20 ಹಾಡು.. 150 ದಿನ ಶೂಟಿಂಗ್.. ಏನಾಯ್ತು ಪ್ರೇಮಲೋಕ 2? ಟೈಟಲ್ ಬಗ್ಗೆ ರವಿಚಂದ್ರನ್ ಅನುಮಾನ ಮೂಡಿಸಿದ್ದೇಕೆ?
ಕ್ರೇಜಿಸ್ಟಾರ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ ಸಿನಿಮಾ 'ಪ್ರೇಮಲೋಕ'. ರವಿಚಂದ್ರನ್, ಹಂಸಲೇಖ ಜೋಡಿ ಈ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಹಾಡುಗಳಿಂದಲೇ ಮೊದಲು ಪ್ರೇಕ್ಷಕರ ಗಮನ ಸೆಳೆದಿತ್ತು. ಕನ್ನಡ ಚಿತ್ರರಂಗ ಅಂದಿನ ಕಾಲಕ್ಕೆ ಮಾಡರ್ನ್ ಪ್ರೇಮ ಹೇಳಿಕೊಟ್ಟ ಸಿನಿಮಾವಿದೆ. ಈಗ ಮತ್ತೆ ಪ್ರೇಮಲೋಕ ಮೀರಿಸುವಂತಹ ಸಿನಿಮಾ ಮಾಡುವುಕ್ಕೆ ಹೊರಟಿದ್ದಾರೆ.
ಇತ್ತೀಚೆಗೆ ಕ್ರೇಜಿಸ್ಟಾರ್ ಒಂದಿಷ್ಟು ಎಕ್ಸ್‌ಪೆರಿಮೆಂಟ್‌ಗಳನ್ನು ಮಾಡಿದರು. ಆದರೆ, ಆ ಸಿನಿಮಾಗಳು ಅವರ ಕೈ ಹಿಡಿಯಲಿಲ್ಲ. ಹೀಗಾಗಿ ತಮ್ಮ ಮೊದಲ ಪುತ್ರ ಮನೋರಂಜನ್‌ಗಾಗಿ ರವಿಚಂದ್ರನ್ ನಿರ್ದೇಶನಕ್ಕೆ ಇಳಿದಿದ್ದಾರೆ. ಮತ್ತೆ ಲೈಟ್ಸ್, ಕ್ಯಾಮರಾ, ಆಕ್ಷನ್ ಎನ್ನುತ್ತಿದ್ದಾರೆ. ಆರಂಭದಲ್ಲಿ ರವಿಚಂದ್ರನ್ 'ಪ್ರೇಮಲೋಕ' ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ದಷ್ಟೇ. ಆದರೆ, ಮತ್ತೆ ಆ ಸಿನಿಮಾ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ.

ಈಗ 'ಪ್ಯಾರ್' ಅನ್ನೋ ಸಿನಿಮಾದಲ್ಲಿ ನಟಿಸುವುದಕ್ಕೆ ರವಿಚಂದ್ರನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾದ ಪ್ರೆಸ್‌ಮೀಟ್ ವೇಳೆ ರವಿಚಂದ್ರನ್ ತಾವು ನಿರ್ದೇಶಿಸುತ್ತಿರುವ ಸಿನಿಮಾ ಬಗ್ಗೆ ಕೆಲವು ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೆ ಶೇ.70ರಷ್ಟು ಶೂಟಿಂಗ್ ಮುಗಿಸಿದ್ದಾಗಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಇನ್ನು ಏನೇನು ಮಾಹಿತಿ ಹಂಚಿಕೊಂಡಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಮೊದಲ 'ಪ್ಯಾರ್' ಸಿನಿಮಾದ ನಿರ್ದೇಶಕರ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕಾಲು ಎಳೆದಿದ್ದಾರೆ. 40 ವರ್ಷಗಳ ಜರ್ನಿಯಲ್ಲಿ ನನಗೆ ಒಂದು ಹುಡುಗಿಯನ್ನು ತಬ್ಬಿಕೊಳ್ಳೋದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ ಎಂದು ರವಿಚಂದ್ರನ್ ಹೇಳಿದ್ದಾರೆ. "ಫಸ್ಟ್ ಟೈಮ್ ಪ್ಯಾರ್ ಅಂತ ಟೈಟಲ್ ಇಟ್ಬಿಟ್ಟು ಒಂದು ಹುಡುಗಿಯನ್ನು ತಬ್ಬಿಕೊಳ್ಳುವುದು ಹೇಗೆ ಅಂತ ಹೇಳಿಕೊಟ್ಟಿದ್ದು ಸುಪ್ರಿತ್ ಅವರೇ. 40 ವರ್ಷದ ಸರ್ವೀಸ್‌ನಲ್ಲಿ ಒಂದು ಹುಡುಗಿಯನ್ನು ಹೇಗೆ ತಬ್ಬಿಕೊಳ್ಳಬೇಕು ಅಂತ ಹೇಳಿಕೊಟ್ಟ ಡೈರೆಕ್ಟರ್ ಇವರೇ. ಸರ್ ಹೀಗೆ ತಬ್ಬಿಕೊಳ್ಳಬೇಕು. ಹೀಗೆ ನೋಡಬೇಕು. ಇಲ್ನೋಡಿ, ಇಲ್ನೋಡಿ ಅಂತ ಹೇಳಿಕೊಟ್ಟವರು ಇವರೇ." ಎಂದು ತಮಾಷೆ ಮಾಡಿದ್ದಾರೆ.
