'ಲೀಲಾವತಿ ದೇಗುಲ' ಲೋಕಾರ್ಪಣೆ ಮಾಡಿದ ವಿನೋದ್ ರಾಜ್; ಸ್ಮಾರಕದೊಳಗೆ ಏನಿದೆ? ಖರ್ಚು ಎಷ್ಟು?
ನೆಲಮಂಗಲ: ಕನ್ನಡ ಚಿತ್ರರಂಗದ ವರನಟಿ ಡಾ. ಲೀಲಾವತಿ ಅಗಲಿ ಒಂದು ವರ್ಷವಾಗುತ್ತಿದೆ. ಕಳೆದ ವರ್ಷ ಡಿಸೆಂಬರ್ 8 ಕ್ಕೆ ಹಿರಿಯ ನಟಿ ಲೀಲಾವತಿ ದೇಹತ್ಯಾಗ ಮಾಡಿದ್ದರು. ಸದಾ ಅಮ್ಮನ ಜೊತೆಯೇ ಇರುತ್ತಿದ್ದ ವಿನೋದ್ ರಾಜ್ ಅವರ ನೆನಪಿನಲ್ಲಿಯೇ ಕಾಲ ಕಳೆಯುವಂತಾಗಿತ್ತು. ಅಮ್ಮನ ಅಗಲಿಕೆ ಬಳಿಕ ಅವರಿಗಾಗಿ ಸ್ಮಾರಕ ನಿರ್ಮಾಣ ಮಾಡಬೇಕು ಅನ್ನೋದು ಆಸೆಯಿತ್ತು. ಅದರಂತೆ ಇಂದು (ಡಿಸೆಂಬರ್ 5) ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದಾರೆ.
ನೆಲಮಂಗಲ ತಾಲೂಕಿನ ಸೋಲದೇವನ ಹಳ್ಳಿಯಲ್ಲಿರುವ ತೋಟದಲ್ಲಿ ತಾಯಿ ಲೀಲಾವತಿಯವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದು, 'ತಾಯಿಯೇ ದೇವರು, ವರನಟಿ ಡಾ.ಲೀಲಾವತಿ ದೇಗುಲ' ಎಂದು ಕರೆದಿದ್ದಾರೆ. 'ಲೀಲಾವತಿ ದೇಗುಲ'ವನ್ನು ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟನೆ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಾಯಿ-ಮಗನ ಬಾಂಧವ್ಯ ಹೇಗಿರಬೇಕು ಅನ್ನೋದಕ್ಕೆ ವಿನೋದ್ ರಾಜ್ ಹಾಗೂ ಲೀಲಾವತಿಯನ್ನು ಉದಾಹರಣೆಯಾಗಿ ಕೊಡುತ್ತಿದ್ದರು. ಲೀಲಾವತಿಯವರನ್ನು ಕೊನೆಯ ಕ್ಷಣದವರೆಗೂ ಅಷ್ಟು ಚೆನ್ನಾಗಿ ನೋಡಿಕೊಂಡಿದ್ದರು. ಈಗ ಅವರ ನೆನೆಪಿನಲ್ಲಿ ಸ್ಮಾರಕ ಮಾಡಿದ್ದಾರೆ. ಈ ಸ್ಮಾರಕದೊಳಗೆ ಏನಿದೆ? ಖರ್ಚು ಎಷ್ಟು? ಯಾರೆಗೆಲ್ಲ ಅವಕಾಶವಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸ್ಮಾರಕ ನಿರ್ಮಾಣಕ್ಕೂ ಮುನ್ನ ವಿನೋದ್ ರಾಜ್ ಪೂಜೆಯನ್ನು ಇಟ್ಟುಕೊಂಡಿದ್ದರು. ವಿನೋದ್ ರಾಜ್ ಅವರೊಂದಿಗೆ ಅವರ ಪತ್ನಿ ಕೂಡ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಹಿರಿಯ ನಟಿ ಲೀಲಾವತಿ ಸ್ಮಾರಕಕ್ಕೆ ಪೂಜೆಯನ್ನು ನೆರವೇರಿಸಿದರು. ತಮ್ಮ ಸಾಕು ನಾಯಿಯೊಂದಿಗೆ ವಿನೋದ್ ರಾಜ್ ಹಾಗೂ ಅವರ ಪತ್ನಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.

