ರೈತನ ಅವತಾರವೆತ್ತಿದ ವಿಜಯ್ ರಾಘವೇಂದ್ರ; ಸುಗ್ಗಿ ಸಂಭ್ರಮದಲ್ಲಿ 'ಮಹಾನ್' ಫಸ್ಟ್ ಲುಕ್ ಔಟ್
ಸಂಕ್ರಾಂತಿ ಹಬ್ಬದ ಬಗ್ಗೆ ಕನ್ನಡ ಚಿತ್ರರಂಗ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ, ಕರ್ನಾಟಕದಲ್ಲಿ ಸೂಪರ್‌ಸ್ಟಾರ್‌ಗಳು ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೂ ಮನಸ್ಸು ಮಾಡುವುದಿಲ್ಲ. ಹಾಗಂತ ಸಿನಿಮಾ ಮಂದಿ ಸುಮ್ಮನೆ ಕೂರುವುದಿಲ್ಲ. ತಮ್ಮ ಸಿನಿಮಾ ಬಗ್ಗೆ ಕುತೂಹಲ ಹುಟ್ಟಿಸುವ ಏನಾದರೂ ಒಂದು ತುಣುಕನ್ನು ರಿಲೀಸ್ ಮಾಡುತ್ತಲೇ ಇರುತ್ತಾರೆ.
ಹೀಗಾಗಿ ಸಂಕ್ರಾಂತಿಗೂ ಸಿನಿಮಾ ಮಂದಿಗೂ ಒಂದು ನಂಟು ಇದೆ. ಅದರಲ್ಲೂ ರೈತರು ಭಕ್ತಿಯಿಂದ ಸಂಭ್ರಮಿಸುವ ಸುಗ್ಗಿ ಹಬ್ಬದಂದು ಸಿನಿಮಾ ಮಂದಿ ಸುಮ್ಮನೆ ಕೂರುವುದಿಲ್ಲ. ಅದರಲ್ಲೂ ರೈತರ ಕುರಿತಾದ ಸಿನಿಮಾ ಅಂದರಂತೂ ಸುಮ್ಮನೆ ಇರೋದಕ್ಕೆ ಆಗುತ್ತಾ? ಹೌದು, ಕನ್ನಡದಲ್ಲಿ ರೈತರ ಹಿನ್ನೆಲೆಯನ್ನು ಇಟ್ಟುಕೊಂಡ ಸಿನಿಮಾವೊಂದು ರೆಡಿಯಾಗುತ್ತಿದೆ. ಅದುವೇ 'ಮಹಾನ್'.

ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಈಗಾಗಲೇ ಕುತೂಹಲ ಮೂಡಿಸಿದೆ. ಈ ಸಿನಿಮಾವನ್ನು ಪಿ.ಸಿ. ಶೇಖರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನು ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಿಲೀಸ್ ಮಾಡಲಾಗಿದೆ. ಈ ಫಸ್ಟ್ ಲುಕ್‌ಗೆ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಮಹಾನ್' ಸಿನಿಮಾವನ್ನು ಆಕಾಶ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ನಿರ್ದೇಶಿಸಿದ್ದಾರೆ. ವಿಜಯ ರಾಘವೇಂದ್ರ ಈ ಸಿನಿಮಾದಲ್ಲಿ ರೈತನಾಗಿ ನಟಿಸುತ್ತಿದ್ದಾರೆ. ಪಂಚೆ, ಶರ್ಟ್ ಹಾಗೂ ಹೆಗಲ ಮೇಲೆ ಟವೆಲ್ ಹಾಕೊಂಡು ಅದೇ ಮುಗ್ಧ ನಗುವನ್ನು ಬೀರುವ ಲುಕ್ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ.
"ನನ್ನ ವೃತ್ತಿ ಜೀವನದಲ್ಲೇ 'ಮಹಾನ್' ಒಂದು "ಮಹಾನ್" ಚಿತ್ರವಾಗಲಿದೆ" ಎಂದು ನಿರ್ದೇಶಕ ಪಿ.ಸಿ.ಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಮ್ಮ ಸಿನಿಮಾದಲ್ಲಿ ಮಹಾನ್ ಎಂದರೆ ರೈತ. ಇದೊಂದು ರೈತರ ಬದುಕಿನ ಬವಣೆಗಳನ್ನು ತಿಳಿಸುವ ಕಥಾಹಂದರ ಹೊಂದಿರುವ ಚಿತ್ರ. ನಮಗೆ ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೊ, ಅದೇ ರೀತಿ ರೈತರು ಕೂಡ ಬಹುಮುಖ್ಯ. ಇಂತಹ ರೈತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಅವರ ಪರ ಧ್ವನಿ ಎತ್ತುವ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅವರು ಕೂಡ "ಮಹಾನ್" ರೈತನಾಗಿ ತೆರೆಯ ಕಾಣಿಸಿಕೊಳ್ಳಲಿದ್ದಾರೆ." ಎಂದು ನಿರ್ದೇಶಕ ಪಿ.ಸಿ.ಶೇಖರ್ ತಮ್ಮ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಹಾಗೇ ಸಂಕ್ರಾಂತಿ ರೈತರಿಗೆ ಪ್ರಿಯವಾದ ಹಬ್ಬ. ಹಾಗಾಗಿ ಈ ಹಬ್ಬದ ಸಂದರ್ಭದಲ್ಲೇ ವಿಜಯ ರಾಘವೇಂದ್ರ ಅವರ ಫಸ್ಟ್ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. "ನಾನು ಈ ಕಥೆ ಬರೆಯಬೇಕಾದರೆ ವಿಜಯ ರಾಘವೇಂದ್ರ ಅವರೆ ಈ ಪಾತ್ರ ಮಾಡಿದರೆ ಚೆನ್ನಾಗಿರುತ್ತದೆ ಅಂದು ಕೊಂಡೆ ಬರೆದೆ. ನಂತರ ಅವರ ಹತ್ತಿರ ಕಥೆ ಹೇಳಿದಾಗ ಅವರು ಸಂತೋಷದಿಂದ ನಟಿಸಲು ಒಪ್ಪಿಕೊಂಡರು. ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸಿನಿಮಾ ನೋಡಿ ಹೊರಬಂದ ಮೇಲೂ ಈ ಪಾತ್ರ ಎಲ್ಲರ ಮನದಲ್ಲೂ ಉಳಿಯುತ್ತದೆ." ಎನ್ನುತ್ತಾರೆ.
ಇನ್ನು 'ಮಹಾನ್' ಸಿನಿಮಾವನ್ನು ಯಾವುದೇ ಕೊರತೆ ಬಾರದ ಹಾಗೆ ಪ್ರಕಾಶ್ ಬುದ್ದೂರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ ರಾಘವೇಂದ್ರ, ರಾಧಿಕಾ ನಾರಾಯಣ್, ಮಿತ್ರ, ನಮ್ರತಾ ಗೌಡ, ವರ್ಷ ಬೊಳ್ಳಮ್ಮ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.


Click it and Unblock the Notifications











