ವೇದಿಕೆ ಮೇಲೆ ಸುಮಲತಾ ಭಾವುಕ: ಅಪ್ಪುಯಿಂದಲೇ ಪುನೀತ ಎಂದ ಕ್ರೇಜಿಸ್ಟಾರ್!
ಸ್ಯಾಂಡಲ್‌ವುಡ್ ಪುನೀತ್ ರಾಜ್‌ಕುಮಾರ್ ಅವರನ್ನು ಸಂಭ್ರಮಿಸುತ್ತಿದೆ. ಪುನೀತ್ ಕಂಡ ಕನಸನ್ನು ಲೋಕಾರ್ಪಣೆ ಮಾಡುವುದಕ್ಕೆ ಇನ್ನು ಕೆಲವು ದಿನಗಳ ಬಾಕಿ ಇವೆ. ಅದಕ್ಕೂ ಮುನ್ನ 'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್ ಅನ್ನು ಹಮ್ಮಿಕೊಳ್ಳಲಾಗಿತ್ತು.
'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ನಲ್ಲಿ ಸ್ಯಾಂಡಲ್‌ವುಡ್ ಸೇರಿದಂತೆ ಬೇರೆ ಬೇರೆ ಭಾಷೆಯ ಸ್ಟಾರ್ ನಟರು ಆಗಮಿಸಿದ್ದರು. ಈ ವೇಳೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಿರಿಯ ನಟಿ ಸುಮಲತಾ ಕೂಡ ಆಗಮಿಸಿದ್ದರು.
ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುಮಲತಾ ಇಬ್ಬರೂ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಳೆದ ಮಧುರ ಕ್ಷಣಗಳನ್ನು ಹಂಚಿಕೊಂಡರು. ಈ ವೇಳೆ ಅಪ್ಪು ಅವರ ನೆನಪುಗಳನ್ನು ಹಂಚಿಕೊಳ್ಳುವ ವೇಳೆ ಸುಮಲತಾ ಭಾವುಕರಾಗಿದ್ದರು.

ಅಪ್ಪು ಸಂಸ್ಕಾರ ಮರೆಯೋಕೆ ಆಗಲ್ಲ
" ಈ ಒಂದು ವರ್ಷ ಹೇಗೆ ಕಳೀತು ಅಂತ ಅರ್ಥವೇ ಆಗುತ್ತಿಲ್ಲ. ಎಲ್ಲರೂ ಅಷ್ಟು ನೊಂದುಕೊಂಡಿದ್ದೆವು. ಅಷ್ಟು ಸಂಕಟಪಟ್ಟೆವು. ಆದರೆ, ಈ ದಿನ, ಇವತ್ತು ಈ ಸಂಜೆ, ಅಪ್ಪು ಅವರನ್ನು ಸೆಲೆಬ್ರೆಟ್ ಮಾಡುತ್ತಿದ್ದೇವೆ. ಅಪ್ಪು ಜೀವನ, ಅಪ್ಪು ಸಿನಿಮಾ, ಅಪ್ಪು ಸೋಶಿಯಲ್ ಸರ್ವೀಸ್, ಅಪ್ಪು ಸಿದ್ದಾಂತ ಎಲ್ಲವೂ ಇದ್ದಂತಹ ವ್ಯಕ್ತಿತ್ವ. ಅವರ ಸಂಸ್ಕಾರವನ್ನು ಮರೆಯೋಕೆ ಆಗಿಲ್ಲ. ಅಪ್ಪು ನನಗೆ ತುಂಬಾನೇ ಸ್ಪೆಷಲ್." ಎಂದು ಭಾವುಕರಾಗಿದ್ದರು.

