ಉಪೇಂದ್ರ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗ್ತೀನಿ ಅಂತ ಬಂದಿದ್ದ ಕಿಚ್ಚ ಸುದೀಪ್; ಯಾವಾಗ? ಉಪ್ಪಿ ಹೇಳಿದ್ದೇನು?
ರಿಯಲ್ ಸ್ಟಾರ್ ಉಪೇಂದ್ರ ಅಂತ ನಾಯಕನಾದ ಮೊದಲ ಸಿನಿಮಾದಲ್ಲೇ ಸಿನಿ ಪ್ರೇಮಿಗಳು ನಿರ್ಧಾರ ಮಾಡಿಬಿಟ್ಟದ್ದರು. ಉಪೇಂದ್ರ ನಾಯಕನಾಗಿ ನಟಿಸಿದ್ದ ಚೊಚ್ಚಲ ಸಿನಿಮಾ 'ಎ' ಆ ಮಟ್ಟಿಗೆ ಹವಾ ಸೃಷ್ಟಿ ಮಾಡಿತ್ತು. ನಾಳೆ (ಮೇ 16) ಮತ್ತೆ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಉಪೇಂದ್ರ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಈ ಸಂದರ್ಶನಗಳಲ್ಲಿ ಒಂದೊಂದು ಇಂಟ್ರೆಸ್ಟಿಂಗ್ ಸುದ್ದಿಗಳನ್ನು ರಿವೀಲ್ ಮಾಡುತ್ತಿದ್ದಾರೆ. 'ಎ' ಸಿನಿಮಾ ರಿಲೀಸ್ ಆದಾಗ, ಕನ್ನಡ ಚಿತ್ರರಂಗಕ್ಕೆ ಇದು ಹೊಸ ಪರಿಕಲ್ಪನೆ. ರಿವರ್ಸ್ ಸ್ಕ್ರೀನ್ ಪ್ಲೇ, ಸಿನಿಮಾದೊಳೆಗೆ ಸಿನಿಮಾ ತೋರಿಸಿ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದರು. ಅದೀಗ ಮತ್ತೆ ಆಧುನಿಕ ತಂತ್ರಜ್ಞಾನದೊಂದಿಗೆ ತೆರೆಕಾಣುತ್ತಿದೆ.

ತಾವೇ ನಿರ್ದೇಶಿಸಿ, ನಟಿಸಿದ್ದ 'ಎ' ಸಿನಿಮಾ ಬಗ್ಗೆ ಉಪೇಂದ್ರ ಸ್ಪೀಡ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಈ ವೇಳೆ ಕಿಚ್ಚ ಸುದೀಪ್ ಇವರ ಬಳಿಕ ಸಹಾಯಕ ನಿರ್ದೇಶಕರಾಗಿ ಬರುತ್ತೇನೆ ಎಂದು ಕೇಳಿಕೊಂಡು ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಸಿನಿಮಾಗೆ ಸಿಕ್ಕಿದ ಪ್ರತಿಕ್ರಿಯೆ, ಹೀರೊ ಆಗುವುದಕ್ಕೂ ಮುನ್ನ ಎದುರಾದ ಅಪಶಕುನಗಳ ಬಗ್ಗೆನೂ ಹೇಳಿಕೊಂಡಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.
ಉಪೇಂದ್ರ 'ಎ' ಸಿನಿಮಾಗೂ ಮುನ್ನ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಒಂದೊಂದು ಸಿನಿಮಾವೂ ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ ಮಾಡಿದ್ದವು. ಅದೇ ವೇಳೆ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಪ್ರಯತ್ನ ಪಡುತ್ತಿದ್ದರು. ಹೀಗಾಗಿ ಹೀರೊ ಆಗುವುದಕ್ಕೂ ಮುನ್ನ ಉಪ್ಪಿ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಕೇಳಿಕೊಂಡು ಬಂದಿದ್ದನ್ನು ನೆನಪಿಸಿಕೊಂಡಿದ್ದಾರೆ.
