ಗೋವಾ 54ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಗ್ರೇ ಗೇಮ್ಸ್': ರೆಡ್ ಕಾರ್ಪೆಟ್ ಗಾಲ ಪ್ರೀಮಿಯರ್‌ನಲ್ಲಿ ಕನ್ನಡ ಸಿನಿಮಾ
ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ ಗೋವಾದಲ್ಲಿ ಆರಂಭ ಆಗಿದೆ. ಈ ಚಲನ ಚಿತ್ರೋತ್ಸವದಲ್ಲಿ ಸಿನಿಮಾಗಳನ್ನು ಪ್ರದರ್ಶನ ಮಾಡುವುದಕ್ಕೆಂದು ಸಿನಿಮಾ ತಂಡ ತುದಿಗಾಲಲ್ಲಿ ನಿಂತಿರುತ್ತೆ. ದೇಶದ ಮೂಲೆ ಮೂಲೆಯಲ್ಲಿರುವ ಸಿನಿಮಾಗಳು ಇಲ್ಲಿ ಪ್ರದರ್ಶನ ಕಾಣುತ್ತವೆ.
ಗೋವಾ ಸರ್ಕಾರ, ಎಂಟರ್‌ಟೈನ್‍ಮೆಂಟ್ ಸೊಸೈಟಿ ಆಫ್ ಗೋವಾ ಮತ್ತು ಎನ್.ಎಫ್.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು (IFFI) ಆಯೋಜಿಸಿದೆ. ಈ ಚಿತ್ರೋತ್ಸವದಲ್ಲಿ ಕನ್ನಡದ 'ದಿ ಗ್ರೇ ಗೇಮ್ಸ್' ಸಿನಿಮಾ ಕೂಡ ಆಯ್ಕೆಯಾಗಿದೆ.

'ದಿ ಗ್ರೇ ಗೇಮ್ಸ್' ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಭಾವನಾ ರಾವ್, ಶ್ರುತಿ ಪ್ರಕಾಶ್, ಅಪರ್ಣ ವಸ್ತಾರೆ, ಜೈ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಈ ಸಿನಿಮಾವನ್ನು ರಾಜ್ಯ ಪ್ರಶಸ್ತಿ ಗೆದ್ದಿರೋ ನಿರ್ದೇಶಕ ಗಂಗಾಧರ್ ಸಾಲಿಮಠ್ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ 'ಗ್ರೇ ಗೇಮ್ಸ್' ಸಿನಿಮಾ ಗೋವಾದ ಅಂತಾರಾಷ್ಟ್ರೀಯ ಚಿತ್ರೋತ್ಸವದ 'ರೆಡ್ ಕಾರ್ಪೆಟ್ ಗಾಲ ಪ್ರೀಮಿಯರ್'ನಲ್ಲಿ ಮೊದಲ ಪ್ರದರ್ಶನ ಕಾಣುತ್ತಿದೆ.
'ರೆಡ್ ಕಾರ್ಪೆಟ್ ಗಾಲ ಪ್ರೀಮಿಯರ್'ನಲ್ಲಿ ಭಾರತದ ಹಲವು ರಾಜ್ಯಗಳಲ್ಲಿ, ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಸಿನಿಮಾಗಳು ಪ್ರದರ್ಶನ ಕಾಣುತ್ತವೆ. ಈ ಎಲ್ಲಾ ಸಿನಿಮಾಗಳ ಜೊತೆ ಕನ್ನಡದ 'ಗ್ರೇ ಗೇಮ್ಸ್' ಕೂಡ ರಿಲೀಸ್ ಆಗುತ್ತಿದೆ. ಮೆಟಾವರ್ಸ್ ಮತ್ತು ಆನ್‍ಲೈನ್ ಗೇಮಿಂಗ್ ವೈಷಮ್ಯದ ಹಿನ್ನೆಲೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.
'ಗ್ರೇ ಗೇಮ್ಸ್' ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಭಾವನಾ ರಾವ್ ಪೊಲೀಸ್ ಅಧಿಕಾರಿಯಾಗಿ, ಶ್ರುತಿ ಪ್ರಕಾಶ್ ಒಬ್ಬ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ ಜೈ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಹಲವು ರೋಚಕ ತಿರುವುಗಳು ಹಾಗೂ ಅಷ್ಟೇ ಭಾವನಾತ್ಮಕವಾಗಿ ಮೂಡಿಬಂದಿರೋದಾಗಿ ಚಿತ್ರತಂಡ ಹೇಳಿಕೊಂಡಿದೆ.
'ಗ್ರೇ ಗೇಮ್ಸ್' ಸಿನಿಮಾ ನಿರ್ದೇಶಕ ಗಂಗಾಧರ್ ಸಾಲಿಮಠ್ ಗೋವಾ ಚಿತ್ರೋತ್ಸವಕ್ಕೆ ಚಿತ್ರ ಆಯ್ಕೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. "ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಸಿನಿಮಾವಾಗಿದ್ದು, ವರ್ಚ್ಯುಯಲ್ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನದ ಕುರಿತು ಸವಾಲು ಎಸೆಯುವಂತಿದೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಖಂಡಿತಾ ಇದೆ" ಎನ್ನುತ್ತಾರೆ.
ವಿಜಯ್ ರಾಘವೇಂದ್ರ ಮತ್ತೊಂದು ವಿಭಿನ್ನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, 'ಗ್ರೇ ಗೇಮ್ಸ್' ಫೆಬ್ರವರಿ 2024ಕ್ಕೆ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ಫೆಸ್ಟಿವಲ್‌ನಲ್ಲಿ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನು ಚಿತ್ರತಂಡ ಎದುರು ನೋಡುತ್ತಿದೆ.


Click it and Unblock the Notifications











