ಡಿಕೆಶಿ-ವಿಜಯಲಕ್ಷ್ಮಿ ಭೇಟಿ ವೇಳೆ ಜೋಗಿ ಪ್ರೇಮ್‌ಗೆ ಏನು ಕೆಲಸ? ಮನೆಯೊಳಗೆ ನಡೆದಿದ್ದೇನು?
ರಾಮನಗರದ ಚಾಮುಂಡಿ ಉತ್ಸವದಲ್ಲಿ ದರ್ಶನ್ ಧರ್ಮ ಪತ್ನಿ ವಿಜಯಲಕ್ಷ್ಮಿ ತಮ್ಮನ್ನು ಭೇಟಿ ಮಾಡಲು ಸಮಯ ಹೇಳಿದ್ದಾರೆ ಎಂದು ಹೇಳಿದ್ದರು. ಅದರಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ತೂಗುದೀಪ ಇಬ್ಬರೂ ಭೇಟಿ ಮಾಡಿದ್ದಾರೆ. ಆದರೆ, ಈ ವೇಳೆ ಸರ್ಪ್ರೈಸ್ ಕೊಟ್ಟಿದ್ದು ಜೋಗಿ ಪ್ರೇಮ್.
ಡಿಕೆ ಶಿವಕುಮಾರ್‌ರನ್ನು ವಿಜಯಲಕ್ಷ್ಮಿ ದರ್ಶನ್ ಭೇಟಿ ಮಾಡುತ್ತಾರೆ ಅನ್ನೋದು ಮೊದಲೇ ಗೊತ್ತಿತ್ತು. ಆದರೆ, ಇದೇ ವೇಳೆ ಜೋಗಿ ಪ್ರೇಮ್ ಯಾಕೆ ಕಾಣಿಸಿಕೊಂಡರು ಅನ್ನೋದು ಕುತೂಹಲ ಮೂಡಿದೆ. ಡಿಕೆಶಿಯನ್ನು ವಿಜಯಲಕ್ಷ್ಮಿ ದರ್ಶನ್, ದಿನಕರ್ ತೂಗುದೀಪ ಭೇಟಿ ಮಾಡುವುದರಲ್ಲಿ ಅಚ್ಚರಿಯೇನಿಲ್ಲ. ದರ್ಶನ್ ಬಗ್ಗೆಯೇ ಮಾತಾಡುವುದಕ್ಕೆ ಬಂದಿದ್ದಾರೆ ಅನ್ನೋ ಸ್ಪಷ್ಟ ಆಗಿದೆ. ಆದರೆ, ಈ ವೇಳೆ ಜೋಗಿ ಪ್ರೇಮ್ ಕಾಣಿಸಿಕೊಂಡಿದ್ದೇಕೆ? ಅದಕ್ಕೆ ಪ್ರೇಮ್ ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆನೇ ಬೇರೆಯಿದೆ.

ಡಿಕೆಶಿ ನಿನ್ನೆ (ಜುಲೈ 23) ರಾಮನಗರದಲ್ಲಿ ನಡೆದ ಚಾಮುಂಡಿ ಉತ್ಸವದಲ್ಲೇ ವಿಜಯಲಕ್ಷ್ಮಿ ದರ್ಶನ್ ಭೇಟಿ ಮಾಡುತ್ತಿದ್ದು, ಅವರಿಗೆ ಅನ್ಯಾಯ ಆಗಿದ್ದರೆ, ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದರು. ಹೀಗಾಗಿ ವಿಜಯಲಕ್ಷ್ಮಿ ಹಾಗೂ ದಿನಕರ್ ಇಬ್ಬರೂ ಡಿಕೆಶಿಯನ್ನು ಭೇಟಿ ಮಾಡಿದ್ದು ದರ್ಶನ್ ವಿಚಾರಕ್ಕೆ ಅನ್ನೋದು ಕನ್ಫರ್ಮ್ ಆಗಿತ್ತು. ಆದರೆ, ಇವರ ಮಧ್ಯೆ ಜೋಗಿ ಪ್ರೇಮ್‌ಗೆ ಏನು ಕೆಲಸ? ಅವರು ಹೇಳಿದ್ದಿಷ್ಟು?
"ನಾನು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವುದಕ್ಕೆ ಯಾವಾಗಲೂ ಬರುತ್ತಿರುತ್ತೇನೆ. ಈಗ ನೀವು ನೋಡಿದ್ದೀರ ಅಷ್ಟೇ ಬಿಟ್ಟರೆ, ಇದು ಹೊಸದೇನು ಅಲ್ಲ." ಎಂದು ಡಿಕೆಶಿ ಅವರನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ದರ್ಶನ್ ಬಗ್ಗೆನೂ ಮಾತಾಡಿದ್ದು, ತನ್ನ ಭೇಟಿಗೂ ದರ್ಶನ್ ವಿಷಯಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.
