ಉಪವಾಸ ಸತ್ಯಾಗ್ರಹ ನಡೆಸಲು ಸಜ್ಜಾದ ವಿಷ್ಣುವರ್ಧನ್ ಅಭಿಮಾನಿಗಳು
ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುವುದು ಸರ್ಕಾರಕ್ಕೆ, ವಿಷ್ಣುದಾದಾ ಕುಟುಂಬಕ್ಕೆ, ಅಭಿಮಾನಿಗಳಿಗೆ ದೊಡ್ಡ ಕಂಟಕವಾಗಿತ್ತು. ಎಂತಹದ್ದೆ ಪ್ರಯತ್ನಕ್ಕೆ ಮುಂದಾದರೂ, ಏನಾದರೂ ವಿಘ್ನ ಎದುರಾಗುತ್ತಲೇ ಇತ್ತು. ಈಗ ಸರ್ಕಾರ ಮೈಸೂರಿನಲ್ಲಿ ಮಂಜೂರು ಮಾಡಿದ ಜಾಗದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕದ ಕೆಲಸ ಭರದಿಂದ ನಡೆಯುತ್ತಿದೆ.
ಇನ್ನೊಂದು ಕಡೆ ಡಾ.ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ನಿರ್ಮಾಣ ಆಗಬೇಕು ಅಂತ ಪಟ್ಟು ಅಭಿಮಾನಿಗಳು ಪಟ್ಟು ಹಿಡಿದು ಕೂತಿದ್ದಾರೆ. ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಪುಣ್ಯಭೂಮಿ ನಿರ್ಮಾಣ ಆಗಬೇಕು ಅಂತ ಹೋರಾಟ ಮುಂದುವರೆಸಿದ್ದಾರೆ. ಸದ್ಯಕ್ಕೀಗ ವಿಷ್ಣು ಅಭಿಮಾನಿಗಳ ಸಂಘದಲ್ಲೊಂದಾದ ವಿಎಸ್‌ಎಸ್ ವಿಷ್ಣು ಸೇನಾ ಸಂಘಟನೆ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದೆ.

ಸಾಹಸ ಸಿಂಹನ ಪುಣ್ಯ ಸ್ಮರಣೆಗೂ ಮುನ್ನ ಸಿಹಿ ಸುದ್ದಿ
ಅಭಿಮಾನ್ ಸ್ಟುಡಿಯೋ ನಮ್ಮ ಪುಣ್ಯಭೂಮಿ ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಹೀಗಾಗಿ ಸ್ಟುಡಿಯೋ ಮಾಲೀಕರು 10 ಗುಂಟೆ ಜಾಗವನ್ನು ನೀಡಲು ಮುಂದಾಗಿದ್ದರು. ಆದರೆ, ಅಭಿಮಾನ್ ಸ್ಟುಡಿಯೋ ಮಾಲೀಕರ ಮೇಲೆ ಸರ್ಕಾರ ಕೇಸು ದಾಖಲಿಸಿರುವುದರಿಂದ, ಈ 10 ಗುಂಟೆ ಜಾಗದಲ್ಲಿ ಏನೂ ಕೆಲಸ ಮಾಡುವಂತಿಲ್ಲ. ಹೀಗಾಗಿ ವಿಎಸ್‌ಎಸ್ ವಿಷ್ಣು ಸೇನಾ ಸಂಘಟನೆಯ ಅಧ್ಯಕ್ಷ ರಾಜು ಗೌಡ ಸೇರಿದಂತೆ ಕೆಲವು ಅಭಿಮಾನಿಗಳು ಈ ಕೇಸ್ ಅನ್ನು ಇತ್ಯರ್ಥಪಡಿಸಿ, ಪುಣ್ಯಭೂಮಿ ಡೆವೆಲಪ್‌ಮೆಂಟ್‌ಗೆ ಅನುವು ಮಾಡಿಕೊಡಬೇಕೆಂದು ಡಿಸಿಗೆ ಮನವಿ ಮಾಡಿದ್ದರು. ಆದ್ರೀಗ ಡಿಸಿಯಿಂದ ಪ್ರತಿಕ್ರಿಯೆ ಬಂದಿದ್ದು, ವಿಷ್ಣು ಪುಣ್ಯ ಸ್ಮರಣೆ ಬಳಿಕ ಮತ್ತಷ್ಟು ಚುರುಕುಗೊಳಿಸಲು ಸಜ್ಜಾಗಿದ್ದಾರೆ.

