'ಶಾಂತಿ ಕ್ರಾಂತಿ'ಗಾಗಿ ₹10 ಕೋಟಿ ಕಳೆದುಕೊಂಡಿದ್ದ ಕ್ರೇಜಿಸ್ಟಾರ್; ಇನ್ನೊಂದು ತಿಂಗಳಲ್ಲಿ 'ಪ್ರೇಮಲೋಕ'ಕ್ಕೆ ಮುಹೂರ್ತ
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕನ್ನಡ ಚಿತ್ರರಂಗಕ್ಕೆ ದುಬಾರಿ ಸಿನಿಮಾಗಳನ್ನು ಪರಿಚಯಿಸಿದ್ದೇ ರವಿಚಂದ್ರನ್. ಸಿನಿಮಾಗಳಲ್ಲಿ ಸದಾ ಪ್ರಯೋಗಗಳನ್ನು ಮಾಡುತ್ತಲೇ ಇರೋ ಕ್ರೇಜಿಸ್ಟಾರ್ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ತನಗೆ ಹೆಸರು, ಹಣ ಕೊಟ್ಟ 'ಪ್ರೇಮಲೋಕ' ಮತ್ತೆ ಸೃಷ್ಟಿಸುವುದಕ್ಕೆ ಹೊರಟಿದ್ದಾರೆ. 40 ವರ್ಷಗಳ ಬಳಿಕ ಮತ್ತೆ ಪ್ರೇಮಲೋಕ ಸೃಷ್ಟಿಯಾಗಲಿದೆ.
ಇತ್ತೀಚೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೊಪ್ಪಳದಲ್ಲಿ ನಡೆಯುತ್ತಿರುವ ಕನಕಗಿರಿ ಉತ್ಸವದಲ್ಲಿ ಭಾಗಿಯಾಗಿದ್ದರು. ಅಲ್ಲಿ ಕ್ರೇಜಿಸ್ಟಾರ್ ತಮ್ಮ ಸಿನಿಮಾ ಜರ್ನಿಯನ್ನು ಮತ್ತೆ ಮೆಲುಕು ಹಾಕಿದ್ದಾರೆ. ಶಾಂತಿ ಕ್ರಾಂತಿ ಸಿನಿಮಾದಿಂದ ಎಷ್ಟು ಕಳೆದುಕೊಂಡ್ರು? ಅಂದು ಅವರ ತಂದೆ ವೀರಸ್ವಾಮಿಯವರು ಏನಂದಿದ್ದರು? ಅನ್ನುವುದನ್ನೂ ಹೇಳಿಕೊಂಡಿದ್ದಾರೆ. ಕನಕಗಿರಿ ಉತ್ಸವದ ವೇದಿಕೆ ಮೇಲೆ ಕ್ರೇಜಿಸ್ಟಾರ್ ಮಾತಿನ ಝಲಕ್ ಇಲ್ಲಿದೆ.

"ರಾಜ್‌ಕುಮಾರ್, ವಿಷ್ಣುವರ್ಧನ್ ಮಧ್ಯೆ ಬೆಳೆದು ಬಂದಿದ್ದೇನೆ"
ಚಿತ್ರರಂಗಕ್ಕೆ ಡಾ.ರಾಜ್‌ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರ ಮಧ್ಯದಲ್ಲೇ ಬಂದಿದ್ದೇನೆಂದು ಹೇಳಿದ್ದಾರೆ. "ಈಶ್ವರಿ ಪ್ರೊಡಕ್ಷನ್ಸ್‌ನಿಂದ ಬಂದಿದ್ದೇ ವಿಷ್ಣುವರ್ಧನ್ ಅವರು. ನಮ್ಮ ಅಪ್ಪ ಯಾವಾಗಲೂ ಅವರನ್ನು ದೊಡ್ಡ ಮಗ ಅಂತ ಹೇಳೋರು. ಅಂದರೆ, ನನ್ನ ಅಣ್ಣ ಅವರು. ಚಿತ್ರರಂಗಕ್ಕೆ ನಾನು ಬಂದಿದ್ದು, ಫಸ್ಟ್ ಸೀನ್ ನಾನು ಆಕ್ಟ್ ಮಾಡಿದ್ದು, ರಾಜ್‌ಕುಮಾರ್ ಅವರನ್ನು ಅಪ್ಪ ಅಂತ ಕರೆದೇ ಇಂಡಸ್ಟ್ರಿ ಒಳಗೆ ಬಂದಿದ್ದು. ನಾನು ಏನಾದರೂ ಇಷ್ಟು ದೂರ ಬಂದಿದ್ದರೆ, ನಾನೇನಾದರೂ ಹೆಸರು ಮಾಡಿದ್ದೀನಿ ಸಾಧನೆ ಮಾಡಿದ್ದೀನಿ ಅಂತ ನೀವೇನಾದರೂ ಅಂದುಕೊಂಡರೆ, ಅದು ಇವರುಗಳ ಮಧ್ಯೆ ಬೆಳೆದು, ಕೂತು ಬೆಳೆದುಕೊಂಡು ಬಂದಿರೋನು ನಾನು." ಎಂದು ಹೇಳಿದ್ದಾರೆ.
