RCB - Hombale: ಸಿನಿಮಾ ಮತ್ತು ಕ್ರೀಡೆ ಸಮ್ಮಿಲನ: 'ಕೆಜಿಎಫ್ 2' ಸಿನಿಮಾ ನೋಡಲು ಸಜ್ಜಾದ RCB ಟೀಮ್
'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಅನ್ನುವಾಗಲೇ ಹೊಂಬಾಳೆ ಫಿಲ್ಮ್ಸ್ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಿದೆ. ಇದೇ ಮೊದಲ ಬಾರಿಗೆ ಸಿನಿಮಾ ಹಾಗೂ ಕ್ರೀಡೆಗೆ ಸಂಬಂಧಿಸಿದ ಬೆಂಗಳೂರಿನ ಎರಡು ಫ್ರಾಂಚೈಸಿಗಳು ಒಟ್ಟಿಗೆ ಸೇರುತ್ತಿವೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಸಾಹಸ ಅಂತಲೇ ಹೇಳಬಹುದು.
Recommended Video

ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ತಂಡಗಳು ಒಟ್ಟಿಗೆ ಸೇರಲಿವೆ. ಹೊಸ ಸಾಹಸಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿ ನಿಂತಿವೆ. ಇಂದು( ಏಪ್ರಿಲ್ 10) ಹೊಂಬಾಳೆ ಫಿಲಂಸ್ ಹಾಗೂ ಆರ್‌ಸಿಬಿ ತಂಡ ಜನರಿಗೆ ಮನರಂಜನೆ ಜೊತೆ ಜೊತೆಗೆ ಕ್ರೀಡೆಯ ಥ್ರಿಲ್ ನೀಡಲು ಸಜ್ಜಾಗಿ ನಿಂತಿವೆ.
ಆರ್‌ಸಿಬಿ ತಂಡ ಹಾಗೂ ಹೊಂಬಾಳೆ ಫಿಲ್ಮ್ಸ್ ಎರಡೂ ತಂಡಗಳೂ ಒಟ್ಟಿಗೆ ಸೇರಿದ್ದು, ಹೊಸ ಅಧ್ಯಾಯವನ್ನೇ ಬರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಎರಡೂ ಸಂಸ್ಥೆಗಳು ಮನರಂಜನೆಯ ಜೊತೆ ಜೊತೆಗೆ, ಗ್ಲಾಮರ್, ಸಿನಿಮಾ ಹಾಗೂ ಕ್ರೀಡೆಯ ಅದ್ಭುತ ಸಮ್ಮಿಲನ ಎಂದು ಹೇಳಿಕೊಂಡಿದೆ. ಇದರ ಮೊದಲ ಹಂತವಾಗಿ ಆರ್‌ಸಿಬಿ ತಂಡ ಕೆಜಿಎಫ್ 2 ಸಿನಿಮಾವನ್ನು ವೀಕ್ಷಣೆ ಮಾಡಲಿದೆ.