ವಿಷ್ಣುದಾದ ಪುಣ್ಯ ಸ್ಮರಣೆ ಬಳಿಕ ಸಿ ಎಂ ಭೇಟಿ
ಅಭಿಮಾನಿಗಳ ಪಾಲಿಗೆ ವಿಷ್ಣುದಾದ ಪುಣ್ಯಭೂಮಿ ಅಭಿಮಾನ್ ಸ್ಟುಡಿಯೋ. ದಾದಾನ ಅಂತ್ಯಕ್ರಿಯೆ ನಡೆದ ಜಾಗವೇ ನಮಗೆ ದೇವಾಲಯ. ಹೀಗಾಗಿ ಇಲ್ಲಿಯೇ ಪೂಜೆ ಮಾಡಲು ಅವಕಾಶ ಮಾಡಿಕೊಡಬೇಕು ಅಂತ ಮೊದಲಿನಿಂದಲೂ ಹೇಳುತ್ತಿಲೇ ಇದ್ದಾರೆ. ಹೀಗಾಗಿ ಡಿಸೆಂಬರ್ 30ರಂದು ಸಾಹಸ ಸಿಂಹನ ಪುಣ್ಯಸ್ಮರಣೆ ಬಳಿಕ ಸಿ ಎಂ ಭೇಟಿ ಮಾಡಲು ವಿಎಸ್‌ಎಸ್ ವಿಷ್ಣು ಸೇನಾ ಸಂಘಟನೆಯ ಅಧ್ಯಕ್ಷ ರಾಜು ಗೌಡ ನಿರ್ಧರಿಸಿದ್ದಾರೆ. ಸಿ ಎಂ ಬಳಿ ಕೋರ್ಟ್ ನಲ್ಲಿರುವ ಅಭಿಮಾನ್ ಸ್ಟುಡಿಯೋ ಕೇಸ್ ಅನ್ನು ಇತ್ಯರ್ಥ ಮಾಡಿಕೊಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ.

ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ
ಡಿಸೆಂಬರ್ 30ರಂದು ಪುಣ್ಯ ಸ್ಮರಣೆ ಮುಗಿದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ವಿಷ್ಣು ಅಭಿಮಾನಿ ರಾಜುಗೌಡ ಹಾಗೂ ಅಭಿಮಾನಿಗಳು ಮುಂದಾಗಿದ್ದಾರೆ. ಈ ವೇಳೆ ಸಿಎಂ ಭೇಟಿ ಮಾಡಿ, ಅಭಿಮಾನ್ ಸ್ಟುಡಿಯೋದಲ್ಲಿ ಜಾಗದ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಲಿದ್ದಾರೆ. ಒಂದು ವೇಳೆ ಸರ್ಕಾರ ಸ್ಪಂದಿಸದೇ ಹೋದರೆ, ಜನವರಿ 28ರಿಂದ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದಾರೆ. ವಿಷ್ಣು ಅಭಿಮಾನಿಗಳ ಪರವಾಗಿ ಸುಮಾರು 50 ಮಂದಿ ಈ ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ.

ವಿಷ್ಣು ಹುಟ್ಟುಹಬ್ಬಕ್ಕೆ ಮೈಸೂರು ಸ್ಮಾರಕ?
ಇನ್ನು ಮೈಸೂರಿನಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಗೊಳ್ಳುತ್ತಿದೆ. ಇದು ವಿಷ್ಣುದಾದಾ ಹುಟ್ಟುಹಬ್ಬಕ್ಕೆ ಲೋಕಾರ್ಪಣೆಯಾಗಬಹುದು ಅನ್ನುವ ನಿರೀಕ್ಷೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿದ್ದಾರೆ. ನೂರಾರು ಕಾನೂನು ತೊಡಕುಗಳನ್ನು ಎದುರಿಸಿದ ಕೊನೆಗೂ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭ ಆಗಿದ್ದು, 2022 ಸೆಪ್ಟೆಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಈ ಹಿಂದೆಯೇ ಅನಿರುದ್ಧ್ ಹೇಳಿದ್ದಾರೆ. ಹೀಗಾಗಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಅಭಿಮಾನ್ ಸ್ಟುಡಿಯೋ ಕೂಡ ಸ್ಮಾರಕ ಆದರೆ, ಎರಡು ಕಡೆ ಪುಣ್ಯಭೂಮಿ ಸಿಕ್ಕಂತಾಗುತ್ತೆ.


Click it and Unblock the Notifications