ಕ್ರೇಜಿಸ್ಟಾರ್ ನಟಿಸುತ್ತಿರುವ ಹೊಸ ಸಿನಿಮಾ 'ಪ್ಯಾರ್'ನಲ್ಲಿ ಇವರನ್ನು ಪ್ರೀತಿ ಮಾಡುವವರೇ ಇಲ್ವಂತೆ. "ರವಿಚಂದ್ರನ್, ರವಿಚಂದ್ರನ್ ರವಿಚಂದ್ರನ್ ಅಂತ ಹೇಳುತ್ತಲೇ ಇದ್ದೀರ. ಆದರೆ, ರವಿಚಂದ್ರನ್ ಅವರನ್ನು ಈ ಸಿನಿಮಾದಲ್ಲಿ ಪ್ಯಾರ್ ಮಾಡೋರೇ ಇಲ್ಲ. ಮಗಳನ್ನು ಕೊಟ್ಟಿದ್ದಾರೆ. ಅವರ ಜೊತೆ ಪ್ಯಾರ್ ಇದೆ. ಬೇರೆ ಪ್ಯಾರ್ ಇಲ್ಲ. ಆ ಪ್ಯಾರ್ ಅನ್ನು ಸಾಯಿಸಿ ಬಿಟ್ಟಿದ್ದಾರೆ ಮುಂಚೇನೆ." ಎಂದು ಕಾಲೆಳೆದಿದ್ದಾರೆ.
ಈ ವೇಳೆ ಕ್ರೇಜಿಸ್ಟಾರ್ ನಿರ್ದೇಶಿಸುವುಕ್ಕೆ ಹೊರಟಿದ್ದ 'ಪ್ರೇಮಲೋಕ 2' ಬಗ್ಗೆನೂ ಪ್ರಶ್ನೆಗಳು ಎದ್ದಿದ್ದವು. ಈ ವೇಳೆ ರವಿಚಂದ್ರನ್ ಸದ್ದಿಲ್ಲದೆ ಶೇ.75ರಷ್ಟು ಶೂಟಿಂಗ್ ಮಾಡಿರುವುದನ್ನು ರಿವೀಲ್ ಮಾಡಿದ್ದಾರೆ. "ಹೇಳಿದಾಗಲೆಲ್ಲ ಏನಾದರೂ ಅಡೆತಡೆಗಳು ಬರುತ್ತಿತ್ತು. ಅದಕ್ಕೆ ಹೇಳದೆ ಮಾಡಿದರೆ ಹೇಗಿರುತ್ತೆ ಅನ್ನೋದಕ್ಕೆ ಒಂದಷ್ಟು ಸಿನಿಮಾ ಮುಗಿಸಿದರೆ ಆಯ್ತು ಅಂದ್ಕೊಂಡೆ. ಅದಕ್ಕೆ ಅಂತ ಒಂದು ಕಾಲ ಬರುತ್ತೆ. ಅದು ಬಂದಾಗ ಹೇಳುತ್ತೇನೆ. ಪಿಕ್ಚರ್ ರೆಡಿ ಅಂದಾಗ ಸ್ಟೇಜ್ ಮೇಲೆ ಬಂದು ಬಿಡೋಣ ಅಂತ ಇದೂವರೆಗೂ ಎಲ್ಲೂ ನಾನು ಅದರ ಬಗ್ಗೆ ಮಾತಾಡಿಲ್ಲ. ಶೇ.70ರಷ್ಟು ಸಿನಿಮಾ ಮುಗಿದಿದೆ. ಇನ್ನು ಶೇ. 30 ರಿಂದ ಶೇ.35ರಷ್ಟು ಬಾಕಿಯಿದೆ ಅಷ್ಟೇ." ಎಂದಿದ್ದಾರೆ.
ಇನ್ನು 'ಪ್ರೇಮಲೋಕ 2' ಟೈಟಲ್ ಇರುತ್ತೋ ಇಲ್ಲವೋ ಅಂತ ಹೇಳುವ ಮೂಲಕ ಮತ್ತಷ್ಟು ಕುತೂಹಲವನ್ನು ಹುಟ್ಟಾಕಿದ್ದಾರೆ. ಇದರಲ್ಲಿ 20 ರಿಂದ 22 ಹಾಡುಗಳು ಇರುತ್ತವೆ ಅನ್ನೋದನ್ನು ಕನ್ಫರ್ಮ್ ಮಾಡಿದ್ದಾರೆ. ಪ್ರೇಮಲೋಕ ಟೈಟಲ್ ಇಲ್ಲದೆ ಇರಬಹುದು. ಆದರೆ, ಅದನ್ನು ಮೀರಿಸುವಂತಹ ಸಿನಿಮಾವನ್ನು ಇಟ್ಟುಕೊಂಡು ಬರುತ್ತಿದ್ದೇವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈಗಾಗಲೇ 150 ದಿನ ಶೂಟಿಂಗ್ ಮಾಡಿ ಆಗಿದೆ. ಇನ್ನೂ 50 ದಿನ ಶೂಟಿಂಗ್ ಇದೆ. ಹಾಡುಗಳು ಬಹಳಷ್ಟು ಇರುವುದರಿಂದ ಟೈಮ್ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.


Click it and Unblock the Notifications