ಪುನೀತ್ ನೆನೆದು ಸುಮಲತಾ ಎಮೋಷನಲ್
"ಅಪ್ಪು ನಾನು ನೋಡಿದಾಗ 5 ವರ್ಷ. ನನ್ನ ಮೊದಲನೇ ಸಿನಿಮಾ ಡಾ.ರಾಜ್‌ಕುಮಾರ್ ಜೊತೆಯಲ್ಲಿ ನಟಿಸಿದ್ದೆ. ಕನ್ನಡ ಚಿತ್ರರಂಗಕ್ಕೆ ನನ್ನನ್ನು ಪರಿಚಯ ಮಾಡಿದ್ದು ಡಾ.ರಾಜ್ ಅವರು. ಪಾರ್ವತಮ್ಮ ಅವರು. ಅಪ್ಪು ನನ್ನನ್ನು ತುಂಬಾ ತುಂಬಾ ಚಿಕ್ಕ ವಯಸ್ಸಿನಲ್ಲಿ ಪ್ರೀತಿಸುತ್ತಿದ್ದ. ಈಗ ಅಪ್ಪು ಲೈಫ್ ಅನ್ನು ಸೆಲೆಬ್ರೆಟ್ ಮಾಡೋಣ. 'ಗಂಧದ ಗುಡಿ' ಅಪ್ಪು ಡೈಮೆನ್ಷನ್ಸ್‌ಗೆ ಸಾಕ್ಷ್ಮಿ. ಪರಿಸರ ಪ್ರೇಮಿ ಅಪ್ಪು ಅನ್ನೋದು ಯಾರಿಗೂ ಗೊತ್ತಿರಲಿಲ್ಲ." ಎಂದಿದ್ದಾರೆ ಸುಮಲತಾ.

ಇದು ಮಹಾಸಂಗಮ
" ಇದು ಒಂದು ಸಂಭ್ರಮ ಅಲ್ಲ. ಇದು ಒಂದು ಮಹಾಸಂಗಮ. ಮನುಷ್ಯ ಸಂಪಾದನೆ ಮಾಡಬೇಕಿರೋದು ಇದನ್ನೇ. ನಾವೆಲ್ಲರೂ ಅಪ್ಪುಗೋಸ್ಕರ ಸೇರಿದ್ದೇವೆ ಅಂದರೆ, ಅಪ್ಪು ಮೇಲಿನ ಪ್ರೀತಿಯಿಂದ. ರಾಜ್‌ಕುಮಾರ್ ಮೇಲಿನ ಪ್ರೀತಿಯಿಂದ ನಾನು ಕಲಾವಿದನಾದೆ. ವೀರಾಸ್ವಾಮಿಯವರ ಅಪ್ಪುಗೆಯಿಂದ ನಾನೊಬ್ಬ ನಿರ್ದೇಶಕನಾದೆ. ಅಪ್ಪು ಅಪ್ಪುಗೆಯಿಂದ ಅದೃಷ್ಟನಾದೆ. ಇವತ್ತು ಏನಾದರೂ ಪಟ್ಟ ಇದ್ದರೆ ಅದು ಅವರ ಗೆಲುವಿನಿಂದ. "

'ಗಂಧದ ಗುಡಿ' ಅಂದರೆ ಅಣ್ಣಾವ್ರ ಕುಟುಂಬ
"ಗಂಧದ ಗುಡಿ ಅಂದರೆ ಕರ್ನಾಟಕ. ಗಂಧದ ಗುಡಿ ಅಂದರೆ ರಾಜ್‌ಕುಮಾರ್, ಗಂಧದ ಗುಡಿ ಅಂದರೆ ಶಿವರಾಜ್‌ಕುಮಾರ್, ಗಂಧದ ಗುಡಿ ಅಂದರೆ ಪುನೀತ್ ರಾಜ್‌ಕುಮಾರ್, ಗಂಧದ ಗುಡಿ ಅಂದರೆ ರಾಘವೇಂದ್ರ ರಾಜ್‌ಕುಮಾರ್. ಗಂಧದ ಗುಡಿ ಅಂದರೆ, ನಮ್ಮ ಗರ್ವ, ನಮ್ಮ ಸಂಪತ್ತು. ನಮ್ಮ ಖುಷಿ, ಯಾರು ಮರೆಯುವುದಕ್ಕೆ ಆಗುತ್ತೆ. ಇವತ್ತು ಗಂಧದ ಗುಡಿ ಇಡೀ ಪ್ರಪಂಚ ತಿರುಗಿ ನೋಡುತ್ತೆ ನಮ್ಮ ಕಡೆ. ಯಾರು ಬೇಕಾದರೂ ಹೀರೊ ಆಗಬಹುದು ಆದರೆ, ಒಬ್ಬ ಮನುಷ್ಯ ಆಗುವುದು ಮುಖ್ಯ. ಅದನ್ನು ಪುನೀತ್ ಅವರಲ್ಲಿ ನೋಡಬಹುದು." ಎಂದು ರವಿಚಂದ್ರನ್ ಹೇಳಿದ್ದಾರೆ.


Click it and Unblock the Notifications











