ಜೈಲಿನಿಂದ ಮನೆಗೆ ಬಂದ ಕೂಡಲೇ ಅಲ್ಲು ಅರ್ಜುನ್ ಭೇಟಿ ಮಾಡಿದ ಉಪೇಂದ್ರ, ಲಹರಿ ವೇಲು; 'ಯುಐ'ಗೆ ಏನು ಲಿಂಕ್?
ಹೈದರಾಬಾದ್: ರಿಯಲ್ ಸ್ಟಾರ್ ಉಪೇಂದ್ರ 'ಯುಐ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದುಕೊಂಡಿವೆ. ಹೀಗಾಗಿ ಉಪ್ಪಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಸಿನಿಮಾ ಪ್ರಚಾರ ಮಾಡುವುದಕ್ಕೆ ಓಡಾಡುತ್ತಿದ್ದಾರೆ. ಉಪ್ಪಿನೇ ಸಿನಿಮಾ ನಿರ್ದೇಶನ ಮಾಡಿರುವುದರಿಂದ ಕರ್ನಾಟಕದಲ್ಲಂತೂ ಕ್ರೇಜ್ ಜೋರಾಗಿದೆ. ಸಿನಿಮಾದ ಪ್ರಚಾರದ ಜೊತೆ ಜೊತೆಗೆ ರಿಲೀಸ್ ಅನ್ನೂ ನೋಡಿಕೊಳ್ಳಬೇಕಿದೆ.
'ಯುಐ' ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣಕ್ಕೆ ಎಲ್ಲಾ ಕಡೆಗೂ ಹೋಗಿ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ ಗ್ಯಾಪ್‌ನಲ್ಲಿ ಉಪೇಂದ್ರ ಹಾಗೂ ಲಹರಿ ಸಂಸ್ಥೆಯ ಮಾಲೀಕ ವೇಲು ಹೈದರಾಬಾದ್‌ನಲ್ಲಿ ಅಲ್ಲು ಅರ್ಜುನ್ ಅನ್ನು ಭೇಟಿ ಮಾಡಿದ್ದಾರೆ.

ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಉಪೇಂದ್ರ ಇಂದು (ಡಿಸೆಂಬರ್ 14) ಅಲ್ಲು ಅರ್ಜುನ್ ಭೇಟಿ ಮಾಡಿದ್ದು ಯಾಕೆ? ಈ ಭೇಟಿಯ ಹಿಂದೆ ಏನಾದರೂ ಉದ್ದೇಶವಿದೆಯೇ? 'ಯುಐ' ಪ್ರಚಾರಕ್ಕೆ ಅಲ್ಲು ಅರ್ಜುನ್‌ಗೆ ಆಹ್ವಾನ ಮಾಡಿದ್ದಾರಾ? ಇಂತಹದ್ದೇ ಒಂದಿಷ್ಟು ಪ್ರಶ್ನೆ ಹುಟ್ಟುಕೊಂಡಿರುವುದು ಸಹಜ. ಸದ್ಯ ಉಪೇಂದ್ರ ಹಾಗೂ ಲಹರಿ ವೇಲು ಇಬ್ಬರೂ ಅಲ್ಲು ಅರ್ಜುನ್ ಭೇಟಿ ಮಾಡಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಉಪ್ಪಿ ತೆಲುಗು ಮಂದಿಗೆ ಹೊಸ ಬರೇನೂ ಅಲ್ಲ. ಅದರಲ್ಲೂ ಅಲ್ಲು ಅರ್ಜುನ್‌ಗೆ ಹಾಗೂ ಅವರ ತಂದೆ ಅಲ್ಲು ಅರವಿಂದ್‌ಗೆ ತುಂಬಾನೇ ಪರಿಚಯ. ಅದು ಇತ್ತೀಚೆಗಿನ ಪರಿಚಯವೇನೂ ಅಲ್ಲ. ಈ ಹಿಂದಿನಿಂದಲೂ ಉಪೇಂದ್ರ ಜೊತೆ ಅಲ್ಲು ಅರವಿಂದ್ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹಾಗೇ ಲಹರಿ ಸಂಸ್ಥೆ ಕೂಡ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಜೊತೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದೆ.
ಈಗ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದಾರೆ. ಇದೇ ಸಮಯದಲ್ಲಿ ಅಲ್ಲು ಅರ್ಜುನ್ ಅವರನ್ನು ಭೇಟಿ ಉಪೇಂದ್ರ ಭೇಟಿ ಮಾಡಿದ್ದಾರೆ. ಉಪ್ಪಿ ತಮ್ಮ 'ಯುಐ' ಸಿನಿಮಾದ ಪ್ರಚಾರಕ್ಕಾಗಿ ಹೈದರಾಬಾದ್‌ಗೆ ತೆರಳಿದ್ದಾರೆ. ಇದೇ ವೇಳೆ ಅಲ್ಲು ಅರ್ಜುನ್ ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದಾರೆ ಎನ್ನಲಾಗಿದೆ.
ಇದರ ಜೊತೆಗೆ 'ಯುಐ' ಸಿನಿಮಾ ತೆಲುಗು ವರ್ಷನ್ ಅನ್ನು ಅಲ್ಲು ಅರವಿಂದ್ ತಂದೆ ಒಡೆತನದ ಗೀತಾ ಫಿಲ್ಮ್ ಡಿಸ್ಟಿಬ್ಯೂಟರ್ ರಿಲೀಸ್ ಮಾಡುತ್ತಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲಿ ಅವರೇ ರಿಲೀಸ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಬಿಡುಗಡೆಯ ಬಳಿಕ ಅವರ ನಿವಾಸಕ್ಕೆ ಉಪೇಂದ್ರ ಹಾಗೂ ಲಹರಿ ವೇಲು ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅಂದ್ಹಾಗೆ, 'ಯುಐ' ಸಿನಿಮಾ ಇದೇ ಡಿಸೆಂಬರ್ 20ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಉಪೇಂದ್ರ ಬಹಳ ದಿನಗಳ ಬಳಿಕ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಜಿ.ಮನೋಹರ್ ಹಾಗೂ ಕೆ.ಪಿ. ಶ್ರೀಕಾಂತ್ ಲಹರಿ ಫಿಲ್ಮ್ ಹಾಗೂ ವೀನಸ್ ಎಂಟರ್‌ನೈನರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿಶೇಷ ಅಂದರೆ, ಅಜನೀಶ್ ಲೋಕನಾಥ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.


Click it and Unblock the Notifications











