ಬಲರಾಮನಿಗೆ ಬಲ ಕೊಟ್ಟ ಟೀಸರ್; 'ಆ ದಿನಗಳು' ಸಿನಿಮಾಗೆ ಲಿಂಕ್ ಇದೆಯಾ?
ಮರಿ ಟೈಗರ್ ವಿನೋದ್ ಪ್ರಭಾಕರ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. 'ಮಾದೇವ' ಸಿನಿಮಾ ಯಶಸ್ಸು ಕಂಡ ಬಳಿಕ ವಿನೋದ್ ಪ್ರಭಾಕರ ಮತ್ತೊಂದು ಸೂಪರ್ ಹಿಟ್ ಸಿನಿಮಾ ಕೊಡುವ ತರಾತುರಿಯಲ್ಲಿ ಇದ್ದಾರೆ. ಅದುವೇ ಕೆ.ಎಂ.ಚೈತನ್ಯ ನಿರ್ದೇಶಿಸಿದ 'ಬಲರಾಮನ ದಿನಗಳು'. ಕಳೆದ ಕೆಲವು ದಿನಗಳಿಂದ ಅದ್ಧೂರಿಯಾಗಿ ಶೂಟಿಂಗ್ ಮಾಡಿ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.
'ಬಲರಾಮನ ದಿನಗಳು' ರಿಲೀಸ್‌ಗೆ ರೆಡಿಯಾಗುತ್ತಿರುವ ಬೆನ್ನಲ್ಲೇ ಚಿತ್ರತಂಡ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಹಾಡುಗಳನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದೆ. ವಿನೋದ್ ಪ್ರಭಾಕರ್ 'ಮಾದೇವ' ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿತ್ತು. ಈಗ 'ಬಲರಾಮನ' ಸರದಿ.

'ಮಾದೇವ' ಬಳಿಕ ವಿನೋದ್ ಪ್ರಭಾಕರ್ ಪ್ರಯೋಗಾತ್ಮಕ ಹಾಗೂ ಕಮರ್ಷಿಯಲ್ ಕಂಟೆಂಟ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಉದಾಹರಣೆ 'ಬಲರಾಮನ ದಿನಗಳು'. ಈ ಟೀಸರ್‌ನಲ್ಲಿ ವಿನೋದ್ ಪ್ರಭಾಕರ್ ಅವರ ಲುಕ್ ಹಾಗೂ ಡಾನ್ಸ್ ಅವರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಅದ್ಧೂರಿಯಾಗಿ ನಡೆದ ಟೀಸರ್ ರಿಲೀಸ್ ಸಮಾರಂಭದಲ್ಲಿ ವಿನೋದ್ ಪ್ರಭಾಕರ್ ಇದೇ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ.
ನಿರ್ಮಾಪಕಿ ಪದ್ಮಾವತಿ 'ಬಲರಾಮನ ದಿನಗಳು' ಟೀಸರ್ ಬಿಡುಗಡೆ ಮಾಡಿ, ತಮ್ಮ ಮಕ್ಕಳು ನೀಡಿದ ಸಹಕಾರದ ಬಗ್ಗೆ ನೆನಪಿಸಿಕೊಂಡರು. ಹಾಗೇ ವಿನೋದ್ ಪ್ರಭಾಕರ್ ಮತ್ತು ನಿರ್ದೇಶಕ ಕೆ.ಎಂ ಚೈತನ್ಯ ತಮ್ಮ ಸಿನಿಮಾಗೆ ಶಕ್ತಿ ಎಂದು ಹೇಳಿದರು. ಪದ್ಮಾವತಿಯವರು ಸಿನಿಮಾ ನಿರ್ಮಾಣದ ಜೊತೆಗೆ ಒಂದು ಪಾತ್ರವನ್ನು ಮಾಡಿದ್ದಾರೆ. ಇನ್ನು ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ.
ತಮ್ಮ ಸಿನಿಮಾ ಟೀಸರ್ ರಿಲೀಸ್ ಬಳಿಕ ವಿನೋದ್ ಪ್ರಭಾಕರ್ ನಿರ್ಮಾಪಕರ ಪುತ್ರನಿಗೆ ಕಿವಿ ಮಾತು ಹೇಳಿದರು. "ಒಂದು ಸಿನಿಮಾದ ಮೂಲಕ ಪಡೆಯುವುದು ಅನುಭವವೇ ಅಲ್ಲ. ನನ್ನ ತಂದೆ ನೂರಾರು ಸಿನಿಮಾಗಳಲ್ಲಿ ನಟಿಸಿದರು. ನಿರ್ಮಿಸಿ, ನಿರ್ದೇಶನವನ್ನೂ ಮಾಡಿದವರು. ಆದರು ಕೂಡ ಸಿನಿಮಾ ಏನು ಎಂದು ಅರ್ಥವಾಗಿಲ್ಲ ಎಂದೇ ಹೇಳುತ್ತಿದ್ದರು. ಹೀಗಾಗಿ ಈ ಸಿನಿಮಾದಲ್ಲಿ ಸಿಕ್ಕ ಅನುಭವವೇ ಅಂತಿಮ ಎಂದು ಹೇಳಲಾಗದು. ನಾವೆಲ್ಲರೂ ಸಿನಿಮಾ ವಿದ್ಯಾರ್ಥಿಗಳು. ಆದರೂ ಮಾದೇವ ಚಿತ್ರಕ್ಕೆ ಸಿಕ್ಕ ಯಶಸ್ಸು ಕಂಡ ಬಳಿಕ ಈ ಸಿನಿಮಾ ಅದರ ಎರಡು ಪಟ್ಟು ಗೆಲುವು ಕಾಣುವ ನಿರೀಕ್ಷೆ ಮೂಡಿಸಿದೆ" ಎಂದಿದ್ದಾರೆ.

