"ಬಿರುಗಾಳಿಯಲ್ಲೂ.. ಮೌನದಲ್ಲೂ ನಿಮ್ಮನ್ನು ಕೈ ಹಿಡಿದು ನಡೆಸುವೆ" ದರ್ಶನ್‌ಗೆ ವಿಜಯಲಕ್ಷ್ಮಿ ಭರವಸೆ
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸದ್ಯ ಪರಪ್ಪನ ಅಗ್ರಹಾರದಿಂದ ಹೊರಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಸಲ್ಲಿಸಿದ ಅರ್ಜಿ ಕೂಡ ರಿಜೆಕ್ಟ್ ಆಗಿದೆ. ಹೀಗಾಗಿ ದರ್ಶನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಿದ್ದವು.
ಒಂದರ ಹಿಂದೊಂದು ಕಹಿ ವಿಷಯಗಳೇ ದರ್ಶನ್ ಕಿವಿಗೆ ಬೀಳುತ್ತಿರುವುದರಿಂದ ಮಾನಸಿಕವಾಗಿ ಕುಗ್ಗಿದ್ದಾರೆ ಎನ್ನಲಾಗಿದೆ. ಇತ್ತ ವಿಜಯಲಕ್ಷ್ಮಿ ದರ್ಶನ್ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ ಆದಲ್ಲಿಂದ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ. ಇಂದು (ಮೇ 19) ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ 23ನೇ ವಿವಾಹ ವಾರ್ಷಿಕೋತ್ಸವ. ಹೀಗಾಗಿ ದರ್ಶನ್ ಭೇಟಿ ಮಾಡುವುದಕ್ಕೆ ವಿಶೇಷ ಮನವಿ ಮಾಡಿಕೊಂಡಿದ್ದರು. ಅದಕ್ಕೆ ಪರ್ಮಿಷನ್ ಕೂಡ ಸಿಕ್ಕಿತ್ತು.

ದರ್ಶನ್ ಅವರ ಈ ಕಷ್ಟ ಕಾಲದಲ್ಲಿ ವಿಜಯಲಕ್ಷ್ಮಿ ಸದಾ ಬೆಂಬಲವಾಗಿ ನಿಂತಿದ್ದಾರೆ. ದರ್ಶನ್ ಅದೆಂಥದ್ದೇ ವಿವಾದದಲ್ಲಿ ಸಿಲುಕಿದರೂ ಪತ್ನಿ ಅದರಿಂದ ಹೊರ ಕರೆದುಕೊಂಡು ಬಂದಿದ್ದಾರೆ. ಈಗ ರೇಣುಕಾಸ್ವಾಮಿ ಪ್ರಕರಣದಲ್ಲೂ ಅದೇ ಆಗಿದೆ. ದರ್ಶನ್ ಅವರನ್ನು ಹೇಗಾದರೂ ಮಾಡಿ ಜೈಲಿನಿಂದ ಹೊರಗೆ ಕರೆದುಕೊಂಡು ಬರುವುದಕ್ಕೆ ಸಿಕ್ಕಾಪಟ್ಟೆ ಕಷ್ಟ ಪಡುತ್ತಿದ್ದಾರೆ. ವಿವಾಹ ವಾರ್ಷಿಕೋತ್ಸವದ ಬೆನ್ನಲ್ಲೇ ದರ್ಶನ್ ಕುರಿತು ಭಾವನಾತ್ಮಕವಾಗಿ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ದರ್ಶನ್ ಮದುವೆ ಆಗುವುದಕ್ಕೂ ಮುನ್ನವೂ ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಂತಿದ್ದರು. ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆ ಕಾಣುವುದಕ್ಕೆ ಪ್ರಯತ್ನ ಪಡುತ್ತಿದ್ದಾಗ ಅಂದು ಅವರ ನೆರವಿಗೆ ನಿಂತಿದ್ದು ವಿಜಯಲಕ್ಷ್ಮಿ ಅವರೇ. ಹೀಗಾಗಿ ದರ್ಶನ್ ಸ್ಟಾರ್ ಆಗಿ ಬೆಳೆದ ಬಳಿಕವೂ ವಿಜಯಲಕ್ಷ್ಮಿ ಅವರನ್ನು ಮರೆಯಲಿಲ್ಲ. 2003, ಮೇ 19ರಂದು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಪ್ರೀತಿಯನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದರು.
