"ಹೀಗಾಗುತ್ತೆ ಅನ್ನೋದು ಗೊತ್ತಿರಲಿಲ್ಲ, ಮುಂದೇನಾಗುತ್ತೆ ಅನ್ನೋದು ಗೊತ್ತಿಲ್ಲ";2ನೇ ಮದುವೆ ಬಗ್ಗೆ ವಿಜಯ ರಾಘವೇಂದ್ರ ಏನಂದ್ರು?
ಸೋಶಿಯಲ್ ಮೀಡಿಯಾ ಬಂದ್ಮೇಲೆ ಸೆಲೆಬ್ರೆಟಿಗಳಿಗೆ ಪಾಸಿಟಿವ್ ಆಗಿದೆ. ಹಾಗೇ ಇನ್ನೊಂದು ಕಡೆ ನೆಗೆಟಿವ್ ಆಗಿದೆ. ಕೆಲವೊಮ್ಮೆ ಅವರ ಬಗ್ಗೆ ಬಿತ್ತರವಾಗುವ ಸುಳ್ಳು ಸುದ್ದಿಗಳು ಅವರ ನಿದ್ದೆ ಕೆಡಿಸಿದ್ದೂ ಕೂಡ ಇದೆ. ಈಗ ಇಂತಹದ್ದೇ ಮತ್ತೊಂದು ಸಂಗತಿ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಅದನ್ನು ಕಾಳಜಿಯಿಂದ ಹಬ್ಬಿಸುತ್ತಿದ್ದಾರೋ? ಇಲ್ಲ ಬೇಕಂತೇ ಹಬ್ಬಿಸುತ್ತಿದ್ದಾರೋ? ಇಬ್ಬರು ತಾರೆಯರಿಗೂ ಗೊತ್ತಿಲ್ಲ.
ವಿಜಯ ರಾಘವೇಂದ್ರ ಹಾಗೂ ಮೇಘನಾ ರಾಜ್ ಇಬ್ಬರಿಗೂ ಎರಡನೇ ಮದುವೆ. ಇಂತಹದ್ದೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ಆಗುತ್ತಲೇ ಇತ್ತು. ಆದರೆ, ಈ ಬಗ್ಗೆ ವಿಜಯ ರಾಘವೇಂದ್ರ ಆಗಲಿ, ಮೇಘನಾ ರಾಜ್ ಆಗಲಿ ಇಬ್ಬರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದರೆ, ಕೆಲವು ಯೂಟ್ಯೂಬ್ ಚಾನೆಲ್‌ಗಳು ಇಬ್ಬರಿದಂಲೂ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಈಗಾಗಲೇ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ವಿಜಯ ರಾಘವೇಂದ್ರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ವಿಜಯರ ರಾಘವೇಂದ್ರ ತಮ್ಮ ಹೊಸ ಸಿನಿಮಾ 'ರಿಪ್ಪನ್ ಸ್ವಾಮಿ'ಯ ಪ್ರಚಾರವನ್ನು ಆರಂಭಿಸಿದ್ದಾರೆ. ಈ ವೇಳೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ವಿಜಯ್ ರಾಘವೇಂದ್ರ ಬಳಿ ಮೇಘನಾ ರಾಜ್ ಅವರೊಂದಿಗೆ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ಕೇಳಿವೆ. ಆ ವೇಳೆ ಸ್ಪಷ್ಟವಾಗಿ ಮೇಘನಾ ಅವರೊಂದಿಗೆ ಮದುವೆ ಆಗುತ್ತಾರಾ? ಇಲ್ವಾ? ಅನ್ನೋದ್ನು ಸ್ಪಷ್ಟಪಡಿಸಿದ್ದಾರೆ.
ವಿಜಯ-ಮೇಘನಾ 2ನೇ ಮದುವೆ?
ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಇಂತಹದ್ದೊಂದು ಚರ್ಚೆ ಹುಟ್ಟಿಕೊಂಡಿತ್ತು. ವಿಜಯ ರಾಘವೇಂದ್ರ ಹಾಗೂ ಮೇಘನಾ ರಾಜ್ ಇಬ್ಬರೂ ಮದುವೆ ಆದರೆ ಉತ್ತಮ ಎಂಬ ಅಭಿಪ್ರಾಯವನ್ನು ಯಾರೋ ವ್ಯಕ್ತಪಡಿಸಿದ್ದರು. ಆ ಚರ್ಚೆ ಮದುವೆ ಆಗುತ್ತಾರೆಂದು ಹಬ್ಬುವುದಕ್ಕೆ ಶುರುವಾಗಿತ್ತು. ಇದು ಆರಂಭದಲ್ಲಿ ಕಿಡಿಗೇಡಿಗಳ ಕೆಲಸವೆಂದು ಇಬ್ಬರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದರೆ, ವಿಷಯ ಸುಮ್ಮನೆ ದೊಡ್ಡದಾಗುತ್ತಿದೆ ಎಂದು ಎನಿಸಿದಾಗ, ವಿಜಯ್ ಹಾಗೂ ಮೇಘನಾ ಪ್ರತಿಕ್ರಿಯಿಸಿದ್ದರು. ಈಗ ವಿಜಯ್ ರಾಘವೇಂದ್ರ 'ರಿಪ್ಪನ್ ಸ್ವಾಮಿ' ಪ್ರಚಾರದ ವೇಳೆ ಮತ್ತೊಂದು ಪ್ರತಿಕ್ರಿಯೆ ನೀಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ಕಾಳಜಿಯಿಂದೆ ಹೇಳಿರಬಹುದು"
