ದರ್ಶನ್ ಪುತ್ರ ವಿನೀಶ್ ಕಾರು ಅಪಘಾತ ; ಕೆರಳಿ ಕೆಂಡವಾದ ವಿಜಯಲಕ್ಷ್ಮಿ
ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಕಿತಾಪತಿ ಮಾಡಲು ಕಿರಾತಕರು ಹೊಂಚು ಹಾಕಿ ಕಾದು ಕುಂತಿರುತ್ತಾರೆ. ಹಾಗಂತೆ-ಹೀಗಂತೆ ಎಂದು ಕತ್ತಲಲ್ಲಿ ಗುಂಡು ಹಾರಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಲ್ಲ ಸಲ್ಲದ ಸುದ್ದಿಯನ್ನು ತೇಲಿ ಬಿಟ್ಟು ಅದೆಲ್ಲೋ ಕುಳಿತು ಮಜಾ ನೋಡುತ್ತಾರೆ. ಹೀಗೆ ಹರಿಬಿಡಲಾದ ಸುದ್ದಿಯಲ್ಲಿ ಸತ್ಯಾಂಶ ಇಲ್ಲ ಎನ್ನುವ ವಿಚಾರ ಗೊತ್ತಿದ್ದ ಹಿನ್ನೆಲೆ ಹಲವರು ಸುಮ್ಮನಾಗುತ್ತಾರೆ. ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ.
ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಾರೆ. ಮತ್ತೂ ಕೆಲವರು ತಮ್ಮ ಕುರಿತ ಈ ಇಲ್ಲ ಸಲ್ಲದ ಮಾತುಗಳನ್ನು ಕೇಳಿ ಕೆರಳಿ ಕೆಂಡವಾಗುತ್ತಾರೆ. ಕೆಲವರು ನ್ಯಾಯಾಲಯದ ಮೊರೆ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಕುರಿತು ಸುಳ್ಳು ಸುದ್ದಿ ಹಬ್ಬಿಸುವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಾರೆ. ಉದಾಹರಣೆಗೆ ವಿಜಯಲಕ್ಷ್ಮಿ ದರ್ಶನ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಒಂದು ಕಡೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇನ್ನೊಂದು ಕಡೆ ವಿಜಯಲಕ್ಷ್ಮಿ ನೋವಲ್ಲಿದ್ದಾರೆ. ಜೈಲು ಹಕ್ಕಿಯಾದ ತಮ್ಮ ಪತಿಯನ್ನು ಹೇಗಾದರೂ ಮಾಡಿ ಹೊರ ಕರೆತರಬೇಕೆಂದು ಶತಾಯು ಗತಾಯು ಪ್ರಯತ್ನ ಮಾಡುತ್ತಿದ್ದಾರೆ.
ಹೀಗಿರುವಾಗ ನೋವಿನ ಮೇಲೆ ನೋವನ್ನು ವಿಜಯಲಕ್ಷ್ಮಿ ಅನುಭವಿಸಬೇಕು ಎಂದೇನೋ ಕೆಲವರು ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮುದ್ದಿನ ಮಗ ವಿನೀಶ್ ಅವರ ಕಾರು ಅಪಘಾತಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪುಕಾರು ಹಬ್ಬಿಸಿದ್ದಾರೆ. ಕಾರನ್ನು ವಿನೀಶ್ ಅವರೇ ಚಲಾಯಿಸುತ್ತಿದ್ದರು ಎಂದು ಕೂಡ ಸುದ್ದಿಯನ್ನು ತೇಲಿ ಬಿಟ್ಟಿದ್ದಾರೆ.
ಸಹಜವಾಗಿಯೇ ಇದರಿಂದ ದರ್ಶನ್ ಅಭಿಮಾನಿಗಳ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿನ್ನೆಲೆ ಗೊಂದಲಕ್ಕೆ ಬ್ರೇಕ್ ಹಾಕಲು ಖುದ್ದು ವಿಜಯಲಕ್ಷ್ಮಿ ಮುಂದಾಗಿದ್ದು ಸ್ಪಷ್ಟೀಕರಣ ನೀಡಿದ್ದಾರೆ. ವಿನೀಶ್ ಕೈಯಿಂದ ಯಾವುದೇ ತಪ್ಪಾಗಿಲ್ಲ, ಆಸ್ಪತ್ರೆಯಲ್ಲಿಯೂ ವಿನೀಶ್ ಇಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ವೈರಲ್ ಸುದ್ದಿ ಏನು..? ಅಸಲಿಯತ್ತೇನು..?
ರಾಜರಾಜೇಶ್ವರಿ ನಗರದಲ್ಲಿ KA 01 MU 9969 ನಂಬರ್‌ನ ಫೋರ್ಡ್ ಎಂಡೋವರ್ ಕಾರು ಅಪಘಾತಕ್ಕೀಡಾಗಿತ್ತು. ದ್ವಿಚಕ್ರ ವಾಹನಕ್ಕೆ ತಗುಲಿತ್ತು. ವೈರಲ್ ಆದ ಸುದ್ದಿಯಂತೆ ಆ ಕಾರಿನಲ್ಲಿ ದರ್ಶನ್ ಅವರ ಮಗ ವಿನೀಶ್ ಕೂಡ ಇದ್ದರು. ಆದರೆ, ಕಾರನ್ನು ವಿನೀಶ್ ಚಲಾಯಿಸುತ್ತಿರಲಿಲ್ಲ.

