ದರ್ಶನ್ ಎಡಗೈಗೆ ಆಪರೇಷನ್ ಬಳಿಕ ಹೇಗಿದ್ದಾರೆ? ವೈದ್ಯರ ಕಂಡೀಷನ್ ಏನು?
'ಕಾಟೇರ'ದಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಿರುವ ದರ್ಶನ್ 'ಡೆವಿಲ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. 'ತಾರಕ್' ಸಿನಿಮಾ ಬಳಿಕ ಮಿಲನ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಸದ್ದು ಮಾಡಿತ್ತು. ಇದೇ ಜೋಷ್‌ನಲ್ಲಿ 'ಡೆವಿಲ್' ಶೂಟಿಂಗ್ ಕೂಡ ಆರಂಭ ಆಗಿತ್ತು. ಇನ್ನೇನು ಮೊದಲ ಹಂತದ ಶೂಟಿಂಗ್ ಮುಗಿಯುವ ವೇಳೆಗೆ ದರ್ಶನ್ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಪೆಟ್ಟು ಮಾಡಿಕೊಂಡಿದ್ದ ಎಡಗೈಯನ್ನೇ ಇಟ್ಟುಕೊಂಡು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. 'ಡೆವಿಲ್' ಆಕ್ಷನ್ ಸೀನ್ ಮಾಡುವಾಗ ಬಿದ್ದು ದರ್ಶನ್ ಮೂಳೆ ಹಾಗೂ ಮಾಂಸ ಖಂಡಕ್ಕೆ ಪೆಟ್ಟು ಬಿದ್ದಿತ್ತು. ಹೀಗಾಗಿ ಕೆಲವು ದಿನಗಳ ಹಿಂದಷ್ಟೇ ದರ್ಶನ್ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಶಸ್ತ್ರ ಚಿಕಿತ್ಸೆಯ ಬಳಿಕ ದರ್ಶನ್ ಆಸ್ಪತ್ರೆಯಿಂದ ಮನೆ ಹಿಂತಿರುಗಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿಕೊಂಡ ಬಳಿಕ ಅವರ ಫೋಟೊಗಳು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿವೆ. ಆದರೆ, ದರ್ಶನ್‌ಗೆ ವೈದ್ಯರು ಕೆಲವು ಷರತ್ತುಗಳನ್ನು ಹಾಕಿ ಮನೆಗೆ ಕಳುಹಿಸಿದ್ದಾರೆ. ಆ ಷರತ್ತುಗಳು ಏನು ಅನ್ನುವುದನ್ನು ನೋಡುವುದಾದರೆ..
ಶಸ್ತ್ರ ಚಿಕಿತ್ಸೆ ಬಳಿಕ ದರ್ಶನ್‌ಗೆ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಒಂದು ತಿಂಗಳು ಕಂಪ್ಲೀಟ್ ಆಗಿ ವಿಶ್ರಾಂತಿ ಪಡೆಯಲೇ ಬೇಕು ಎಂದು ಹೇಳಿದ್ದಾರಂತೆ. ಹೀಗಾಗಿ ಒಂದು ತಿಂಗಳು ಮತ್ತೆ 'ಡೆವಿಲ್' ಸಿನಿಮಾದ ಶೂಟಿಂಗ್‌ಗೆ ದರ್ಶನ್ ಹೋಗುವುದು ಬಹುತೇಕ ಅನುಮಾನ.
ದರ್ಶನ್ ಆಪ್ತ ಹಾಗೂ ಅಭಿಮಾನಿ ನಾಗರಾಜ್ ಮಾಧ್ಯಮಗಳಿಗೆ ನೀಡುವ ಮಾಹಿತಿ ಪ್ರಕಾರ, "ದರ್ಶನ್ ಅವರಿಗೆ ಡೆವಿಲ್ ಸಿನಿಮಾದಲ್ಲಿ ಶೂಟಿಂಗ್ ಮಾಡುವಾಗ ಫೈಟಿಂಗ್ ಸೀನ್ ವೇಳೆ ಕೆಳಗಡೆ ಸ್ಲಿಪ್ ಆಗಿ ಬಿದ್ದರು. ಎಡಗೈಗೆ ಏಟು ಆಗಿದೆ. ಮೂಳೆಗೆ ಏಟಾಗಿದೆ. ಮಾಂಸ ಖಂಡ ಹರಿದು ಹೋಗಿದೆ. ಅದಕ್ಕೆ ಆಪರೇಷನ್ ಆಗಿದೆ. ವೈದ್ಯರು ಕಡಿಮೆ ಅಂದರೂ ಒಂದು ತಿಂಗಳು ರೆಸ್ಟ್ ಮಾಡಲೇಬೇಕು ಅಂತ ಹೇಳಿದ್ದಾರೆ." ಎಂದು ಹೇಳಿಕೆ ಕೊಟ್ಟಿದ್ದಾರೆ.

ಇನ್ನು ಸದ್ಯಕ್ಕಂತೂ ಜಿಮ್ ಕಡೆ ಮುಖ ಮಾಡುವಂತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. "ಹಾಗೇ ಅವರಿಗೆ ಐದಾರು ತಿಂಗಳು ಜಿಮ್ ಮಾಡಬಾರದು ಅಂತಾನೂ ಹೇಳಿದ್ದಾರೆ. ಒಂದು ತಿಂಗಳಂತೂ ರೆಸ್ಟ್ ಮಾಡಲೇಬೇಕು ಅಂತ ಹೇಳಿದ್ದಾರೆ. ಹಾಗಾಗಿ ಆಸ್ಪತ್ರೆಯಿಂದ ನಿಮ್ಮ ಮನೆಗೆ ಬಂದಿದ್ದಾರೆ. ಇದನ್ನೆಲ್ಲ ನೋಡಿ ಕೈ ನೋವಿಗಿಂತಲೂ ಜಾಸ್ತಿ ನೋವಾಯ್ತು." ಎಂದಿದ್ದಾರೆ.
ಇನ್ನೊಂದು ಕಡೆ ದರ್ಶನ್ ಕೈಗೆ ಶಸ್ತ್ರ ಚಿಕಿತ್ಸೆ ಆಗಿದ್ದರಿಂದ 'ಡೆವಿಲ್' ಶೂಟಿಂಗ್ ತಡವಾಗು ಸಾಧ್ಯತೆಯಿದೆ. ಹೀಗಾಗಿ ಸಿನಿಮಾ ಕೂಡ ರಿಲೀಸ್ ಕೂಡ ವಿಳಂಬ ಆಗಬಹುದೇನೋ ಅನ್ನುವುದು ದರ್ಶನ್ ಅಭಿಮಾನಿಗಳ ಆತಂಕ. ಅದರೆ, ನಿರ್ದೇಶಕ ಮಿಲನ ಪ್ರಕಾಶ್, ಈಗಾಗಲೇ ಏಪ್ರಿಲ್ ಕೊನೆಯಲ್ಲಿ ಎರಡನೇ ಶೆಡ್ಯೂಲ್ ಶೂಟಿಂಗ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