ಡಿಕೆಶಿವಕುಮಾರ್ ಶಿಕ್ಷಣ ಸಂಸ್ಥೆಯಲ್ಲಿ ಜೋಗಿ ಪ್ರೇಮ್ ಓದುತ್ತಿತ್ತು. ಆ ಬಗ್ಗೆ ಮಾತಾಡುವುದಕ್ಕೆ ಬಂದಿದ್ದಾಗಿ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನ ಸ್ನೇಹಿತರು ದರ್ಶನ್. ಯಾವಾಗಲೂ ಮಾತಾಡುತ್ತಲೇ ಇರುತ್ತೇವೆ. ದರ್ಶನ್ ಅವರ ಮಗ ವಿನೀಶ್ ಸ್ಕೂಲ್ ಅಡ್ಮಿಷನ್ ಇತ್ತು. ಅವರದ್ದೊಂದು ಸ್ಕೂಲ್ ಇದೆಯಲ್ಲ (ಡಿಕೆಶಿ ಸ್ಕೂಲ್). ಯಾಕಂದ್ರೆ ನನ್ನ ಮಗ ಮತ್ತು ವಿನೀಶ್ ಜೊತೆಯಲ್ಲಿಯೇ ಓದುತ್ತಿದ್ದರು. ಒಂದು ವರ್ಷ ವಿನೀಶ್ ಬೇರೆ ಎಲ್ಲೋ ಶಿಫ್ಟ್ ಆದ. ಅದ್ಯಾಕೋ ದೂರ ಆಯ್ತು ಅಂತ ಆ ಸ್ಕೂಲ್‌ಗೆ ಹಾಕಬೇಕು ಅಂತಲೇ ಮಾಡಿದ್ದು ಬಿಟ್ಟರೆ ಬೇರೆ ಏನೂ ಇಲ್ಲ." ಎಂದು ಹೇಳಿದ್ದಾರೆ. ಅಸಲಿಗೆ ಯಾರು ಯಾರ ಮಗನ ಬಗ್ಗೆ ಮಾತಾಡೋಕೆ ಬಂದಿದ್ದರು ಅನ್ನೋದು ಅವರ ಹೇಳಿಕೆಯಲ್ಲಿ ಸ್ಪಷ್ಟವಾಗಿ ಗೊತ್ತಾಗಿಲ್ಲ.
ಇದನ್ನು ಡಿಕೆ ಶಿವಕುಮಾರ್ ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಮಾತಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. "ದರ್ಶನ್ ಬಂದು ನನ್ನ ಸ್ನೇಹಿತರು, ಅವರು ನನ್ನ ಫ್ಯಾಮಿಲಿ. ಕಷ್ಟ ಸುಖ ಮಾತಾಡೇ ಮಾತಾಡುತ್ತೇವೆ. ಅದು ಬಿಟ್ಟರೆ ಬೇರೆ ಇಲ್ಲ. ಯಾಕಂದ್ರೆ, ಕಾನೂನು ಇದೆ. ನ್ಯಾಯಾಂಗವಿದೆ. ಅದರ ಮೇಲೆ ನಾವೇನು ಮಾತಾಡುವುದಕ್ಕೆ ಆಗುವುದಿಲ್ಲ. ದರ್ಶನ್ ವಿಚಾರಕ್ಕೆ ನಾನು ಬಂದಿರಲಿಲ್ಲ. ಅವರವರಿಗೆ ಬಿಟ್ಟ ವಿಚಾರ. ನನಗೂ ಅದಕ್ಕೂ ಸಂಬಂಧವಿಲ್ಲ." ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
ದರ್ಶನ್ ಜೈಲು ಸೇರಿದ ಬಳಿಕ ರಕ್ಷಿತಾ ಹಾಗೂ ಜೋಗಿ ಪ್ರೇಮ್ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿ ಭೇಟಿಯಾಗಿದ್ದರು. ಆ ಬಳಿಕ ಈಗ ಡಿಕೆ ಶಿವಕುಮಾರ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ 'ಕೆಡಿ' ಸಿನಿಮಾದ ಬಳಿಕ ದರ್ಶನ್‌ಗೆ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ.


Click it and Unblock the Notifications











