"ದ್ವಾರಕೀಶ್ ತೆರೆ ಹಿಂದಿನ ರಸಿಕರು.. ನಾನು ತೆರೆಮೇಲೆ ರಸಿಕ ಅಷ್ಟೇ"; ಕ್ರೇಜಿಸ್ಟಾರ್ ರವಿಚಂದ್ರನ್
ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೂ ಕ್ರೇಜಿಸ್ಟಾರ್ ರವಿಚಂದ್ರನ್ ಕುಟುಂಬ ಹಳೇ ನಂಟು. ದ್ವಾರಕೀಶ್ ಹಾಗೂ ರವಿಚಂದ್ರನ್ ತಂದೆ ವೀರಸ್ವಾಮಿ ಇಬ್ಬರಿಗೂ ಒಂದೊಳ್ಳೆ ಒಡನಾಟವಿತ್ತು. ಆರಂಭದ ದಿನಗಳಲ್ಲಿ ದ್ವಾರಕೀಶ್ ಅವರಿಗೆ ಸಿನಿಮಾ ವಿತರಣೆ ಹಾಗೂ ನಿರ್ಮಾಣದ ವಿಚಾರದಲ್ಲಿ ವೀರಸ್ವಾಮಿ ನೆರವಾಗಿದ್ದರು. ಈ ವಿಷಯವನ್ನು ದ್ವಾರಕೀಶ್ ಬದುಕಿದ್ದಾಲೇ ಹೇಳಿಕೊಂಡಿದ್ದರು.
ದ್ವಾರಕೀಶ್ ಸಿನಿಮಾ ನಿರ್ಮಾಣಕ್ಕೆ ಇಳಿದಾಗ ವೀರಸ್ವಾಮಿ ನೆರವಿಗೆ ಬಂದಿದ್ದರು. ಹಾಗೇ ದ್ವಾರಕೀಶ್ ಹೀರೊ ಆಗಿ ಸಿನಿಮಾದಲ್ಲಿ ನಟಿಸುವುದಕ್ಕೆ ನಿರ್ಧರಿಸಿದಾಗಲೂ ಕೈ ಹಿಡಿದಿದ್ದು ವೀರಸ್ವಾಮಿಯವರೇ. ಹೀಗಾಗಿ ಸಿನಿಮಾಗೆ ಸಂಬಂಧಿಸಿದಂತೆ ಇವರಲ್ಲಿ ಒಂದೊಳ್ಳೆ ಬಾಂಧವ್ಯವಿತ್ತು. ಈ ಮಾತನ್ನು ಸ್ವತ: ರವಿಚಂದ್ರನ್ ಅವರೇ ದ್ವಾರಕೀಶ್ ಅವರ ಅಂತಿಮ ದರ್ಶನಕ್ಕೆ ಬಂದಾಗ ಹೇಳಿಕೊಂಡಿದ್ದಾರೆ.

ದ್ವಾರಕೀಶ್ ಅಂತ ನಗು. ಇಷ್ಟು ನಮ್ಮೆಲ್ಲರನ್ನು ನಗಿಸಿದ್ದಾರೆ. ಅವರು ಸೋತಿಲ್ಲ. ಅವರ ಪಾಡಿಗೆ ಅವರು ಆರಾಮಗಿದ್ದರು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ದ್ವಾರಕೀಶ್ ತೆರೆ ಹಿಂದಿನ ರಸಿಕ. ನಾನು ತೆರೆಮೇಲಿನ ರಸಿಕ ಅಂತ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ. ದ್ವಾರಕೀಶ್ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ದ್ವಾರಕೀಶ್ ಇದ್ದ ಎತ್ತರಕ್ಕೂ ಅವರು ಕನಸು ಕಾಣುವ ಎತ್ತರಕ್ಕೂ ಹೋಲಿಕೆನೇ ಇರುತ್ತಿರಲಿಲ್ಲ ಎಂದು ರವಿಚಂದ್ರನ್ ಹೇಳಿದ್ದಾರೆ. "ಕರ್ನಾಟಕದ ಮ್ಯಾಪ್‌ನಲ್ಲಿ ಹುಲಿ ಘರ್ಜಿಸುವುದು ಇವರೇ. ಅವರು ಇದ್ದಿದ್ದು ಇಷ್ಟೇ. ಆದರೆ ಅವರ ಕನಸು ಮಾತ್ರ ಎತ್ತರಕ್ಕಿತ್ತು. ಇವತ್ತು ಬಂದು ಅವರನ್ನು ನೋಡಿದ್ದಾಗ ಆರಾಮಾಗಿ ಮಲಗಿದ್ದಾರೆ ಅಂತ ಅನಿಸಿತ್ತು. ಕನಸು ಕಾಣುವುದನ್ನು ಹೇಳಿಕೊಟ್ಟ ವ್ಯಕ್ತಿ ಅವರು. ಇವತ್ತು ಅವರು ಕನ್ನಡ ಚಿತ್ರರಂಗದ ಬಹು ಮುಖ್ಯ ಅಂಗ." ಎಂದು ರವಿಚಂದ್ರನ್ ಹೇಳಿದ್ದಾರೆ.
ಹಾಗೇ ತನಗಿಂತ ಮೊದಲೇ ದ್ವಾರಕೀಶ್ ಕನಸು ಕಂಡವರು. ಸಿನಿಮಾ ಬಿಟ್ಟು ಬೇರೆ ಏನನ್ನೂ ಯೋಚನೆ ಮಾಡಲೇ ಇಲ್ಲ ಎಂದಿದ್ದಾರೆ. "ನಮಗಿಂತ ಮುಂಚೆ ಕನಸು ಕಂಡವರು ಅವರು. ನಾವೆಲ್ಲ ಆ ಮೇಲೆ ಬಂದಿದ್ದು. ನಮಗೆ, ನಮ್ಮ ಕುಟುಂಬಕ್ಕೆ ಈಶ್ವರಿ ಸಂಸ್ಥೆಗೆ ತುಂಬಾನೇ ಒಡನಾಟವಿದೆ. ಅವರ ಮಕ್ಕಳ ಹಾಗೆ ನಾನು. ಅವರು ನನ್ನನ್ನು ಯಾವಾಗಲೂ ಎನ್ನಮ್ಮ ರವಿ ಅಂತ ಕರೆಯೋರು. ಈತರ ಯಾರೂ ಕರೆಯುತ್ತಿರಲಿಲ್ಲ. ಈಗ ಆ ಮಾತು ಇಲ್ಲ ಅಷ್ಟೇ." ಎಂದು ರವಿಚಂದ್ರನ್ ಹೇಳಿದ್ದಾರೆ.

