಗೆ ಬಂದಿದ್ರು ಅಪ್ಪು
"ಕೆಲವು ದಿನಗಳ ಹಿಂದಷ್ಟೇ ಮಿನರ್ವ ಮಿಲ್‌ನಲ್ಲಿ ದೊಡ್ಡದಾಗಿ ಸೆಟ್ ಹಾಕಿ ಶೂಟಿಂಗ್ ಮಾಡುತ್ತಿದ್ದೆವು. ರಾತ್ರಿಯಿಡಿ ಚಿತ್ರೀಕರಣ ಮಾಡಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೆವು. ಸಂಜೆ ಸುಮಾರು 7 ಗಂಟೆ ಆಗಿತ್ತು. ಆಗ ದಿಢೀರನೇ ಅಪ್ಪು ಸರ್ ಸ್ಪಾಟ್‌ಗೆ ಎಂಟ್ರಿ ಕೊಟ್ಟಿದ್ದರು. ಏನ್ ಚಂದ್ರು ಹಾಲಿವುಡ್ ಲೆವೆಲ್‌ನಲ್ಲಿ ಸಿನಿಮಾ ಮಾಡುತ್ತಿದ್ದೀಯಾ ಅಂದ್ರು. ಅದಕ್ಕೆ ನೋಡಿಕೊಂಡು ಹೋಗೋಣ ಅಂತ ಬಂದೆ ಅಂತ ಹೇಳಿದ್ದರು. ಮೇಕಿಂಗ್ ಹೇಗೆ ಮಾಡುತ್ತಿದ್ದೇವೆ ಅಂತ ಸುಮಾರು ಅರ್ಧ ಗಂಟೆ ಕೂತು ವೀಕ್ಷಿಸಿದ್ರು." ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ.

ನಾನೇ ರಿಲೀಸ್ ಮಾಡ್ತೀನಿ ಅಂದಿದ್ರು ಅಪ್ಪು
"ಕಬ್ಜ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದೆವು. ಆಗ ಆ ಮೋಷನ್ ಪೋಸ್ಟರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಂದ್ರು ಇನ್ಮುಂದೆ ಕಬ್ಜ ಸಿನಿಮಾಗೆ ಸಂಬಂಧಪಟ್ಟಿದ್ದು ಏನೇ ರಿಲೀಸ್ ಮಾಡಿದ್ರೂ ನಾನೇ ಮಾಡಿಕೊಡ್ತೀನಿ ಅಂತ ಹೇಳಿದ್ರು. ಎರಡು ವಾರದ ಹಿಂದಷ್ಟೇ ಭೇಟಿಯಾದಾಗ ಈ ಮಾತು ಹೇಳಿದ್ರು. ಈಗ ಅವರೇ ಇಲ್ಲ" ಅಂತ ಭಾವುಕರಾಗ್ತಾರೆ.

ನನ್ನ ಮಕ್ಕಳೂ ಅಳ್ತಿದ್ದಾರೆ
"ಪುನೀತ್ ರಾಜ್‌ಕುಮಾರ್ ಸರ್ ಇನ್ನಿಲ್ಲ ಅನ್ನೋ ಸುದ್ದಿ ನೋಡಿದ್ದಲ್ಲಿಂದ ನಮ್ಮ ಮಕ್ಕಳು ಆಳು ನಿಲ್ಲಿಸಿಲ್ಲ. ಅಪ್ಪು ಸರ್ ಅಂದ್ರೆ ನನ್ನ ಮಕ್ಕಳಿಗೆ ಬಲು ಪ್ರೀತಿ. ನಮ್ಮ ಮನೆಯಲ್ಲಿ ಎಲ್ಲರೂ ನೋವಿನಲ್ಲೇ ಇದ್ದಾರೆ. ಇಡೀ ರಾಜ್ಯದ ಜನತೆ ನೋವಲ್ಲಿದೆ. ಇಂತಹ ಸಂದರ್ಭದಲ್ಲಿ ಕಬ್ಜ ಚಿತ್ರದ ಟೀಸರ್ ರಿಲೀಸ್ ಮಾಡೋಕೆ ಮನಸ್ಸು ಆಗುತ್ತಿಲ್ಲ. ಅದಕ್ಕೆ ಮುಂದಿನ ದಿನಗಳಲ್ಲಿ ಯಾವಾಗ ರಿಲೀಸ್ ಮಾಡುವುದು ಅಂತ ಹೇಳುತ್ತೇವೆ." ಅಂತ ಆರ್ ಚಂದ್ರು ಹೇಳಿದ್ದಾರೆ.
'ಐ ಲವ್ ಯು' ಸಿನಿಮಾದ ಬಳಿಕ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಜೋಡಿ ಮತ್ತೆ ಒಂದಾಗಿದೆ. ಭೂಗತ ಲೋಕದ ಕಥಾಹಂದರವನ್ನು 'ಕಬ್ಜ' ಸಿನಿಮಾದಲ್ಲಿ ತರಲಾಗಿದ್ದು, ಏಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತೆ ಎನ್ನಲಾಗಿದೆ. ಈಗಾಗಲೇ ಬಹು ನಿರೀಕ್ಷೆ ಮೂಡಿಸಿದ 'ಕಬ್ಜ' ಚಿತ್ರದಲ್ಲಿ ಉಪ್ಪಿ ಜೊತೆ ಕಿಚ್ಚ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











