ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಚೊಚ್ಚಲ ನಿರ್ದೇಶನ 'GST' ಟ್ರೈಲರ್‌ಗೆ ಉಪ್ಪಿ ಆಕ್ಷನ್ ಕಟ್
ಸೃಜನ್ ಲೋಕೇಶ್ ಕಿರುತೆರೆಯಲ್ಲಿ ವೀಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದೇ ಹೆಚ್ಚು. ನಟನಾಗಿ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದರೂ, ಅಷ್ಟಾಗಿ ಅವರ ಕೈ ಹಿಡಿಯಲಿಲ್ಲ. ಈಗ ಮತ್ತೊಮ್ಮೆ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದ ಸೃಜನ್ ಲೋಕೇಶ್ ಈಗ ನಿರ್ದೇಶಕನಾಗಿ ಎಂಟ್ರಿ ಕೊಡುತ್ತಿದ್ದಾರೆ.
ಸೃಜನ್ ಲೋಕೇಶ್ 'GST' ಎನ್ನುವ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾವನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಎನ್ ನಿರ್ಮಿಸಿರುವ ಈ ಸಿನಿಮಾ, ಇದೇ ತಿಂಗಳ 28 ರಂದು ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ಸಂಬಂಧ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ.

ಸೃಜನ್ ನಿರ್ದೇಶಿಸಿದ 'GST' ಸಿನಿಮಾದ ಟ್ರೈಲರ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಸ್ಟೈಲ್‌ನಲ್ಲಿ ಆಕ್ಷನ್ ಕಟ್ ಹೇಳುವ ಮೂಲಕ ರಿಲೀಸ್ ಮಾಡಿದ್ದಾರೆ. ಇವರೊಂದಿಗೆ ಪತ್ನಿ ಪ್ರಿಯಾಂಕಾ ಉಪೇಂದ್ರ ನವೆಂಬರ್ 14 ರಂದು ರಿಲೀಸ್ ಆಗಲಿರುವ ಸಿನಿಮಾದ ಹಾಡಿನ ಪ್ರೋಮೊ ರಿಲೀಸ್ ಮಾಡಿರೋದು ವಿಶೇಷ. ಉಪೇಂದ್ರ ದಂಪತಿ ಹಾಗೂ ನಟಿ ತಾರಾ ಅನುರಾಧ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
"GST ಎಂದರೆ ಘೋಸ್ಟ್ ಇನ್ ಟ್ರಬಲ್ ಎಂದು. ಅದನ್ನು ಈಗ ಸ್ವಲ್ಪ ಬದಲಾವಣೆ ಮಾಡಿ Go see in theater ಅಂತ ಹೇಳಬಹುದು. GST ಕನಸಲ್ಲಿ ಕಂಡಿರುವ ಸಿನಿಮಾ. ಅದನ್ನು ನನಸು ಮಾಡಿದವರು ನಿರ್ಮಾಪಕ ಸಂದೇಶ್. ನಾನು ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಅಡಿ ಇಟ್ಟಿದ್ದೇನೆ. ಇದರ ಮತ್ತೊಂದು ವಿಶೇಷ ಅಂದರೆ ನಮ್ಮ ತಾತಾ ಸುಬ್ವಯ್ಯ ನಾಯ್ಡು ಅವರು ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಮ್ಮ ತಂದೆ ಲೋಕೇಶ್ ಅವರನ್ನು ಬಾಲನಟನಾಗಿ ತೆರೆಗೆ ತಂದರು. ಆನಂತರ ನಮ್ಮ ತಂದೆ ನಿರ್ದೇಶನದ 'ಬುಜಂಗಯ್ಯನ ದಶಾವತಾರ'ದ ಮೂಲಕ ಬಾಲನಟನಾಗಿ ನಾನು ಚಿತ್ರರಂಗಕ್ಕೆ ಬಂದೆ. ಈಗ ನನ್ನ ಮಗ ಸುಕೃತ್ ನನ್ನ ಮೊದಲ ನಿರ್ದೇಶನದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ್ದಾನೆ. ಇದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ" ಎನ್ನುತ್ತಾರೆ ಸೃಜನ್ ಲೋಕೇಶ್.
