Spandana Death: ಸ್ಪಂದನಾ ಪಾರ್ಥಿವ ಶರೀರ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬರೋದ್ಯಾವಾಗ? ಎಲ್ಲಿಗೆ ಬಂದಿದೆ ಪ್ರಕ್ರಿಯೆ?
ಸ್ಯಾಂಡಲ್‌ವುಡ್‌ನ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವಿಷಯ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸಂಬಂಧಿಯೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ ಬುಧವಾರ ಬೆಂಗಳೂರಿಗೆ ಬರಬೇಕಿತ್ತು. ಆದರೆ, ಅಷ್ಟರೊಳಗೆ ದುರ್ಘಟನೆ ಸಂಭವಿಸಿದೆ.
ಸ್ಪಂದನಾಗೆ ಹೃದಯಾಘಾತವಾಗುವುದಕ್ಕೆ ಕೆಲವು ಗಂಟೆಗಳ ಮುನ್ನವಷ್ಟೇ ವಿಜಯ್ ರಾಘವೇಂದ್ರ ಕೂಡ ಬ್ಯಾಂಕಾಕ್‌ಗೆ ಹೋಗಿದ್ದರು. ಪ್ರವಾಸಕ್ಕೆಂದು ಹೋದವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿದ್ದು ಹಲವರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.

ನಿನ್ನೆ (ಆಗಸ್ಟ್ 7) ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಇನ್ನೇನು ಸಿಗಬೇಕಿದೆಯಷ್ಟೇ. ಇಂದು (ಆಗಸ್ಟ್ 8) ಬೆಳಗ್ಗೆ ಕೆಲವು ಪ್ರಕ್ರಿಯೆಗಳನ್ನು ಕುಟುಂಬಸ್ಥರು ಮುಗಿಸಬೇಕಿದೆ. ಆ ಪ್ರಕ್ರಿಯೆಗಳೆಲ್ಲವೂ ಮುಗಿದ ಬಳಿಕ ಸ್ಪಂದನಾ ಪಾರ್ಥಿವ ಶರೀರ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ರವಾನೆಯಾಗುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಸ್ಪಂದನಾ ಪಾರ್ಥಿವ ಶರೀರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಥೈಲ್ಯಾಂಡ್‌ನ ಬ್ಯಾಂಕಾಕ್‌ನಲ್ಲಿ ಎಲ್ಲಾ ಪ್ರಕ್ರಿಯೆಗಳು ಮುಗಿಯಬೇಕು. ಹೀಗಾಗಿ ಸ್ಪಲ್ಪ ಸಮಯ ತೆಗೆದುಕೊಳ್ಳುತ್ತಿದ್ದು, ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
ಸ್ಪಂದನಾ ಪಾರ್ಥಿವ ಶರೀರ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮಧ್ಯಾಹ್ನದ ಒಳಗೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಹಾಗೇನಾದರೂ ಮುಗಿದರೆ, ಸ್ಪಂದನಾ ಪಾರ್ಥಿವ ಶರೀರವನ್ನು ಎರಡು ಗಂಟೆಯ ಬ್ಯಾಂಕಾಕ್-ಬೆಂಗಳೂರು ಇಂಡಿಗೊ ವಿಮಾನದ ಮೂಲಕ ಬೆಂಗಳೂರಿಗೆ ರವಾನೆಯಾಗಲಿದೆ. ಸಂಜೆ ಸುಮಾರು 6 ಗಂಟೆಗೆ ತಲುಪುವ ಸಾಧ್ಯತೆಯಿದೆ ಎನ್ನಲಾಗಿದೆ.
ಒಂದು ವೇಳೆ ಹಸ್ತಾಂತರ ಪ್ರಕ್ರಿಯೆ ತಡವಾದರೆ, ರಾತ್ರಿ 9.30ಕ್ಕೆ ಥೈ ಏರ್‌ಲೈನ್ಸ್ ಮೂಲಕ ಪಾರ್ಥಿವ ಶರೀರ ಬೆಂಗಳೂರಿಗೆ ತಡರಾತ್ರಿ ತಲುಪುವ ಸಾಧ್ಯತೆಯಿದೆ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವ ಸಾಧ್ಯತೆಯಿದೆ. ಮೃತದೇಹ ಸಂಜೆ ಅಥವಾ ರಾತ್ರಿ ಬೆಂಗಳೂರಿಗೆ ಬರುವುದರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ ಬಳಿಕ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆಯಿದೆ.
ಸ್ಪಂದನಾ ಅವರ ಅಂತ್ಯಕ್ರಿಯೆ ಈಡಿಗ ಸಮುದಾಯದಂತೆ ನೆರವೇರಲಿದೆ. ಸ್ಪಂದನಾ ತಂದೆ ಬಿಕೆ ಶಿವರಾಂ ಬೆಳ್ತಂಗಡಿ ಮೂಲದವರಾಗಿದ್ದರಿಂದ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ಆಗುತ್ತಾ? ಇಲ್ಲ ಬೆಳ್ತಂಗಡಿಯಲ್ಲಿ ನಡೆಯುತ್ತಾ? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.


Click it and Unblock the Notifications











