Kabzaa: 'ಕಬ್ಜ' ರನ್‌ಟೈಮ್ ಕೇವಲ 136 ನಿಮಿಷ.. ಉಪ್ಪಿಯಿಂದಲೇ ಸಿಕ್ಕಿತು ಉತ್ತರ
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಹವಾ ಶುರುವಾಗಿದೆ. ದೇಶದ ಉದ್ದಗಲಕ್ಕೂ ಸಿನಿಮಾ ಸದ್ದು ಮಾಡೋಕೆ ಶುರುವಾಗಿದೆ. ಭಾರತದ ಉದ್ದಗಲಕ್ಕೂ 'ಕಬ್ಜ' ಸಿನಿಮಾದ ಬಗ್ಗೆ ಏನಾದರೂ ಒಂದು ಸುದ್ದಿ ಓಡಾಡುತ್ತಿದೆ. ಇತ್ತೀಚೆಗೆ 'ಕಬ್ಜ' ಸೆನ್ಸಾರ್ ಆಗಿದ್ದು, ಸಿನಿಮಾದ ರನ್ ಟೈಮ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
'ಕಬ್ಜ' ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ಅಂತಹ ದಿಗ್ಗಜರು ಒಟ್ಟಿಗೆ ಕಾಣಿಸಿಕೊಂಡಿರುವ ಸಿನಿಮಾ. ಹೀಗಾಗಿ ಸಿನಿಮಾದ ಉದ್ದ ಹೆಚ್ಚಿರುತ್ತೆ ಅಂತಲೇ ಭಾವಿಸಲಾಗಿತ್ತು. ಆದರೆ, ನಿರ್ದೇಶಕ ಆರ್.ಚಂದ್ರು ಆ ಲೆಕ್ಕಾಚಾರವನ್ನೆಲ್ಲಾ ತಲೆ ಕೆಳಗೆ ಮಾಡಿದ್ದಾರೆ. ಅಷ್ಟಕ್ಕೂ 'ಕಬ್ಜ' ರನ್ ಟೈಮ್ ಬಗ್ಗೆ ಚರ್ಚೆ ಆಗುತ್ತಿರೋದ್ಯಾಕೆ? ಉಪೇಂದ್ರ ಕೊಟ್ಟ ಸುಳಿವು ಏನು? ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಕಬ್ಜ' ಸಿನಿಮಾ ಇರೋದೇ 136 ನಿಮಿಷ
ಆರ್. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಇತ್ತೀಚೆಗೆ ಸೆನ್ಸಾರ್ ಆಗಿದೆ. ಈ ಸೆನ್ಸಾರ್ ಸರ್ಟಿಫಿಕೇಟ್ ಪ್ರಕಾರ, 'ಕಬ್ಜ' ಸಿನಿಮಾದ ಉದ್ದ ಸುಮಾರು 136 ನಿಮಿಷ. ಅಂದರೆ, ಇಡೀ ಸಿನಿಮಾ 2 ಗಂಟೆ 16 ನಿಮಿಷದಲ್ಲಿ ಮುಗಿದು ಹೋಗುತ್ತೆ. ಹೀಗಾಗಿ 'ಕಬ್ಜ' ರನ್‌ಟೈಮ್ ಬಗ್ಗೆ ಚಿಕ್ಕದೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.
ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಮೂವರು ದಿಗ್ಗಜರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ 'ಕಬ್ಜ' ಸಿನಿಮಾ ರನ್‌ಟೈಮ್ ಹೆಚ್ಚಿರುತ್ತೆ ಎಂದೇ ಭಾವಿಸಲಾಗಿತ್ತು. ಸಹಜವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚು ಹೊತ್ತು ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಕೂರಿಸಬೇಕು ಅನ್ನೋದು ವಾದವಿದೆ. ಅದಕ್ಕೆ 'ಕಬ್ಜ' ತದ್ವಿರುದ್ಧವಾಗಿದೆ.
'ಕಬ್ಜ' ರನ್‌ಟೈಮ್ ಬಗ್ಗೆ ಉಪ್ಪಿ ಹೇಳಿದ್ದೇನು?