ಈ ಸಿನಿಮಾದಲ್ಲಿ ಸೃಜನ್ ಲೋಕೇಶ್, ತಾಯಿ ಗಿರಿಜಾ ಲೋಕೇಶ್ ಹಾಗೂ ಪುತ್ರ ಸುಕೃತ್ ಮೂವರು ನಟಿಸಿರೋದು ವಿಶೇಷ. "ಇದು ಹಾರಾರ್ ಸಿನಿಮಾವಾಗಿದ್ದರೂ ಇಲ್ಲಿ ನಗುವೇ ಪ್ರಧಾನ. ಯಾವುದೇ ಸಂದೇಶ ನೀಡದೆ ನಗುವಿನ ಮೂಲಕ ಜನರ ಮನಸ್ಸನ್ನು ಗೆಲ್ಲಲ್ಲಿದ್ದೇನೆ. ಈ ಚಿತ್ರದಲ್ಲಿ ಯಾರು ಊಹಿಸಲಾಗದ 4O ನಿಮಿಷಗಳ ಕ್ಲೈಮ್ಯಾಕ್ಸ್ ಇದೆ. ನಮ್ಮ ಸಿನಿಮಾದಲ್ಲಿ ಅನುಭವಿ ಕಲಾವಿದರು ಅಭಿನಯಿಸಿದ್ದಾರೆ. ನನ್ನ ಮೊದಲ ಚಿತ್ರದ ನಿರ್ದೇಶನಕ್ಕೆ ಲೆಜೆಂಡ್ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್, ಚಿತ್ರ ಯಶಸ್ವಿಯಾಗಲೆಂದು ಹಾರೈಸಿ ತಮ್ಮ ರುಜು ಹಾಕಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ" ಎಂದು ಮಾಹಿತಿ ರಿವೀಲ್ ಮಾಡಿದ್ದಾರೆ ಸೃಜನ್ ಲೋಕೇಶ್.
ಇನ್ನು ನಿರ್ಮಾಪಕ ಸಂದೇಶ್ ಈ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಾನು ಈ ಸಿನಿಮಾದ ಕಥೆ ಕೇಳಿಲ್ಲ. ಸೃಜನ್ ನನ್ನ ಆತ್ಮೀಯ ಸ್ನೇಹಿತ. ಅವರು ಒಳ್ಳೆಯ ಸಿನಿಮಾ ಮಾಡಿರುತ್ತಾರೆ ಎಂಬ ನಂಬಿಕೆ ಇದೆ. ಇದು ನಮ್ಮ ಸಂಸ್ಥೆ ನಿರ್ಮಾಣದ 34ನೇ ಚಿತ್ರ" ಎಂದಿದ್ದಾರೆ ನಿರ್ಮಾಪಕ ಸಂದೇಶ್.
ಕನ್ನಡ ಚಿತ್ರರಂಗದ ಹಲವು ಪ್ರಥಮಗಳು ಸುಬ್ಬಯ್ಯ ನಾಯ್ಡು ಅವರ ಕುಟುಂಬದೆ ಆಗಿರುವುದು ನಮಗೆ ಹೆಮ್ಮೆ ಇದೆ. ಇದೇ ಮೊದಲ ಬಾರಿಗೆ ನನ್ನ ಮಗ ಸೃಜನ್ ಲೋಕೇಶ್ ನಿರ್ದೇಶನ ಮಾಡಿದ್ದಾನೆ. ನಾನು ಹಾಗೂ ನನ್ನ ಮೊಮ್ಮಗ ಸುಕೃತ್ ಈ ಚಿತ್ರದಲ್ಲಿ ನಟಿಸಿದ್ದೇವೆ" ಎಂದು ಹಿರಿಯ ನಟಿ ಗಿರಿಜಾ ಲೋಕೇಶ್ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ನಾಯಕಿಯಾಗಿ ರಜನಿ ಭಾರದ್ವಾಜ್, ಹಿರಿಯ ನಟ ಅಶೋಕ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಇದೇ ತಿಂಗಳ 28ರಂದು ರಿಲೀಸ್ ಆಗಲಿದೆ.


Click it and Unblock the Notifications