"ಈ ವಿಚಾರಕ್ಕೆ ನಾನು ಯಾವತ್ತೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ. ಸೋಶಿಯಲ್ ಮೀಡಿಯಾದಲ್ಲಂತೂ ಏನೂ ಹೇಳುವುದಕ್ಕೆ ಹೋಗಿಲ್ಲ. ಯಾಕಂದ್ರೆ ನನಗೆ ಅದು ಬೇಕಾಗಿರಲಿಲ್ಲ. ಆಮೇಲೆ ನನ್ನನ್ನು ಇಷ್ಟ ಪಡುವ ಜನರಿಗೂ ಅದು ಬೇಕಾಗಿರಲಿಲ್ಲ. ಅವರಿಗೆ ನಾನು ಏನು ಮಾಡುತ್ತಿದ್ದೇನೆ. ನನ್ನ ಜೀವನ ಹೇಗೆ? ನನ್ನ ಮಗ ಹೇಗೆ? ನನ್ನ ಯೋಚನೆ ಹೇಗೆ ಅನ್ನೋದೆಲ್ಲವೂ ಅವರಿಗೆ ಗೊತ್ತು. ಹೀಗಿದ್ದೂ ಕೆಲವರು ಏನೋ ಹೇಳಬೇಕು ಅಂತ ಹೇಳ್ತಾರೆ. ಮತ್ತೆ ಕೆಲವರು ಕಾಳಜಿಯಿಂದ ಹೀಗಾದರೆ ಚೆನ್ನಾಗಿರುತ್ತೆ ಅಂತ ಆಸೆಯಿಂದ ಹೇಳಿರಬಹುದು. ಆದರೆ, ಅದರ ನಂಬರ್ ಕಡಿಮೆ. ಅದನ್ನು ಸುದ್ದಿ ಮಾಡಿ ನಂಬಿಸುವವರೇ ಹೆಚ್ಚು" ಎಂದು ವಿಜಯ ರಾಘವೇಂದ್ರ ಹೇಳಿದ್ದಾರೆ.

"ಇದರ ಬಗ್ಗೆ ಮೇಘನಾ ಜೊತೆ ಮಾತಾಡಿದ್ದೇನೆ"
"ನಾನು ಯಾರನ್ನೂ ಧೂಷಿಸುವುದಾಗಲಿ, ಯಾರನ್ನೋ ಬೈಯ್ಯುವುದಾಗಲಿ, ರೇಗುವುದಾಗಲಿ ಯಾವುದನ್ನೂ ಮಾಡುವುದಿಲ್ಲ. ಆದರೆ, ನನಗೆ ಅದು ಬೇಡ. ನಾನು ಮೇಘನಾ ಇಬ್ಬರೂ ಫೋನ್ ಮಾಡಿಕೊಂಡು ತಮಾಷೆ ಮಾಡಿಕೊಳ್ಳುತ್ತೇವೆ. ಏನ್ರಿ ಇದೆಲ್ಲ ಯಾಕೆ ಸುಮ್ಮನೆ ಹಾಕುತ್ತಾರೆ ಅಂತ ಮಾತಾಡಿಕೊಳ್ಳುತ್ತೇವೆ. ಅಂತಹ ಒಳ್ಳೆಯ ಸ್ನೇಹಿತರು ನಾವು. ಅದನ್ನು ಬಿಟ್ಟು ಬೇರೆ ಯಾವುದೇ ರೀತಿ ಉದ್ದೇಶ ಇರುವುದಿಲ್ಲ. ಯಾವುದೇ ರೀತಿಯ ಯೋಚನೆಗಳು ಇರುವುದಿಲ್ಲ. ಅದು ನನಗೂ ಗೊತ್ತು. ಅವರಿಗೂ ಗೊತ್ತು." ಎಂದು ಪ್ರತಿಕ್ರಿಯೆ ನೀಡಿದ್ದಾರೆ.
"ಈತರ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ"
"ನಾನು ಕೇಳಿಕೊಳ್ಳುವುದು ಇಷ್ಟೇ. ನಿಮ್ಮ ಕಾಳಜಿಗೆ ನಾನು ಚಿರಋಣಿ. ನಿಮ್ಮ ಪ್ರೀತಿಗೆ ನಾನಾಗಲಿ, ನನ್ನ ಮಗ ಆಗಲಿ ಚಿರಋಣಿ. ಅಷ್ಟಾಗಿಯೂ ನಿಮಗೆ ಸ್ಪಷ್ಟನೆ ಬೇಕೇ ಬೇಕು ಅಂದರೆ, ಕೆಲವು ಕಡೆ ಹೇಳಿದ್ದೇನೆ. ಮತ್ತೆ ಅದನ್ನೇ ಹೇಳುತ್ತೇನೆ. ಖುಷಿಯಾಗಿದ್ದೀನಿ, ಸ್ಪಂದನಾ ನನ್ನ ಜೊತೆನೇ ಇದ್ದಾಳೆ. ನಾನು, ನನ್ನ ಮಗಳ ಜೊತೆಯಲ್ಲಿಯೇ ಇದ್ದಾಳೆ. ಆ ನೆನಪು ಹಾಗೇ ಇದೆ. ನನ್ನ ಜೀವನದಲ್ಲಿ ಈತರ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ಮುಂದೆಕ್ಕೆ ಏನಾಗುತ್ತೆ ಅನ್ನೋದು ನನಗೂ ಗೊತ್ತಿಲ್ಲ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಜೀವನಕ್ಕಾಗಲಿ, ಬದುಕಿಗಾಗಲಿ, ಮನಸ್ಸಿಗಾಗಲಿ ಯಾರೂ ಬರೋದಿಲ್ಲ." ಎಂದು ವಿಜಯ ರಾಘವೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.


Click it and Unblock the Notifications