ಪ್ಯಾನ್ ಇಂಡಿಯಾ ಸಿನಿಮಾಗಳ ರನ್‌ಟೈಮ್ ಸಹಜವಾಗಿ 150 ರಿಂದ 170 ನಿಮಿಷ ಇರಬೇಕು ಅನ್ನೋ ವಾದವಿದೆ. ಆದರೆ, ಆರ್. ಚಂದ್ರು ಈ ಎಲ್ಲಾ ಸಿದ್ಧ ಸೂತ್ರಗಳನ್ನು ಪಕ್ಕಕ್ಕಿಟ್ಟು ಪ್ರೇಕ್ಷಕರಿಗೆ ವೇಗವಾಗಿ ಸಿನಿಮಾ ತೋರಿಸುವುದಕ್ಕೆ ಮುಂದಾಗಿದ್ದಾರೆ. ಇಂತಹದ್ದೊಂದು ಚರ್ಚೆ ಸ್ಯಾಂಡಲ್‌ವುಡ್‌ನಲ್ಲಿ ಆರಂಭ ಆಗಿದೆ.

ರಿಯಲ್ ಸ್ಟಾರ್ ಉಪೇಂದ್ರ 'ಕಬ್ಜ' ಸಿನಿಮಾದ ರನ್‌ಟೈಮ್ ಬಗ್ಗೆ ನಿನ್ನೆನೇ (ಮಾರ್ಚ್ 13) ಸುಳಿವು ನೀಡಿದ್ದರು. ಹೈದರಾಬಾದ್‌ನಲ್ಲಿ ನಡೆದ ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಕಬ್ಜ ಸಿನಿಮಾದ ಸ್ಕ್ರೀನ್‌ಪ್ಲೇ ಅದ್ಭುತವಾಗಿದೆ. ಈ ಸಿನಿಮಾ ತುಂಬಾನೇ ವೇಗವಾಗಿ ಸಾಗುತ್ತೆ. ಸಿನಿಮಾ ನೋಡುವ ಪ್ರತಿಯೊಬ್ಬ ಪ್ರೇಕ್ಷಕರಿಗೂ ಎಲ್ಲೂ ಬೋರ್ ಆಗಲ್ಲ ಅಂತ ಹೇಳಿದ್ದರು.
ಏನಂತಿದ್ದಾರೆ ನೆಟ್ಟಿಗರು?
'ಕಬ್ಜ' ಸಿನಿಮಾ ರನ್‌ಟೈಮ್ ಬಗ್ಗೆ ಚರ್ಚೆ ಶುರುವಾಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬರು " ಕಬ್ಜ ರನ್‌ಟೈಮ್ 2.16 ನಿಮಿಷ. ಟ್ರೈಲರ್ ನೋಡಿ ಸಿನಿಮಾ ತುಂಬಾನೇ ಗೊಂದಲಮಯವಾಗಿರುತ್ತೆ ಅಂದುಕೊಂಡಿದ್ದೆ. ರನ್‌ಟೈಮ್ ಶಾರ್ಟ್ ಆಗಿದೆ. ಸ್ಕ್ರೀನ್ ಪ್ಲೇ ವೇಗವಾಗಿರುತ್ತೆ." ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು " ನನಗೆ ಅನಿಸಿದ್ದು ಕಬ್ಜ ಸಿನಿಮಾ ರನ್‌ಟೈಮ್ ಒಳ್ಳೆ ರನ್‌ಟೈಮ್ ಅಂತ. ಯಾಕೆ ಅಂದ್ರೆ, ಸಿನಿಮಾ ದೊಡ್ಡದಿದ್ದರೆ, ಜನ ಲಾಗ್ ಆಯ್ತು ಅಂತಾರೆ. ಸ್ಕ್ರೀನ್‌ಪ್ಲೇ ಫಾಸ್ಟ್ ಇದ್ರೆ ಇವತ್ತಿನ ಪ್ರೇಕ್ಷಕರಿಗೆ ತುಂಬಾ ಚೆನ್ನಾಗಿ ಕನೆಕ್ಟ್ ಆಗುತ್ತೆ." ಎಂದು ಟ್ವೀಟ್ ಮಾಡಿದ್ದಾರೆ. ನೆಟ್ಟಿಗರಿಗೆ ಸಿನಿಮಾ ರನ್‌ಟೈನ್ ಕ್ರೇಜಿಯಾಗಿದೆ ಅಂತ ಅನಿಸುತ್ತಿದೆ. ಹೀಗಾಗಿ ಫಸ್ಟ್ ಡೇ ಫಸ್ಟ್ ಶೋ ಕ್ರೇಜಿ ಆಡಿಯನ್ಸ್ ಅನ್ನ ನಿರೀಕ್ಷೆ ಮಾಡಬಹುದು.


Click it and Unblock the Notifications