"ಜೇಬೂ ಖಾಲಿ.. ಹೃದಯನೂ ಖಾಲಿ"
"60 ವರ್ಷದಿಂದ ನಾವು ಸಿನಿಮಾ ಒಂದನ್ನೇ ಮಾಡಿಕೊಂಡು ಬಂದಿರೋದು. ನನಗೆ ಸಿನಿಮಾವೊಂದೇ ಗೊತ್ತಿರೋದು. ಜೇಬು ತುಂಬಿಸಿಕೊಳ್ಳಬೇಕು ಅಂತ ಸಿನಿಮಾ ಮಾಡೇ ಇಲ್ಲ ನಾನು. ಇವತ್ತು ಜೇಬು ಖಾಲಿ.. ಹೃದಯನೂ ಖಾಲಿ. ಯಾಕಂದ್ರೆ, ಮತ್ತೆ ಪ್ರೀತಿ ತುಂಬಿಸಿಕೊಳ್ಳುತ್ತಲೇ ಇರುತ್ತೇನೆ. ಮೊದಲು ಪ್ರೇಮಲೋಕ ಮಾಡ್ತೀನಿ ಅಂದಾಗ ಅಕ್ಕ ಪಕ್ಕದವರು ನಕ್ಕಿಬಿಟ್ಟರು. ಯಾಕಂದ್ರೆ, 11 ಹಾಡು ಇದೆ ಅಂದೆ. ಮುಚ್ಕೊಂಡು ಮನೆಗೆ ಹೋಗು ಅಂದ್ರು. ಆದರೆ ನಮ್ಮ ಅಪ್ಪ ನನ್ನನ್ನು ನಂಬಿದ್ರು. ಅದೇ ನಂಬಿಕೆ ನನ್ನನ್ನು ಇಷ್ಟು ದೂರ ಕರೆದುಕೊಂಡು ಬಂದಿದೆ." ಎಂದು ರವಿಚಂದ್ರನ್ ಹೇಳಿದ್ದಾರೆ.

"ಶಾಂತಿ ಕ್ರಾಂತಿ ನಿಲ್ಲಿಸಿ ಬಿಡೋಣ ಅಂದೆ"
"ಶಾಂತಿ ಕ್ರಾಂತಿ ಸಿನಿಮಾ ಶುರು ಮಾಡಿ 10 ದಿನ ಆಗಿತ್ತಷ್ಟೆ . ಆಗಲೇ ಗೊತ್ತಾಗಿತ್ತು ನನಗೆ. ಎಲ್ಲೋ ಕೈ ತಪ್ಪುತ್ತಿದೆ. ಯಾಕೋ ಸರಿ ಹೋಗುತ್ತಿಲ್ಲ. ದಾರಿ ತಪ್ಪುತ್ತಿದೆ ಅಂತ ಗೊತ್ತಾಗುತ್ತೆ. ಆ ನಮ್ಮ ಅಪ್ಪನ ಬಳಿ ಹೋಗಿ ಈ ಸಿನಿಮಾ ಬೇಡ ನಿಲ್ಲಿಸಿಬಿಡೋಣ ಅಂತೀನಿ. ಅವರು ಯಾವತ್ತೂ ಜನರಿಗೆ ಮೋಸ ಮಾಡೋದು ಬೇಡ. ನಾಲ್ಕು ಭಾಷೆಯ ಸಿನಿಮಾ ನೀನೆ ಮೊದಲು ಮಾಡುತ್ತಿದ್ದೀಯ. ನಿನ್ನ ನಂಬಿ ರಜನಿಕಾಂತ್ ಡೇಟ್ ಕೊಟ್ಟಿದ್ದಾರೆ. ನಾಗಾರ್ಜುನಾ ಡೇಟ್ ಕೊಟ್ಟಿದ್ದಾರೆ. ಇದು ಈಶ್ವರಿ ಸಂಸ್ಥೆಯ ಪ್ರೆಸ್ಟೀಜ್. ಯಾವುದೇ ಕಾರಣಕ್ಕೂ ನೀನು ಹೆಜ್ಜೆ ಹಿಂದೆ ಹಾಕೋದಿಲ್ಲ ಅಂದರು." ಎಂದು ಆ ದಿನ ತಂದೆ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.