'ಲೀಲಾವತಿ ದೇಗುಲ' (ಸ್ಮಾರಕ)ವನ್ನು ವಿನೋದ್ ರಾಜ್ ಒಂದು ವರ್ಷದ ಒಳಗೆ ಮುಗಿಸಬೇಕು ಅಂತ ಪಣತೊಟ್ಟಿದ್ದರು. ಅದರಂತೆ, ಅವರು ಅಂದಕೊಂಡಂತೆಯೇ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಈ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ದೇಗುಲದ ರೀತಿಯಲ್ಲಿಯೇ ಈ ಸ್ಮಾರಕವನ್ನು ವಿನ್ಯಾಸಗೊಳಿಸಲಾಗಿದೆ.
ಲೀಲಾವತಿಯರವ ಸ್ಮಾರಕ ನೋಡುವುದಕ್ಕೆ ಮೂರು ಪ್ರದಕ್ಷಿಣೆ ಹಾಕಿ ಒಳಗೆ ಹೋಗಬೇಕು. ಈ ವೇಳೆ ಲೀಲಾವತಿಯ ಬಲು ಅಪರೂಪದ ಫೋಟೊಗಳನ್ನು ಕಾಣಬಹುದು. ಸುಮಾರು 60ಕ್ಕೂ ಅಧಿಕ ಫೋಟೊಗಳು ಈ ವೇಳೆ ಕಣ್ಣಿಗೆ ಬೀಳುತ್ತವೆ. ಒಳಗೆ ಪ್ರವೇಶ ಮಾಡುತ್ತಿದ್ದಂತೆ ದೇಗುಲದ ಅನುಭವ ಬರುವಂತೆಯೇ ವಿನ್ಯಾಸ ಮಾಡಲಾಗಿದೆ. ಜೊತೆಗೆ ಪ್ರಕೃತಿಯ ಸೌಂದರ್ಯವನ್ನು ಅನುಭವಿಸಬಹುದು.
ಲೀಲಾವತಿಯವರ ಸ್ಮಾರಕವನ್ನು ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾಗಿದೆ. ಮಂಟಪವನ್ನು ಹೋಲುವ ಹಾಗೆ ಸಮಾಧಿ ಸುತ್ತಲೂ ಕಲ್ಲಿನ ಕಂಬಗಳು ಮಂಟಪಕ್ಕೆ ಮೆರುಗನ್ನು ನೀಡಿದೆ. ಸ್ಮಾರಕ ಉದ್ಘಾಟನೆ ಬಳಿಕ ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಇಲ್ಲಿಗೆ ಬರುವವರಿಗೆ ಪ್ರತಿದಿನ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ವೇಳೆ ಕನ್ನಡ ಚಿತ್ರತಂಡ 10 ಮಂದಿ ಚಿತ್ರರಂಗದ ಹಿರಿಯರಿಗೆ ನಗದು ಸನ್ಮಾನ ಮಾಡಲಾಗಿದೆ. ಇದನ್ನೂ ಪ್ರತಿ ವರ್ಷ ಮುನ್ನಡೆಸಿಕೊಂಡು ಹೋಗಲು ವಿನೋದ್ ರಾಜ್ ನಿರ್ಧರಿಸಿದ್ದಾರೆ.
"ಸ್ಮಾರಕ ಉದ್ಘಾಟನೆ ವೇಳೆ ಹಿರಿಯ ಕಲಾವಿದರಿಗೆ ಸನ್ಮಾನ ಮಾಡಲಾಗಿದೆ. 10 ಜನರಿಗೆ ನಗದು ಹಣದೊಂದಿಗೆ ಸನ್ಮಾನ ಮಾಡಲಾಗುತ್ತಿದೆ. ಪ್ರತಿ ವರ್ಷ ಮಾಡಬೇಕು ಅಂತ ಅಂದಕೊಂಡಿದ್ದೇವೆ. ಲೀಲಾವತಿ ಸ್ಮಾರಕವನ್ನು ನೋಡುವುದಕ್ಕೆ ಬರುವವರಿಗೆ ಪ್ರಸಾದದ ರೂಪದಲ್ಲಿ ಅನ್ನ ಸಂತರ್ಪಣೆ ಮಾಡಲಾಗುತ್ತೆ. ಪ್ರತಿದಿನ ಏನಾದರೂ ಒಂದು ಖಾದ್ಯವನ್ನು ನೀಡಲು ಏರ್ಪಾಡು ಮಾಡಲಾಗಿದೆ" ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