ಇನ್ನು ಅಪಘಾತದ ನಂತರ ವಿನೀಶ್ ಕಾರಿಂದ ಕೆಳಗಿಳಿದು ಬಂದಿದ್ದರು. ಇದೇ ಸಮಯದಲ್ಲಿ ವಿಡಿಯೋ ಸೆರೆ ಹಿಡಿದು ಸ್ಥಳಿಯರ ಜೊತೆ ಮಾತಿನ ಚಕಮಕಿ ನಡೆದಿದೆ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟೀಕರಣ ನೀಡಿದ್ದಾರೆ. ಹಾಗಿದ್ದರೆ, ವಿಜಯಲಕ್ಷ್ಮೀ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ವಿಜಯಲಕ್ಷ್ಮಿ ದರ್ಶನ್ ಬರಹ
ಎಲ್ಲರಿಗೂ ನಮಸ್ಕಾರ, ವಿನೀಶ್‌ಗೆ ಅಪಘಾತವಾಗಿದೆ ಮತ್ತು ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಅನ್ನೋದನ್ನ ನಾವಿಲ್ಲಿ ಸ್ಪಷ್ಟಪಡಿಸೋಕೆ ಇಷ್ಟಪಡುತ್ತೇವೆ.
ವಿನೀಶ್ ಸಂಪೂರ್ಣವಾಗಿ ಆರಾಮವಾಗಿದ್ದಾನೆ, ಚೆನ್ನಾಗಿದ್ದಾನೆ. ಆತ ಗಾಡಿ ಓಡಿಸುತ್ತಿರಲಿಲ್ಲ. ಎಂದಿನಂತೆ ನಮ್ಮ ಡ್ರೈವರ್ ಗಾಡಿ ಚಲಾಯಿಸುತ್ತಿದ್ದರು. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಾಮಾನ್ಯ ಅನ್ನೋ ತರಹದ ಒಂದು ಸಣ್ಣ ರಸ್ತೆ ಘಟನೆ (ಮೈನರ್ ಆಕ್ಸಿಡೆಂಟ್) ನಡೆದಿದೆ ಅಷ್ಟೇ.
ಘಟನೆಯಲ್ಲಿ ಭಾಗಿಯಾಗಿದ್ದ ಬೈಕ್ ಸವಾರರು ತಪ್ಪು ತಮ್ಮದೇ ಎಂದು ಒಪ್ಪಿಕೊಂಡು, ಸ್ಥಳದಲ್ಲೇ ಕ್ಷಮೆಯನ್ನೂ ಕೇಳಿದ್ದಾರೆ. ಬೈಕ್‌ನಲ್ಲಿದ್ದ ಜನರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿನೀಶ್ ಕಾರಿನಿಂದ ಕೆಳಗಿಳಿದಿದ್ದರು. ಆದರೆ ದುರದೃಷ್ಟವಶಾತ್, ಆ ಕೆಲವು ಕ್ಷಣಗಳನ್ನೇ ತಪ್ಪಾಗಿ ಅರ್ಥೈಸಿ, ಇಡೀ ವಿಷಯವನ್ನು ಸಂಪೂರ್ಣವಾಗಿ ಹಾದಿ ತಪ್ಪಿಸುವ ರೀತಿಯಲ್ಲಿ ಬಿಂಬಿಸಲಾಗಿದೆ.
ಒಂದು ಕುಟುಂಬವಾಗಿ ನಾವು ಈಗಾಗಲೇ ಸಾಕಷ್ಟು ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಪರಿಶೀಲಿಸದ ಮತ್ತು ಉತ್ತೇಜನಕಾರಿ ಸುದ್ದಿಗಳ ಹರಡುವಿಕೆ ನಮ್ಮ ನೋವು ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತವೆ.
ಯಾವುದೇ ಮಾಹಿತಿಯನ್ನು ಪಬ್ಲಿಶ್ ಅಥವಾ ಬ್ರಾಡ್‌ಕಾಸ್ಟ್ ಮಾಡುವ ಮುನ್ನ ದಯವಿಟ್ಟು ಸತ್ಯ ಏನೆಂಬುದನ್ನು ಪರಿಶೀಲಿಸಿ ಎಂದು ನಾವು ಎಲ್ಲರಲ್ಲೂ, ಮುಖ್ಯವಾಗಿ ಮಾಧ್ಯಮ ಸಂಸ್ಥೆಗಳಲ್ಲಿ ವಿನಂತಿಸಿಕೊಳ್ಳುತ್ತೇವೆ. ಇಂತಹ ಸುದ್ದಿಗಳು ಜನರಿಗೆ ಮತ್ತು ಅವರ ಕುಟುಂಬಗಳಿಗೆ ಅನಗತ್ಯವಾಗಿ ತುಂಬಾ ಮಾನಸಿಕ ಹಿಂಸೆ ನೀಡುತ್ತವೆ.
ಯಾರೂ ಕೂಡ ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಶೇರ್ ಮಾಡಬೇಡಿ ಅಂತಲೂ ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಮತ್ತು ನಮ್ಮನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು ಎಂದು ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.



Click it and Unblock the Notifications