"ಪ್ರಭಾಕರ್ ಮಗನಾಗಿ ನಾನ್ಯಾಕೆ ಸುಲಭವಾಗಿ ಬೆಳೆದಿಲ್ಲ.. 2 ಸಿನಿಮಾ ಆದ್ಮೇಲೆ ಮನೆಯಲ್ಲಿ ಕೂತಿದ್ದೆ"
ಕನ್ನಡ ಚಿತ್ರರಂಗದ ದಿಗ್ಗಜ ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್‌ಗೆ ಈಗೀಗ ಯಶಸ್ಸಿನ ರುಚಿಯನ್ನು ನೋಡುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಬರೋದು ಅವರಿಗೆ ಸುಲಭ ಆಗಿತ್ತು. ತಂದೆ ಹೆಸರನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಎಂಟ್ರಿ ಏನೋ ಕೊಟ್ಟಿದ್ದರು. ಆದರೆ, ಒಮ್ಮೆ ಕಾಲಿಟ್ಮೇಲೆ ಅವರು ಒಂದೊಂದು ಚಿಕ್ಕ ಪುಟ್ಟ ಯಶಸ್ಸಿಗಾಗಿಯೂ ಪರದಾಡಿದ್ದಾರೆ. ಟೀಕೆಗಳನ್ನು ಎದುರಿಸಿದ್ದಾರೆ. ಒಂದು ಸಕ್ಸಸ್‌ಗಾಗಿ ಕಾದಿದ್ದಾರೆ.
23 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ವಿನೋದ್ ಪ್ರಭಾಕರ್ ಈಗ 25 ಸಿನಿಮಾಗಳನ್ನು ಪೂರೈಸಿದ್ದಾರೆ. ಕೆ.ಎಂ ಚೈತನ್ಯ ನಿರ್ದೇಶನದ 'ಬಲರಾಮನ ದಿನಗಳು' ಸಿನಿಮಾ ವಿನೋದ್ ಪ್ರಭಾಕರ್ ನಟನೆಯ 25ನೇ ಸಿನಿಮಾ. ಈ ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ. ಹೀಗಾಗಿ ಭರ್ಜರಿ ಪ್ರಚಾರದಲ್ಲಿ ನಿರತರಾಗಿರುವ ನಟ ತಮ್ಮ ತಂದೆಯ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅಣ್ಣಾವ್ರು ಭೇಷ್ ಎಂದು ಬೆನ್ನು ತಟ್ಟಿದ್ದ ಒಂದು ಘಟನೆಯಿಂದ ಟೈಗರ್ ಪ್ರಭಾಕರ್ ಆಗಿ ಬೆಳೆದಿದ್ದೇಗೆ? ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದು ಕಡೆ ಟೈಗರ್ ಪ್ರಭಾಕರ್ ಅಂತಹ ದಿಗ್ಗಜನ ಮಗನಾಗಿ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಪರದಾಡಿದ್ದರು. ಆರಂಭದಲ್ಲಿ ಸಿಕ್ಕ ಸ್ವಾಗತ ನಂತರದ ದಿನಗಳಲ್ಲಿ ಸೋಲಿನ ರುಚಿಯನ್ನು ತೋರಿಸಿತ್ತು. ಆವೇಳೆ ಅವರ ಮನ:ಸ್ಥಿತಿ ಹೇಗಿತ್ತು? ನೆಪೋಟಿಸಂ ಬಗ್ಗೆ ಟೀಕೆ ಮಾಡುವವರಿಗೆ ವಿನೋದ್ ಪ್ರಭಾಕರ್ ಕೊಟ್ಟ ಉತ್ತರವೇನು? ಇಲ್ಲಿದೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದ ಝಲಕ್.