"ಸುದೀಪ್ ಆಗಿನ್ನೂ ಹೀರೊ ಆಗಿರಲಿಲ್ಲ. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ನನ್ನ ಜೊತೆ ಬಂದು ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಆಗ ನಾನು ಅವರಿಗೆ ನೀವೇನು ಅಸಿಸ್ಟೆಂಟ್ ಡೈರೆಕ್ಟರ್ ಆಗುತ್ತೀರ. ಆರಡಿ ಇದ್ದೀರ, ಚೆನ್ನಾಗಿದ್ದೀರ ಹೀರೊ ಆಗಿ ಹೋಗಿ ಅಂತ ಹೇಳಿದ್ದೆ" ಎಂದು ಕಿಚ್ಚ ಸುದೀಪ್ ಬಗ್ಗೆ ಹೇಳಿಕೊಂಡಿದ್ದಾರೆ.

'ಎ' ಸಿನಿಮಾ ನೋಡಿ ಬಂದವರು ಹೊಗಳುತ್ತಿದ್ದಾರೋ.. ತೆಗಳುತ್ತಿದ್ದಾರೋ ಅನ್ನುವಷ್ಟು ಕನ್ಫ್ಯೂಸ್ ಆಗಿದ್ದರಂತೆ. "ನಾನು ಹೈಲ್ಯಾಂಡ್ಸ್ ಹೋಟೆಲ್‌ನಲ್ಲಿ ಇದ್ದೆ. ಅಲ್ಲಿ ಅವರು ಹಾಗೂ ಮುರಳಿ ಬಂದರು. ಏನು ಸಾರ್.. ಅದೇನ್ ಸಾರ್ ಸಿನಿಮಾ ಮಾಡಿದ್ದೀರ ಅಂದರು. ನನಗೆ ಅವರು ಏನಕ್ಕೆ ಹೀಗೆ ಹೇಳ್ತಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಒಂದು ಹೊಗಳಬೇಕು. ಇಲ್ಲಾ ಚೆನ್ನಾಗಿಲ್ಲ ಅನ್ನಬೇಕು. ಏನ್ ಸಾರ್ ಸಿನಿಮಾ ಮಾಡಿದ್ದೀರ. ಅಯ್ಯೋ ಅದೇನ್ ಸಾರ್ ಮಾಡಿದ್ದೀರ ಅಂದು ಹೋದರು. ಅದೊಂದೇ ನನಗೆ ನೆನಪು ಇರೋದು" ಎಂದಿದ್ದಾರೆ.
ಇನ್ನು ಉಪ್ಪಿ ಮೊದಲು ಹೀರೊ ಆಗಬೇಕು ಅಂತ ಅನಿಸಿದ್ದೇಕೆ? 'ಎ'ಗೆ ಅವರು ಹೀರೊ ಆಗಿದ್ದೇಗೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಯಾರೋ ಬಂದು ಕೇಳಿದ್ರು. ನೀವೇ ಹೀರೊ ಆಗಿ ಮಾಡಿ ಅಂದರು. ಹೌದಾ ಅಂದ್ಕೊಂಡು ಫ್ರೆಂಡ್ಸ್ ಕರ್ಕೊಂಡು ಏನೋ ಹೆಂಗಿರುತ್ತೆ ಅಂತ. ಅದ್ಯಾವುದೂ ನಮಗೆ ದೊಡ್ಡ ವಿಷಯ ಅಲ್ಲ. ಒಂದಿಷ್ಟು ಮಂದಿ ಹುಡುಗರನ್ನು ಹಾಕೊಂಡು ಹೋಗುವಾಗ ಲಾರಿ ಕೆಳಗೆ ಗುದ್ದಿಬಿಟ್ಟೆ. ಏನು ಅಪಶಕುನ ಅಂದ್ಕೊಂಡ್ವಿ. ಇನ್ನೇನು ಗಾಡಿಯಲ್ಲಿ ವಾಪಾಸ್ ಬರುತ್ತಿದ್ದೇವೆ. ಕಟ್ ಮಾಡಿದರೆ, ಯಾರೋ ಅರ್ಚಕರು ಗಾಡಿಯಲ್ಲಿ ಬಂದು ಬ್ಯಾನೆಟ್ ಮೇಲೆ ಹೊಡೆದು ಕಾರ್ ಮೇಲೆ ಬಿದ್ದು ಹೋದ. ಐದು ನಿಮಿಷದಲ್ಲಿ ಇನ್ನೊಂದು ಅಪಶಕನ. ಬೇಡಮ್ಮ ಇದು ಮಾಡೋದು ಬೇಡ ಅಂತ ಚರ್ಚೆ. ಆಗ ಮಾಡಲೇಬೇಕು ಅಂತ ನಿರ್ಧಾರ ಮಾಡಿದ್ವಿ." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











