17ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇಕ್ ತಂದ ತಂದ ಮಗ: ಪತ್ನಿ ಸ್ಪಂದನಾ ನೆನೆದು ವಿಜಯ್ ಭಾವುಕ
ಸ್ಯಾಂಡಲ್‌ವುಡ್‌ನ ಚಿನ್ನಾರಿ ಪುತ್ರ ವಿಜಯ್ ರಾಘವೇಂದ್ರಗೆ ಇಂದು (ಆಗಸ್ಟ್ 26) 17ನೇ ವಿವಾಹವಾರ್ಷಿಕೋತ್ಸವ. ಈ ಕಾರಣಕ್ಕೆ ಅವರ ಆಪ್ತರು ವಿಜಯ್ ರಾಘವೇಂದ್ರ ಅವರ ವಿಶೇಷ ಸಂದರ್ಶನ ಮಾಡಿದ್ದಾರೆ. ಈ ವೇಳೆ ಪುತ್ರ ಶೌರ್ಯ ಕೂಡ ಅಪ್ಪನಿಗೆ ಕೇಕ್ ತಂದು ಸರ್ಪ್ರೈಸ್ ಕೊಟ್ಟಿದ್ದಾನೆ.
ವಿಜಯ್ ರಾಘವೇಂದ್ರ 2007, ಆಗಸ್ಟ್ 26ರಂದು ಸ್ಪಂದನಾ ಅವರನ್ನು ವಿವಾಹವಾಗಿದ್ದರು. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇದ್ದಿದ್ದರೆ, ಇಂದು ಅವರೊಂದಿಗೆ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೂ, ಅವರ ನೆನಪಿನಲ್ಲಿ ವೆಡ್ಡಿಂಗ್ ಆನಿವರ್ಸರಿ ಸಂಭ್ರಮ ವಿಶಿಷ್ಠವಾಗಿ ನಡೆದಿದೆ.

ಅಗಲಿದ ಪತ್ನಿ ಸ್ಪಂದನಾ ನೆನೆದು ವಿಜಯ್ ರಾಘವೇಂದ್ರ ಭಾವುಕರಾಗಿದ್ದಾರೆ. ಅದರಲ್ಲೂ ಪುತ್ರ ಶೌರ್ಯ ಕೇಕ್ ತಂದು ಸರ್ಪ್ರೈಸ್ ಕೊಟ್ಟಾಗ ವಿಜಯ್ ರಾಘವೇಂದ್ರ ಭಾವುಕರಾಗಿದ್ದರು. ಆದರೆ, ದು:ಖವನ್ನು ತಡೆದುಕೊಂಡು ತಮ್ಮ ಹಾಗೂ ಸ್ಪಂದನಾ ಅವರ ಲವ್ ಸ್ಟೋರಿಯನ್ನು ಕ್ಯಾಮರಾ ಮುಂದೆ ರಿವೀಲ್ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ಸ್ಪಂದನಾ ನೋಡಿ ಅಳಬೇಕು ಅನಿಸಲ್ಲ"
"ಏನೇ ಅವಳ ಮುಖ ನೋಡಿದರೆ, ಅಳಬೇಕು ಅಂತ ಅನಿಸುವುದಿಲ್ಲ. ಸ್ಪಂದನಾ ಅಂತಹದ್ದೊಂದು ಎನರ್ಜಿ. ಅವಳಿಗೂ ಅಷ್ಟೇ ಮಾತಾಡು ಅಂದರೆ, ಹೆಚ್ಚು ಬರುವುದಿಲ್ಲ. ಶೌರ್ಯನೂ ಅಷ್ಟೇ ಅವರ ಅಮ್ಮನ ಹಾಗೆ ಮಿತಭಾಷಿ. ಮೌನದಲ್ಲೇ ಸಾಕಷ್ಟು ಹೇಳುವಂತಹ ವ್ಯಕ್ತಿತ್ವ ಸ್ಪಂದನಾದ್ದು. ನನಗೆ ಸ್ಪಂದನಾ ನೋಡಿ ಇಷ್ಟ ಆದ ಮೊದಲ ವಿಚಾರನೇ ಅದು" ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
ಕಾಫಿ ಡೇನಲ್ಲಿ ಮೊದಲ ನೋಟ
"2004ರಲ್ಲಿ ಮೊದಲ ಬಾರಿಗೆ ಮಲ್ಲೇಶ್ವರಂ ಕಾಫಿ ಡೇನಲ್ಲಿ ನೋಡುತ್ತೇನೆ. ನಾವೆಲ್ಲರೂ ರಿಷಿ ಸಿನಿಮಾದ ಕಥೆ ಮಾಡುತ್ತಿದ್ವಿ. ಕಾಫಿ ಡೇ ಸುಮ್ಮನೆ ಕಾಫಿ ಕುಡಿಯುವ ಜಾಗ ಆಗಿರುತ್ತಿರಲಿಲ್ಲ. ನಮಗೆ ಅದು ಕೆಲಸ ಮಾಡುವ ಜಾಗ. ಅಲ್ಲಿ ಕೂತು ಸ್ಕ್ರಿಪ್ಟ್ ಮಾಡುತ್ತಿದ್ವಿ. ಅಲ್ಲೊಂದು ಜ್ಯೂಕ್ ಬಾಕ್ಸ್ ಅಂತ ಇತ್ತು. ದುಡ್ಡು ಕೊಟ್ಟು ಮ್ಯೂಸಿಕ್ ಕೇಳಿದ್ವಿ ಅವಾಗ. ಆಗ ಅಲ್ಲಿಗೆ ಸ್ಪಂದನಾ ಹಾಗೂ ಅವರ ಸ್ನೇಹಿತರು ಬಂದಿದ್ದರು. ಅರೇ ಯಾರಿದು, ಇಷ್ಟು ಮುದ್ದಾಗಿದ್ದಾರಲ್ಲ ಅಂತ ಅನಿಸಿತ್ತು. ಇವರು ನಾನ್ಸೆನ್ಸ್ ವ್ಯಕ್ತಿ ಅಲ್ಲ ಅಂತ ಗೊತ್ತಾಯ್ತು." ಎಂದು ವಿಜಯ್ ರಾಘವೇಂದ್ರ ಪತ್ನಿಯ ಮೊದಲ ನೋಟದ ಬಗ್ಗೆ ಹೇಳಿಕೊಂಡಿದ್ದಾರೆ.