ಅನ್ಯೋನ್ಯವಾಗಿದ್ದ ಸಂಸಾರದಲ್ಲಿ ಏರು-ಪೇರುಗಳನ್ನು ಈ ಜೋಡಿ ಕಂಡಿದೆ. ತಮ್ಮ ಸಂಸಾರದಲ್ಲಿ ಸಮಸ್ಯೆ ಎದುರಾದಾಗ ವಿಜಯಲಕ್ಷ್ಮಿ ಅವರು ಆ ವೇಳೆ ಗಟ್ಟಿಯಾಗಿ ನಿಂತಿದ್ದರು. ದರ್ಶನ್ ವಿವಾದದಲ್ಲಿ ಸಿಕ್ಕಿಕೊಂಡಾಗ ವಿಜಯಲಕ್ಷ್ಮಿ ಅವರು ಮಾಡಿದ ತ್ಯಾಗಕ್ಕೆ ಜನರು ಬೆರಗಾಗಿದ್ದೂ ಇದೆ. ತನ್ನ ಪತಿಯನ್ನು ಯಾವುದೇ ಸಂದರ್ಭದಲ್ಲಿ ಬಿಟ್ಟು ಕೊಟ್ಟ ಉದಾಹರಣೆಗಳೇ ಇಲ್ಲ. ಹೀಗಾಗಿ 23ನೇ ವಿವಾಹ ವಾರ್ಷಿಕೋತ್ಸವದಲ್ಲಿ ಪತಿ ದರ್ಶನ್ ನೆನೆದು ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ.
"ಪ್ರತಿ ಬಾರಿ ಎದುರಾಗುವ ಬಿರುಗಾಳಿಯಲ್ಲೂ, ಪ್ರತಿಯೊಂದು ಮೌನದಲ್ಲೂ ನಿನ್ನ ಕೈ ಹಿಡಿಯುತ್ತೇನೆ. ಅದೆಂಥದ್ದೇ ಪರಿಸ್ಥಿತಿಗಳು ನಮ್ಮಿಬ್ಬರನ್ನೂ ಬೇರೆ ಮಾಡುವುದಕ್ಕೆ ಮಾಡುವುದಕ್ಕೆ ಮುಂದಾದರೂ, ನನ್ನ ಹೃದಯ ಮಾತ್ರ ಎಂದಿಗೂ ನಿನ್ನನ್ನೇ ಆರಿಸಿಕೊಳ್ಳುತ್ತೆ." ಎಂದು ವಿಜಯಲಕ್ಷ್ಮಿ ದರ್ಶನ್ ಭಾವುಕರಾಗಿ ಇನ್‌ಸ್ಟಾಗ್ರಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗೇ " ಇಡೀ ಜಗತ್ತು ನಿನ್ನ ವಿರುದ್ಧವಾಗಿ ನಿಂತರೂ, ನಾನು ಮಾತ್ರ ನಿಮ್ಮ ಪಕ್ಕದಲ್ಲಿ ನಿಂತಿರುತ್ತೇನೆ. ನಿನ್ನನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದು ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ಇನ್‌ಸ್ಟಾ ಸ್ಟೋರಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ದರ್ಶನ್ ಅಭಿಮಾನಿಗಳು ಭಾವುಕರಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹಾಗೇ ವಿಜಯಲಕ್ಷ್ಮಿ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
23ನೇ ವಿವಾಹ ವಾರ್ಷಿಕೋತ್ಸವದಂದು ವಿಜಯಲಕ್ಷ್ಮಿ ದರ್ಶನ್ ತಿರುವಣ್ಣಮಲೈ ಭೇಟಿ ನೀಡಿದ್ದರು. ಅಲ್ಲಿ ದೇವರ ದರ್ಶನ ಮಾಡಿದ್ದಾರೆಂದು ವರದಿಗಳಾಗಿವೆ. ವಿಜಯಲಕ್ಷ್ಮಿ ಹಾಗೂ ದರ್ಶನ್ ಮನವಿ ಮಾಡಿಕೊಂಡಂತೆ ವಿವಾಹ ವಾರ್ಷಿಕೋತ್ಸವದಂದು ಮಗನೊಂದಿಗೆ ಭೇಟಿ ಮಾಡುವುದಕ್ಕೆ ಒಂದು ಗಂಟೆಗಳ ಕಾಲ ಅವಕಾಶ ನೀಡಲಾಗಿತ್ತು. ಇದೇ ವೇಳೆ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆಂಬ ಸುದ್ದಿನೂ ಹಬ್ಬಿತ್ತು. ಅದಕ್ಕೆ ಜೈಲಿನ ವೈದ್ಯರ ತಂಡ ಭೇಟಿ ಕೊಟ್ಟು ಪರಿಶೀಲಿಸಿದ್ದು, ಅದೆಲ್ಲ ವದಂತಿ ಅಷ್ಟೇ ಎಂದು ಹೇಳಲಾಗಿದೆ.


Click it and Unblock the Notifications