ದ್ವಾರಕೀಶ್ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ 'ಕುಳ್ಳ ಏಜೆಂಟ್ 000' ಸಿನಿಮಾ ವಿತರಣೆಯನ್ನು ಈಶ್ವರಿ ಸಂಸ್ಥೆನೇ ಮಾಡಿತ್ತಂತೆ. ಅದನ್ನೂ ನೆನಪಿಸಿಕೊಂಡಿದ್ದಾರೆ. "ಅವರು ಮೊದಲು ಹೀರೊ ಆಗಿ ಮಾಡಿದ ಸಿನಿಮಾ ಕುಳ್ಳ ಏಜೆಂಟ್ 000 ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡಿದ್ದೇ ಈಶ್ವರಿ ಸಂಸ್ಥೆ. ನಮ್ಮ ತಂದೆಗೂ ಅವರಿಗೂ ತುಂಬಾನೇ ಒಡನಾಟವಿತ್ತು. ಆಮೇಲೆ ಹಂಗಂಗೆ ಶಿಫ್ಟ್ ಆಗಿಕೊಂಡು ಓಡಾಡಿಕೊಂಡಿದ್ದ ದಿನಗಳು ನಿಮಗೆ ಗೊತ್ತಲ್ಲ. ಆದರೆ, ಎಲ್ಲೂ ನಮಗೆ ಅವರಿಗೆ ಆ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ನನ್ನ ದೇಹದಲ್ಲಿ ಒಂದು ಭಾಗ ಅವರೆಲ್ಲ ಅಂಟಿಕೊಂಡಿದ್ದಾರೆ. ತುಂಬಾ ಜನ ಹೀಗೆ ಅಂಟಿಕೊಂಡಿದ್ದಾರೆ. ಅದರಲ್ಲಿ ಇವರೂ ಒಂದು ಭಾಗ ಅಷ್ಟೇ." ಎಂದಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾವೊಂದಕ್ಕೆ ದ್ವಾರಕೀಶ್ ಆಕ್ಷನ್ ಕಟ್ ಹೇಳಿದ್ದರು. ಅದುವೇ 'ರಸಿಕ'. ರವಿಚಂದ್ರನ್ ಜೊತೆ ಬಾನುಪ್ರಿಯಾ ಹಾಗೂ ಶ್ರುತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಳಿಕ ಇಬ್ಬರಲ್ಲಿ ಹೆಚ್ಚು ಒಡನಾಟ ಇರಲಿಲ್ಲ ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ.
"ರಸಿಕ ಸಿನಿಮಾ ಆದ್ಮೇಲೆ ನನಗೂ ಅವರಿಗೂ ಜಾಸ್ತಿ ಒಡನಾಟವಿರಲಿಲ್ಲ. ನನ್ನನ್ನು ಇಟ್ಟುಕೊಂಡು ಒಂದು ಸಿನಿಮಾ ಡೈರೆಕ್ಷನ್ ಮಾಡಿದರು. ಅವರು ಪರದೆ ಹಿಂದೆ ರಸಿಕರು. ನಾನು ಪರದೆ ಮೇಲೆ ರಸಿಕ. ನೋಡಿ ದ್ವಾರಕೀಶ್ ಅಂತ ಕೂಡಲೇ ನಗು ಹುಟ್ಟಿಕೊಳ್ಳುತ್ತೆ. ಅವರು ಎಲ್ಲರನ್ನೂ ನಗಿಸಿದ್ದಾರೆ." ಎಂದು ಕ್ರೇಜಿಸ್ಟಾರ್ ಹೇಳಿದ್ದಾರೆ.


Click it and Unblock the Notifications