ಶೇಷಾದ್ರಿಪುರಂ ಕಾಫಿ ಡೇನಲ್ಲಿ ಭೇಟಿ
"ನಾವು ಸ್ಕ್ರಿಪ್ಟ್ ಮಾಡುತ್ತಿದ್ವಿ. ಅದಕ್ಕೆ ಹೋಗಿ ಸೌಂಡ್ ಸ್ಪಲ್ಪ ಕಡಿಮೆ ಮಾಡಿ ಅಂದು ರಿಕ್ವೆಸ್ಟ್ ಮಾಡಿದ್ವಿ. ಇವರು ಹೋಗಿ ನಾವು ದುಡ್ಡು ಕೊಟ್ಟು ಮ್ಯೂಸಿಕ್ ಹಾಕಿಸಿಕೊಂಡಿದ್ದೀವಿ ಅಂತ ಇವರು ಜಗಳ ಆಡಿದ್ದಾರೆ. ನಮ್ಮನ್ನು ನೋಡಿದ್ದಾರೆ. ಸಿನಿಮಾದವರಿಗೆ ನ್ಯಾವ್ಯಾಕೆ ಹಂಗೆ ಹಿಂಗೆ ಅಂತ ಅವರು. ಅಲ್ಲಿಗೆ ಮುಗಿದು ಹೋಗಿತ್ತು. 2006ನಲ್ಲಿ ಶೇಷಾದ್ರಿಪುರಂ ಕಾಫಿ ಡೇನಲ್ಲಿ. ಏನಕ್ಕೋ ತಿರುಗಿ ನೋಡಿದೆ. ಶೇಷಾದ್ರಿಪುರಂ ಕಾಫಿ ಡೇನಲ್ಲೂ ಇವರೆ ಬರ್ತಾರೆ. ನಾನು ಇವರೆ ಅಲ್ವಾ ನೋಡಿದ್ದು ಅಂತ. ಆ ಮುಖವನ್ನು ಮರೆಯುವುದಕ್ಕೆ ಆಗುವುದಿಲ್ಲ. ಅಂತಹ ಮುಖ ಅದು." ಎಂದು ಎರಡನೇ ಭೇಟಿಯನ್ನು ನೆನೆದಿದ್ದಾರೆ.
ಮೊದಲ ಮಾತೇನು?
ಅದೇ ಕಾಫಿ ಡೇನಲ್ಲಿ ಅಂದು ಕದ್ದು ಮುಚ್ಚಿ ಸ್ಪಂದನಾರನ್ನು ನೋಡಿದ್ದರು. ಹೇಗಾದರೂ ಮಾಡಿ ಮಾತಾಡಿಸಲೇ ಬೇಕು ಅಂತ ಸ್ನೇಹಿತರನ್ನು ಆಚೆ ಕಳಿಸಿ ಸ್ಪಂದನಾ ಮುಂದೆ ಇಂಗ್ಲಿಷ್‌ನಲ್ಲಿ ನಿಮ್ಮನ್ನು ಮಲ್ಲೇಶ್ವರಂ ಕಾಫಿ ಡೇನಲ್ಲಿ ಹಲವು ಬಾರಿ ನೋಡಿದ್ದೇನೆ ಎಂದು ಹೇಳಿ ಅಲ್ಲಿಂದ ಹೊರಟಿದ್ದರು. ಅದು ಹೇಗೆ ಹೇಳಿದೆ ಅನ್ನೋದು ಇನ್ನೂ ಗೊತ್ತಿಲ್ಲ ಎಂದು ವಿಜಯ್ ರಾಘವೇಂದ್ರ ರೀಕಾಲ್ ಮಾಡಿಕೊಂಡಿದ್ದಾರೆ.
"ಸ್ಪಂದನಾ ನನಗೆ ಶಕ್ತಿ"
"ನಾನೊಂದು ಭ್ರಮೆಯಲ್ಲಿದ್ದೆ. ನಾನು ಕಾಪಾಡಿಕೊಳ್ಳುತ್ತಿದ್ದೇನೆ. ನಾನು ನೋಡಿಕೊಳ್ಳುತ್ತಿದ್ದೇನೆ ಅಂತಿದ್ದೆ. ಆದರೆ, ನನ್ನನ್ನು ನೋಡಿಕೊಳ್ಳುತ್ತಾ ಇದ್ದಿದ್ದು ಅವಳು. ನನಗೆ ಶಕ್ತಿಯಾಗಿ ಇದ್ದಿದ್ದು ಅವಳು. ಧೈರ್ಯ, ನಗು ಎಲ್ಲವೂ ತುಂಬಾ ಇದೆ." ಎಂದು ಪತ್ನಿ ಸ್ಪಂದನಾ ಬಗ್ಗೆ ವಿಜಯ್ ರಾಘವೇಂದ್ರ ಭಾವುಕರಾಗಿ ಮಾತಾಡಿದ್ದಾರೆ.


Click it and Unblock the Notifications











