ದುನಿಯಾ ವಿಜಯ್ ಮಗಳ ಸಿನಿಮಾಗೆ ದೊಡ್ಮೆನೆ ಕುಡಿ ಹೀರೋ; 'ಸಿಟಿ ಲೈಟ್ಸ್'ನಲ್ಲಿ ಮೊನಿಷಾ-ವಿನಯ್ ಜೋಡಿ?
ದುನಿಯಾ ವಿಜಯ್ ಬ್ಯಾಕ್ ಟು ಬ್ಯಾಕ್ ಗೆಲುವಿನ ಖುಷಿಯಲ್ಲಿ ಇದ್ದಾರೆ. ಇತ್ತೀಚೆಗೆ ತೆರೆಕಂಡಿರುವ 'ಭೀಮ' ಸಿನಿಮಾ ಸ್ಯಾಂಡಲ್‌ವುಡ್‌ಗೆ ಹೊಸ ಹುರುಷು ಕೊಟ್ಟಿದೆ. ಇದೇ ಖುಷಿಯಲ್ಲಿ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ದ್ವಿತೀಯ ಪುತ್ರಿ ಮೊನಿಷಾ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವ ಸಿನಿಮಾಗೆ ದುನಿಯಾ ವಿಜಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅದುವೇ 'ಸಿಟಿ ಲೈಟ್ಸ್'.
'ಸಿಟಿ ಲೈಟ್ಸ್' ದುನಿಯಾ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ. ವಿಜಯ್ ದ್ವಿತೀಯ ಪುತ್ರಿ ಮೊನಿಷಾ ನಟಿಸುತ್ತಿರುವ ಮೊದಲ ಸಿನಿಮಾ. ಈ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಹೆಚ್ಚಾಗಿತ್ತು. ಅದಕ್ಕೆ ಮತ್ತೊಂದು ಸರ್ಪ್ರೈಸ್ ಸಿಕ್ಕಿದೆ. ಮೊನಿಷಾ ವಿಜಯ್ ಕುಮಾರ್ ಸಿನಿಮಾದಲ್ಲಿ ದೊಡ್ಮೆನೆಯ ಹೀರೋ ಕೈ ಜೋಡಿಸಿದ್ದಾರೆ.

ದುನಿಯಾ ವಿಜಯ್ ನಿರ್ದೇಶನದ ಮೂರನೇ ಸಿನಿಮಾದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ಪೆಪೆ' ಸಿನಿಮಾ ಮೂಲಕ ಮಾಸ್ ಅವತಾರ ತಾಳಿದ್ದ ವಿನಯ್ ರಾಜ್‌ಕುಮಾರ್ ಮತ್ತೊಮ್ಮೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ದುನಿಯಾ ವಿಜಯ್ ಅನೌನ್ಸ್‌ಮೆಂಟ್ ಅಷ್ಟೇ ಮಾಡಿದ್ದು, ವಿನಯ್ ರಾಜ್‌ಕುಮಾರ್ ಲುಕ್ ಇನ್ನೂ ಹೊರಬೀಳಬೇಕಿದೆ.
ಇತ್ತೀಚೆಗೆ ದುನಿಯಾ ವಿಜಯ್ ಹಾಗೂ ವಿನಯ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಸಿನಿಮಾ ಪ್ರಚಾರ ಮಾಡಿದ್ದರು. ದುನಿಯಾ ವಿಜಯ್ ನಿರ್ದೇಶಿಸಿದ್ದ 'ಭೀಮ' ಸಿನಿಮಾವನ್ನು ಥಿಯೇಟರ್‌ಗೆ ಹೋಗಿ ವಿನಯ್ ರಾಜ್‌ಕುಮಾರ್ ವೀಕ್ಷಿಸಿದ್ದರು. ದುನಿಯಾ ವಿಜಯ್ ನಿರ್ದೇಶನದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಹಾಗೇ ವಿನಯ್ ರಾಜ್‌ಕುಮಾರ್ 'ಪೆಪೆ' ಸಿನಿಮಾ ರಿಲೀಸ್ ವೇಳೆ ದುನಿಯಾ ವಿಜಯ್ ಸಾಥ್ ಕೊಟ್ಟಿದ್ದರು.