"ಆಗಿನ ಕಾಲಕ್ಕೆ ₹10 ಕೋಟಿ ಕಳೆದುಕೊಂಡೆ"
"90ರ ದಶಕದಲ್ಲಿ ಅವತ್ತಿಗೆ ಶಾಂತಿ ಕ್ರಾಂತಿ ಸಿನಿಮಾಗೆ 10 ಕೋಟಿ ರೂಪಾಯಿ ಕಳೀತಿನಿ. ಸಿನಿಮಾ ರೆಡಿಯಾದಾಗ ನಾನು ನಮ್ಮ ಅಪ್ಪನಿಗೆ ಸಿನಿಮಾ ತೋರಿಸಿದ್ದೆ. ಆಗ ಅವರು ಆಸ್ಪತ್ರೆಯ ಬೆಡ್ ಮೇಲೆ ಇದ್ದರು. ಆಗ ಸ್ಟ್ರೆಚರ್‌ನಲ್ಲೇ ಅವರನ್ನು ಕರೆದುಕೊಂಡು ಹೋಗಿ ಸಿನಿಮಾ ತೋರಿಸಿದ್ದೆ. ಆಗ ನಿನ್ನ ತಪ್ಪು ನಿನಗೆ ಗೊತ್ತಾದರೆ ಸಾಕು. ಮುಂದೆ ಬೆಳೆಯುತ್ತೀಯಾ ಎಂದರು. ಆದರೆ, ಶಾಂತಿ ಕ್ರಾಂತಿ ಸೋಲಿನ ಕೊರಗಲ್ಲಿ ನಮ್ಮ ಅಪ್ಪ ತೀರಿಕೊಳ್ಳುವುದು ಇಷ್ಟವಿರಲಿಲ್ಲ. ನನ್ನ ಗೆಲುವನ್ನು ತೋರಿಸಿ ಕಳಿಸಿಕೊಡಬೇಕು ಅಂತ ರಾಮಚಾರಿ ಸಿನಿಮಾ ಮಾಡಿದೆ." ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿಕೊಂಡಿದ್ದಾರೆ.
"ಮತ್ತೆ ಪ್ರೇಮಲೋಕಕ್ಕೆ ಮುಹೂರ್ತ ಫಿಕ್ಸ್"
"ಈ ಮೇ 30ಕ್ಕೆ ಪ್ರೇಮಲೋಕ ಶುರು ಮಾಡಿದೆ. ನನ್ನ ದೊಡ್ಡ ಮಗ ಮನೋರಂಜನ್ ಆಕ್ಟ್ ಮಾಡುತ್ತಾನೆ. ಚಿಕ್ಕ ಮಗ ಒಂದು ಚಿಕ್ಕ ಪಾತ್ರ ಮಾಡುತ್ತಾನೆ. ನಾನು ಅಪ್ಪನ ಪಾತ್ರ ಮಾಡುತ್ತೇನೆ. ಬರೀ 20 ರಿಂದ 25 ಹಾಡು ಇರುತ್ತೆ ಅಷ್ಟೇ. ಆದರೆ, ಇಡೀ ಸಿನಿಮಾದಲ್ಲಿ ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡವರವರೆಗೂ ತಾಳ ಹಾಕುತ್ತಾರೆ. ಇದು ನಾನು ಕೊಡುವ ಮಾತು. ಪ್ರೀತಿ ಮೆಲುಕು ಹಾಕುತ್ತಾ ಹೋಗುತ್ತೀರ." ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಸಿಹಿ ಸುದ್ದಿ ಕೊಟ್ಟಿದ್ದಾರೆ.


Click it and Unblock the Notifications











