'ಬಾಸ್' ಸಿನಿಮಾ ಬಿಡುಗಡೆಗೆ ಮತ್ತೆ ಟೆನ್ಷನ್; ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ ದರ್ಶನ್
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಕಾನೂನು ಸಮರ ಎದುರಿಸುತ್ತಿದ್ದಾರೆ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ 'ಬಾಸ್' ಸಿನಿಮಾವೊಂದು ಬಿಡುಗಡೆ ವಿಘ್ನಗಳನ್ನು ಎದುರಿಸುತ್ತಿದೆ. ಅಷ್ಟಕ್ಕೂ ದರ್ಶನ್‌ಗೂ 'ಬಾಸ್' ಸಿನಿಮಾಗೂ ಟೈಟಲ್ ಅಷ್ಟೇ ಅಲ್ಲ. ಹಲವು ವಿಷಯಗಳಿಗೆ ಸಾಮ್ಯತೆಯಿದೆ ಅನ್ನೋದು ಈಗಾಗಲೇ ವರದಿಯಾಗಿದೆ.
'ಬಾಸ್' ಸಿನಿಮಾ ರೇಣುಕಾಸ್ವಾಮಿ ಪ್ರಕರಣವನ್ನೇ ಇಟ್ಕೊಂಡು ಕಥೆಯನ್ನು ಹೆಣೆದಿದೆ ಎಂಬ ಆರೋಪವಿದೆ. ಆದರೆ, ಚಿತ್ರತಂಡ ಈ ಆರೋಪವನ್ನು ಸರಾಸಗಟಾಗಿ ತಳ್ಳಿ ಹಾಕಿದೆ. ಆದರೂ, ಸಿನಿಮಾ ಟೀಸರ್ ಹಾಗೂ ತುಣುಕುಗಳು ಈ ಪ್ರಕರಣಕ್ಕೆ ಹೊಂದಿಕೊಂಡಂತೆ ಭಾಸವಾಗುವದಂತೂ ನಿಜ. ಈ ಕಾರಣಕ್ಕಾಗಿಯೇ ವಿಜಯಲಕ್ಷ್ಮಿ ದರ್ಶನ್ ಸಿನಿಮಾ ಬಿಡುಗಡೆಗೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.

ಅಲ್ಲಿಂದ 'ಬಾಸ್' ಸಿನಿಮಾ ತಂಡ ಬಿಡುಗಡೆ ಮಾಡಲು ಕಾನೂನು ಹೋರಾಟ ಮುಂದುವರೆಸಿತ್ತು. ಕೊನೆಗೂ ನ್ಯಾಯಾಲಯ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿದ ಬಳಿಕ ಇದೇ ಜೂನ್ 19ಕ್ಕೆ ಸಿನಿಮಾ ಬಿಡುಗಡೆಗೆ ಮುಂದಾಗಿತ್ತು. ಆದ್ರೀಗ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಿನಿಮಾ ಬಿಡುಗಡೆಗೆ ತಡೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
'ಬಾಸ್' ಬಿಡುಗಡೆ ಆಗುತ್ತಾ?
'ಬಾಸ್' ಸಿನಿಮಾ ಬಿಡುಗಡೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಜೂನ್ 19ಕ್ಕೆ ಸಿನಿಮಾ ರಾಜ್ಯಾದ್ಯಾಂತ ರಿಲೀಸ್‌ಗೆ ರೆಡಿ ಮಾಡಿಕೊಂಡಿತ್ತು. ಈ ಬಾರಿ ನಿರಾಳವಾಗಿ ಸಿನಿಮಾ ರಿಲೀಸ್ ಆಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ವಿಜಯಲಕ್ಷ್ಮಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಸಿನಿಮಾ ರಿಲೀಸ್ ಆಗುತ್ತಾ? ಇಲ್ವಾ ಅನ್ನೋದೇ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸಿವಿಲ್ ಕೋರ್ಟ್ ಆದೇಶಕ್ಕೆ ಸವಾಲು
ಈ ಹಿಂದೆ ಬೆಂಗಳೂರಿನ ಸಿವಿಲ್ ಕೋರ್ಟ್‌ನಲ್ಲಿ 'ಬಾಸ್' ಸಿನಿಮಾದ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿಲಾಗಿತ್ತು. ಅದನ್ನು ತೆರವುಗೊಳಿಸಿ, ಸಿನಿಮಾ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿತ್ತು. ಕೋರ್ಟ್‌ನಿಂದ ಅನುಮತಿ ಸಿಗುತ್ತಿದ್ದಂತೆಯೇ ಜೂನ್ 19 ರಂದು ಅದ್ಧೂರಿಯಾಗಿ 'ಬಾಸ್' ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಆದ್ರೀಗ ಈ ಆದೇಶವನ್ನು ಪ್ರಶ್ನಿಸಿ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕುಟುಂಬ ಹೈಕೋರ್ಟ್ ಮೊರೆ ಹೋಗಿದ್ದಾರೆ. ಹೀಗಾಗಿ ಸಿನಿಮಾದ ಬಿಡುಗಡೆ ಮತ್ತೊಮ್ಮೆ ಅತಂತ್ರಕ್ಕೆ ಸಿಲುಕಿದೆ.