ಪೆಪೆ ಸಿನಿಮಾದ ಶೂಟಿಂಗ್ ನಡೆದ ಕೊಡಗಿನ ಹಲವು ಸ್ಥಳಗಳಲ್ಲಿ ದುನಿಯಾ ವಿಜಯ್ ಹಾಗೂ ವಿನಯ್ ರಾಜ್‌ಕುಮಾರ್ ಸಂದರ್ಶನ ನಡೆದಿತ್ತು. ಆ ವೇಳೆ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಬಹುದು ಅನ್ನೋ ಸುಳಿವು ಇರಲಿಲ್ಲ. ಈಗ ದುನಿಯಾ ವಿಜಯ್ ತಮ್ಮ ಮಗಳ ಸಿನಿಮಾಗೆ ವಿನಯ್ ರಾಜ್‌ಕುಮಾರ್ ಅವರನ್ನು ಕರೆದುಕೊಂಡು ಬಂದಿದ್ದಾರೆ. ಮೊನಿಷಾಗೆ ವಿನಯ್ ರಾಜ್‌ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರಾ? ಇಲ್ಲ ಬೇರೆದ್ದೇ ಪಾತ್ರವಿದೆಯಾ? ಅನ್ನೋದು ಇನ್ನೂ ರಿವೀಲ್ ಆಗಿಲ್ಲ.
'ಸಿಟಿ ಲೈಟ್ಸ್'ನಲ್ಲಿ ವಿನಯ್ ರಾಜ್‌ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿರುವುದಂತೂ ನಿಜ. ಅದರಲ್ಲೂ ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್ ಹೇಗೆ ಕಾಣಿಸಿಕೊಳ್ಳಬಹುದು? ಪಾತ್ರ ಹೇಗಿರಬಹುದು? ಅನ್ನೋ ಕುತೂಹಲವಂತೂ ಎದ್ದಿದೆ. ಮುಂದಿನ ದಿನಗಳಲ್ಲಿ ವಿನಯ್ ಲುಕ್ ರಿವೀಲ್ ಆಗಲಿದೆ. ಸದ್ಯ ಆಟೋ ಒಂದರ ಮಿರರ್‌ನಲ್ಲಿ ಮುಖ ಅಸ್ಪಷ್ಟವಾಗಿ ಕಾಣಿಸುವಂತಹ ಅನೌನ್ಸ್‌ಮೆಂಟ್ ಪೊಸ್ಟರ್ ಅನ್ನು ರಿವೀಲ್ ಮಾಡಲಾಗಿದೆ.
ದುನಿಯಾ ವಿಜಯ್ ದ್ವಿತಿಯಾ ಪುತ್ರಿ ಮೊನಿಷಾಗೆ ಚಿತ್ರರಂಗಕ್ಕೆ ಬರಬೇಕೆಂಬ ಆಸೆ ಬಾಲ್ಯದಿಂದಲೂ ಇತ್ತು. ಹೀಗಾಗಿ ಅದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದರು. ನ್ಯೂಯಾರ್ಕ್‌ಗೆ ಹೋಗಿ ಸಿನಿಮಾ ಬಗ್ಗೆ ಅಧ್ಯಾಯನ ಕೂಡ ಮಾಡಿದ್ದರು. ನಟನೆಯ ಬಗ್ಗೆ ತರಬೇತಿ ಪಡೆದು ಬಂದಿದ್ದರು. ನ್ಯೂಯಾರ್ಕ್‌ನಿಂದ ಹಿಂತಿರುಗಿ ಬರುತ್ತಿದ್ದಂತೆ ಚೊಚ್ಚಲ ಸಿನಿಮಾ 'ಸಿಟಿ ಲೈಟ್ಸ್' ಅನೌನ್ಸ್ ಆಗಿತ್ತು. ಈಗ ಈ ತಂಡಕ್ಕೆ ವಿನಯ್ ರಾಜ್‌ಕುಮಾರ್ ಕೂಡ ಸೇರಿಕೊಂಡಿದ್ದಾರೆ.


Click it and Unblock the Notifications