"ಎಸ್ ಬಾಸ್.. ನೋ ಬಾಸ್ ಅಂದವರು"
ಟೈಗರ್ ಪ್ರಭಾಕರ್ ಒಮ್ಮೆಗೆ ಹೀರೋ ಆಗಿ ಬಂದವರಲ್ಲ. ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡುತ್ತಾ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಖಳನಾಯಕನಾಗಿ ಆನಂತ್ರ ಹೀರೋ ಆಗಿ ಬೆಳೆದವರು. ಈ ಬಗ್ಗೆ ವಿನೋದ್ ಪ್ರಭಾಕರ್ ಹೇಳಿದ್ದಾರೆ. "ಹೌದು ಅವರು ಲೆಜೆಂಡರಿ ಆಕ್ಟರ್. ಹಿರಿಯರ ಬಗ್ಗೆ ನಾನು ಬಹಳಷ್ಟು ಬಾರಿ ಹೇಳುತ್ತಿರುತ್ತೇನೆ. ನಾವು ಯಾವತ್ತು ಮಾತಾಡಬಾರದು. ಯಾಕಂದ್ರೆ, ಇವತ್ತು ಇಂಡಸ್ಟ್ರಿಯನ್ನು ಎಲ್ಲಾ ನಮ್ಮ ಹಿರಿಯರು ಕಟ್ಟಿ ಆಳಿದ್ದಾರೆ. ನಮ್ಮ ತಂದೆಯವರು ಅಂತ ಅವರ ಉದಾಹರಣೆಯನ್ನು ನಾನು ತೆಗೆದುಕೊಳ್ಳುತ್ತೇನೆ. ಅವರು ಫ್ರೆಜರ್ ಟೌನ್ ಅಲ್ಲಿ ಹುಟ್ಟಿ ಬೆಳೆದವರು. ಸ್ಕ್ರ್ಯಾಚ್‌ನಿಂದ ಬಂದವರು. ಎಲ್ಲೋ ಒಂದು ಕಡೆ ಹೀಗೆ ಮುಖವನ್ನು ತೋರಿಸಿ ಹೋದವರು. ಎಸ್ ಬಾಸ್.. ನೋ ಬಾಸ್ ಅಂದು ಕೊಂಡು ಹೋದವರು. ತಂದೆಯವರು ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಾರೆ. ಹಂತ ಹಂತವಾಗಿ ಬೆಳೆಯುತ್ತಾ ಬರುತ್ತಾರೆ" ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.
ನಟರ ನಡುವೆ ಬೆಂಬಲವಿತ್ತು
"ಅವರು ಯಾಕೆ ಅಷ್ಟು ಬೆಳೆದರು ಅನ್ನೋದಕ್ಕೆ ಇನ್ನೊಂದು ರೀಸನ್ ಅವತ್ತಿನ ಕಾಲಘಟ್ಟದಲ್ಲಿ ಇದ್ದಂತಹ ಎಲ್ಲಾ ಆಕ್ಟರ್‌ಗಳು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡು ಬೆಳೆದವರು. ಅಣ್ಣಾವ್ರಿಂದ ಹಿಡಿದು, ವಿಷ್ಣು ಸರ್ ದಾದ ಅವರಿಂದ ಹಿಡಿದು, ಅಂಬರೀಷ್ ಅಣ್ಣನಿಂದ ಹಿಡಿದು, ಶಂಕರ್‌ನಾಗ್ ಸರ್, ಅನಂತ್‌ನಾಗ್ ಸರ್, ತೂಗುದೀಪ್ ಶ್ರೀನಿವಾಸ್ ಅವರು, ಸುಧೀರ್ ಅವರು, ವಜ್ರಮುನಿಯವರು ಎಲ್ಲೂ ಒಬ್ಬರಿಗೊಬ್ಬರು ಬೆಂಬಲ ಕೊಟ್ಟುಕೊಂಡು ಬೆಳೆದವರು" ಎಂದಿದ್ದಾರೆ.
ಅಣ್ಣಾವ್ರು ಗುರುತಿಸಿದ ಪ್ರತಿಭೆ
ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಟೈಗರ್ ಪ್ರಭಾಕರ್ ಅವರ ಪ್ರತಿಭೆಯನ್ನು ಅಣ್ಣಾವ್ರು ಗುರುತಿಸಿದನ್ನು ನೆನಪಿಸಿಕೊಂಡಿದ್ದಾರೆ. "ಪ್ರಭಾಕರ್ ಅವರು ಸಾಲು ಸಾಲಾಗಿ ಸಿನಿಮಾ ಮಾಡುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಉಳಿಯುತ್ತಾರೆ ಅಂದರೆ, ಅದಕ್ಕೆ ಮುಖ್ಯವಾದ ಕಾರಣ ಡಾ.ರಾಜ್‌ಕುಮಾರ್ ಅವರು. ಅಣ್ಣಾವ್ರು ಒಂದು ಪ್ರತಿಭೆಯನ್ನು ಗುರುತಿಸಿ ಭೇಷ್ ಅಂತ ಬೆನ್ನುತ್ತಟ್ಟಿದ್ದಕ್ಕೆ ಅವತ್ತು ಪ್ರಭಾಕರ್ ಅವರು ಬೆಳೆಯುವುದಕ್ಕೆ ಸಾಧ್ಯವಾಯ್ತು. ಯಾಕಂದ್ರೆ, ಅವತ್ತು ಅವರು ಈ ಕ್ಯಾರೆಕ್ಟರ್ ಅನ್ನು ಪ್ರಭಾಕರ್ ಅವರಿಗೆ ಕೊಡಿ ಎಂದು ಗುರುತಿಸೋರಂತೆ. ಆ ಬೇಸ್ ಅನ್ನು ಇಟ್ಟುಕೊಂಡು ಮೊದಲು ಪಂಚ ಭಾಷೆ ತಾರೆ ಆಗುತ್ತಾರೆ." ಎಂದು ಹೇಳಿದ್ದಾರೆ.