ಇದು ಎಂಬತ್ತರ ದಶಕದ ಕತೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಟೀಸರ್ ಗಮನಿಸಿದಾಗ 'ಆ ದಿನಗಳು' ಸಿನಿಮಾದೊಂದಿಗೆ ಲಿಂಕ್ ಇದೆ ಅಂತ ಅನಿಸುತ್ತಿದೆ. ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನದ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟ ರಮೇಶ್ ಇಂದಿರಾ ತಮ್ಮ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ. "ತಾವು ಚಿತ್ರದಲ್ಲಿ ಮೋನಪ್ಪ ರೈ ಎನ್ನುವ ಪಾತ್ರ ಮಾಡುತ್ತಿದ್ದು, ತುಳು ಮಾತನಾಡಿದ್ದೇನೆ" ಎಂದು ತಮ್ಮ ಪಾತ್ರದ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ನಟ ವಿನಯ್ ಗೌಡ 'ಕತ್ತಿ' ಅನ್ನೋ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೋರ್ವ ಬಿಗ್ ಬಾಸ್ ಸ್ಪರ್ಧಿ ರಜತ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಚಿಕ್ಕ ಪಾತ್ರವಾದರೂ ಸಾಹಸ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಟ ಡ್ರ್ಯಾಗನ್ ಮಂಜು ಹೇಳಿದರು. ಈ ಸಿನಿಮಾಗೆ ಹಾಡುಗಳನ್ನು ಬರೆದಿರುವ ಕವಿರಾಜ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ಪೊಲೀಸ್ ಪಾತ್ರಗಳಲ್ಲಿ ಪ್ರತಾಪ್ ನಾರಾಯಣ್ ಮತ್ತು ಅಶ್ವಿನ್ ಹಾಸನ್ ನಟಿಸಿದ್ದಾರೆ. ಹಾಗೇ ಆಶಿಷ್ ವಿದ್ಯಾರ್ಥಿ, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ಮೊದಲಾದವರು ನಟಿಸಿದ್ದಾರೆ.


Click it and Unblock the Notifications