ಸಿನಿಮಾ ನೋಡುತ್ತೆ RCB ಟೀಮ್
ಹೊಂಬಾಳೆ ಫಿಲಂಸ್ ಹಾಗೂ ಆರ್‌ಸಿಬಿ ಸಂಸ್ಥೆ ಒಂದಾಗಿದೆ ಅನ್ನುವುದೇನೋ ಸರಿ. ಆದರೆ, ಎರಡೂ ಸಂಸ್ಥೆ ಒಂದಾಗಿ ಏನು ಮಾಡುತ್ತೆ? ಅನ್ನುವ ಸ್ಪಷ್ಟತೆಯಿಲ್ಲ. ಆದರೆ, ಸಹಯೋಗದ ಅಸಲಿ ಸೀಕ್ರೆಟ್ ಇಲ್ಲಿದೆ. ಆರ್‌ಸಿಬಿ ತಂಡ ಹಾಗೂ ಹೊಂಬಾಳೆ ಫಿಲ್ಮ್ಸ್ ಒಬ್ಬರಿಗೊಬ್ಬರು ಸಹಕಾರ ನೀಡಲಿದ್ದಾರೆ. ಇದರ ಮೊದಲ ಭಾಗವಾಗಿ ಆರ್‌ಸಿಬಿ ಆಟಗಾರರು ಏಪ್ರಿಲ್ 14ರಂದು 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ.
'KGF 2' ಸಿನಿಮಾ ನೋಡುವ ಕ್ರಿಕೆಟಿಗರು ಯಾರು?
ಏಪ್ರಿಲ್ 14 ರಂದು 'ಕೆಜಿಎಫ್ 2' ಗ್ರ್ಯಾಂಡ್ ರಿಲೀಸ್ ಆಗಲಿದೆ. ಅದೇ ದಿನ ಎಕ್ಸ್‌ಕ್ಲ್ಯೂಸಿವ್ ಆಗಿ ಆರ್‌ಸಿಬಿ ತಂಡದ ಆಟಗಾರರು ಈ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ. ಆರ್‌ಸಿಬಿ ತಂಡದ ಸ್ಟಾರ್ ಆಟಗಾರರ ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡದ ಗಾಯಕ ಫಾಫ್ ಡು ಪ್ಲೆಸಿಸ್, ಮತ್ತೊಬ್ಬ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್, ಆರ್‌ಸಿಬಿ ಬೌಲರ್ ಸಿರಾಜ್, ಹರ್ಷಲ್ ಪಟೇಲ್ ಸಿನಿಮಾ ನೋಡಬಹುದು ಎನ್ನಲಾಗಿದೆ.

ಕೆಜಿಎಫ್ ತಂಡದಿಂದ ಆರ್‌ಸಿಬಿ Vs ಚೆನ್ನೈ ಮ್ಯಾಚ್ ವೀಕ್ಷಣೆ?
ಏಪ್ರಿಲ್ 14ಕ್ಕೆ ಆರ್‌ಸಿಬಿ ಟೀಮ್ 'ಕೆಜಿಎಫ್ 2' ಸಿನಿಮಾ ನೋಡುವುದು ಕನ್ಫರ್ಮ್ ಎನ್ನುತ್ತಿದೆ ಕೆಜಿಎಫ್ ಟೀಮ್. ಇದರ ಬೆನ್ನಲ್ಲೇ ಏಪ್ರಿಲ್ 12ರಂದು ನಡೆಯಲಿರುವ ಆರ್‌ಸಿಬಿ Vs ಚೆನ್ನೈ ಮ್ಯಾಚ್ ಅನ್ನು 'ಕೆಜಿಎಫ್ 2' ತಂಡ ವೀಕ್ಷಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಈ ಬಗ್ಗೆ ಹೊಂಬಾಳೆ ಫಿಲಂಸ್ ಇನ್ನೂ ಕನ್ಫರ್ಮ್ ಮಾಡಿಲ್ಲ.

'ಕೆಜಿಎಫ್ 2' ನಿರ್ಮಾಪಕ ಹೇಳಿದ್ದೇನು?
ಆರ್‌ಸಿಬಿ ಹಾಗೂ ಹೊಂಬಾಳೆ ಫಿಲ್ಮ್ಸ್ ಜಂಟಿಯಾಗಿರುವುದು ಎಲ್ಲರಲ್ಲೂ ಕುತೂಹಲ ಮೂಡುವಂತೆ ಮಾಡಿದೆ. "ಸಿನಿಮಾ ಮಾಡೋದು ನನ್ನ ಪ್ಯಾಷನ್. ಕ್ರಿಕೆಟ್ ಪ್ರೇಮಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಆಕರ್ಷಿಸುತ್ತದೆ. ಜನರು ಮನರಂಜನೆ ನೀಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಹಾಗೂ ಆರ್‌ಸಿಬಿ ಎರಡೂ ತಂಡಕ್ಕೂ ನಮ್ಮ ಬೆಂಗಳೂರು ತವರು. ಈ ಕಾರಣಕ್ಕೆ ಇಬ್ಬರೂ ಒಟ್ಟಾಗಿದ್ದು, ಕೆಲವು ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿದ್ದೇವೆ." ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.


Click it and Unblock the Notifications