ತಡೆಯಾಜ್ಞೆ ಕೋರಲು ಕಾರಣವೇನು?
ವಿಜಯಲಕ್ಷ್ಮಿ ದರ್ಶನ್ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹಲವು ಆರೋಪಗಳಿವೆ. ಸಿನಿಮಾದ ಕಥೆ, ಪಾತ್ರಗಳು, ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ ವಿವಾದಿತ ಅಂಶಗಳ ಹೋಲುವಂತಹ ಅಂಶಗಳಿವೆ ಎಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಆಗಿರುವ ವರದಿ ಪ್ರಕಾರ, 'ಬಾಸ್' ಸಿನಿಮಾದ ಸ್ಟೋರಿ ಇತ್ತೀಚೆಗೆ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯನ್ನು ಹೋಲುವಂತಿದೆ. ಈ ಸಿನಿಮಾ ತಮ್ಮ ವೈಯಕ್ತಿಕ ಜೀವನ ಹಾಗೂ ಘನತೆಗೆ ಧಕ್ಕೆ ತರಬಹುದು ಎಂಬ ಕಾರಣಕ್ಕೆ ದರ್ಶನ್ ಕುಟುಂಬ ಈ ಕಾನೂನು ಹೋರಾಟಕ್ಕೆ ಮುಂದಾಗಿದೆ ಎನ್ನಲಾಗಿದೆ.
'ಬಾಸ್' ಭವಿಷ್ಯವೇನು?
'ಬಾಸ್' ಸಿನಿಮಾ ರಿಲೀಸ್ ಆಗದಂತೆ ಮೇಲ್ಮನವಿ ಸಲ್ಲಿಕೆ ಆಗಿದೆ. ಹೀಗಾಗಿ ಜೂನ್ 19ರಂದು ಸಿನಿಮಾ ರಿಲೀಸ್ ಆಗುತ್ತಾ? ಅನ್ನೋ ಪ್ರಶ್ನೆಯಂತೂ ಮೂಡಿದೆ. ಒಂದು ವೇಳೆ ನಿಗದಿ ಪಡಿಸಿದ ದಿನಾಂಕದ ಒಳಗೆ ಕೋರ್ಟ್ ತೀರ್ಪು ಕೊಟ್ಟರೆ, ರಿಲೀಸ್ ಬಗ್ಗೆ ಸ್ಪಷ್ಟತೆ ಸಿಗಲಿದೆ. ಹೀಗಾಗಿ ನ್ಯಾಯಾಲಯದ ಮುಂದಿನ ನಿರ್ಧಾರದ ಮೇಲೆ 'ಬಾಸ್' ಚಿತ್ರದ ಭವಿಷ್ಯ ನಿರ್ಧಾರವಾಗಲಿದೆ.


Click it and Unblock the Notifications