ನನಗೆ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿತ್ತು
"ನಮ್ಮ ತಂದೆಯನ್ನು ನೋಡಿ ನಾನು ಬೆಳೆದಿದರೋನು. ನಾನು ನಮ್ಮ ತಂದೆಯನ್ನು ಬರೀ ಪೊಲೀಸ್ ಯೂನಿಫಾರ್ಮ್ ಕ್ಯಾರೆಕ್ಟರ್ ಅನ್ನು ನೋಡಿ ಬೆಳೆದಿದ್ದು. ಒಬ್ಬ ನಾಯಕ ನಟನ ಮಗ ಚಿತ್ರರಂಗಕ್ಕೆ ಬಂದರೆ ಅದ್ಧೂರಿಯಾಗಿ ಸ್ವಾಗತ ಮಾಡುತ್ತಾರೆ. ಹೊಸಬರು ಇಂಡಸ್ಟ್ರಿಗೆ ಬರುವುದಕ್ಕಿಂತ ಹೀರೋ ಮಗ 10 ಪಟ್ಟು ಜಾಸ್ತಿ ಕೆಲಸ ಮಾಡಬೇಕು. ನಮ್ಮ ತಂದೆಯಾಗಲಿ, ತಾಯಿ ಆಗಲಿ ಆಗಲೇ ಹೆಸರು ಮಾಡಿಬಿಟ್ಟಿರುತ್ತಾರೆ. ನಾನು ಬಂದಾಗ ನಮ್ಮ ತಂದೆ 450ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದರು. ನಾನು ಬಂದಾಗ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿತ್ತು. ಅದಾದ್ಮೇಲೆ ತುಂಬಾನೇ ಕಷ್ಟ ಪಟ್ಟೆ." ಎಂದು ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
"ಪ್ರಭಾಕರ್ ಮಗ ಅಂತ ಬೆಳೆದಿಲ್ಲ"
"ಪ್ರಭಾಕರ್ ಮಗ ಅಂತ ನಾನು ಯಾಕೆ ಸುಲಭವಾಗಿ ಬೆಳೆದಿಲ್ಲ. ಮೊದಲನೇ ಸಿನಿಮಾ ಆಯ್ತು. ಎರಡನೇ ಸಿನಿಮಾ ಆಯ್ತು. ಅದಾದ್ಮೇಲೆ ನಾನು ಮನೆಯಲ್ಲಿ ಕೂತುಕೊಂಡೆ. ಈ 25 ಸಿನಿಮಾ ಮಾಡುವಷ್ಟರಲ್ಲಿ 23 ವರ್ಷ ಆಗಿ ಹೋಯ್ತು. ನಮ್ಮ ಟ್ಯಾಲೆಂಟ್ ಏನಿದೆಯೋ ಅದು ಲೆಕ್ಕಕ್ಕೆ ಬರುತ್ತೆ ಹೊರತು, ಇಂತಹವರ ಮಗ ಅಂದಕೂಡಲೇ ಯಾರೂ ಸುಲಭವಾಗಿ ಬೆಳೆಯುವುದಕ್ಕೂ ಆಗಲ್ಲ. ಬೆಳೆಸುವುದಕ್ಕೂ ಆಗಲ್ಲ. ಅದನ್ನು ತಲೆಯಲ್ಲಿ ಇಟ್ಟುಕೊಂಡು ಇಲ್ಲಿವರೆಗೂ ಬಂದಿದ್ದೇನೆ" ಎಂದು ವಿನೋದ್ ಪ್ರಭಾಕರ್ ನೆಪೋಟಿಸಂ ಬಗ್ಗೆ ಮಾತಾಡಿದ್ದಾರೆ.


Click it and Unblock the Notifications
